ಮಾಮರಶಿ
ಕಿರುಗಾವಲಿನ ಆಶ್ರಯ ನಿವೇಶನದಲ್ಲಿ ಅನಾಥವಾಗಿರುವ ವೃದ್ಧೆ
ಮಳವಳ್ಳಿ: ಮಕ್ಕಳೇ ಹೆತ್ತ ತಾಯಿಯನ್ನು ಬೀದಿಗೆ ತಳ್ಳಿರುವ ಘಟನೆ ತಾಲ್ಲೂಕಿನ ಕಿರುಗಾವಲಿನಲ್ಲಿ ಬೆಳಕಿಗೆ ಬಂದಿದೆ.
ಕಿರುಗಾವಲಿನ ಆಶ್ರಯ ನಿವೇಶನದಲ್ಲಿ ಸುಮಾರು ೮೦ ವರ್ಷದ ವೃದ್ಧ ಮಹಿಳೆ ಊಟ-ತಿಂಡಿಯಿಲ್ಲದೆ ಅನಾಥವಾಗಿ ಬಿದ್ದಿದ್ದಾರೆ. ಅಕ್ಕಪಕ್ಕದ ಜನರು ಅಸ್ವಸ್ಥಗೊಂಡ ಸ್ಥಿತಿಯಲ್ಲಿರುವ ವೃದ್ಧೆಯನ್ನು ಮಾತನಾಡಿಸಿ ದರೆ, ನಾನು ಕೈಯಂಬಳ್ಳಿ ಗ್ರಾಮದವಳು. ನಾನು ಗಂಡನ ಮನೆಗೆ ಬಂದಿದ್ದೇನೆ, ನನ್ನ ಮಗ ಇಲ್ಲಿ ಬಿಟ್ಟು ಹೋಗಿದ್ದಾನೆ. ಬಂದು ಕರೆದುಕೊಂಡು ಹೋಗುತ್ತಾನೆ ಎನ್ನುತ್ತಾರೆ. ನೋಡಲು ಇವರು ಮಾನಸಿಕ ಅಸ್ವಸ್ಥರಂತೆ ಕಾಣುತ್ತಾರೆ. ೨ ದಿನಗಳಿಂದ ಇವರು ಇದೇ ಜಾಗದಲ್ಲಿ ಅನಾಥವಾಗಿದ್ದಾರೆ. ಇವರಿಗೆ ಪಕ್ಕದಲ್ಲಿರುವ ಮುಸ್ಲಿಂ ನಿವಾಸಿ ಗಳು ತಿಂಡಿ ನೀಡಿದ್ದು, ಮುಸ್ಲಿಮರ ಬೀದಿಯ ಪಾಳು ಜಾಗದಲ್ಲಿ ಮಲಗಿದ್ದಾರೆ.
ತಂದೆ-ತಾಯಂದಿರು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಮಕ್ಕಳ ಪ್ರತಿಯೊಂದು ಬೆಳವಣಿಗೆಗೆ ತಮ್ಮ ಜೀವನವನ್ನೇ ಧಾರೆ ಎರೆಯುತ್ತಾರೆ. ಆದರೆ, ಮಕ್ಕಳು ಉನ್ನತ ಸ್ಥಾನಕ್ಕೇರಿದ ನಂತರ ವಯಸ್ಸಾದ ಪೋಷಕ ರನ್ನು ಕಡೆಗಣಿಸುತ್ತಿರುವ ಪ್ರಕರಣಗಳು ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿವೆ. ಸಣ್ಣ-ಪುಟ್ಟ ಕಾರಣಗಳಿಂದ ಉಂಟಾಗುವ ಕುಟುಂಬ ಕಲಹದಿಂದ ತಾನು, ತನ್ನ ಹೆಂಡತಿ ತನ್ನ ಮಕ್ಕಳು ಎಂಬ ಭಾವನೆಯಿಂದ ಹೆತ್ತು, ಹೊತ್ತು ಸಾಕಿದ ತಂದೆ-ತಾಯಂದಿರನ್ನು ಕಡೆಗಣಿಸುತ್ತಿದ್ದಾರೆ.
ವಯಸ್ಸಾದ ಪೋಷಕರ ರಕ್ಷಣೆಗೆ ಸರ್ಕಾರಗಳು,ನ್ಯಾಯಾಲಯಗಳು ಕಾನೂನು ರೂಪಿಸಿ, ರಕ್ಷಣೆ ನೀಡುತ್ತಿದ್ದರೂ ಪೋಷಕರನ್ನು ಕಡೆಗಣಿಸಿ,ದೂರ ತಳ್ಳುತ್ತಿರುವ ಪ್ರಕರಣಗಳು ನಿಂತಿಲ್ಲ. ಎರಡು ದಿನಗಳಿಂದ ಕಿರುಗಾವಲಿನ ಆಶ್ರಯ ನಿವೇಶನದ ಪಾಳುಬಿದ್ದ ಜಾಗದಲ್ಲಿ ಈ ವೃದ್ಧೆಯನ್ನು ಅವರ ಮಕ್ಕಳೇ ಬಿಟ್ಟು ಹೋಗಿದ್ದು, ಈ ಸನ್ನಿವೇಶ ಕರುಳು ಹಿಂಡುವಂತಿದೆ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರಿಗೆ ಸೂಕ್ತ ರಕ್ಷಣೆ ನೀಡಿ, ಇವರನ್ನು ನಿರ್ಲಕ್ಷಿಸಿ, ಬೀದಿಗೆ ದೂಡಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
” ಕಳೆದ ಎರಡು ದಿನಗಳಿಂದ ವೃದ್ಧೆ ಇದೇ ಸ್ಥಳದಲ್ಲಿ ಅನಾಥವಾಗಿ ಬಿದ್ದಿದ್ದಾರೆ. ಅಕ್ಕಪಕ್ಕದವರು ತಿಂಡಿ ನೀಡಿದ್ದಾರೆ. ಯಾರಾದರೂ ಹಣ ನೀಡಿದರೆ ಅದನ್ನು ಎಲೆ ಅಡಕೆ ಎಂದು ಭಾವಿಸಿ ಬಾಯಿಗೆ ಹಾಕಿಕೊಳ್ಳುತ್ತಾರೆ. ಕುಟುಂಬದವರ ನಿರ್ಲಕ್ಷ್ಯದಿಂದ ಪೋಷಕರಿಗೆ ಇಂತಹ ದುಸ್ಥಿತಿ ಬಂದಿದೆ. ಹಿರಿಯರನ್ನು ರಕ್ಷಣೆ ಮಾಡುವ ಕಾನೂನುಗಳು ಜಾರಿಯಲ್ಲಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಹಿರಿಯ ಜೀವಕ್ಕೆ ರಕ್ಷಣೆ ಒದಗಿಸಬೇಕು.”
– ಅನಿಲ್ ಕುಮಾರ್, ಸಮಾಜ ಸೇವಕ, ಕಿರುಗಾವಲು
” ಹಿರಿಯ ನಾಗರಿಕರ ರಕ್ಷಣೆಗೆ ಹಲವು ಕಾನೂನುಗಳಿವೆ, ಅವರಿಗೆ ಹಲವು ಸೌಲಭ್ಯಗಳನ್ನೂ ಇಲಾಖೆಯಿಂದ ನೀಡಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ವೃದ್ಧೆಯ ರಕ್ಷಣೆಗೆ ಕ್ರಮವಹಿಸುತ್ತೇವೆ.”
– ಎಸ್.ರಾಜಮೂರ್ತಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಂಡ್ಯ
” ನಮಗೆ ಮಾಹಿತಿ ಕೊರತೆಯಿಂದ ವಿಷಯ ತಿಳಿದಿರಲಿಲ್ಲ, ವೃದ್ಧೆ ಎಲ್ಲಿದ್ದಾರೆಂದು ತಿಳಿಸಿ ಕೂಡಲೇ ಆಕೆಯನ್ನು ಕರೆದುಕೊಂಡು ಬಂದು ವೃದ್ಧಾಶ್ರಮಕ್ಕೆ ದಾಖಲಿಸಿ,ಅಗತ್ಯ ಎಲ್ಲ ಸೌಲಭ್ಯ ನೀಡಲು ಮತ್ತು ಆಕೆಯ ರಕ್ಷಣೆಗೆ ಕ್ರಮವಹಿಸುತ್ತೇವೆ.”
– ಎಸ್.ಎಸ್.ಕೋಮಲ್ ಕುಮಾರ್, ಜಿಲ್ಲಾ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ, ಮಂಡ್ಯ
ಕಾರವಾರ: ದೇಶದ ಪ್ರಥಮ ಪ್ರಜೆಯಾಗಿರುವ ಸೇನಾ ಪಡೆಗಳ ಮಹಾದಂಡ ನಾಯಕಿ ರಾಷ್ಟ್ರಪತಿ ದ್ರೌಪದ ಮುರ್ಮು ಅವರು ಇಂದು ಜಲಾಂತರಗಾಮಿ ನೌಕೆಯಲ್ಲಿ…
ಮೈಸೂರು: ಅಯ್ಯಪ್ಪ ಸ್ವಾಮಿ ದೇವಸ್ಥಾನ ಪಕ್ಕದ ಕೇರಳ ರಾಜ್ಯದಲ್ಲಿ ಇದ್ದರೂ ಅಯ್ಯಪ್ಪನಿಗೆ ಹೆಚ್ಚಿನ ಭಕ್ತರು ಇರುವುದು ನಮ್ಮ ಕರ್ನಾಟಕದಲ್ಲಿಯೇ ಪ್ರತಿ…
ಚಾಮರಾಜನಗರ: ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಹಲವು ಗ್ರಾಮಗಳಲ್ಲಿ…
ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ದಲಿತ ಮುಖ್ಯಮಂತ್ರಿ ಕೂಗು ಜೋರಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಮಾಡುವಂತೆ…
ಮೈಸೂರು : ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ನಿಷೇಧಿಸಬೇಕೆಂದು ಆಗ್ರಹಿಸಿ ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.…
ಮಂಡ್ಯ: ಆಧುನಿಕ ಜೀವನದ ಒತ್ತಡದ ಬದುಕಿನಲ್ಲಿ ಎಲ್ಲರಿಗೂ ಅವರದ್ದೇ ಆದ ಅವಸರಗಳು. ತನ್ನ ಸುತ್ತಮುತ್ತಲಿನ ನೊಂದವರು, ಸಂಕಷ್ಟದಲ್ಲಿರುವವರ ಕಡೆ ಕಣ್ಣೆತ್ತಿಯೂ…