Andolana originals

ವಹಾಬ್ ಮತ್ತು ಸಾವಿತ್ರಿ ಪಾಲ್ ದಂಪತಿಯ ಬೋಟ್ ಆಸ್ಪತ್ರೆ

ಪಂಜು ಗಂಗೊಳ್ಳಿ

ಪ.ಬಂಗಾಲದ 1,40,000 ಹೆಕ್ಟೇರ್ ವಿಸ್ತೀರ್ಣದ ಸುಂದರ್‌ ಬನ್ ವಿಶ್ವದ ಅತೀ ದೊಡ್ಡ ಮ್ಯಾಂಗೋ ಕಾಡುಗಳಲ್ಲೊಂದು. ಒಂದು ಬೋಟಲ್ಲಿ ಡಾ.ಅನೋವಾರುಲ್ ಅಲಾಮ್ ಎಂಬವರು ರೋಗಿಯೊಬ್ಬರ ಗಾಯಕ್ಕೆ ಬ್ಯಾಂಡೇಜು ಕಟ್ಟುತ್ತಿದ್ದರು. ಆಗ ಅವರ ಮೊಬೈಲ್ ಫೋನ್ ರಿಂಗಣಿಸಿತು. ಡಾ.ಅನೋವಾರುಲ್ ಅಲಾಮ್‌ರನ್ನು ಬಲ್ಲವರಿಗೆ ಆ ಫೋನ್ ಕರೆ ಯಾರೋ ಇನ್ನೊಬ್ಬ ರೋಗಿಯದು ಎಂದು ಸುಲಭದಲ್ಲಿ ತಿಳಿಯುತ್ತಿತ್ತು. ಆ ರೋಗಿಗೆ ಜ್ವರ ತಗುಲಿದ್ದು, ತುರ್ತಾಗಿ ಅವರಿಗೆ ಆಂಟಿಬಾಯೊಟಿಕ್ ಬೇಕಾಗಿತ್ತು. ಅದಕ್ಕಾಗಿ ಅವರು ಡಾ.ಅನೋವಾರುಲ್‌ಗೆ ಫೋನ್ ಮಾಡಿದ್ದರು.

ಸುಂದರ್‌ನ್ ಜನರ ಬದುಕು ಎಷ್ಟು ದುಸ್ತರವೆಂದರೆ, ಅಲ್ಲಿ ಯಾರಾದರೂ ಕಾಯಿಲೆ ಬಿದ್ದರೆ ಅವರಿಗಿರುವುದು ಎರಡೇ ದಾರಿಗಳು -ಮೊದಲನೆಯದು ಡಾ. ಅನೋವಾರುಲ್‌ಗೆ ಫೋನ್ ಮಾಡುವುದು. ಎರಡನೆಯದು, ಮೂರು ದಿನಗಳ ಕಾಲ್ನಡಿಗೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವುದು. ರೋಗಿಯ ಫೋನ್ ಕರೆಯ ನಂತರ ಡಾ.ಅನೋವಾರುಲ್ ತನ್ನ ಸಹಾಯಕರಿಗೆ ಬೇಗ ತಯಾರಾಗಲು ಸೂಚನೆ ನೀಡುತ್ತಾರೆ. ಒಬ್ಬ ಡಾಕ್ಟರ್, ನರ್ಸ್, ಒಬ್ಬ ಎಕ್ಸ್-ರೇ ಟೆಕ್ನಿಷಿಯನ್ ಮತ್ತು ಒಬ್ಬ ಲ್ಯಾಬ್ ಟೆಕ್ನಿಷಿಯನ್ ಔಷಧಿ ಹಿಡಿದು ತಯಾರಾಗುತ್ತಾರೆ. ಅದಾಗಿ ಕೆಲವು ಕ್ಷಣಗಳ ನಂತರ ಯಾವುದೋ ಬೋಟ್ ಎಂಜಿನ್ ಸ್ಟಾರ್ಟ್ ಆದ ಸದ್ದು ಕೇಳುತ್ತದೆ. ನೋಡು ನೋಡುತ್ತಿದ್ದಂತೆ ಬೋಟೊಂದು ಬರುತ್ತದೆ, ಅವರೆಲ್ಲ ಅದನ್ನು ಹತ್ತಿ ರೋಗಿಯ ಮನೆಗೆ ಹೊರಡುತ್ತಾರೆ.

ವಾಸ್ತವದಲ್ಲಿ, ಆ ಬೋಟು ಒಂದು ಆಸ್ಪತ್ರೆ. ಅಲ್ಲಿ ಅಂತಹ ನಾಲ್ಕು ಬೋಟುಗಳಿವೆ. ಪ್ರತಿಯೊಂದರಲ್ಲಿಯೂ ಒಬ್ಬ ಡಾಕ್ಟರ್, ನರ್ಸ್, ಚಿಕ್ಕದೊಂದು ಪ್ಯಾಥೋಲಾಜಿಕಲ್ ಘಟಕ, ಒಂದು ಮೆಡಿಕಲ್ ಸ್ಟೋರ್ ರೂಮ್, ಒಂದು ಆಕ್ಸಿಜನ್ ಸಿಲಿಂಡರ್, ಒಬ್ಬ ಎಕ್ಸ್-ರೇ ಟೆಕ್ನಿಷಿಯನ್ ಮತ್ತು ಒಬ್ಬ ಲ್ಯಾಬ್ ಟೆಕ್ನಿಷಿಯನ್ ಇದ್ದಾರೆ. ಕಳೆದ ಹತ್ತು ವರ್ಷಗಳಿಂದ ಈ ಬೋಟುಗಳು ಸುಂದರ್‌ಬನ್ ಜನರ ಆರೋಗ್ಯ ಸೇತುಗಳಾಗಿ ಕೆಲಸ ಮಾಡುತ್ತಿವೆ. ಒಂದು ತಿಂಗಳಲ್ಲಿ ಈ ನಾಲ್ಕು ಈ ಬೋಟು ಆಸ್ಪತ್ರೆಗಳೂ ಸುಮಾರು 34,578 ರೋಗಿಗಳ ಆರೈಕೆ ಮಾಡುತ್ತವೆ. ಈ ಬೋಟು ಆಸ್ಪತ್ರೆಗಳು ಮೊಹಮ್ಮದ್ ಅಬ್ದುಲ್ ವಹಾಬ್ ಮತ್ತು ಸಾವಿತ್ರಿ ಪಾಲ್ ಎಂಬ ದಂಪತಿ 1980ರಲ್ಲಿ ಹುಟ್ಟು ಹಾಕಿದ ‘ಸದರ್ನ್ ಹೆಲ್ತ್ ಇಂಪ್ಯೂಮೆಂಟ್ ಸಮಿತಿ (ಎಸ್‌ಎಚ್ಐಎಸ್)’ ಎಂಬ ಸಂಸ್ಥೆಗೆ ಸೇರಿದವುಗಳು. ಈ ಬೋಟ್ ಆಸ್ಪತ್ರೆಗಳ ಹಿಂದೆ ಒಂದು ಹೃದಯಸ್ಪರ್ಶಿ ಕತೆಯಿದೆ.

1978ರ ಸೆಪ್ಟೆಂಬರ್ 27ರ ಭೀಕರ ನೆರೆಯನ್ನು ಯಾವತ್ತೂ ಮರೆಯಲಾಗದು. ಆ ನೆರೆಯಲ್ಲಿ ಸಾವಿರಾರು ಜನ ಸತ್ತರು; ನೂರಾರು ಕುಟುಂಬಗಳು ನೆಲೆ ಕಳೆದುಕೊಂಡು ನಿರಾಶ್ರಿತವಾದವು. ವಹಾಬ್ ಜನ, ಜಾನುವಾರುಗಳು ನೆರೆ ನೀರಲ್ಲಿ ಕೊಚ್ಚಿಕೊಂಡು ಹೋಗುವುದನ್ನು ತನ್ನ ಕಣ್ಣಾರೆ ಕಂಡರು. ಜೀವ ಉಳಿಸಿಕೊಂಡವರು ಬೇರೆಯವರ ಮನೆಗಳಲ್ಲಿ, ಶಾಲೆಗಳಲ್ಲಿ ಆಶ್ರಯ ಪಡೆದರು. ಕೆಲವರು ಎತ್ತರದ ಮರಗಳನ್ನು ಏರಿ ಬದುಕುಳಿದರು. ಮುಂದೇನಾಗುತ್ತದೆ ಎಂದು ಯಾರಿಗೂ ತಿಳಿಯದಂತಹ ಪರಿಸ್ಥಿತಿ. ಅಂತಹ ಪರಿಸ್ಥಿತಿಯಲ್ಲಿ ವಿದೇಶಿಗನಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬ ನೆರೆ ನೀರಲ್ಲಿ ತನ್ನ ದೋಣಿಯನ್ನು ನಡೆಸಿಕೊಂಡು, ಜನರಿಗೆ ಆಹಾರದ ಪ್ಯಾಕೇಟನ್ನು ಹಂಚುವುದನ್ನು ನೋಡಿ ವಹಾಬ್ ಆಶ್ಚರ್ಯಚಕಿತರಾದರು! ನಂತರ, ಆತನ ಬಳಿ ಹೋಗಿ ವಿಚಾರಿಸಿದಾಗ ಅವರಿಗೆ ಆತನ ಬಗ್ಗೆ ತಿಳಿದು ಬಂದದ್ದು ಇಷ್ಟು-ಅವರ ಹೆಸರು ಗ್ಯಾಂಡೀನ್ ಗ್ಯಾಸ್ಟನ್, ಅವರು ಸ್ವಿಡ್ನರ್‌ ಲ್ಯಾಂಡಿನ ಒಬ್ಬ ನರ್ಸ್. ಒಬ್ಬ ಹೃದಯ ರೋಗಿಯಾಗಿದ್ದ ಅವರು ತನ್ನ ಉಳಿದ ಆಯುಷ್ಯವನ್ನು ಭಾರತದ ಬಡವರ ಸೇವೆಗೆ ಮುಡಿಪಾಗಿಡಲು ತೀರ್ಮಾನಿಸಿದ್ದರು.

ಗ್ಯಾಂಡೀನ್ ಗ್ಯಾಸ್ಟನ್‌ರಿಂದ ಸ್ಪೂರ್ತಿ ಹೊಂದಿದ ವಹಾಬ್ ತಾನೂ ಅವರಂತೆ ನೆರೆ ಪೀಡಿತ ಜನರಿಗೆ ಏನಾದರೂ ಮಾಡಬೇಕೆಂದು ನಿಶ್ಚಯಿಸಿದರು. ಅವರು ತನ್ನ ಪತ್ನಿ ಸಾವಿತ್ರಿ ಪಾಲ್‌ರೊಂದಿಗೆ ತಮ್ಮ ಹುಟ್ಟೂರು ಭಾಂಗಾರ್‌ಗೆ ಮರಳಿದರು. ಭಾಂಗಾರ್ ಮತ್ತು ಸುತ್ತಲಿನ ಪ್ರದೇಶದಲ್ಲಿ ಕ್ಷಯ ರೋಗ ವ್ಯಾಪಕವಾಗಿತ್ತು. ನೆರೆ ನೀರು ಇಳಿದ ನಂತರ ಬ್ಯಾಕ್ಟಿರಿಯಾಗಳಿಂದಾಗಿ ಹೊಸ ರೀತಿಯ ರೋಗಗಳು ಹರಡತೊಡಗಿದವು. ಈಗಾಗಲೇ ಕ್ಷಯರೋಗದಿಂದ ಬಳಲುತ್ತಿದ್ದ ಜನರು ಹೊಸ ರೋಗಗಳನ್ನು ಎದುರಿಸಬೇಕಾಯಿತು. ಪ್ರಾರಂಭದಲ್ಲಿ ಕೆಮ್ಮಿನೊಂದಿಗೆ ಶುರುವಾಗಿ, ರೋಗಿಗೆ ಗೊತ್ತಾಗುವ ಮೊದಲೇ ಆತನಿಗೆ ಕ್ಷಯರೋಗ ತಗುಲಿರುತ್ತಿತ್ತು. ಆಗ ಸುಂದರಬನ್‌ನಲ್ಲಿ ಕೇವಲ ಮೂವರು ಡಾಕ್ಟರುಗಳಿದ್ದರು. ಆದರೆ, ರೋಗಿಗಳ ಸಂಖ್ಯೆ ಇದ್ದದ್ದು ಮೂರು ಲಕ್ಷದಷ್ಟು.

ಆ ಹೊತ್ತಲ್ಲಿ ಕೊಲ್ಕತ್ತಾದ ಡಾಕ್ಟರುಗಳು ಉಚಿತವಾಗಿ ಔಷಧಿಗಳನ್ನು ಹಂಚುತ್ತಿದ್ದರು. ವಹಾಬ್ ಮತ್ತು ಸಾವಿತ್ರಿ ಆಗಾಗ್ಗೆ ಕೊಲ್ಕತ್ತಾಗೆ ಹೋಗಿ, ಆ ಔಷಧಿಗಳನ್ನು ತಂದು, ಒಬ್ಬ ಚಹದಂಗಡಿಯವನಿಂದ ಬಾಡಿಗೆಗೆ ಪಡೆದ ಒಂದು ಚಿಕ್ಕ ಕೋಣೆಯಲ್ಲಿ ಸಂಗ್ರಹಿಸಿಟ್ಟು, ಅದನ್ನು ಸುಂದರ್‌ಬನ್‌ನ ರೋಗಿಗಳಿಗೆ ಹಂಚುತ್ತಿದ್ದರು. ಆದರೆ, ಬರುಬರುತ್ತ ರೋಗಿಗಳ ಸಂಖ್ಯೆ ಹೆಚ್ಚಾದಾಗ ವಹಾಬ್ ಮತ್ತು ಸಾವಿತ್ರಿ ಏನು ಮಾಡುವುದೆಂದು ಆಲೋಚಿಸತೊಡಗಿದರು. ಅದೇ ಹೊತ್ತಲ್ಲಿ, ಫ್ರೆಂಚ್ ಲೇಖಕ ಡೋಮಿನಿಕ್ ಲೆಪೀರ್ ತಮ್ಮ ಮುಂದಿನ ಕಾದಂಬರಿಗಾಗಿ ಗ್ರಾಂಡೀನ್ ಗ್ಯಾಸ್ಟನ್‌ರ ಜೀವನಗಾಥೆಯ ಮೇಲೆ ಡಾಕ್ಯುಮೆಂಟರಿಯೊಂದನ್ನು ತಯಾರಿಸಲು ಕೊಲ್ಕತ್ತಾಗೆ ಬಂದಿದ್ದರು. ಆಗ ಗ್ಯಾಂಗ್ಟನ್ ಗ್ಯಾಸ್ಟನ್ ಡೋಮಿನಿಕ್‌ರಿಗೆ ವಹಾಬ್ ಮತ್ತು ಸಾವಿತ್ರಿ ದಂಪತಿ ಮಾಡುತ್ತಿರುವ ಕೆಲಸಗಳ ಬಗ್ಗೆ ಹೇಳಿದರು. ಆಗ ಡೋಮಿನಿಕ್ ನಾಲ್ಕು ತಿಂಗಳ ನಂತರ ವಹಾಬ್ ಮತ್ತು ಸಾವಿತ್ರಿ ದಂಪತಿ ನಾಲ್ಕು ಬೋಟ್ ಆಸ್ಪತ್ರೆಗಳನ್ನು ಉಡುಗೊರೆಯಾಗಿ ನೀಡಿದರು. ಹೀಗೆ ಮೊಹಮ್ಮದ್‌ ಅಬ್ದುಲ್‌ ವಹಾಬ್ ಮತ್ತು ಸಾವಿತ್ರಿ ಪಾಲ್ ದಂಪತಿ ‘ಸದರ್ನ್ ಹೆಲ್ತ್ ಇಂಪ್ಯೂಮೆಂಟ್ ಸಮಿತಿ (ಎಸ್‌ಎಚ್ಐಎಸ್)’ ಯ ಬೋಟು ಆಸ್ಪತ್ರೆ
ಶುರುವಾಯಿತು.

79 ವರ್ಷ ಪ್ರಾಯದ ವಹಾಬ್ ಮತ್ತು ಸಾವಿತ್ರಿ ಪಾಲ್ ದಂಪತಿ ಕಳೆದ 44 ವರ್ಷಗಳಲ್ಲಿ ಸುಂದರ್‌ಬನ್‌ನ ಬಡ ನಿವಾಸಿಗಳಿಗೆ ಕ್ಷಯ ನಿಯಂತ್ರಣ ಕಾರ್ಯಕ್ರಮ, ಒಂದು ಕಣ್ಣಿನ ಆಸ್ಪತ್ರೆ, ಒಂದು ಹೆಣ್ಣು ಮಕ್ಕಳ ಶಾಲೆ, ಒಂದು ಅಂಗವಿಕಲ ಮಕ್ಕಳ ಶಾಲೆ, ಮಹಿಳೆಯರಿಗೆ ಕೌಶಲ ಅಭಿವೃದ್ಧಿ ಕಾರ್ಯಕ್ರಮ ಮೊದಲಾದವುಗಳನ್ನು ನಡೆಸುತ್ತಿದ್ದಾರೆ. 44 ಜನ ದರೋಡೆಕೋರರು ಮತ್ತು ಕಳ್ಳರಿಗೆ ಪುನರ್ವಸತಿ ಕಲ್ಪಿಸಿದ್ದಾರೆ. ಮಹಿಳೆಯರ ಸ್ವಸಹಾಯ ಸಂಘಗಳನ್ನು ಹುಟ್ಟು ಹಾಕಿ, ಅವರಿಗೆ ಸುಲಭದಲ್ಲಿ ಸಾಲ ಸೌಲಭ್ಯ ಸಿಗುವಂತೆ ಮಾಡಿ ಅವರ ಬದುಕನ್ನು ಹಸನುಗೊಳಿಸುತ್ತಿದ್ದಾರೆ.

ಆ ಬೋಟು ಒಂದು ಆಸ್ಪತ್ರೆ. ಅಲ್ಲಿ ಅಂತಹ ನಾಲ್ಕು ಬೋಟುಗಳಿವೆ. ಪ್ರತಿಯೊಂದರಲ್ಲಿಯೂ ಒಬ್ಬ ಡಾಕ್ಟರ್, ನರ್ಸ್, ಚಿಕ್ಕದೊಂದು ಪ್ಯಾಥೊಲಾಜಿಕಲ್ ಘಟಕ, ಒಂದು ಮೆಡಿಕಲ್ ಸ್ಟೋರ್ ರೂಮ್, ಒಂದು ಆಕ್ಸಿಜನ್ ಸಿಲಿಂಡರ್, ಒಬ್ಬ ಎಕ್ಸ್-ರೇ ಟೆಕ್ನಿಷಿಯನ್ ಮತ್ತು ಒಬ್ಬ ಲ್ಯಾಬ್ ಟೆಕ್ನಿಷಿಯನ್ ಇದ್ದಾರೆ. ಕಳೆದ ಹತ್ತು ವರ್ಷಗಳಿಂದ ಈ ಬೋಟುಗಳು ಸುಂದರ್‌ಬನ್ ಜನರ ಆರೋಗ್ಯ ಸೇತುಗಳಾಗಿ ಕೆಲಸ ಮಾಡುತ್ತಿವೆ. ಒಂದು ತಿಂಗಳಲ್ಲಿ ಈ ನಾಲ್ಕು ಬೋಟು ಆಸ್ಪತ್ರೆಗಳೂ ಸುಮಾರು 34,578 ರೋಗಿಗಳ ಆರೈಕೆ ಮಾಡುತ್ತವೆ.

 

ಆಂದೋಲನ ಡೆಸ್ಕ್

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago