Andolana originals

ಆಂದೋಲನ ಕಳಕಳಿ: ಸರ್ಕಾರಿ ಜಾಗ ಕಬಳಿಸಲು ಹರಾಜಿನ ಸಂಚು

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಎಂ. ಜಿ. ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆಯ ನೂರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಜಾಗವನ್ನು ಕಬಳಿಸಲು ಹಲವು ವರ್ಷಗಳಿಂದಲೂ ಕಾಣದ ಕೈಗಳು ಹುನ್ನಾರ ನಡೆಸುತ್ತಿವೆ.

ಇದೀಗ ಸಂಚಿನ ರೂಪವನ್ನು ಬದಲಾ ಯಿಸಿರುವ ಭೂ ಗಳ್ಳರು ಮಾರುಕಟ್ಟೆ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಆ ಮೂಲಕ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂ. ಗಳ ಸಾಲ ಪಡೆದು ತಮ್ಮ ತಿಜೋರಿ ತುಂಬಿಸಿಕೊಂಡಿದ್ದಾರೆ. ಇತ್ತ ಕೋಟ್ಯಂತರ ರೂಪಾಯಿ ಸಾಲ ನೀಡುವಾಗ ದಾಖಲೆ ಗಳನ್ನು ಎಚ್ಚರಿಕೆಯಿಂದ ಪರಿಶೀಲಿಸದೆ ನಿರ್ಲಕ್ಷ್ಯ ವಹಿಸಿದ ಬ್ಯಾಂಕ್ ಸಾಲ ವಸೂಲಾತಿ ನೆಪದಲ್ಲಿ ಈ ಜಾಗವನ್ನು ಹರಾಜಿಗಿಟ್ಟಿದೆ. ಆ ಮೂಲಕ ಬಡ ತರಕಾರಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ.

ಬದುಕಿನ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿ ಬಡ ವ್ಯಾಪಾರಿಗಳು

ಮೈಸೂರು: ತಮ್ಮ ಮೂರು ಹೊತ್ತಿನ ತುತ್ತು ಗಿಟ್ಟಿಸಿಕೊಳ್ಳಲು ಬಿಸಿಲು-ಮಳೆ ಎನ್ನದೆ ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ರೈತರ ಸಂತೆಯಲ್ಲಿ ವ್ಯಾಪಾರ ಮಾಡುತ್ತಿರುವ ಬಡ ವ್ಯಾಪಾರಿಗಳು ಈಗ ತಮ್ಮ ಬದುಕಿನ ನೆಲೆಯನ್ನೇ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದು, ಆಗಿಂದಾಗ್ಗೆ ಭೂಗಳ್ಳರಿಂದ ಎದುರಾಗುವ ಕಂಟಕದ ವಿರುದ್ಧ ಹೋರಾಟ ಮಾಡಿಕೊಂಡೇ ಬರುವಂತಾಗಿದೆ.

ಅದರಲ್ಲೂ ಈ ಬಾರಿ ಯಾರೋ ಮಾಡಿರುವ ಹುನ್ನಾರ, ಭೂಗಳ್ಳರು ಸೃಷ್ಟಿಸಿಕೊಂಡ ದಾಖಲೆಗಳ ಮಾಲೀಕತ್ವಕ್ಕೆ ಬ್ಯಾಂಕ್‌ನವರು ಕೊಟ್ಟ ಸಾಲವನ್ನು ವಾಪಸ್ ಪಡೆಯಲು ಹರಾಜು ಹಾಕುವಂತಹ ಮಟ್ಟಕ್ಕೆ ಬಂದಿರುವುದರಿಂದ ಎರಡು ದಶಕಗಳ ಕಾಲದಿಂದ ವ್ಯಾಪಾರ ಮಾಡುತ್ತಿರುವ ಬಡ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಈ ಬಾರಿ ಬ್ಯಾಂಕ್‌ನವರು ಭೂ ಮಾಲೀಕರಿಗೆ ನೀಡಿದ ಸಾಲಕ್ಕೆ ಪರ್ಯಾಯ ವಾಗಿ ಹರಾಜಿನ ಮೂಲಕ ತಮ್ಮ ವಶಕ್ಕೆ ಈ ಭೂಮಿಪಡೆದರೆ ಅನಿವಾರ್ಯವಾಗಿ ವ್ಯಾಪಾರಿಗಳು ಬೀದಿಗಿಳಿದು ದೊಡ್ಡ ಹೋರಾಟಕ್ಕೆ ಅಣಿಯಾಗುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಇದರಿಂದಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತು ಕರ್ನಾಟಕ ವಸ್ತು ಪ್ರದರ್ಶನ ಪ್ರಾಽಕಾರದ ಅಽನದಲ್ಲಿರುವ ಜಮೀನನ್ನು ರಕ್ಷಿಸಿ ಕೊಳ್ಳುವ ಜತೆಗೆ ವ್ಯಾಪಾರಿಗಳ ನೆಲೆ ಅಲುಗಾಡದಂತೆ ನಿರ್ಧಾರ ಮಾಡಬೇಕಿದೆ. ಇಲ್ಲಿಗೆ ಬರುವುದಕ್ಕೆ ಮುನ್ನ ಈ ವ್ಯಾಪಾರಿಗಳು ಕೆ. ಆರ್. ವೃತ್ತದ ಬಳಿಯ ತಾತಯ್ಯ ಪಾರ್ಕ್ ಬಳಿ ವ್ಯಾಪಾರ ಮಾಡುತ್ತಿದ್ದರು. ನಗರಪಾಲಿಕೆಯಿಂದ ಪಾರ್ಕ್ ಅಭಿವೃದ್ಧಿಪಡಿಸಬೇಕಿದ್ದರಿಂದ ಕಾಡಾ ಕಚೇರಿ ಹತ್ತಿರಕ್ಕೆ ಸ್ಥಳಾಂತರ ಮಾಡಲಾಯಿತು. ಜನದಟ್ಟಣೆಯ ಹಿನ್ನೆಲೆಯಲ್ಲಿ ಅಲ್ಲಿಂದ ಈಗಿರುವ ಎಂ. ಜಿ. ರಸ್ತೆಗೆ ವರ್ಗಾಯಿಸಲಾಯಿತು. ಹಳ್ಳ ಕೊಳ್ಳಗಳಿಂದ ತುಂಬಿದ್ದ ಜಾಗವನ್ನು ಸಮತಟ್ಟು ಮಾಡಿಸಿ ವ್ಯಾಪಾರ ಶುರು ಮಾಡಲಾಯಿತು. ಇದಕ್ಕಾಗಿ ದಲಿತ ಸಂಘರ್ಷ ಸಮಿತಿ ಮತ್ತಿತರ ಸಂಘಟನೆಗಳು ಹೋರಾಟ ಕೂಡ ನಡೆಸಿದ್ದವು. ದಲಿತ ಸಂಘರ್ಷ ಸಮಿತಿ ಹೋರಾಟ, ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರ ಒತ್ತಾಸೆಯ ಫಲವಾಗಿ ಈ ಜಾಗದಲ್ಲಿ ವ್ಯಾಪಾರ ಆರಂಭಿಸಿ ಇದೀಗ ಹತ್ತು ವರ್ಷಗಳಿಗೂ ಹೆಚ್ಚು ಕಾಲವಾಗಿದೆ.

ಅನೇಕರು ಈ ಜಾಗವನ್ನು ಖರೀದಿಸಿದ್ದೇವೆಂದು ಹೇಳಿ ಆಗಿಂದಾಗ್ಗೆ ಬೇಲಿ ಹಾಕುವ ಯತ್ನ ಮಾಡಿದಾಗಲೆಲ್ಲಾ ವಿರೋಧ ಉಂಟಾಗಿ ಹಿಂತಿರುಗಿದ್ದರು. ಈ ವಿಚಾರದಲ್ಲಿ ನ್ಯಾಯಾಲಯದಲ್ಲಿ ಕೂಡ ಹೋರಾಟ ನಡೆಯುತ್ತಿದೆ. ರಾಜ್ಯ ಸರ್ಕಾರ ಈ ಜಾಗವನ್ನು ಶಾಶ್ವತವಾಗಿ ವ್ಯಾಪಾರಿಗಳಿಗೆ ಬಿಟ್ಟುಕೊಟ್ಟು ಮೂಲ ಸೌಕರ್ಯವನ್ನು ಒದಗಿಸಲು ಕ್ರಮ ಕೈಗೊಳ್ಳುವುದಕ್ಕೆ ಚಿಂತನೆ ನಡೆಸಿರುವಾಗಲೇ ಬ್ಯಾಂಕ್ ನೋಟಿಸ್ ವ್ಯಾಪಾರಿಗಳ ಮನದಲ್ಲಿ ತಲ್ಲಣವನ್ನುಂಟು ಮಾಡಿದೆ.

ದಶಕಗಳಿಂದಲೂ ಸಿಗದ ಕಾಯಕಲ್ಪ: ಹಲವು ವರ್ಷಗಳಿಂದ ಸೊಪ್ಪು, ತರಕಾರಿ, ಹಣ್ಣುಗಳ ವ್ಯಾಪಾರ ಬದುಕಿಗೆ ಇನ್ನೂ ಕಾಯಕಲ್ಪವಾಗಿಲ್ಲ. ಬಿಸಿಲು, ಮಳೆ, ಚಳಿ,ಗಾಳಿ ಎನ್ನದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವ ನೂರಾರು ಮಂದಿ ನಿರುಮ್ಮಳ ವಾಗಿ ವ್ಯಾಪಾರ ಮಾಡಲು ಇನ್ನೂ ಸೂರು ಪಡೆದುಕೊಳ್ಳಲಾಗಿಲ್ಲ. ಬೆವರು ಸುರಿಸಿ ಜಮೀನು ಉತ್ತಿ ಬಿತ್ತಿ ಬೆಳೆದ ಹಣ್ಣು ತರಕಾರಿ ಗಳನ್ನು ಮಣ್ಣಿನ ನೆಲೆದಲ್ಲೇ ಇಟ್ಟುಕೊಂಡು ಮಾರಾಟ ಮಾಡಬೇಕಾಗದ ಸ್ಥಿತಿ ಎದುರಾಗಿದೆ. ಮಹಾತ್ಮನ ಹೆಸರಿನ ರಸ್ತೆಯಲ್ಲಿದ್ದರೂ ಅವರಿಗೊಂದು ಸೂರು ಒದಗಿಸಲು ಯಾವುದೇ ಮಹಾತ್ಮೆಯೂ ಕೆಲಸ ಮಾಡಿಲ್ಲ. ಯಾವ ಮಹಾನುಭಾವರೂ ಕರುಣೆ ತೋರಿಲ್ಲ. ಬಡ ವ್ಯಾಪಾರಿಗಳ ದೂರು -ದುಮ್ಮಾನ – ದುಃಖಗಳನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಡಲಾಗುತ್ತಿದೆ. ಎಲ್ಲವೂ ಬರೀ ಮಾತಿನ ಅಪರಂಜಿ. ಸಚಿವರು,ಮುಖ್ಯಮಂತ್ರಿಗಳು ಸೇರಿದಂತೆ ಅನೇಕರು ಭರವಸೆ ಕೊಟ್ಟಿದ್ದಷ್ಟೇ ಬಂತು. ಅದು ಕನಸಾಗಿಯೇ ಉಳಿದಿದೆ. ದಸರಾ ವಸ್ತು ಪ್ರದರ್ಶನ ಆವರಣದ ಹಿಂಭಾಗದಲ್ಲಿ ಲಲಿತ ಮಹಲ್ ರಸ್ತೆ, ನಂಜನಗೂಡು ರಸ್ತೆಗೆ ಹತ್ತಿರಕ್ಕೆ ಹೊಂದಿಕೊಂಡಂತೆ ಇರುವ ಎಂ. ಜಿ. ರಸ್ತೆಯಲ್ಲಿ ಈ ಮಾರುಕಟ್ಟೆ ನಡೆಯುತ್ತಿದ್ದು, ಇಲ್ಲಿಗೆ ಬಹುತೇಕ ಮೈಸೂರು ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳ ರೈತರು ತಾವು ಬೆಳೆದ ತರಕಾರಿ, ಹೂ, ಹಣ್ಣುಗಳನ್ನು ತಂದು ಮಾರುತ್ತಾರೆ. ನಂಜನಗೂಡಿನಿಂದಲೂ ಹಲವರು ಬರುತ್ತಾರೆ. ಸೊಪ್ಪಿನಿಂದ ಹಿಡಿದು ಎಲ್ಲಾ ಬಗೆಯ ತಾಜಾ ತರಕಾರಿ ಇಲ್ಲಿ ಲಭ್ಯ. ಹಾಗಾಗಿ ಬೆಳಗಿನ ಹೊತ್ತು ಇಲ್ಲಿ ಸದಾ ಜನಜಂಗುಳಿ. ಇಲ್ಲಿ ೫೦೦ಕ್ಕೂ ಹೆಚ್ಚು ಮಂದಿ ವ್ಯಾಪಾರ ಮಾಡುತ್ತಿದ್ದು, ಉಳಿದ ತರಕಾರಿಯನ್ನು ತೆರೆದ ಬಯಲಿ ನಲ್ಲೇ ಪ್ಲಾಸ್ಟಿಕ್ ಅಥವಾ ತೆಂಗಿನ ಗರಿಗಳಿಂದ ಮುಚ್ಚಿ ಹೋಗುತ್ತಾರೆ. ಅವುಗಳಿಗೆ ರಕ್ಷಣೆ ಎಂಬುದಿಲ್ಲ. ಮತ್ತೆ ಈ ವ್ಯಾಪಾರಿಗಳಿಗೆ ನೆರಳು ಕಲ್ಪಿಸುವ ಮಾತುಗಳು ಕೇಳಿ ಬರುತ್ತಲೇ ಇದ್ದರೂ ಬದುಕಿನ ನೆಲೆಯನ್ನು ಗಟ್ಟಿಯಾಗಿಸುವಂತೆ ಮಾಡಿಲ್ಲ. ಹೀಗಾಗಿಯೇ ಆಗಿಂದಾಗ್ಗೆ ಎದುರಾಗುವ ಅಪತ್ತು ದೂರವಾಗಬೇಕಿದೆ.

ಸಮಸ್ಯೆಗಳಿಗೆ ಬೇಕು ಮುಕ್ತಿ: ಮಳೆ ಬಂದಾಗ ಕೊಚ್ಚೆಯಾಗುವ ಮೈದಾನದಲ್ಲಿ ಬಿಸಿಲು ಬಂದಾಗ ಬೆವರಿಳಿಸುತ್ತಾ ಬಿರುಗಾಳಿಗೆ ಮೇಲೇಳುವ ದೂಳಿನ ನಡುವೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಹಲವು ವರ್ಷಗಳ ಹಾಡು ಪಾಡು ಬದಲಾಗಿಲ್ಲ ಎನ್ನುವುದಕ್ಕೆ ಮಹಾತ್ಮಗಾಂಧಿ ರಸ್ತೆಯಲ್ಲಿ ಹಲವು ವರ್ಷಗಳಿಂದ ತರಕಾರಿ ಮಾರುಕಟ್ಟೆ ಕಟ್ಟಿಕೊಂಡಿರುವ ಬಡ ವ್ಯಾಪಾರಿಗಳ, ಬಡ ರೈತರ ಕತೆಯ ವ್ಯಥೆಗೆ ಸರ್ಕಾರ ಶಾಶ್ವತವಾಗಿ ಮುಕ್ತಿ ಕಾಣಿಸಬೇಕಿದೆ.

 

andolana

Recent Posts

ಶಾಸಕ ಗಾಲಿ ಜನಾರ್ಧನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸ್ಥಾನದಿಂದಲೇ ಅನರ್ಹಗೊಂಡು ನ್ಯಾಯಾಲಯದ ತಡೆಯಾಜ್ಞೆಯಿಂದ ಬಚಾವ್ ಆಗಿದ್ದ ಮಾಜಿ ಸಚಿವ ಹಾಗೂ ಶಾಸಕ…

2 hours ago

ಉನ್ನಾವೋ ಅತ್ಯಾಚಾರ ಕೇಸ್:‌ ಆರೋಪಿ ಕುಲದೀಪ್‌ ಸಿಂಗ್‌ ಸೆಂಗರ್‌ ಜಾಮೀನಿಗೆ ಸುಪ್ರೀಂಕೋರ್ಟ್‌ ತಡೆ

ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ…

2 hours ago

ರಾಜ್ಯದಲ್ಲಿ ಡ್ರಗ್ಸ್‌ ದಂಧೆ: ಸರ್ಕಾರದ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್‌ ಸೀಜ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ…

2 hours ago

ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ : ಯಾವುದು ನಂಬರ್‌ ಒನ್‌ ಗೊತ್ತಾ?

ಬೆಂಗಳೂರು: ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಪ್ರಸಿದ್ಧ…

3 hours ago

ತಲಕಾಡಿನತ್ತ ಹರಿದುಬರುತ್ತಿರುವ ಪ್ರವಾಸಿಗರು: ಕಾವೇರಿ ನದಿಯಲ್ಲಿ ಮಿಂದೆದ್ದು ಸಂಭ್ರಮ

ಟಿ.ನರಸೀಪುರ: ಹೊಸ ವರ್ಷದ ಸಂಭ್ರಮಾಚರಣೆ ಆಚರಿಸಲು ಐತಿಹಾಸಿಕ ಪಂಚಲಿಂಗಗಳ ಪುಣ್ಯಕ್ಷೇತ್ರ ತಲಕಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕಳೆದ ಮೂರು…

3 hours ago

ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ ಸಚಿವ ಎಚ್.ಸಿ.ಮಹದೇವಪ್ಪ ಕಿಡಿ

ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳ ತೆರವು ಪ್ರಕರಣವನ್ನು ಖಂಡಿಸಿ ಟ್ವೀಟ್‌ ಮಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ…

3 hours ago