Andolana originals

ಮಿಯಾವಾಕಿ ಎಂಬ ಆಧುನಿಕ ಕಾಡುಗಳು!

ನಂದಿನಿ ಎನ್‌ 

“ನಾವು ಕಾಡುಗಳನ್ನು ಕಳೆದು ಕೊಂಡರೆ, ಇದ್ದ ಒಬ್ಬ ಗುರುವನ್ನೂ ಕಳೆದುಕೊಂಡಂತೆ ” ಆಸ್ಟ್ರೇಲಿಯಾದ ಪ್ರಸಿದ್ಧ ವಿಜ್ಞಾನಿ ಮತ್ತು ಬರಹಗಾರರಾದ ಬಿಲ್ ಮೊಲ್ಲಿಸನ್ ಹೇಳಿದ ಈ ಮಾತು, ಎಷ್ಟು ಸತ್ಯ ಅಲ್ವಾ?! ಸಾವಿರಾರು ವರ್ಷಗಳಿಂದ ತಮ್ಮಷ್ಟಕ್ಕೆ ತಾವೇ ಬೆಳೆದು ನಿಂತ ಕಾಡುಗಳು ಪಶು ಪಕ್ಷಿಗಳಿಗಷ್ಟೇ ಅಲ್ಲ, ಮನುಷ್ಯಬದುಕುಳಿಯಲು ಕೂಡ ಅತ್ಯವಶ್ಯ. ಇಂತಹ ವನಗಳು ಕ್ಷೀಣಿಸುತ್ತಿರುವ ಈ ಹೊತ್ತಲ್ಲಿ , ಮಿಯಾವಾಕಿ ಎಂಬ ಮಾನವ ನಿರ್ಮಿತ ಕಾಡುಗಳ ಕಲ್ಪನೆ, ಒಂದು ಆಶಾಕಿರಣವೇ ಸರಿ.

ಹಾಗಾದರೆ ‘ಮಿಯಾವಾಕಿ’ ಕಾಡುಗಳು ಅಂದ್ರೆ ಏನು? ಆ ಪರಿಕಲ್ಪನೆ ಯಾವಾಗ ಹುಟ್ಟಿತು! ಇದು ಯಾರಿಂದ ಆರಂಭ ಆಯಿತು? ಇದಕ್ಕೆಲ್ಲಾ ಈಗ ಉತ್ತರ ನೋಡೋಣ ಬನ್ನಿ. ಮಿಯಾವಾಕಿ ಎನ್ನುವುದು ಕಾಡನ್ನು ಹೋಲುವ, ಜನವಸತಿ ಪ್ರದೇಶಗಳಲ್ಲಿ ಬೆಳಸಲಾಗುವ ಮಾನವ ನಿರ್ಮಿತ ಸಣ್ಣ ಸಣ್ಣ ವನ ಗುಚ್ಛಗಳು. ಎಗ್ಗಿಲ್ಲದೇ ಬೆಳೆಯುತ್ತಿರುವ ನಗರಗಳಲ್ಲಿ ಹಸಿರಿಲ್ಲದ ಕಾರಣಕ್ಕೆ ಉಂಟಾಗುವ ಹಲವು ಸಮಸ್ಯೆಗಳಿಗೆ ಈ ಮಿಯಾವಾಕಿ ವನಗಳು ಉತ್ತರವಾಗಬಲ್ಲವು. ಆದರೆ ನಿಜದ ಕಾಡಿಗಿಂತ ಇವು ಭಿನ್ನ. ಸಣ್ಣ ಜಾಗಗಳಲ್ಲಿ ಬೆಳೆಯುವುದರಿಂದ ವನ್ಯಮೃಗಗಳಿಗೆ ತಾಣವಾಗುವುದು ಅಸಾಧ್ಯ ಹಾಗೂ ಮಾನವನ ಹಸ್ತಕ್ಷೇಪವೂ ಅನಿವಾರ್ಯ.

ಮಿಯಾವಾಕಿ ಪದ್ಧತಿಯಡಿ ಸಿಗುವ ಅತ್ಯಲ್ಪ ಜಾಗದಲ್ಲಿ, ಸ್ಥಳೀಯವಾಗಿ ಸಿಗುವ ೪-೫ ಜಾತಿಯ ಮರಗಳನ್ನು, ಕೆಲವು ಪೊದೆಗಳು ಮತ್ತು ಬಳ್ಳಿಗಳೊಡ ಗೂಡಿ ಒಂದು ಚದರ ಮೀಟರ್ ಜಾಗದಲ್ಲಿ ನೆಡಲಾಗುತ್ತದೆ. ಆರಂಭದ ಆರೆಂಟು ತಿಂಗಳು, ಹೆಚ್ಚೆಂದರೆ ಎರಡು ವರ್ಷದವರೆಗೆ ಮಾತ್ರ ಆರೈಕೆ ಬೇಡುವ ಈ ವನಗಳು ನಂತರದ ದಿನಗಳಲ್ಲಿ ಸ್ವಯಂ ಆರೈಕೆಯಲ್ಲಿ ನೈಸರ್ಗಿಕ ಕಾಡುಗಳಿಗಿಂತಲೂ ಅತೀ ಶೀಘ್ರವಾಗಿ ಬೆಳೆಯುತ್ತವೆ. ಸ್ಥಳೀಯ ಮರಗಳಾದ್ದರಿಂದ ಮಣ್ಣಿಗೆ ಮತ್ತು ಹವಾಮಾನಕ್ಕೆ ಅತೀ ಬೇಗದಲ್ಲಿ ಒಗ್ಗುತ್ತವೆ ಕೂಡ.

ಇದೇ ಕಾರಣಗಳಿಂದ ಜನವಸತಿ ಪ್ರದೇಶಗಳಲ್ಲಿ, ಅದರಲ್ಲೂ ದೆಹಲಿ, ಮುಂಬೈ, ಬೆಂಗಳೂರು ತರಹದ ನಗರಗಳಿಗೆ ಕಡಿಮೆ ಸಮಯದಲ್ಲಿ ಹಸಿರಿನ ಹೊದಿಕೆ ರಚಿಸಲು ಅತ್ಯಂತ ಪರಿಣಾಮಕಾರಿಯಾಗಿದೆ. ಸುಮಾರು ೧೯೭೦ರ ದಶಕದಲ್ಲಿಯೇ, ಜಪಾನಿನ ಸುಪ್ರಸಿದ್ಧ ವಿಜ್ಞಾನಿ ಮತ್ತು ಜೀವಶಾಸ್ತ್ರಜ್ಞ ಅಕೀರ ಮಿಯಾವಾಕಿ ಅವರಿಂದ ಪ್ರಚುರ ಪಡಿಸಲ್ಪಟ್ಟ, ಮಾನವನಿಂದ ಅಥವಾ ಪ್ರಕೃತಿ ವಿಕೋಪದಿಂದ ನಾಶಗೊಂಡ ಕಾಡುಗಳನ್ನು ಪುನಃ ಸ್ಥಾಪಿಸಲು ನೆರವಾಗುವ ಈ ವಿಧಾನವು ತನ್ನ ಕರ್ತೃವಿನ ಹೆಸರಿನಿಂದಲೇ ಪ್ರಪಂಚದಾದ್ಯಂತ ಮನೆಮಾತಾಗಿದೆ.

ಪ್ರಕೃತಿ ವಿಕೋಪ ಸಾಮಾನ್ಯ ಘಟನೆಯಾಗಿರುವ ಜಪಾನಿನಲ್ಲಿ, ಸ್ಥಳೀಯ ಮರಗಳಿಂದ ಆವೃತ್ತವಾದ ಮನೆಗಳು ಮತ್ತು ದೇವಸ್ಥಾನಗಳು ಭೂಕಂಪಕ್ಕೂ ಜಗ್ಗದೆ ನಿಂತಿರುವುದನ್ನು ಗಮನಿಸಿದ ಅಕೀರಾ ಮಿಯಾವಾಕಿ ಅವರು, ಇದರ ಹಿಂದಿನ ವಿಜ್ಞಾನವನ್ನು ಅಭ್ಯಸಿಸಿದರು. ಯೊಕೊಹಮಾ ಕಡಲ ತೀರವು ಮರಗಳಿಂದ ಆವೃತ ವಾಗಿರುವೆಡೆ ಕಡಲ ಕೊರೆತದಿಂದಲೂ ಪಾರಾಗಿದ್ದು ಅದೇ ಮರಗಳ ಕಾರಣದಿಂದ ಎಂಬುದನ್ನು ಮನಗಂಡರು. ಈ ಸ್ಥಳೀಯ ಮರಗಳು ಸೃಷ್ಟಿಸುವ ಪರಿಸರವನ್ನು, ಬೇರೆಡೆಯಿಂದ ತಂದು ಬೆಳೆಸಿದ ಮರಗಳಿಂದ ಸೃಷ್ಟಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದದ್ದೇ, ‘ಮಿಯಾವಾಕಿ’ ಪದ್ಧತಿಯ ಹುಟ್ಟಿಗೆ ನಾಂದಿಯಾಯಿತು. ಅವರ ಈ ಆವಿಷ್ಕಾರವು ಜಪಾನಿನಲ್ಲಿ ಮತ್ತೆ ಕಾಡುಗಳನ್ನು ಬೆಳೆಸಲು, ಇರುವ ಕಾಡುಗಳನ್ನು ಮತ್ತಷ್ಟು ದಟ್ಟವಾಗಿಸಲು ಹಿಂದಿನ ಯಾವುದೇ ಪದ್ಧತಿಗಿಂತಲೂ ಹೆಚ್ಚಾಗಿ ಯಶಸ್ವಿಯಾಯಿತು. ಮಿಯಾವಾಕಿಯ ಈ ಜಪಾನಿನ ಯಶಸ್ಸು, ಅಂತಾರಾಷ್ಟ್ರೀಯ ಮಟ್ಟದಲ್ಲೂ ದೊಡ್ಡ ಸದ್ದು ಮಾಡಿತು.

ಮಲೇಷ್ಯಾದ ಉಷ್ಣವಲಯದ ಕಾಡುಗಳನ್ನು ಈ ಪದ್ಧತಿ ಅನುಸರಿಸಿ ಉಜ್ಜೀವನಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ನಾಗಾಲೋಟದಲ್ಲಿ ಜಗತ್ತಿನ ಮೂಲೆ ಮೂಲೆಯನ್ನು ತಲುಪಿದ ಮಿಯಾವಾಕಿ ಪದ್ಧತಿ, ಇಂದಿಗೆ ಪ್ರಪಂಚದಾದ್ಯಂತ ಸುಮಾರು ೩,೦೦೦ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಭಾರತದಲ್ಲಿ ಇತ್ತೀಚೆಗಷ್ಟೇ ವೇಗ ಪಡೆಯುತ್ತಿರುವ ಮಿಯಾವಾಕಿ ಪದ್ಧತಿಯು ಸಾಕಷ್ಟು ಸುದ್ದಿ ಮಾಡುತ್ತಿದೆ. ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ಮಹಾನಗರಗಳು ಹಸಿರಿಲ್ಲದೆ ಉಸಿರಾಡಲು ಹೆಣಗುತ್ತಿವೆ. ಸರ್ಕಾರಗಳೂ ಸಿಗುವ ಪುಟ್ಟ ಪುಟ್ಟ ಜಾಗಗಳಲ್ಲೇ ಕಾಡು ಕಟ್ಟುವ ಅನಿವಾರ್ಯತೆಗೆ ಬಿದ್ದಿವೆ. ದೇಶಾದ್ಯಂತ ಅನೇಕ ನಗರಗಳಲ್ಲಿ ಮಿಯಾವಾಕಿ ವನಗಳು ಕಾಣಸಿಗುತ್ತವೆಯಾದರೂ ಅದರ ಪ್ರಮಾಣ ಕಡಿಮೆಯೇ.

ಅತೀ ಜನ ನಿಬಿಡ ವಾಣಿಜ್ಯ ನಗರಿ ಮುಂಬೈನಲ್ಲೇ, ಮಹಾನಗರಪಾಲಿಕೆಯು ಅರವತ್ತಕ್ಕೂ ಹೆಚ್ಚು ಮಿಯಾವಾಕಿ ಕಾಡುಗಳನ್ನು ಬೆಳೆಸಿದೆ ಎಂದರೆ ನೀವು ನಂಬಲೇಬೇಕು. ಆದರೂ ಮುಂಬೈನ ಜನಸಂಖ್ಯೆಗೆ ಅದು ಗೌಣವೇ. ನಮ್ಮ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲೂ ಭಾರತೀಯ ರೈಲ್ವೆಯು ನಾಲ್ಕು ಎಕರೆಗೂ ಹೆಚ್ಚಿನ ತನ್ನ ಜಾಗದಲ್ಲಿ ಮಿಯಾವಾಕಿ ಪದ್ಧತಿಯಲ್ಲಿ ಮರಗಳನ್ನು ಬೆಳೆಸಿದೆಯಾದರೂ ಸರ್ಕಾರದ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಹೆಚ್ಚಿನ ಕೆಲಸವೇನೂ ಆಗಿಲ್ಲ.

ಸರ್ಕಾರೇತರ ಸಂಸ್ಥೆಗಳು ಮತ್ತು ನಾಗರಿಕರೇ ಬೆಂಗಳೂರಿಗೆ ಮಿಯಾವಾಕಿ ಹಸಿರು ಹೊದಿಕೆ ಹೊದಿಸಲು ಉತ್ಸುಕರಾಗಿದ್ದಾರೆ. ಇನ್ನು ನಮ್ಮ ಮೈಸೂರಿನ ಬಗ್ಗೆ ಹೇಳುವುದಾದರೆ, ಅರಣ್ಯ ಇಲಾಖೆಯು ‘ನಗರಗಳಲ್ಲಿ ಕಾಡುಗಳು’ ಎಂಬ ಕಾರ್ಯಕ್ರಮದಡಿ ಹೆಬ್ಬಾಳ ಕೆರೆ ಮತ್ತು ಚೆಲುವಾಂಬ ಉದ್ಯಾನಗಳಲ್ಲಿ ಮರಗಳನ್ನು ಬೆಳೆಸುತ್ತಿದೆಯಾದರೂ ಮಿಯಾವಾಕಿ ಕಾಡುಗಳು ಸಣ್ಣ ಪ್ರಮಾಣದಲ್ಲಿ ಖಾಸಗಿ ಜಮೀನು ಅಥವಾ ಖಾಸಗಿ ಜಾಗಗಳಲ್ಲಷ್ಟೇ ಲಭ್ಯ. ಪ್ರತಿವರ್ಷ ಬೀಜದುಂಡೆಗಳನ್ನು ಉಪಯೋಗಿಸಿ, ಚಾಮುಂಡಿ ಬೆಟ್ಟವನ್ನು ಹಸಿರಾಗಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೂ ನಾನಾ ಕಾರಣಗಳಿಂದ ಚಾಮುಂಡಿ ಬೆಟ್ಟ ವರ್ಷದಿಂದ ವರ್ಷಕ್ಕೆ ಬರಡಾಗುತ್ತಲೇ ಇದೆ. ಸಂಬಂಧಪಟ್ಟವರು, ಮಿಯಾವಾಕಿ ಪದ್ಧತಿಯ ಬಗ್ಗೆ ಯೋಚಿಸಲು ಇದು ಸರಿಯಾದ ಸಮಯ ಎನಿಸುತ್ತದೆ. ಅಲ್ಲವೇ?!

ಆಂದೋಲನ ಡೆಸ್ಕ್

Recent Posts

ತಾಪಮಾನ ಇಳಿಕೆ : ಬೆಂಗಳೂರಲ್ಲಿ ಚಳಿ ಹೆಚ್ಚಳ

ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…

7 hours ago

ಸಿಎ ಸೈಟ್‌ ಕಟ್ಟಡ ನಿರ್ಮಾಣ ಕಾಲಮಿತಿ ; 3 ವರ್ಷದಿಂದ 5 ವರ್ಷ ಹೆಚ್ಚಳದ ಭರವಸೆ

ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…

7 hours ago

ಮೈಸೂರು : ಆನ್‌ಲೈನ್‌ನಲ್ಲಿ ವೈದ್ಯರೊಬ್ಬರಿಗೆ 82 ಲಕ್ಷ ರೂ. ವಂಚನೆ

ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…

7 hours ago

SC/ST ದೌರ್ಜನ್ಯ ತಡೆ : ನಾಗರಿಕ ಹಕ್ಕು ಜಾರಿ ನೂತನ ಠಾಣೆ ಮೈಸೂರಲ್ಲಿ ಕಾರ್ಯರಂಭ

ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…

8 hours ago

ಕೆಪಿಎ-ಮಹಿಳಾ-ಮಕ್ಕಳ ಅಭಿವೃದ್ಧಿ ಸಂಸ್ಥೆ ನಡುವೆ ಒಡಂಬಡಿಕೆ

ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…

8 hours ago

ಮೈಸೂರಲ್ಲಿ ಎಸ್.ಎಲ್.ಬೈರಪ್ಪ ಸ್ಮಾರಕ ನಿರ್ಮಾಣ : ಸಿಎಂ ಘೋಷಣೆ

ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

8 hours ago