ಎಚ್.ಎಸ್.ದಿನೇಶ್ ಕುಮಾರ್
ವಾಹನ ಸವಾರರು ಹಾಗೂ ಸಾರ್ವಜನಿಕರಿಗೂ ತೊಂದರೆ
ಸೋಮಾರಿಗಳ ಆಶ್ರಯತಾಣವಾಗಿರುವ ಪ್ರಯಾಣಿಕರ ತಂಗುದಾಣ
ಹಲವು ತಂಗುದಾಣಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಇಬ್ಬರಿಗೂ ನಷ್ಟ
ಮೈಸೂರು: ಪ್ರಯಾಣಿಕರ ತಂಗುದಾಣ ಇರುವುದು ಒಂದು ಕಡೆ, ಆದರೆ ಬಸ್ ನಿಲುಗಡೆಯಾಗುವುದು ಅಲ್ಲಿಂದ ಮೂರು ಗಜ ದೂರದಲ್ಲಿ..! ಸುದೀರ್ಘ ಸಮಯ ಕಾದ ಬಳಿಕ ಬಂದ ಬಸ್ ಹೀಗೆ ಗಾವುದ ದೂರ ಹೋಗಿ ನಿಂತುಬಿಟ್ಟರೆ ಪ್ರಯಾಣಿಕರು ಓಡಿ ಹೋಗಿ ಬಸ್ ಹತ್ತು ವುದೋ ಅಥವಾ ಇನ್ನೊಂದು ಬಸ್‌ಗಾಗಿ ಕಾಯುವುದೋ ನಿರ್ಧರಿಸಲಾಗದೆ ಅಯೋಮಯ ಸ್ಥಿತಿಗೆ ತಲುಪುತ್ತಾರೆ.
ನಗರದ ವಿವಿಧೆಡೆಯಿರುವ ಪ್ರಯಾಣಿಕರ ತಂಗು ದಾಣಗಳಲ್ಲಿ ಇಂತಹ ಪರಿಸ್ಥಿತಿ ನಿತ್ಯನೂತನವಾಗಿದೆ. ತಂಗದಾಣಗಳ ಮುಂಭಾಗ ನಿಲ್ಲಬೇಕಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುವ ಮೂಲಕ ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿವೆ. ಬಸ್ ಚಾಲಕರ ಈ ಅಂಕೆ ಇಲ್ಲ ದಾಟದಿಂದ ಇತರೆ ವಾಹನ ಸವಾರರು ಹಾಗೂ ಸಾರ್ವಜನಿಕರೂ ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಕೆಎಸ್‌ಆರ್‌ಟಿಸಿ, ನಗರ ಸಾರಿಗೆ ಹಾಗೂ ಖಾಸಗಿ ವಾಹನಗಳ ನಿಲುಗಡೆಗಾಗಿ ನಗರಪಾಲಿಕೆ, ನಗರಾ ಭಿವೃದ್ಧಿ ಪ್ರಾಧಿಕಾರ, ಶಾಸಕರು ಮತ್ತು ಸಂಸದರ ನಿಧಿಯಿಂದ ನಗರದ ಬಹುತೇಕ ಬಡಾವಣೆಗಳು ಹಾಗೂ ನಗರದ ಅನೇಕ ಸ್ಥಳಗಳಲ್ಲಿ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಲಾಗಿದೆ.
ಇಂತಹ ತಂಗುದಾಣಗಳ ಮುಂಭಾಗ ಮಾತ್ರ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ನಿಲ್ಲಬೇಕೆಂಬ ನಿಯಮವಿದೆ. ಅದರೆ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ಸುಗಳ ಚಾಲಕರು ತಂಗುದಾಣಗಳ ಬಳಿ ನಿಲ್ಲಿಸದೆ ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲುಗಡೆ ಮಾಡುತ್ತಿರುವುದರಿಂದ ವಿನಾಕಾರಣ ಸಾರ್ವಜ ನಿಕರು ತೊಂದರೆ ಅನುಭವಿಸುವಂತಾಗಿದೆ.
ನಗರದ ಅಗ್ರಹಾರ, ರಾಮಸ್ವಾಮಿ ವೃತ್ತ, ನಗರ ಬಸ್ ನಿಲ್ದಾಣ, ಬೆಂಗಳೂರು – ಮೈಸೂರು ರಸ್ತೆಯ ಫೌಂಟನ್ ವೃತ್ತ, ಚಾಮರಾಜ ಜೋಡಿ ರಸ್ತೆ ಬಳಿ, ಕುವೆಂಪುನಗರ, ಮಂಡಿ ಮೊಹಲ್ಲಾ, ಎನ್.ಆರ್.ಮೊಹಲ್ಲಾ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗಿದ್ದರೂ ಇವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ನಗರದ ಅಗ್ರಹಾರ ವೃತ್ತದಲ್ಲಿಯಂತೂ ಈ ಸಮಸ್ಯೆ ತೀವ್ರವಾಗಿದೆ. ಟಾಂಗಾ ನಿಲ್ದಾಣದ ಪಕ್ಕದಲ್ಲಿ ನಿರ್ಮಿಸಲಾಗಿರುವ ಪ್ರಯಾಣಿಕರ ತಂಗುದಾಣ ಕೆಲವರಿಗೆ ವಿಶ್ರಾಂತಿ ಪಡೆಯುವ ತಾಣದಂತಾಗಿದೆ. ಇದರಿಂದಾಗಿ ಪ್ರಯಾಣಿಕರು ರಸ್ತೆಯ ಮಧ್ಯಭಾಗದಲ್ಲಿಯೇ ನಿಂತು ಬಸ್ಸಿಗಾಗಿ ಕಾಯಬೇಕಾಗಿದೆ. ಏಕೆಂದರೆ ಪ್ರಯಾಣಿಕರು ತಂಗುದಾಣದ ಒಳಗೆ ಕುಳಿತರೆ ಚಾಲಕರು ಅವರು ಪ್ರಯಾಣಿಕರೇ ಅಲ್ಲ ಎಂಬುದಾಗಿ ಭಾವಿಸಿ ಬಸ್ಸನ್ನು ನಿಲ್ಲಿಸದೆ ಮುಂದೆ ಸಾಗುತ್ತಾರೆ.
ಪೊಲೀಸರ ಜಾಣ ಕುರುಡು?: ಬೆಳಿಗ್ಗೆ ೮ ರಿಂದ ರಾತ್ರಿ ೯ ಗಂಟೆವರೆಗೂ ಅಗ್ರಹಾರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸರಿಗೆ ಜಾಣ ಕುರುಡು.ಬಾಳೆಹಣ್ಣು, ಹೂವು, ಹಣ್ಣು ಮಾರಾಟ ಮಾಡುವವರನ್ನು ಮಾತ್ರ ಗಮನಿಸುವ ಪೊಲೀಸರು ಅವರನ್ನು ರಸ್ತೆಗೆ ಬಾರದಂತೆ ತಡೆಯುವುದರಲ್ಲಿಯೇ ಮಗ್ನರಾಗಿರುತ್ತಾರೆಯೇ ಹೊರತು ಸಾರಿಗೆ ಹಾಗೂ ಖಾಸಗಿ ವಾಹನಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸುವ ಕಾಳಜಿ ತೋರಿಸುತ್ತಿಲ್ಲ.
ಇನ್ನು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಕೂಡ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ನಗರ ಸಾರಿಗೆ ಬಸ್ ನಿಲ್ದಾಣದ ಪಕ್ಕ ಅರಮನೆಗೆ ಹೊಂದಿಕೊಂಡಂತೆ ಇರುವ ಮುಖ್ಯ ರಸ್ತೆಯಲ್ಲಿ ನಿಲ್ಲುವ ಖಾಸಗಿ ವಾಹನಗಳನ್ನು ನಿಯಂತ್ರಿಸಬೇಕೆಂಬ ಅರಿವು ಸಂಚಾರ ಪೊಲೀಸರಿಗಿಲ್ಲ. ಎಚ್.ಡಿ.ಕೋಟೆ, ಸರಗೂರು, ಅಂತರಸಂತೆ ಕಡೆಗೆ ತೆರಳುವ ಖಾಸಗಿ ವಾಹನಗಳು ರಸ್ತೆ ಮಧ್ಯದಲ್ಲಿಯೇ ನಿಲ್ಲುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಉಳಿದಂತೆ ನಗರದ ಹೊರವಲಯದ ಅನೇಕ ಬಡಾವಣೆಗಳ ತಂಗುದಾಣಗಳ ಮುಂಭಾಗ ಬಸ್ಸುಗಳನ್ನು ನಿಲ್ಲಿಸದ ಚಾಲಕರು ತಮಗಿಷ್ಟ ಬಂದ ರೀತಿಯಲ್ಲಿ ನಿಲ್ಲಿಸುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಕೇವಲ ವಾಹನಗಳ ತಪಾಸಣೆ, ಶಿರಸ್ತ್ರಾಣ (ಹೆಲ್ಮೆಟ್) ಧರಿಸದೆ ವಾಹನ ಚಲಾಯಿಸುವ ಸವಾರರನ್ನು ಮಾತ್ರ ಗುರಿಯಾಗಿಟ್ಟುಕೊಂಡು ಅದೇ ನಮ್ಮ ಕರ್ತವ್ಯ ಎಂಬಂತೆ ಭಾವಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ಸಂಬಂಽಸಿದಂತೆ ಕೂಡ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಹಕ್ಕೊತ್ತಾಯ.
” ಕೆಎಸ್‌ಆರ್‌ಟಿಸಿ ಹಾಗೂ ನಗರ ಸಾರಿಗೆ ಬಸ್‌ಗಳನ್ನು ನಿಗದಿತ ಸ್ಥಳದಲ್ಲಿ ನಿಲ್ಲದೆ, ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಅಂತಹ ಚಾಲಕರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.”
-ರವಿಪ್ರಸಾದ್, ಎಸಿಪಿ, ಸಂಚಾರ ವಿಭಾಗ
ಇಬ್ಬರಿಗೂ ನಷ್ಟ: ನಗರದ ಬಹುತೇಕ ಕಡೆಗಳಲ್ಲಿ ನಗರ ಸಾರಿಗೆ ಹಾಗೂ ಗ್ರಾಮಾಂತರ ಸಾರಿಗೆ ಬಸ್‌ಗಳ ಎರಡೂತಂಗುದಾಣಗಳು ಒಂದೇ ಕಡೆ ಇದ್ದು, ಏಕಕಾಲದಲ್ಲಿ ಎರಡೂ ಬಸ್‌ಗಳು ಬಂದರೆ ಯಾವುದಾದರೂ ಒಂದು ಬಸ್ ಮಾತ್ರ ನಿಲ್ಲುತ್ತದೆ. ಆಗ ಪ್ರಯಾಣಿಕರಿಗೆ ನಷ್ಟ. ಅದರಲ್ಲೂ ಮಡಿಕೇರಿ, ಮಂಗಳೂರು, ಹಾಸನ ಕಡೆಗಳಿಗೆ ತೆರಳುವ ಗ್ರಾಮಾಂತರ ಸಾರಿಗೆ ಬಸ್‌ಗಳು ರಾತ್ರಿ ೯ಗಂಟೆ ನಂತರ ನಿಗದಿತ ಮಾರ್ಗ ಚಾಮರಾಜ ಜೋಡಿ ರಸ್ತೆಯ ಬದಲಿಗೆ ಇರ್ವಿನ್ ರಸ್ತೆ ಮೂಲಕ ತೆರಳುವುದರಿಂದ ಗಾಯತ್ರಿ ಚಿತ್ರಮಂದಿರ ಎದುರು, ಜೆಎಲ್‌ಬಿ ರಸ್ತೆಯಲ್ಲಿನ ಯೂನಿವರ್ಸಿಟಿ ಬಸ್ ತಂಗುದಾಣಗಳಲ್ಲಿ ನಿಂತು ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಪರಿತಪಿಸಬೇಕಾದ ಪರಿಸ್ಥಿತಿ ಇದೆ.
” ಮೈಸೂರಿನಲ್ಲಿ ವಿವಿಧ ಬಡಾವಣೆಗಳಿಗೆ ತೆರಳುವುದಕ್ಕೆ ಬಸ್ಸಿಗಾಗಿ ಕಾಯುವ ಪ್ರಯಾಣಿಕರಿಗೆ ಬಿಸಿಲು, ಗಾಳಿ, ಮಳೆಯಿಂದ ರಕ್ಷಣೆ ನೀಡುವ ಸಲುವಾ ಬಡಾವಣೆಗಳು, ಮುಖ್ಯರಸ್ತೆಗಳಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿರುವುದು ಸರಿಯಷ್ಟೆ. ಆದರೆ, ಅವುಗಳಲ್ಲಿ ಬಹುಪಾಲು ನಿಷ್ಪ್ರಯೋಜಕ ಸ್ಥಿತಿಗೆ ತಲುಪಿವೆ. ನಗರಪಾಲಿಕೆ, ಹಲವು ಸರ್ಕಾರೇತರ ಸಂಸ್ಥೆಗಳು ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಈ ತಂಗುದಾಣಗಳನ್ನು ನಿರ್ಮಿಸಿವೆ. ಕೆಲ ಕೈಗಾರಿಕಾ ಸಂಸ್ಥೆಗಳು ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ನಿಧಿಯಲ್ಲಿ ಪ್ರಯಾಣಿಕರ ತಂಗುದಾಣಗಳನ್ನು ಸ್ಥಾಪಿಸಿವೆ. ಅಂತಹ ಹಲವು ಸುಸ್ಥಿತಿಯಲ್ಲಿವೆ. ಅಲ್ಲದೆ, ಯಾವುದೇ ಸಂಸ್ಥೆ ಅಥವಾ ಗಣ್ಯ ವ್ಯಕ್ತಿ ತಂಗುದಾಣವನ್ನು ನಿರ್ಮಿಸಿದರೂ ಅದರ ನಿರ್ವಹಣೆ ಮಾತ್ರ ನಗರಪಾಲಿಕೆಯದ್ದೇ ಆಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ವಿವಿಧೆಡೆ ಇರುವ ಪ್ರಯಾಣಿಕರ ತಂಗುದಾಣಗಳ ಪರಿಸ್ಥಿತಿಯನ್ನು ತೆರೆದಿಡುವ ನಿಟ್ಟಿನಲ್ಲಿ ‘ಆಂದೋಲನ’ ಇಂದಿನಿಂದ (ಮಾ.೧೫ರಿಂದ) ಅಭಿಯಾನ ಶುರು ಮಾಡಿದೆ.”
ಫೋಟೋ ಕಳುಹಿಸಿ
ನಿಮ್ಮ ಬಡಾವಣೆಗಳು ಅಥವಾ ಮುಖ್ಯ ರಸ್ತೆಗಳಲ್ಲಿ ಸಮಸ್ಯೆ ಬಿಂಬಿಸುತ್ತಿರುವ ಪ್ರಯಾಣಿಕರ ತಂಗುದಾಣಗಳ ಫೋಟೊ ಮತ್ತು ವಿಳಾಸ ಕಳುಹಿಸಿ. ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
ಮೊ.ಸಂ. 9071777071
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…