Andolana originals

ಸಿಎಂ-ಡಿಸಿಎಂ ವರ್ಗ ಸಂಘರ್ಷ

ಡಿಕೆಶಿ ಸಿಎಸ್‌ಎಗೆ ಬರೆದ ಪತ್ರದಿಂದ ವಿವಾದ ಸೃಷ್ಠಿ
ವಿಕೋಪಕ್ಕೆ ತಿರುಗಿದ ಸಿಎಂ ಅಧಿಕಾರ ಹಂಚಿಕೆ ಒಪ್ಪಂದ
ಹೈಕಮಾಂಡ್‌ ಮಧ್ಯಪ್ರವೇಶ ; ಹೊಂದಾಣಿಕೆಗೆ ಸಲಹೆ

ಆರ್. ಟಿ. ವಿಠ್ಠಲಮೂರ್ತಿ

ಬೆಂಗಳೂರು: ಅಧಿಕಾರ ಹಂಚಿಕೆ ಒಪ್ಪಂದದ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ್ ಮಧ್ಯೆ ನಡೆಯುತ್ತಿದ್ದ ಶೀತಲ ಸಮರ ಇದೀಗ ಬಹಿರಂಗ ಸಂಘರ್ಷವಾಗಿ ಮಾರ್ಪಟ್ಟಿದ್ದು, ಉಭಯ ನಾಯಕರೂ ವಿಧ್ಯುಕ್ತವಾಗಿ ರಣಾಂಗಣ ಪ್ರವೇಶಿಸಿದ್ದಾರೆ.

ಮೇ 6 ರಂದು ತಮ್ಮ ಅನುಮತಿಯಿಲ್ಲದೆ ಜಲಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನಿಯರುಗಳನ್ನು ವರ್ಗಾವಣೆ ಮಾಡಿದ್ದು, ಇದನ್ನು ತಕ್ಷಣ ವಾಪಸ್ಸು ಪಡೆಯಬೇಕು ಎಂದು ಸರ್ಕಾರದ ಮುಖ್ಯ ಕಾರ್ಯ ದರ್ಶಿಗಳಿಗೆ ಡಿಕೆಶಿ ಬರೆದಿರುವ ಪತ್ರವೇ ಉಭಯ ನಾಯಕರ ನಡುವಣ ಬಹಿರಂಗ ಸಂಘರ್ಷದ ಮೂಲ.

ನನ್ನ ಪೂರ್ವಾನುಮತಿ ಪಡೆದು ನನ್ನ ಇಲಾಖೆಯ ಉನ್ನತಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಸರ್ಕಾರ ಅಧಿಕಾರಕ್ಕೆ ಬಂದ ಕಾಲದಲ್ಲಿಯೇ ನಿಮಗೆ ತಿಳಿಸಲಾಗಿತ್ತು ಎಂದು ಡಿಕೆಶಿ ಮೇ 13ರಂದು ಬರೆದ ಪತ್ರ ಸಾರ್ವಜನಿಕವಾಗಿ ಬಹಿರಂಗವಾಗುವ ಮುನ್ನವೇ ಸಿಎಂ ಸಿದ್ಧರಾಮಯ್ಯ ಅವರಿಗೆ ಪಂಥಾಹ್ವಾನದಂತೆ ಕಾಣಿಸಿತ್ತು.

ಈ ಹಿನ್ನೆಲೆಯಲ್ಲಿಯೇ ಡಿಕೆಶಿಗೆ ತಿರುಗೇಟು ನೀಡಲು ಸಿದ್ಧರಾದ ಸಿದ್ದರಾಮಯ್ಯ ಬೆಂಗಳೂರು ನಗರ ಸಂಚಾರ ಕಾರ್ಯಕ್ರಮ ವನ್ನು ಇದಕ್ಕೆ ವೇದಿಕೆಯಾಗಿ ಬಳಸಿಕೊಂಡರು. ಭಾರೀ ಮಳೆಯಿಂದ ತತ್ತರಿಸಿದ ಬೆಂಗಳೂರು ನಗರವನ್ನು ವೀಕ್ಷಿಸಲು ಮೇ ತಿಂಗಳ ಮೂರನೇ ವಾರ ಸಜ್ಜಾದ ಸಿದ್ದರಾಮಯ್ಯ ಅವರು ಡಿಕೆಶಿ ಯನ್ನು ನಿರ್ಲಕ್ಷಿಸಲು ತೀರ್ಮಾನಿಸಿದ್ದರು.

ಇದಕ್ಕಾಗಿ ಡಿಕೆಶಿ ಹೊಸಪೇಟೆ ಪ್ರವಾಸದಲ್ಲಿದ್ದ ದಿನವನ್ನು ಆಯ್ದುಕೊಂಡ ಅವರು, ನಗರ ಸಂಚಾರ ಕಾರ್ಯವನ್ನು ಡಿಕೆಶಿ ಗೈರು ಹಾಜರಿಯಲ್ಲಿ ನಡೆಸಲು ಸಜ್ಜಾದರು. ಅಂದ ಹಾಗೆ ಡಿಕೆಶಿ ಅವರು ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಹೊಂದಿದ್ದರಾದರೂ ಅವರಿಗೆ ಸೂಚನೆ ನೀಡದೆ ಕಾರ್ಯಕ್ರಮವನ್ನು ನಿಗದಿಗೊಳಿಸಿದ್ದರು.

ಅದರೆ ಪ್ರವಾಸದಲ್ಲಿದ್ದ ಡಿಕೆಶಿ ಈ ವಿಷಯ ತಿಳಿಯುತ್ತಲೇ ಹೊಸಪೇಟೆಯ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಹಿಂತಿರುಗಿದರು.

ಡಿ. ಕೆ. ಶಿವಕುಮಾರ್ ವಾಪಸ್ಸಾಗಿ ಬೆಂಗಳೂರು ನಗರದ ಮಳೆ ಪೀಡಿತ ಪ್ರದೇಶಗಳನ್ನು ನೋಡಲು ಸಜ್ಜಾಗುತ್ತಿದ್ದಂತೆಯೇ ಕಾರ್ಯ ಕ್ರಮವನ್ನು ಮುಂದೂಡಿದ ಸಿದ್ದರಾಮಯ್ಯ ಈಗ ಬಸ್ಸಿನಲ್ಲಿ ನಗರ ವೀಕ್ಷಿಸಲು ಮುಂದಾದರೆ ಟ್ರಾಫಿಕ್ ಜಾಮ್‌ನಿಂದ ಜನರಿಗೆ ತೊಂದರೆ ಯಾಗುತ್ತದೆ ಅಂತ ಹೇಳಿ , ಅಂದಿನ ಕಾರ್ಯ ಕ್ರಮವನ್ನು ಬಿಬಿಎಂಪಿಯ ವಾರ್ ರೂಂ ಭೇಟಿಗೆ ಸೀಮಿತಗೊಳಿಸಿದರು.

ಹೀಗೆ ಕಾರ್ಯಕ್ರಮ ಬದಲಾಗಿದ್ದರಿಂದ ವಿಧಿಯಿಲ್ಲದೆ ಬಿಬಿಎಂಪಿ ವಾರ್ ರೂಮಿಗೆ ಹೋದ ಡಿಕೆಶಿಗೆ ಅಲ್ಲಿಯೂ ಮುಜುಗರ ಕಾದಿತ್ತು. ಕಾರಣ, ಮಳೆಯಿಂದ ತತ್ತರಿಸಿದ ಪ್ರದೇಶಗಳಲ್ಲಿ ಹೇಗೆ ಪರಿಹಾರ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಸಿದ್ದರಾಮಯ್ಯ ಅವರು ತಪ್ಪಿಯೂ ಉಸ್ತುವಾರಿ ಸಚಿವರಾದ ಡಿಕೆಶಿ ಅವರಿಗೆ ಮಾತನಾಡಲು ಬಿಡಲಿಲ್ಲ. ಇದರಿಂದ ಕೆರಳಿದ ಡಿಕೆಶಿ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದಲ್ಲದೆ, ಇದರ ವಿರುದ್ಧ ತಿರುಗಿ ಬೀಳುವುದಾಗಿ ಎಚ್ಚರಿಸಿದರು ಎಂಬುದು ಕಾಂಗ್ರೆಸ್ ಮೂಲಗಳ ಹೇಳಿಕೆ. ಇದೇ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರ ವಿರುದ್ದ ತಿರುಗಿ ಬೀಳಲು ನಿರ್ಧರಿಸಿದ ಡಿಕೆಶಿ ಸದ್ಯದಲ್ಲೇ ತಮ್ಮ ಬೆಂಬಲಿಗ ಶಾಸಕರು ಸಭೆ ಸೇರುವಂತೆ ಸೂಚಿಸಿದ್ದರು. ಅಷ್ಟೇ ಅಲ್ಲದೆ, ನಿಗದಿತ ಕಾಲದಲ್ಲಿ ಅಧಿಕಾರ ಹಸ್ತಾಂತರ ಕಾರ್ಯ ನಡೆಯುವ ಬಗ್ಗೆ ತಮಗೆ ಸ್ಪಷ್ಟತೆ ಬೇಕು. ಇಲ್ಲದಿದ್ದರೆ ತಮ್ಮ ದಾರಿ ತಮಗೆ ಎಂದು ವರಿಷ್ಠರಿಗೆ ಎಚ್ಚರಿಸಿದ್ದರೆನ್ನಲಾಗಿದೆ.

ಯಾವಾಗ ಈ ಬೆಳವಣಿಗೆ ನಡೆಯಿತೋ ಆಗ ದಿಢೀರನೆ ರಾಜ್ಯಕ್ಕೆ ಆಗಮಿಸಿದ ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ. ಸಿ. ವೇಣುಗೋಪಾಲ್ ಉಭಯ ನಾಯಕರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಹೊಂದಿಕೊಂಡು ಹೋಗುವಂತೆ ಸಲಹೆ ನೀಡಿದ್ದರು. ಈ ಸಂದರ್ಭದಲ್ಲಿ ಡಿಕೆಶಿ ನಿಗದಿತ ಕಾಲದಲ್ಲಿ ತಮಗೆ ಸಿಎಂ ಹುದ್ದೆ ದೊರಕಲೇಬೇಕು ಎಂದರಾದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಬಿಲ್ ಕುಲ್ ಅಧಿಕಾರ ಬಿಟ್ಟು ಕೊಡಲಾರೆ. ಹಾಗೇನಾದರೂ ಮಾಡಿದರೆ ಸರ್ಕಾರ ಉರುಳುತ್ತದೆ ಎಂದು ವಿವರಿಸಿದ್ದಾರೆ. ಇದಾದ ನಂತರ ಉಭಯ ನಾಯಕರು ತಮ್ಮ ತಮ್ಮ ಬಣವನ್ನು ಮುಂದಿನ ಹೋರಾಟಕ್ಕೆ ಅಣಿಗೊಳಿಸ ತೊಡಗಿದ್ದಾರೆ ಎಂಬುದು ಕೈ ಪಾಳಯದ ಮಾತು.

ಈ ಮಧ್ಯೆ ಸೋನಿಯಾ ಗಾಂಧಿ ಅವರಿಗೆ ಪರಮಾಪ್ತರಾದ ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್ ಅವರನ್ನು ಗುರುವಾರ ದಿಢೀರ್ ಭೇಟಿ ಮಾಡಿದ ಸಿದ್ದರಾಮಯ್ಯ ಹಲವು ವಿಷಯಗಳ ಕುರಿತು ಚರ್ಚಿಸಿದ್ದು, ಇದು ಕೂಡಾ ಡಿಕೆಶಿ ಅವರನ್ನು ದುರ್ಬಲಗೊಳಿಸುವ ತಂತ್ರ ಎಂದು ರಾಜಕೀಯ ವಲಯಗಳು ಬಣ್ಣಿಸುತ್ತಿವೆ.

ಡಿಕೆಶಿ ಪತ್ರದಲ್ಲೇನಿದೆ ?
ನನ್ನ ಇಲಾಖೆಗೆ ಒಳಪಡುವ ವಿಭಾಗಗಳಿಗೆ ಸಂಬಂಧಿಸಿದಂತೆ ವರ್ಗಾವಣೆ, ನೇಮಕಾತಿ ಆದೇಶಕ್ಕೆ ನನ್ನ ಅನುಮತಿಬೇಕು. ಡಿಪಿಎಆರ್‌ನಿಂದ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿ ಪಡೆದ ನಂತರವೇ ಹೊರಡಿಸ ಬೇಕು. ಈ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ಟಿಪ್ಪಣಿ ಮೂಲಕ ಈ ಕುರಿತು ನಿಮಗೆ ತಿಳಿಸಲಾಗಿತ್ತು. ನಂತರ ಮುಖ್ಯ ಇಂಜಿನಿಯರ್‌ಗಳ ಕರ್ತವ್ಯಕ್ಕೆ ಸಂಬಂಧಿಸಿದ ಕಾರ್ಯವ್ಯಾಪ್ತಿಯನ್ನು ಜಲಸಂಪನ್ಮೂಲ ಇಲಾಖೆಯಿಂದ ಡಿಪಿಎಆರ್‌ಗೆ ವಹಿಸುವ ಕಡತದಲ್ಲಿಯೂ ಸೂಚನೆ ಕೊಡಲಾಗಿತ್ತು. ನನ್ನ ಗಮನಕ್ಕೆ ತಂದು ನನ್ನ ಅನುಮೋದನೆ ಪಡೆದ ನಂತರವೇ ಡಿಪಿಎಆರ್‌ನಿಂದ ಆದೇಶ ಹೊರಡಿಸಬಹುದೆಂದು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ.

ಆದರೆ ಮೇ 06 ರಂದು ಹೊರಡಿಸಿದ ಆದೇಶದಲ್ಲಿ ನನ್ನ ಅನುಮೋದನೆ ಪಡೆಯದೇ ಕೆಲವು ಮುಖ್ಯ ಇಂಜಿನಿಯರ್‌ಗಳನ್ನು ಜಲಸಂಪನ್ಮೂಲ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಿರುವುದು ಹಾಗೂ ಜಲ ಸಂಪನ್ಮೂಲ ಇಲಾಖೆಗೆ ಬೇರೆ ಇಲಾಖೆ ಯಿಂದ ವರ್ಗಾವಣೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ.

ನನ್ನ ಸೂಚನೆಯನ್ನು ಕಡೆಗಣಿಸಿ ಆದೇಶ ಹೊರಡಿಸಿರುವುದನ್ನು ನಾನು ಆಕ್ಷೇಪಿಸುತ್ತಿದ್ದೇನೆ. ಆದ್ದರಿಂದ ಈ ಆದೇಶವನ್ನು ಕೂಡಲೇ ವಾಪಸ್ಸು ಪಡೆಯಬೇಕು . ಇಂತಹ ವಿಚಾರಗಳ ಬಗ್ಗೆ ಯಾವುದೇ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿ ಪಡೆಯಬೇಕು.

ಆಂದೋಲನ ಡೆಸ್ಕ್

Recent Posts

ಡಿ.24ರಂದು ಮಹಾಸಭಾದಿಂದ ಶಾಮನೂರು ನುಡಿ ನಮನ: ಈಶ್ವರ ಖಂಡ್ರೆ

ಬೆಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಶಾಸಕ, ಕೊಡುಗೈ ದಾನಿ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಇದೇ 24ರಂದು ಅಖಿಲ ಭಾರತ…

57 mins ago

ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಹೈಕೋರ್ಟ್‌ನಿಂದ ನೋಟಿಸ್‌

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ…

1 hour ago

6 ತಿಂಗಳಿಂದ ಸಂಬಳ ಕೊಡದ ಸರ್ಕಾರ: ರಾಜೀನಾಮೆ ಕೊಟ್ಟ ವೈದ್ಯ

ಮಂಗಳೂರು: ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಕೊಲ್ಲಮೊಗ್ರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳು ಆರು ತಿಂಗಳಿಂದ ಸರಿಯಾಗಿ ಸಂಬಳ ಆಗದ ಕಾರಣ…

2 hours ago

ಸರಗೂರು ತಾಲ್ಲೂಕು ಕಚೇರಿಯಲ್ಲಿ ಆರ್‌ಡಿಎಕ್ಸ್‌ ಸ್ಫೋಟಕ ಇಟ್ಟಿರುವುದಾಗಿ ಬೆದರಿಕೆ

ಮೈಸೂರು: ಮೈಸೂರು ಜಿಲ್ಲೆ ಸರಗೂರಿನ ತಾಲ್ಲೂಕು ಕಚೇರಿ ಹಾಗೂ ಹಾಸನದ ಆಲೂರು ತಾಲ್ಲೂಕು ಕಚೇರಿಗಳಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ…

3 hours ago

ಕುಂಬಳಕಾಯಿ ಕಳ್ಳ ಅಂದರೆ ಬಿಜೆಪಿಯವರು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮೈಸೂರು: ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ವಿರೋಧಿಸುತ್ತಾರೆ. ಪ್ರಚೋದನಾಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ ಎಂದರು. ಬಿಜೆಪಿಯವರು…

3 hours ago

ಮೈಸೂರು| ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಂದು ತಮ್ಮ ನಿವಾಸದ ಬಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೆಲ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ…

3 hours ago