Andolana originals

ಕಾಯಿಗಟ್ಟುವ ಸಮಯದಲ್ಲೇ ಹಣ್ಣಾಗುತ್ತಿರುವ ಅರೆಬಿಕಾ ಕಾಫಿ

ಲಕ್ಷ್ಮಿಕಾಂತ್ ಕೊಮಾರಪ್ಪ

ಹವಾಮಾನ ವೈಪರೀತ್ಯದಿಂದ ಬೆಳೆಗಾರರಿಗೆ ಹೊಸ ಸಂಕಷ್ಟ; ಕೊಯ್ಲು, ಪಲ್ಪಿಂಗ್ ಜೊತೆಗೆ ಒಣಗಿಸುವುದೂ ಸವಾಲು

ಸೋಮವಾರಪೇಟೆ: ಕಾಫಿ ತೋಟಗಳಲ್ಲಿ ಕಾಫಿ ಕಾಯಿಗಟ್ಟುತ್ತಿರುವ ಈ ಸಮಯದಲ್ಲೇ ತಾಲ್ಲೂಕಿನ ಶನಿವಾರಸಂತೆ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಅರೆಬಿಕಾ ತಳಿಯ ಕಾಫಿ ಅಕಾಲಿಕವಾಗಿ ಹಣ್ಣಾಗುತ್ತಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಶನಿವಾರಸಂತೆ ಹೋಬಳಿಯ ಮಾಲಂಬಿ, ಮುಳ್ಳೂರು, ನಿಡ್ತ ಸೇರಿದಂತೆ ಹಲವು ಪ್ರದೇಶಗಳ ಕಾಫಿ ತೋಟಗಳ ಗಿಡಗಳಲ್ಲಿ ಕಾಫಿ ಕಾಯಿಗಳು ವಾಡಿಕೆಗಿಂತ ಮುಂಚಿತವಾಗಿಯೇ ಕೆಂಪಾಗುತ್ತಿದ್ದು, ಬೆಳೆಗಾರರು ಅನಿವಾರ್ಯವಾಗಿ ಹಣ್ಣಾದ ಕಾಫಿಯನ್ನು ಕೊಯ್ಲು ಮಾಡುತ್ತಿದ್ದಾರೆ. ಕೊಯ್ಲು ಮಾಡಿದ ಕಾಫಿಯನ್ನು ಪಲ್ಪರ್ ಮಾಡಿದ ಬಳಿಕ ಬೀಜವನ್ನು ಒಣಗಿಸುವುದು ಕೂಡ ಸದ್ಯ ಬೆಳೆಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸಾಮಾನ್ಯವಾಗಿ ಅರೆಬಿಕಾ ಕಾಫಿ ಬೆಳೆಯಲ್ಲಿ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಸುರಿದ ಬಳಿಕ ಕಾಫಿ ಗಿಡಗಳಲ್ಲಿ ಹೂವು ಅರಳುತ್ತದೆ. ನಂತರ ಹೂವು ಕಾಯಿಯಾಗಿ ಪರಿವರ್ತನೆಯಾಗಿ, ಮಿಡಿ ಹಾಗೂ ಕಾಯಿ ಗಟ್ಟಿಯಾಗುತ್ತಾ ನವೆಂಬರ್-ಡಿಸೆಂಬರ್ ವೇಳೆಗೆ ಕಾಫಿ ಹಣ್ಣಾಗುವುದು ವಾಡಿಕೆ. ಆದರೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಕೆಲವು ಕಾಫಿ ಗಿಡಗಳಲ್ಲಿ ಹೂವು ಅರಳಿ, ನಂತರ ಮಿಡಿಗಟ್ಟಿದ್ದ ಪರಿಣಾಮ ಇದೀಗ ಆ ಕಾಯಿಗಳು ಅಕಾಲಿಕವಾಗಿ ಹಣ್ಣಾಗುತ್ತಿವೆ ಎಂದು ಬೆಳೆಗಾರರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಪ್ರದೇಶದಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿರುವುದರಿಂದ ಹಣ್ಣಾದ ಕಾಫಿಯನ್ನು ಕೊಯ್ಲು ಮಾಡಿದ ಬಳಿಕ ಪಲ್ಪರ್ ಮಾಡಿದ ಬೀಜವನ್ನು ಸಮರ್ಪಕವಾಗಿ ಒಣಗಿಸುವುದೂ ಕಷ್ಟಕರವಾಗಿದೆ. ತೇವಾಂಶ ಹೆಚ್ಚಿರುವ ವಾತಾವರಣದಲ್ಲಿ ಕಾಫಿ ಬೀಜವನ್ನು ಒಣಗಿಸಲು ಹೆಚ್ಚಿನ ಸಮಯ ಹಾಗೂ ವೆಚ್ಚ ಬೇಕಾಗುತ್ತಿದೆ. ಕೆಲವರು ಡ್ರೈಯರ್‌ಗಳ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಮಾನ್ಯವಾಗಿ ಈ ಅವಧಿಯಲ್ಲಿ ಕಾಫಿ ತೋಟಗಳಲ್ಲಿಕಾಯಿ ಗಟ್ಟಿಯಾಗುವ ಹಂತವಾಗಿದ್ದು, ಗಿಡಗಳ ನಿರ್ವಹಣೆ, ಕಳೆ ನಿಯಂತ್ರಣ, ಗೊಬ್ಬರ ನೀಡುವುದು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೆ ಕೆಲವು ತೋಟಗಳಲ್ಲಿ ಈಗಾಗಲೇ ಕಾಫಿ ಹಣ್ಣಾಗಿರುವುದರಿಂದ ಬೆಳೆಗಾರರು ಅಕಾಲಿಕ ಕೊಯ್ಲು ಹಾಗೂ ಪಲ್ಪಿಂಗ್ ಕೆಲಸದಲ್ಲಿ ತೊಡಗಬೇಕಾಗಿದೆ.

ಹೀಗಾಗಿ ಒಂದೇ ಸಮಯದಲ್ಲಿ ಹಣ್ಣಾದ ಕಾಫಿ ಕೊಯ್ಲು, ಪಲ್ಪಿಂಗ್ ಮತ್ತು ಒಣಗಿಸುವ ಕೆಲಸದ ಜೊತೆಗೆ ವಾಡಿಕೆಯ ತೋಟ ನಿರ್ವಹಣೆಯನ್ನೂ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಕಾರ್ಮಿಕರ ವ್ಯವಸ್ಥೆ, ಹೆಚ್ಚುವರಿ ವೆಚ್ಚ ಹಾಗೂ ಕಾಫಿ ಬೀಜವನ್ನು ಗುಣಮಟ್ಟ ಕಾಪಾಡಿಕೊಂಡು ಒಣಗಿಸುವುದು ಬೆಳೆಗಾರರಿಗೆ ಸವಾಲಾಗಿ ಪರಿಣಮಿಸಿದೆ. ಕಾಫಿ ಬೆಳೆಗೆ ಮಳೆ ಹಾಗೂ ಹವಾಮಾನದ ಸ್ಥಿರತೆ ಅತ್ಯಂತ ಪ್ರಮುಖವಾಗಿದ್ದು, ಮಳೆಯ ಪ್ರಮಾಣ ಮತ್ತು ಸಮಯದಲ್ಲಿ ಆಗುವ ವ್ಯತ್ಯಾಸ ನೇರವಾಗಿ ಹೂವು, ಕಾಯಿ ಕಟ್ಟುವಿಕೆ ಹಾಗೂ ಹಣ್ಣಾಗುವಿಕೆಯ ಮೇಲೆ ಪರಿಣಾಮ ಬೀರುತ್ತದೆ.

ಕಳೆದ ಕೆಲವು ವರ್ಷಗಳಿಂದ ಮಳೆ ಆರಂಭವಾಗುವ ಮತ್ತು ಮುಕ್ತಾಯಗೊಳ್ಳುವ ಸಮಯದಲ್ಲಿ ಆಗುತ್ತಿರುವ ಬದಲಾವಣೆಗಳು ಕಾಫಿ ಬೆಳೆಗಾರರ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿವೆ. ಈ ಬಾರಿ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತಿರುವ ಅಕಾಲಿಕ ಕಾಫಿ ಹಣ್ಣಾಗುವಿಕೆ ಕೂಡ ಹವಾಮಾನ ವೈಪರೀತ್ಯದ ಮತ್ತೊಂದು ಪರಿಣಾಮವಾಗಿರಬಹುದು ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

” ಈಗ ತೋಟದಲ್ಲಿ ಕಾಫಿ ನಿರ್ವಹಣೆ ಮಾಡುವ ಸಮಯ. ಆದರೆ ಅಕಾಲಿಕವಾಗಿ ಕಾಫಿ ಹಣ್ಣಾಗುತ್ತಿರುವುದು ನಮಗೆ ತಲೆನೋವಾಗಿದೆ. ಹವಾಮಾನ ವ್ಯತ್ಯಾಸವೇ ಇದಕ್ಕೆ ಕಾರಣ. ನಮ್ಮ ವ್ಯಾಪ್ತಿಯಲ್ಲಿ ಸಾಕಷ್ಟು ತೋಟಗಳಲ್ಲಿ ಕಾಫಿ ಹಣ್ಣಾಗುತ್ತಿದ್ದು, ಪಲ್ಪರ್ ಮಾಡಿದ ಕಾಫಿ ಬೀಜವನ್ನು ಡ್ರೆ ಯರ್ ಮೂಲಕ ಒಣಗಿಸುತ್ತಿದ್ದೇವೆ.”

-ಎಸ್.ಜೆ. ಪ್ರಸನ್ನ ಕುಮಾರ್, ಕಾಫಿ ಬೆಳೆಗಾರ, ಮಾಲಂಬಿ

” ನಮ್ಮ ವ್ಯಾಪ್ತಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಾಗಿತ್ತು. ಇದರ ಪರಿಣಾಮ ನಮ್ಮ ತೋಟದ ಕೆಲವು ಗಿಡಗಳಲ್ಲಿ ಕಾಫಿ ಹಣ್ಣಾಗಿದೆ. ಇದೀಗ ಪಲ್ಪರ್ ಮಾಡಿದ ಕಾಫಿ ಬೀಜವನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ. ಆದರೂ ತುಂಬಾ ಕಷ್ಟಪಟ್ಟು ಕಾಫಿ ಬೀಜವನ್ನು ಒಣಗಿಸುತ್ತಿದ್ದೇವೆ.”

-ಸಿ.ಕೆ.ಗಣೇಶ್, ನಿವೃತ್ತ ಸೈನಿಕ ಹಾಗೂ ಕಾಫಿ ಬೆಳೆಗಾರ, ಸೋಮವಾರಪೇಟೆ

 

 

ಆಂದೋಲನ ಡೆಸ್ಕ್

Recent Posts

ನಾಗೇಂದ್ರ ರಾಜೀನಾಮೆ; ಅನಿಲ್‌ಗೆ ಸಚಿವ ಸ್ಥಾನ ಸಿಗುವುದೇ?

ಮಂಜು ಕೋಟೆ ಎಚ್.ಡಿ.ಕೋಟೆ: ನಾಯಕ ಸಮುದಾಯದ ಮುಖಂಡರಾದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಆ…

5 mins ago

ಓದುಗರ ಪತ್ರ: ಮದ್ದು ಅರೆಯಲಿ ಆಳುವವರು!

ಮದ್ದು ಅರೆಯಲಿ ಆಳುವವರು! ಬಗೆದಷ್ಟೂ ಬಯಲಾಗುತಿದೆ ಬ್ರಹ್ಮಾಂಡ ಭ್ರಷ್ಟಾಚಾರ ನೆಲದಾಳಕೂ ಬೇರೂರಿದೆ ಕೆಪಿಎಸ್‌ಸಿಯ ಕರ್ಮಕಾಂಡ! ಹಣವಂತರ ಆಡುಂಬಲವಿದು ಹರಣವಾಗುತಿದೆ ಬಡವನ…

14 mins ago

ಓದುಗರ ಪತ್ರ: ಪಾದಚಾರಿ ಮಾರ್ಗಕ್ಕೂ ಅಡ್ಡಗಾಲು

ಮೈಸೂರಿನ ಕುವೆಂಪು ನಗರ ಕಾಂಪ್ಲೆಕ್ಸ್ ಹತ್ತಿರ ಇರುವ ಒಂದನೇ ಹಂತ (ಇಡಬ್ಲ್ಯು ಎಸ್) ೩ನೇ ಕ್ರಾಸ್ ಬಳಿ ರಸ್ತೆಯ ಒಂದು…

15 mins ago

ಓದುಗರ ಪತ್ರ: ಈ ಶೌಚಾಲಯ ಪ್ರಾರಂಭಕ್ಕೆ ಮುಹೂರ್ತ ಬಂದಿಲ್ಲವೇ?

ಹೆಚ್. ಡಿ. ಕೋಟೆ ಮಿನಿ ವಿಧಾನಸೌಧ ಆಡಳಿತ ಕಚೇರಿ ಪಕ್ಕದಲ್ಲಿ ಸಾರ್ವಜನಿಕರಿಗಾಗಿ ಸಾಕಷ್ಟು ಹಣ ಖರ್ಚು ಮಾಡಿ ಶೌಚಾಲಯವನ್ನು ನಿರ್ಮಾಣ…

17 mins ago

ಓದುಗರ ಪತ್ರ: 365 ದಿನಗಳೂ ಸಾರ್ವಜನಿಕ ಗ್ರಂಥಾಲಯಗಳ ಸೇವೆ ಲಭ್ಯವಿರಲಿ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳು…

19 mins ago

ಯುವಜನರ ಕೈಯಲ್ಲಿ ಮೊಬೈಲ್ ಇದೆ; ದಿಕ್ಕು ಇದೆಯೇ?

ಟಿ.ಕೆ.ಹರೀಶ್ ತಕ್ಷಣದ ಯಶಸ್ಸಿನ ಸಂಸ್ಕೃತಿಯಿಂದ ಅಪಾಯಕಾರಿ ; ಯುವಜನರಿಗೆ ಮನವರಿಕೆ ಅಗತ್ಯ ಇಂದು ಒಂದು ಮಗು ಹುಟ್ಟಿದಾಗ ಅದರ ಸುತ್ತಲೂ…

21 mins ago