ಕುಸುಮಾ ಆಯರಹಳ್ಳಿ
ಪಿಳ್ಳಾರಿ ಕೂಗುತ್ತಿದ್ದರೂ ಅರ್ಸಿತ್ತು ಬಾಗಿಲಾಚೆಗೆ ಓಡಿಯೇ ಬಿಟ್ಟಿದ್ದ. ಅರ್ಸಿತ್ತು ಅಂದರೇನೆಂದು ತುಂಬಾ ಯೋಚಿಸಲಿಕ್ಕೆ ಹೋಗಬೇಡಿ. ಹರ್ಷಿತ್ ಅಂತವನ ಹೆಸರು ಅಷ್ಟೆ. ಪಕ್ಕದೂರಿನ ಇಂಗ್ಲಿಷ್ ಕಾನ್ವೆಂಟಿನಲ್ಲಿ ಆರನೇ ಕ್ಲಾಸು ಓದುತ್ತಾನೆ. ಅವರಪ್ಪನಲ್ಲಿ ಕೆಲಸದ ಮೇಸ್ತ್ರಿ. ಸಂಪಾದನೆ ಚೆನ್ನಾಗಿದೆ. ಅವರವ್ವ ಪಿಯುಸಿ ಓದಿ ಲವ್ವು ಜಾಸ್ತಿಯಾಗಿ ಅತ್ತೆ ಮಗನನ್ನು ಮದುವೆ ಮಾಡಿಕೊಂಡು ಬೇಗನೇ ಮಗು ಹೆತ್ತು ಗೂಗಲ್ಲಿನಲ್ಲಿ ಬೇಬಿ ಬಾಯ್ ನೇಮ್ಸು ಹುಡುಕಿ ಹರ್ಷಿತ್ ಅಂತ ಹೆಸರಿಟ್ಟಿದ್ದಳು. ಆದರೆ ಮನೆ ಊರು, ಕೇರಿ ಜನವೆಲ್ಲ ಕರೀತಿದ್ದುದು ಮಾತ್ರ “ಅರ್ಸಿತ್ತೂ” ಅಂತಲೇ. ಅವನೂ ಅಷ್ಟೆ. ಹೆಸರೇನು ಅಂದವರಿಗೆ “ಅರ್ಸಿತ್” ಅಂತಲೇ ಹೇಳುತ್ತಾನೆ. ಅವನ ಸ್ಕೂಲಿನ ಹೊಸ ಮೇಡಂ, ಅ ಅಲ್ವೋ, ಹ ಅದು. ಹರ್ಷಿತ್… ಏನ್ಹೇಳು? ಅಂದರಿವನು “ಅ” ಅನ್ನು ಒತ್ತೊತ್ತಿ ಮುಕ್ಕರಿದು ಹೊಕ್ಕಳಿಂದ ಹೇಳುವಂತೆ ಅರ್ಸಿತ್ ಅಂತಲೇ ಹೇಳುವನು.
“ಹ ಕಣೋ ಹ. ಹಲೋ ಅನ್ನಲ್ವ ಫೋನ್ ಬಂದಾಗ?” “ಅಂತೀವಿ ಟೀಚರ್” “ಹ್ಞಾಂ, ಅದೇ ಹ, ಹಲೋ ಅನ್ನು” “ಅಲೋ?”
ಸಿಟ್ಟು ಬಂದು ಅವನನ್ನು ಕೂರಿಸಿ, ಕ್ಲಾಸಿನ ಒಬ್ಬೊಬ್ಬರನ್ನೇ ನಿಲ್ಲಿಸಿ ಕೇಳಿದರೆ ಎಲ್ರೂ “ಅಲೋ” ಅನ್ನುವವರೇ. “ನೀವದ್ಕೆಲ್ಲ ತಲೆಕೆಡಿಸ್ಕಬೇಡಿ, ಸಿಕ್ಷಣ ಕೊಟ್ರ ಮುಂದಕ್ ಸರೋಯ್ತರ. ಪಾಠ ಮಾಡ್ಕ ಓಗಿ ಅಷ್ಟೆ” ಟ್ರಸ್ಟಿನ ಅಧ್ಯಕ್ಷರಂದರು… ಮೇಡಂ ಪ್ರಯತ್ನ ಮಾತ್ರ ಮುಂದುವರಿದಿತ್ತು. ಅರ್ಸಿತ್ತನ ವಿಷಯ ಇಲ್ಯಾಕೆ ಬಂತಪ್ಪ ಅಂದರೆ ಅವನ ತಾತ ಪಿಳ್ಳಾರಿಯಿಂದ. ಪಿಳ್ಳಾರಿಯ ನಿಜ ನಾಮಧೇಯವೇನೋ ಎಂತೋ. ಊರಿಗೆಲ್ಲ ಅವನು ಪಿಳ್ಳಾರಿ ಅಂತಲೇ ಪರಿಚಿತ. ಎತ್ತರ ಸ್ವಲ್ಪ ಕಮ್ಮಿ ಇದ್ದುದಕ್ಕಿರಬಹುದೇನೋ. ಎರಡೆಕರೆ ಭೂಮಿ, ಕುರಿ, ಕೋಳಿ, ಕರೆದವರಿಗೆ ಕೂಲಿ… ಹೀಗೆ ಆರಕ್ಕೇರದ ಮೂರಕ್ಕಿಳಿಯದ ಬದುಕು ನಡೆಸಿದ್ದ. ಮಗ ಸ್ಕೂಲು ಬಿಟ್ಟು ನಲ್ಲಿ ಕೆಲಸಕ್ಕೆ ಹೋಗಿ ನಿಧಾನಕ್ಕೆ ಕಂಟ್ರಾಕ್ಟರನೇ ಆಗಿ, ಹಳೇ ಹೆಂಚಿನ ಮನೆಗೆ ಹೊಸ ತಾರಸಿ ಹೊದಿಸಿ ಮದುವೆಯಾಗಿದ್ದ. ಮಗನ ಸಂಪಾದನೆ ಚೆನ್ನಾಗಿದೆ. ಪಿಳ್ಳಾರಿಗೀಗ ದುಡಿಯುವ ಅಗತ್ಯವೇನಿಲ್ಲ. ಆದರೂ ಹೊತ್ತೋಗಲು ಒಂದು ದನ, ಎರಡು ಕುರಿ ಸಾಕಿಕೊಂಡಿದ್ದಾನೆ. ವರ್ಷಕ್ಕೊಮ್ಮೆ ಊರ ಮಾರಮ್ಮ ಬರುತ್ತಿದ್ದುದು ಪಿಳ್ಳಾರಿಯ ಚಿಕ್ಕಪ್ಪ ಕರಿಯನ ಮೈಮೇಲೆ. ಕರಿಯ ಸಾಯಲಾಗಿ, ಪಿಳ್ಳಾರಿಗೆ ಆ ಜವಾಬ್ದಾರಿ ಕೊಟ್ಟರು.
“ಅವಳಿಗೆ ಬರಬೇಕು ಅನಿಸಿದೋರ ಮೈಮೇಲೆ ಬತ್ತಾಳಪ್ಪ. ಇಂತವನ ಮೈಮೇಲೇ ಬಾ ಅಂತ ನಿಗದಿ ಮಾಡಕ್ಕಾದುದಾ?” ಅಂತ ಕೇಳಬಹುದು ನೀವು. ಮಾರವ್ವ ಯಾರದಾರ ಮೈಮೇಲೆ ಬರಬೇಕಾದರೆ ಅವರು ನೇಮ- ನಿಷ್ಠೆ ಪಾಲಿಸಬೇಕು. ಹಬ್ಬ ಮೂರು ದಿನಾಂತ ಕುಡಿಬಾರದು. ಬೀಡಿ ಸಿಗರೇಟು ಮುಟ್ಟಬಾರದು. ಹಿಂದಿನ ದಿನದಿಂದಲೇ ಉಪವಾಸ ಇರಬೇಕು. ೫೫ರ ಆಸುಪಾಸಿನ ಪಿಳ್ಳಾರಿಗೆ ಅವನಿಗಿಂತಲೂ ಹಿರಿಯರಾದವರು ಎಲ್ಲ ನೇಮಗಳನ್ನೂ ಹೇಳಿದರು.
ಆಗ ನಾಕನೇ ಕ್ಲಾಸಿನಲ್ಲಿದ್ದ ಅರ್ಸಿತ್ತನಿಗೆ ಏನೇನೋ ಕುತೂಹಲ. ಊರವರೆಲ್ಲ ಪಿಳ್ಳಾರಿಯ ಬಗ್ಗೆ ಮಾತಾಡುವುದು, ಮನೆಗೆ ಬರುವುದು, ತೋರಣ ಕಟ್ಟಿರುವುದು, ಎಲ್ಲವೂ ತನ್ನ ತಾತನಿಗಾಗಿ ಅನಿಸುತ್ತಿತ್ತು. ಪಡ್ಡೆ ಹುಡುಗರು, “ಗ್ರಾಮ ದೇವತೆ ಹಬ್ಬಕ್ಕೆ ಸ್ವಾಗತ” ಅಂತ ಊರ ತುಂಬಾ ದೊಡ್ಡ ದೊಡ್ಡ ಫ್ಲೆಕ್ಸುಗಳನ್ನು ಹಾಕಿಸಿದ್ದರು. ಆರಡಿಯ ಆ ಕಟೌಟಿನಲ್ಲಿ ಸಿನೆಮಾದ ಆರಡಿ ಸುದೀಪ ಮತ್ತು ಮಾರವ್ವನ ಮಧ್ಯೆ, ಅಂದರೆ ಸುದೀಪನ ಮೊಣಕೈ ಹತ್ತಿರ ಪಿಳ್ಳಾರಿಯ ಫೋಟೋ ಇದ್ದುದು, ಊರವರೂ, ಬಸ್ಸಿನಲ್ಲಿ ಹೋಗಿ ಬರುವವರೂ ಅದನ್ನು ನೋಡುವುದು ಅರ್ಸಿತನಿಗೆ ಬಲು ಹೆಮ್ಮೆಯ ವಿಷಯವಾಗಿತ್ತು. ದಿನವೂ ಅದೇ ಮೊದಲೇನೋ ಎಂಬಂತೆ ಫ್ಲೆಕ್ಸು ನೋಡುತ್ತಾ, ಅದರೊಳಗೆ ಬರೆದದ್ದನ್ನು ಮತ್ಮತ್ತೆ ಓದುವ ಅವನ ಗೆಳೆಯರ ಗುಂಪಿನಲ್ಲಿ ತನಗೆ ವಿಶೇಷ ಸ್ಥಾನವಿದೆ ಅನಿಸುತ್ತಿತ್ತು. ಅವನಿಗೇ ಗೊತ್ತಿಲ್ಲದಂತೆ ಎದೆಯುಬ್ಬಿಸಿ ಒಂಥರವಾಗಿ ನಡೆಯುತ್ತಿದ್ದನು.
ಹಿಂದಿನ ದಿನ ತಂಪಿನ ಮೆರವಣಿಗೆ. ಹೆಣ್ಮಕ್ಕಳೆಲ್ಲ ಶೃಂಗಾರ ಮಾಡಿಕೊಂಡು, ಅವರವರ ಮನೆಗಳ ತಂಬಿಟ್ಟುಗಳನ್ನು ತಟ್ಟೆಯಲ್ಲಿಟ್ಟು ಸಾಗುವುದು. ಲಿಂಗಾ ಯತರ ಬೀದಿಯಲ್ಲಿ ವೀರಭದ್ರನ ಕುಣಿತವೂ ಜೊತೆಯಾಗಿ ಮೆರವಣಿಗೆ ರಂಗೇರಿ, ಎಲ್ಲರ ಮನೆಯ ತಂಬಿಟ್ಟೂ ಮಾರಿಗುಡಿಯಲ್ಲಿ ದೊಡ್ಡ ಗುಡ್ಡೆಯಾಗಿ, ಮತ್ತೆ ಎಲ್ಲರಿಗೂ ಹಂಚಿಕೆಯಾಗುವುದು. ಮೆರವಣಿಗೆಯಲ್ಲೂ, ಸಂಜೆಯ ಕೋಲಾಟದಲ್ಲೂ ಕಂಡವರೆಲ್ಲ “ನಾಳೆ ದೇವ್ರು ಬರೋದು ಇವರ ತಾತನ ಮೈಮೇಲೆ” ಅಂತ ಹೇಳುತ್ತಿದ್ದುದರಿಂದ ಅರ್ಸಿತ್ತುಗೆ ಊರಲ್ಲಿ ತನಗೆ ಹೊಸ ಸ್ಥಾನಮಾನವೊಂದು ಸಿಕ್ಕ ಖುಷಿ. ಅವರವ್ವ, ಅಪ್ಪನಿಗೂ ಅದೇ ಖುಷಿ.
ತಮಗೂ, ಅರ್ಸಿತನಿಗೂ ಎರಡೆರಡು ಜೊತೆ ಹೊಸ ಬಟ್ಟೆ ಕೊಂಡಿದ್ದರು. ತಂಪಿನ ಮರುದಿನ ಸಂಜೆಯೇ ಮಾರವ್ವ ಪಿಳ್ಳಾರಿಯ ಮೈಮೇಲೆ ಬಂದು ಕೆಂಡಕ್ಕೆ ಬೀಳುವುದು. ಪಿಳ್ಳಾರಿಗೂ ಇದು ಹೊಸ ಅನುಭವ. ಅವನಿಗೆ ಹಾರ ಹಾಕಿ , ತಲೆ ಮೇಲೆ ಹೊಂಬಾಳೆ ಸಿಕ್ಕಿಸಿದ ಕಳಶ ಇಟ್ಟು ಮೆರವಣಿಗೆ ಸಾಗಿತು. ಪುಟ್ಟ ಕಳಶ ಬೀಳಬಾರದೆಂದು ಇಬ್ಬರು ಹಿಡಿಯುತ್ತಿದ್ದರು. ಆ ಇಬ್ಬರನ್ನು ಇನ್ನು ನಾಕು ಜನ, ಅವರನ್ನು ಇನ್ನೆಂಟು ಜನ. ಗುಂಪಿನ ತಳ್ಳಾಟ, ನೂಕಾಟಕ್ಕೂ,ಕಳಶ ಹಿಡಿದವರು ಅತ್ತಿಂದಿತ್ತ ಬ್ಯಾಲೆನ್ಸು ಮಾಡುವುದಕ್ಕೂ, ಬಿಸಿಲಿಗೂ, ತಮಟೆ ಸದ್ದಿಗೂ, ಹರಸಿಕೊಂಡವರ ಹಾರಗಳ ಭಾರಕ್ಕೂ , ಹಸಿದ ಸುಸ್ತಿಗೂ ಈ ಲೋಕವೆಂಬುದು ಬೇರೆ ಲೋಕವಾಗಿ ಕಂಡು ಪಿಳ್ಳಾರಿಯ ಮೈಮುಖವೆಲ್ಲ ಬೆವರಾಗಿ ಹರಿಯುತ್ತಿರಲು, ಕಣ್ ಕಣ್ ತೇಲಿಸತೊಡಗಿದ. ದೇವರು ಬಂತೆಂದು ಕೂಗುತ್ತಾ ಹಾಡು ನೃತ್ಯಗಳು ಜೋರಾಗತೊಡಗಿದವು. ಮೆರವಣಿಗೆ ಕೆಂಡದ ಗುಳಿ ಹತ್ತಿರ ಬಂದೇ ಬಿಟ್ಟಿತ್ತು. ಬಿಟ್ಟರೆ ಸಾಕೆಂಬಂತೆ ಪಿಳ್ಳಾರಿ ಕೆಂಡದೊಳಗೆ ಧುಮುಕಿ ಧಡಧಡನೆ ಓಡತೊಡಗಿದ. ಅಂತೂ ಆ ವರ್ಷ ಹಬ್ಬ ಸಾಂಗವಾಯಿತು ಮತ್ತು ಮುಂದಿನ ಮಳೆಗಾಲದವರೆಗೂ ಆರಡಿ ಫ್ಲೆಕ್ಸು ಅಲ್ಲೇ ಇತ್ತು!
ಮರುವರ್ಷವೂ ಹಬ್ಬ ಬಂತು. ಆಗ ತಾನೇ ಜ್ವರದಿಂದ ಚೇತರಿಸಿಕೊಂಡಿದ್ದ ಪಿಳ್ಳಾರಿಗೆ ಇನ್ನೂ ಸುಸ್ತಿತ್ತು. ಅವನಿಗೆ ಇದ್ಯಾವುದೂ ಬೇಕಾಗಿರಲಿಲ್ಲ. ಆದರೆ ಕೇಳೋರು ಯಾರು? ಯಥಾಪ್ರಕಾರ ಉಪವಾಸ, ನೇಮ – ನಿಷ್ಠೆ, ಮೆರವಣಿಗೆ, ಹಾರದ ಭಾರ, ದೇಹದಲ್ಲಿ ಸ್ವಲ್ಪ ನಿಶ್ಯಕ್ತಿಯೂ ಇದ್ದುದರಿಂದ ಕೊಂಡದ ಗುಳಿ ಹತ್ತಿರ ಬಂದಾಗ, ಕೆಂಪಗೆ ಕನಿಯುತ್ತಿದ್ದ ಬೆಂಕಿ ಉಂಡೆಗಳನ್ನು ನೋಡಿ ಬೆಚ್ಚಿದ ಪಿಳ್ಳಾರಿ, “ಬುಡೀ ಬುಡೀ ದೇವರು ಬಂದಿಲ್ಲ ಬುಡೀ” ಅಂತ ನಿಜ ಹೇಳಿಯೇಬಿಟ್ಟ. ಆ ಸದ್ದಿನ ಜಾತ್ರೆಯಲ್ಲಿ ಅದು ಯಾರ ಕಿವಿಗೂ ತಲುಪಲಿಲ್ಲ. ತಲುಪಿದರೂ ಕೊಂಡ ಹಾಯ್ದು ಭಕ್ತಿ, ಶೌರ್ಯ ಪ್ರದರ್ಶಿಸಲು, ಫೋಟೋ ವಿಡಿಯೋ ಮಾಡಲು, ಹುಡುಗಿಯರ ಮನ ಗೆಲ್ಲಲು, ಲವ್ ಮಾಡಲು, ಫೋನಲ್ಲಿ ಲೈವ್ ಮಾಡಲು ಕಾಯುತ್ತಿದ್ದ ಯುವಪಡೆ ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳಲಿಲ್ಲ, ಕೆಂಡಕ್ಕೆ ಬೀಳದೇ ಸತಾಯಿಸುತ್ತಿದ್ದ ಪಿಳ್ಳಾರಿಯನ್ನು ಅಕ್ಷರಶಃ ನೂಕಿದ್ದರು. ನೀರಿಗೆ ಬಿದ್ದ ಮೇಲೆಈಜಬೇಕು. ಕೆಂಡಕ್ಕೆ ಕಾಲಿಟ್ಟ ಮೇಲೆ ಓಡಲೇಬೇಕು. ಪಿಳ್ಳಾರಿ ಓಡಿದನೋ ಹಿಂದಿನವರೆಲ್ಲ ನೂಕಿ ಓಡಿಸಿದರೋ. ಅಂತೂ ನೂಕಾಟ ತಳ್ಳಾಟದ ಒತ್ತಡದಲ್ಲಿ ಹಾಗೂ ಹೀಗೂ ತುದಿಮುಟ್ಟಿದ ಪಿಳ್ಳಾರಿಗೆ ಜೀವ ಕಾಲಿಂದ ಬಾಯಿಗೆ ಬಂದಿತ್ತು. ಮರುದಿನ ಅಂಗಾಲಿನ ಚರ್ಮ ಸುಲಿದಾಗಲೇ ಸುಟ್ಟ ಆಳ ಅರ್ಥವಾದದ್ದು. ಆಮೇಲೇ ಶುರು ವಾದ್ದು ನಿಜ ನರಕ.
ಅಂಗಾಲಲ್ಲಿ ಬೊಬ್ಬೆಗಳೆದ್ದು ಮೂರು ತಿಂಗಳಕಾಲ ಕೆಟ್ಟಯಾತನೆ ಅನುಭವಿಸಿದ. ಹಗಲು ರಾತ್ರಿಗಳೆಲ್ಲ ಬರೀ ನರಳಾಟ, ಪೇಚಾಟ. “ನನ್ನ ಮೇಲೆ ಯಾವ ದೇವರೂ ಬಂದಿರಲಿಲ್ಲ. ಎಲ್ರೂ ಸೇರಿ ನನ್ನ ನೂಕಿದರು ಅಷ್ಟೆ” ಅಂತ ನಿಜ ಹೇಳಿದ. ಅವನ ಮಾತನ್ನು ಯಾರೂ ನಂಬದೇ ಕಾಲು ಸುಟ್ಟದ್ದಕ್ಕೆ ಅವರವರದೇ ಕಾರಣಗಳನ್ನು ಹುಡುಕಿದರು. ದೇವರಂತಾ ದೇವರು ಯಃಕಶ್ಚಿತ್ ಮನುಷ್ಯನ ಮೈಮೇಲೆ ಬಂದು ವಾಲಾಡುವುದು ಅಂದ್ರೇನ್ರೀ? ಅರಳೀಕಟ್ಟೆ ಹುಡುಗರ ಗುಂಪಿನಲ್ಲಿ ಶೇರ್ ಚಾಟ್ ಮಾಡುತ್ತಿದ್ದ ಪಿಯುಸಿ ಸೈನ್ಸಿನ ಹುಡುಗ ಕೇಳಿದ. ಅರಳೀಕಟ್ಟೆಯ ಇನ್ನೊಂದು ಮೂಲೆಯಿಂದ ಎದ್ದು ಬಂದ ಗೌಡರ ಮಗ ಶಂಕರ “ಮುಚ್ಚಲೇ ನಿನ್ ಪುಸ್ತಕದ್ ಬದ್ನೆಕಾಯಾ, ದೇವರೇ ಇಲ್ಲ ಅಂತ್ಲಾ ನಿನ್ ಅರ್ಥ?” ಅಂತ ಪಂಚೆ ಕಟ್ಟಿದ. “ದೇವರಿಲ್ಲ ಅಂತಲ್ಲ, ದೇವರು ಮನುಷ್ಯರ ಮೈಮೇಲೆ ಬರತ್ತೆ ಅನ್ನೋದು ಮಾತ್ರ ಸುಳ್ಳು” ಅಂದ. “ಈಗ ನೋಡಪಾ, ನಂದೇ ಕತೆ ಹೇಳ್ತೀನಿ ಕೇಳು, ನಾಕೊರ್ಷದ ಹಿಂದೆ ನಮ್ ಮಾವನ ಮಗಳನ್ನೆ ಮದ್ವೆ ಆದ್ರೆ ನಿಂಗ್ ಹಾರ ತಂದಾಕ್ತೀನಿ ಅಂತ ಮಾರವ್ವಂಗ್ ಹರಸ್ಕಂಡಿದ್ದೆ, ಅದೂ ಮನಸಲ್ಲಿ.
ಹಬ್ಬ ಬಂತು. ಹಾರ ತರೋದ್ ನಂಗ್ ಮರ್ತೋಯ್ತು. ಈ ಪಿಳ್ಳಾರಿಗ್ ಮುಂಚೆ ಒಬ್ಬನ ಮೈಮೇಲ್ ದೇವ್ರು ಬತ್ತಿತ್ತಲ್ಲ, ಅವನು ನಿಮ್ ಕೇರಿ.ವರ್ಷಕ್ಕೊಂದ್ಸರ್ತಿಯೂ ನಾ ಅತ್ಲಾಗ್ ಬರಲ್ಲ ಮಾತಾಡಲ್ಲ, ಅಂತಾದ್ರಲ್ಲಿ ನಮ್ಮಟ್ಟಿ ತಾವು ಬಂದಾಗ ನನ್ ಮುಂದಕ್ ಬಂದು “ಎಲ್ಯಾ ನನ್ ಹಾರ?” ಅಂತ ಕೇಳ್ತಲ್ಲ, ಅದಕ್ಕೆಂಗ್ ಗೊತ್ತು ಹೇಳು?” ಉಳಿದ ಕೆಲವರೂ ಬಾಯ್ಜೋಡಿಸಿ, ಈ ಊರಿನ, ಬೇರೆ ಬೇರೆ ಊರುಗಳ ಪವಾಡಗಳ ಅತಿಮಾನುಷ ಕತೆಗಳನ್ನೆಲ್ಲ ಹೇಳಿದರು. ಸೈನ್ಸು ಯಾವುದಕ್ಕೂ ಹೂಂ ಅನ್ನದಿದ್ದಾಗ, “ನೋಡಪ್ಪ, ಈಗ ನೀನೇ ಒಂದ್ ಹರಕೆ ಮಾಡ್ಕ. ಹರಕೆ ತೀರಿಸ್ದೆ ಹಬ್ಬಕ್ ಬಾ. ಆಗ ಅವ್ವ ನಿನ್ ಹರಕೆ ಬಗ್ಗೆ ಮಾತಾಡ್ದೇ ಇದ್ರೆ ಕೇಳು” ಅಂತ ಸವಾಲು ಹಾಕಿದರು. ಸೈನ್ಸು ನಕ್ಕು ಹೋದ. ಉಳಿದವರು ಪವಾಡಗಳ ಕತೆಗಳ ಬಾಲ ಬೆಳೆಸಿದರು.
ಮೂರನೇ ವರ್ಷವೂ ಹಬ್ಬದ ಡೇಟು ಅನೌನ್ಸ್ ಆಯ್ತು. ಯಾವ ಕಾರಣಕ್ಕೂ ಒಲ್ಲೆ ಅಂದುಬಿಟ್ಟ ಪಿಳ್ಳಾರಿ. ಪಿಳ್ಳಾರಿಯ ತಮ್ಮನ ಮಗ ಶಂಭುವನ್ನು ಹೆಸರಿಸಲಾಯ್ತು. ದಿನಾ ಕುಡಿಯುವ ಶಂಭುವನ್ನು ಎರಡು ದಿನ ಹದ್ದುಬಸ್ತಿನಲ್ಲಿಡುವುದಕ್ಕೇ ಇಬ್ಬರನ್ನು ನೇಮಿಸಲಾಯ್ತು. ಕಟೌಟುಗಳು ನಿಂತವು. ಶಂಭು ಎತ್ತರದ ಧೃಢಕಾಯದವನಾದ್ದರಿಂದ ಈ ಸಲ ಸುದೀಪು ಮಾರವ್ವನ ಮಧ್ಯೆ ಅದೇ ಎತ್ತರಕ್ಕೆ ಶಂಭುವನ್ನೂ ನಿಲ್ಲಿಸಲಾಯ್ತು. ಹೆಣ್ಮಕ್ಕಳು ಸಿಂಗಾರವಾಗಿ ತಂಬಿಟ್ಟು ತಟ್ಟೆ ಹಿಡಿದು ನಡೆದರು. ತಂಪು ನಿರಾತಂಕವಾಗಿ ನಡೆಯಿತು. ಮರುದಿನ ಕೊಂಡದ ಮೆರವಣಿಗೆ ಶುರುವಾಯ್ತು. ಶಂಭು ಆರಡಿಯ ಆಜಾನುಬಾಹು. ಸುಸ್ತಿನ ಗೆರೆಯೂ ಇಲ್ಲದೆ, ಪಟ್ಟಕ್ಕೆ ಹೊರಟ ರಾಜನಂತೆ ಗತ್ತಿನಲ್ಲಿ ಎದೆಯುಬ್ಬಿಸಿ, ದೃಢವಾದ ಹೆಜ್ಜೆಗಳನ್ನಿಡುತ್ತಿದ್ದ. ಎರಡು ಕೈಯಲ್ಲೂ ಅವನು ಕಳಶ ಹಿಡಿದಿದ್ದರೆ ಕಬ್ಬಿಣದಂತಾ ತೋಳುಗಳು ಉಬ್ಬಿ ನಿಂತಿದ್ದವು. ಅದನ್ನು ಹಿಡಿಯಲು ಧೈರ್ಯವಾಗದೇ ಸುಮ್ಮನೇ ತೋಳು, ಹೊಟ್ಟೆಯ ಭಾಗಕ್ಕೆ ಕೈ ಹಾಕಿದಂತೆ ಮಾಡುತ್ತಾ ಎಲ್ಲರೂ ಜೊತೆಯಲ್ಲಿ ನಡೆಯುತ್ತಿದ್ದರು. ತಮಟೆಯ ವಾದ್ಯಕ್ಕೆ ಅರ್ಸಿತ್ತು ಮತ್ತವನ ಗೆಳೆಯರ ಗುಂಪು ಕುಣಿದು ಕುಪ್ಪಳಿಸುತ್ತಿದ್ದರು. “ದೇವರು ಬಂದಿರೋದ್ ಕಾಣೆ” ಜಗಲಿ ಮೇಲಿಂದ ಹೆಂಗಸೊಬ್ಬಳು ಆಡಿದಳು. “ನಂಗೂ ಹಂಗೇ ಅನಿಸ್ತದಪ್ಪ.
ದೇವರು ಬಂದ್ರೆ ಹೆಂಗ್ ವಾಲಾಡಬೇಕು, ನಾಕ್ ಜನ ಹಿಡಿದ್ರೂ ದಕ್ಕಲ್ಲ, ಈ ನಡಗೆ ನೋಡಿದ್ರೆ ಒಸಿ ಅನುಮಾನವೇ” ಪಕ್ಕದವಳು ದನಿಗೂಡಿಸಿದಳು. ಗಂಡಸರ ಗುಂಪಿನಲ್ಲೂ ಗುಸುಗುಸು ಶುರುವಾಯ್ತು, ಈಗ ದೇವರು ಬರದೇ ಕೊಂಡಕ್ಕೆಬೀಳದೇ ಹೋದರೆ ಊರ ಗತಿಯೇನು? ಅಂತ ಹಿರಿಜೀವಗಳು ಕಳವಳಿಸಿದವು. ಎರಡು ಬೀದಿ ಮುಗಿದು ಮೂರನೇ ತಿರುವಿಗೆ ಲಿಂಗಾಯತರ ಬೀದಿ. ಮಲಗಿದ್ದ ಉದ್ದದ ನಂದಿ ಧ್ವಜ ಮೇಲೇರಿಸಲು, ಕುಣಿಯುತ್ತಿದ್ದ ಹುಡುಗರ ಗುಂಪುನ್ನು ಚದುರಿಸಿದಾಗ ಅರ್ಸಿತ್ತು ಪಡಸಾಲೆಯೇರಿದ. ಅವನ ಸ್ಪರ್ಶಕ್ಕೆ ಹಾವು ಮೈಮೇಲೆ ಬಿದ್ದಂತೆ ಬೆಚ್ಚಿ, ಸೀರೆ, ಮೈ ಎಲ್ಲಾ ಮುದುಡಿಕೊಂಡು ಹಿಂದೆ ಸರಿದ ಹೆಂಗಸು “ಏಯ್, ಯಾರ್ ಗಂಡು ನೀನು? ಅತ್ಲಾಗ್ ನಿಂತ್ಕೋ” ಅಂತ ಗದರಿದಳು. “ಕೊಬ್ ನೋಡು ತಾಯೀ, ಜಗಲಿಗೆ ಹತ್ತದಾ ಅವನು?” ಇನ್ನೊಬ್ಬಳಂದಳು.
ಇನ್ಯಾವಳೋ ಗುರುತಿಸಿ, “ಪಿಳ್ಳಾರಿ ಮೊಮ್ಮಗೂಸಲ್ವ ನೀನು? ಕಳಸಾ ಹೊರಲಾರದೇ ಹಟ್ಟೀಲ್ ಹೊದ್ಕ ಮನಗಿದನಾ ನಿಮ್ ತಾತ?” ಅಂದು ಅವನ ಉತ್ತರಕ್ಕೆ ಕಾಯದೇ, “ಹೋದೊರ್ಷ ದೇವರು ಬಂದಿರ್ನಿಲ್ವ? ಅವನ ಮೊಮ್ಮಗಂಡು ಇದು” ಅಂತ ಪಕ್ಕದವಳಿಗೆ ವಿವರಣೆ ಕೊಟ್ಟು, ಅರ್ಸಿತ್ತನ ಕಡೆ ತಿರುಗಿ, ‘ಏಯ್, ದೂರ ನಿಂತ್ಕೋ ಮುಟ್ಟಿಸ್ಕಬೇಡ” ಅಂತ ಒಂದಡಿ ಹಿಂದೆ ಸರಿದು ನಿಂತಳು. ಅಷ್ಟರಲ್ಲಿ ನಂದಿಧ್ವಜ ಮೇಲೇರಿ ತಮಟೆಯ ಸದ್ದು ಶುರುವಾಯಿತು. ಅರ್ಸಿತ್ತು ಛಂಗನೆ ಕೆಳಗೆ ಹಾರಿದ. ಶಂಭುವಿನ ಮೇಲೆ ಮಾರಮ್ಮ ಬರಲಿ ಅಂತ ತಮಟೆಯ ಮಟ್ಟು, ನಂದಿಧ್ವಜದ ಕುಣಿತ ಎರಡರ ವೇಗವೂ ಜೋರು ಆದವು. ಬೆಳಿಗ್ಗೆಯಿಂದ ಮನೆ ಸೇರದೇ ನೆಟ್ಟಗೆ ಹೊಟ್ಟೆಗೂ ತಿನ್ನದೇ ಕುಣಿಯುತ್ತಲೇ ಇದ್ದ ಅರ್ಸಿತ್ತು.
ತಮಟೆಯ ವೇಗಕ್ಕೆ ಕಾಲಿನ ವೇಗವನ್ನೂ ಹೆಚ್ಚಿಸಿದ್ದ. ದೂಳೆಬ್ಬಿಸುವಂತಾ ಕುಣಿತ. ಜನಜಾತ್ರೆ, ಜೈಕಾರ, ತಮಟೆಯ ಆವೇಗಗಳ ಮಧ್ಯೆ ಶಂಭುವಿನ ಜಾಗದಲ್ಲಿ ತಾತ ಇದ್ದುದು, ಸುದೀಪನ ಪಕ್ಕ ತಾತನ ಫೋಟೋ ಪ್ರಿಂಟಾಕಿಸಿ ಬಸ್ಟಾಂಡಿನಲಿ ಹಾಕಿದ್ದು, ದೇವರು ಬಂದಾಗ, ಕೊಂಡದ ಗುಳಿಗೆ ಬೀಳುವಾಗ ನೂರಾರು ಜನ ವಿಡಿಯೋ ಮಾಡಿ, ವಾಟ್ಸಾಪ್ ಸ್ಟೇಟಸ್ ಮಾಡಿಕೊಂಡದ್ದು, ಒಂದೊಂದೇ ನೆನಪಾಗತೊಡಗಿತು, ನಿಧಾನಕ್ಕೆ ಅರ್ಸಿತ್ತು ವಾಲಾಡತೊಡಗಿದ. ಇನ್ನೇನು ಕುಸಿಯುವ ಹಂತದಲ್ಲಿದ್ದಾಗ ಯಾರೋ ಹಿಡಿದರು, ಕಣ್ಣು ತೇಲುತ್ತಿತ್ತು. ನೀರು ಚಿಮುಕಿಸಿದರು. ತಲೆಗೊಂದು ಮಾತು, ಅದರ ಮಧ್ಯೆ ಹಿರಿಯರೊಬ್ಬರು “ಕಳಶ ಕೊಡಿಯಪ್ಪ ಕಳಶವಾ ಮಾರವ್ವ ಬಂದಳ ಕಣಾ” ಅಂದದ್ದೇ ಅರ್ಸಿತ್ತನನ್ನು ಎತ್ತಿ ನಿಲ್ಲಿಸಿ ಅವನ ತಲೆ ಮೇಲೆ ಕಳಶ ಇಡಲಾಯ್ತು. ಅರ್ಸಿತ್ತು ಅಹಹಹಾ ಅಹಹಹಾ ಅನ್ನುತ್ತಾ ಆವೇಗದಲ್ಲಿ ಕೂಗುತ್ತಾ ಕತ್ತಿ ಹಿಡಿದು ಎಲ್ಲರಿಂದಲೂ ಬಿಡಿಸಿಕೊಂಡುಕುಣಿಯುತ್ತಾ ಎಲ್ಲರನ್ನೂ ಸರಿಸುತ್ತಾ ಕತ್ತಿಯನ್ನು ಜಗಲಿ ಕಡೆಗೆ ಬೀಸುತ್ತಾ ಬಂದ. ದುಳುದುಳನೆ ಜಗಲಿಯಿಂದ ಎಲ್ಲರೂ ಕೆಳಗಿಳಿದರು. “ಅವ್ವಾ ನಮ್ಮವ್ವಾ ಮಾರವ್ವ” ಅಂತ ಕೈ ಎತ್ತಿ ಮುಗಿದರು. ಗೌಡರ ಮಗ ಹಾರ ಹಾಕಿ ಸೈನ್ಸು ಸ್ಟುಡೆಂಟನ್ನು ಹುಡುಕಿ “ಆ ಚಿಕ್ ಗಂಡ ಹಿಡಕಳಕೆ ಏಳೆಂಟ್ ಜನರ ಕೈಲಿ ಆಯ್ತಾ ಇಲ್ಲ. ಜಗಲಿಗ್ ಕತ್ತಿ ಯಾಕ್ ಬೀಸ್ತು ಹೇಳು, ಕಳಶಕ್ಕಿಂತ ಎತ್ತರದಲ್ಲಿ ಜಗಲಿ ಮೇಲ್ಯಾರೂ ನಿಂತ್ಕಬಾರ್ದು ಅಂತ” ವಿವರಿಸುತ್ತಿರುವಾಗಲೇ ನಂದಿಧ್ವಜದ ಹೆಗಲು ಬದಲಿಸಲು ಕೂಗಿದ್ದರಿಂದ ಅತ್ತ ಓಡಿದ. ಮುಸ್ಸಂಜೆಯ ಆ ಹೊತ್ತಲ್ಲಿ ಧ್ವಜಕುಣಿತವೂ, ವೀರಭದ್ರನೂ, ಚಪ್ಪರಗಳೂ, ತಮಟೆಯೂ ಸಾಲಾಗಿ ಕೊಂಡದ ಗುಳಿ ಕಡೆಗೆ ಹೊರಟವು. ನೂರಾರು ಮೊಬೈಲುಗಳು ವಿಡಿಯೋ ಮೋಡ್ನಲ್ಲಿದ್ದವು. ಅಷ್ಟೊಂದು ಫ್ಲಾಶ್ ಲೈಟು ಬೆಳಕುಗಳವಕ್ರೀಭವನದ ವೈಭವದೊಂದಿಗೆ ಅರ್ಸಿತ್ತು ಅಹಹಹಹಾ… ಅಹಹಹಾ… ಅಂತ ಕೂಗುತ್ತಾ, ಜೋರಾಗಿ ಕತ್ತಿ ಬೀಸುತ್ತಾ ಕೊಂಡದ ಗುಳಿ ಕಡೆಗೆ ಓಡತೊಡಗಿದ…
ಹೊಸದಿಲ್ಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೧ನೇ ಜಯಂತಿ ಹಿನ್ನೆಲೆಯಲ್ಲಿ ದಿಲ್ಲಿ ಸರ್ಕಾರ ಗುರುವಾರ ರಾಜಧಾನಿಯಲ್ಲಿ…
ಬೆಂಗಳೂರು : ಮಾಹಿತಿ ಕೊರತೆ ಅಥವಾ ತಾಂತ್ರಿಕ ತೊಂದರೆಗಳಿಂದಾಗಿ ಅರ್ಹ ರೈತರು ಕುಸುಮ್-ಬಿ ಯೋಜನೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ನವೀಕರಿಸಬಹುದಾದ…
ಮೈಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮನುಸ್ಮೃತಿಯನ್ನು ಸುಡುವ ಮೂಲಕ…
ಮೈಸೂರು : ಮೇಲ್ವರ್ಗದ ಯುವತಿಯೊಬ್ಬಳು ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಸ್ವಂತ ಮಗಳನ್ನೆ ಹೆತ್ತ ಅಪ್ಪ-ಅಮ್ಮ-ಅಣ್ಣಂದಿರು ಕೊಲೆ ಮಾಡುವ…
ಚಾಮರಾಜನಗರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟ ಹಾಕಿದ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಮುಖಂಡರು…
ಹೊಸದಿಲ್ಲಿ : ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ನಡುವೆ ಕರ್ನಾಟಕದಲ್ಲಿ ಉದ್ಯೋಗ…