ನವೀನ್ ಡಿಸೋಜ
ಬಂಪರ್ ಬೆಲೆಯ ನಿರೀಕ್ಷೆಯಲ್ಲಿದ್ದ ಕಾಫಿ ಬೆಳೆಗಾರರಿಗೆ ನಿರಾಸೆ; ನಷ್ಟದ ಭೀತಿ
ಮಡಿಕೇರಿ: ಕಾಫಿ ಬೆಳೆಗೆ ಈ ಬಾರಿ ಬಂಪರ್ ಬೆಲೆ ಬಂದಿದ್ದರಿಂದ ಕೊಡಗಿನ ಕಾಫಿ ಬೆಳೆ ಗಾರರು ಸಂತಸದಲ್ಲಿದ್ದರು. ಆದರೆ, ಮತ್ತಷ್ಟು ದರ ಹೆಚ್ಚಾಗಲಿದೆ ಎಂದುಕೊಂಡಿದ್ದ ಬೆಳೆಗಾರರು ಕಾಫಿ ದರ ಕುಸಿತದಿಂದ ಕಂಗಲಾಗುವಂತಾಗಿದೆ. ಕೊಡಗು ಜಿಲ್ಲೆಯಲ್ಲಿ ಈ ವರ್ಷ ಕಾಫಿ ಬೆಳೆ ಅಷ್ಟೊಂದು ಉತ್ತಮವಾಗಿ ಬಂದಿರಲಿಲ್ಲ. ಆದರೆ ಬಂದ ಬೆಳೆಗೆ ಹಿಂದೆಂದೂ ಸಿಗದ ಬಂಪರ್ ಬೆಲೆ ಸಿಕ್ಕಿತ್ತು. ಇದರಿಂದ ಕಾಫಿ ಬೆಳೆಗಾರರ ಅದೃಷ್ಟ ಖುಲಾಯಿಸಿತ್ತು.
ಪ್ರತಿ ೫೦ ಕೆ.ಜಿ. ತೂಕದ ಚೀಲವೊಂದಕ್ಕೆ ೪-೫ ಸಾವಿರ ರೂ.ಗಳಷ್ಟಿದ್ದ ದರ ಈ ಬಾರಿ ಬರೋಬ್ಬರಿ ೧೪ ಸಾವಿರ ರೂಪಾಯಿಗೆ ಏರಿಕೆ ಕಂಡಿತ್ತು. ಇದರಿಂದ ರೈತರು ಸಂತಸಗೊಂಡಿದ್ದರು. ಆದರೆ] ಮಾರ್ಚ್ ತಿಂಗಳಿಂದ ನಿರಂತರವಾಗಿ ಕುಸಿತಗೊಳ್ಳುತ್ತಿರುವ ಕಾಫಿ ಬೆಲೆ ಈಗ ೫೦ ಕೆ.ಜಿ ಚೀಲ ವೊಂದಕ್ಕೆ ೧೧,೫೦೦-೧೨,೦೦೦ ರೂ.ಗೆ ಇಳಿದಿದೆ. ಅಂದರೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಎರಡೂವರೆ ಸಾವಿರ ರೂಪಾಯಿ ಕುಸಿತ ವಾಗಿದ್ದು, ಮತ್ತಷ್ಟು ದರ ಕುಸಿತದ ಆತಂಕ ಎದುರಾಗಿದೆ.
ಕಾಫಿ ಕೊಯ್ಲು ಮಾಡಿ ಒಣಗಿಸಿ ಇಡುತ್ತಿದ್ದ ಬೆಳೆಗಾರರು ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ದರ ಕುಸಿತದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಮತ್ತೆ ಕಾಫಿ ದರದಲ್ಲಿ ಹೆಚ್ಚಳವಾಗುತಿತ್ತು. ಈ ವೇಳೆ ಕಾಫಿ ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದರು. ಆದರೆ, ಹೀಗೆ ಅಂದುಕೊಂಡಿದ್ದ ಬೆಳೆಗಾರರಿಗೆ ಈ ಬಾರಿ ನಿರಾಸೆ ಆಗಿದೆ. ಏಪ್ರಿಲ್ ತಿಂಗಳ ೪ನೇ ವಾರ ಬಂದಿದ್ದರೂ ದರ ನಿರಂತರವಾಗಿ ಕುಸಿಯುತ್ತಲೇ ಇದೆ. ಈ ಪರಿಸ್ಥಿತಿಯಿಂದಾಗಿ ನಷ್ಟ ಅನುಭವಿಸುವ ಸ್ಥಿತಿ ತಲುಪಬಹುದು ಎನ್ನುವ ಆತಂಕ ಬೆಳೆಗಾರರನ್ನು ಕಾಡಲಾರಂಭಿಸಿದೆ.
ಅಷ್ಟಕ್ಕೂ ಇದಕ್ಕೆಲ್ಲಾ ಅಮೆರಿಕ ಅಧ್ಯಕ್ಷ ಟ್ರಂಪ್ ಜಾರಿಗೆ ತಂದಿರುವ ಹೊಸ ತೆರಿಗೆ ನೀತಿ ಕಾರಣ ಎನ್ನಲಾಗುತ್ತಿದೆ. ಭಾರತದ ವಸ್ತುಗಳ ಮೇಲೆ ಶೇ.೨೬ ತೆರಿಗೆ ವಿಽಸಿರುವುದರಿಂದ ಕಾಫಿ ಬೆಲೆ ಕುಸಿತಗೊಳ್ಳಲು ಕಾರಣವಾಗಿದೆ ಎಂದು ಹೇಳಲಾಗಿದೆ. ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ ತೀವ್ರಬಿಸಿಲಿ ನಿಂದಾಗಿ ಕಾಫಿ ಬೆಳೆ ಸಂಪೂರ್ಣ ಹಾಳಾಗಿದೆ. ಇದರಿಂದ ಭಾರತದ ಕಾಫಿಗೆ ಇನ್ನಷ್ಟು ಉತ್ತಮ ಬೆಲೆ ಸಿಗುತ್ತದೆ ಎಂದುಕೊಂಡಿದ್ದೆವು. ಆದರೆ ಟ್ರಂಪ್ ತೆರಿಗೆ ನೀತಿಯಿಂದಾಗಿ ನಮಗೆ ಬರೆ ಹಾಕಿದಂತೆ ಆಗಿದೆ ಎನ್ನುತ್ತಿದ್ದಾರೆ ಬೆಳೆಗಾರರು.
ಅರೇಬಿಕಾ ಕಾಫಿಗೆ ೧೬ ಸಾವಿರ ರೂ. ಹಾಗೂ ರೊಬೆಸ್ಟಾ ಕಾಫಿಗೆ ೧೪,೫೦೦ ರೂ. ದರ ಇತ್ತು. ಕಳೆದ ವರ್ಷ ಮಳೆಯ ಸಮಸ್ಯೆಯಿಂದಾಗಿ ಕೇವಲ ೩೦ರಷ್ಟು ಮಾತ್ರವೇ ಇಳುವರಿ ಪಡೆದಿದ್ದೇವೆ. ಜೊತೆಗೆ ಬಹುತೇಕ ರೈತರು ಕಾಫಿ ಮಾರಾಟ ಮಾಡದೆ ಹಾಗೇ ಇರಿಸಿಕೊಂಡಿದ್ದರು. ಈಗ ಬೆಲೆ ಕಡಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂಬುದು ರೈತರ ಅಭಿಪ್ರಾಯ. ಮತ್ತೊಂದೆಡೆ ರೈತರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಕಾಫಿ ಬೆಲೆ ಮತ್ತೆ ಜಾಸ್ತಿಯಾಗಬಹುದು ಎಂದು ಕೂಡ ಹೇಳಲಾಗುತ್ತಿದೆ.
” ಈ ಬಾರಿ ಕಾಫಿಗೆ ನಿರೀಕ್ಷೆಗೂ ಮೀರಿ ಉತ್ತಮ ದರ ಬಂದಿತ್ತು. ವಿಯೆಟ್ನಾಂ, ಬ್ರೆಜಿಲ್‌ಗಳಲ್ಲಿ ಕಾಫಿ ಬೆಳೆ ಇಲ್ಲದ ಕಾರಣ ಇಲ್ಲಿ ಕಾಫಿ ದರ ಏರಿಕೆಯಾಗಿತ್ತು. ಕೊಡಗು ಜಿಲ್ಲೆಯಲ್ಲಿ ಕಾಫಿ ಫಸಲು ಕಡಿಮೆಯಾಗಿದ್ದರೂ ದರ ಹೆಚ್ಚಳದಿಂದ ಕಾಫಿ ಬೆಳೆಗಾರರು ಸಂತಸಗೊಂಡಿದ್ದರು. ಆದರೆ, ಈಗ ದರ ಕುಸಿತದಿಂದ ಬೆಳೆಗಾರರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಕಾಫಿ ದರ ಲಂಡನ್ ಮಾರುಕಟ್ಟೆಯಲ್ಲಿ ನಿರ್ಧರಿಸಲ್ಪಡುವುದರಿಂದ ಹೆದರುವ ಅವಶ್ಯಕತೆ ಇಲ್ಲ. ಶೀಘ್ರದಲ್ಲೇ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.”
-ಕೆ.ಜಿ. ಬೋಪಯ್ಯ, ಮಾಜಿ ವಿಧಾನಸಭಾಧ್ಯಕ್ಷ
” ಕಾಫಿ ದರ ಈ ಬಾರಿ ಏರಿಳಿತ ಕಾಣುತ್ತಿದ್ದು, ದರ ಕುಸಿಯುತ್ತಲೇ ಇದೆ. ೧೪ ಸಾವಿರ ರೂ.ಗಳಷ್ಟಿದ್ದ ಕಾಫಿ ದರ ಈಗ ೧೧,೫೦೦-೧೨,೦೦೦ ರೂ.ಗಳಷ್ಟಕ್ಕೆ ತಲುಪಿದೆ. ಕಾಫಿಯನ್ನು ಒಣಗಿಸಿ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆಯಾಗಿದೆ. ಪ್ರತಿದಿನ ಬೆಲೆ ಏರಿಳಿತ ಕಾಣುತ್ತಿದ್ದು, ಸದ್ಯದ ಮಟ್ಟಿಗೆ ೧೪,೦೦೦ ರೂ.ಗಳಷ್ಟು ದರ ಏರಿಕೆಯಾಗುವ ಸಾಧ್ಯತೆ ಕಡಿಮೆ ಇದೆ.”
-ಪೊನ್ನಚ್ಚನ ಮಧು, ಉದ್ಯಮಿ, ಮಡಿಕೇರಿ
“ಮಾರ್ಚ್ ತಿಂಗಳಲ್ಲಿ ಸಾಮಾನ್ಯವಾಗಿ ಕಾಫಿ ದರ ಕೊಂಚ ಕಡಿಮೆಯಾಗುತ್ತದೆ. ಆದರೆ, ಏಪ್ರಿಲ್ ಮೊದಲ ವಾರದಲ್ಲೇ ಉತ್ತಮ ದರ ಬರಬೇಕಿತ್ತು. ಆದರೆ, ಈ ತಿಂಗಳಲ್ಲಿ ದರ ಕುಸಿತ ಕಂಡಿದೆ. ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆಯ ಸಮಸ್ಯೆಯ ನಡುವೆಯೂ ಕಾಫಿ ಬೆಳೆದ ಬೆಳೆಗಾರರಿಗೆ ದರ ಕುಸಿತದಿಂದ ನಷ್ಟದ ಆತಂಕ ಮನೆ ಮಾಡಿದೆ.”
-ಕವನ್ ಕಾವೇರಪ್ಪ,ಕಾಫಿ ಬೆಳೆಗಾರ,ಮಡಿಕೇರಿ
ನವದೆಹಲಿ: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸೈಬರ್ ಅಪರಾಧಗಳ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದೆ. ಸೈಬರ್ ಭದ್ರತೆಯು ಈಗ ಕೇವಲ…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶಾಲಾ ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.…
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆಮಾದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆಯ…
ಬೆಂಗಳೂರು: ಶಾಸಕರ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ಇಲ್ಲ. ಆದರೆ ಶಾಸಕರು ಯಾವಾಗ ಬೇಕಾದರೂ ಪ್ರವಾಸಕ್ಕೆ ಹೋಗಬಹುದು ಎಂದು ಆರೋಗ್ಯ…
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಲು ಸಾಲು ವಿವಾದಗಳಿಗೆ ಗುರಿಯಾಗುತ್ತಿದೆ. ಇದೀಗ…
ಬೆಂಗಳೂರು: ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಸಿಎಂ…