ಕೆ.ಬಿ.ರಮೇಶನಾಯಕ
ಮೈಸೂರು: ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೂ ತಲಾ 10 ಕೆಜಿ ಕೊಡಲು ಸಾಧ್ಯವಾಗದೆ 5 ಕೆಜಿ ಬದಲಿಗೆ ಹಣ ಜಮಾ ಮಾಡುತ್ತಿರುವ ರಾಜ್ಯ ಸರ್ಕಾರ, ಅಕ್ಕಿಯನ್ನು ಹೊಂದಿಸಲು ಹೆಣಗಾಡುತ್ತಿರುವ ಹೊತ್ತಲ್ಲೇ ಎಪಿಎಲ್ ಪಡಿತರದಾರರಿಗೆ ಅಕ್ಕಿ ವಿತರಣೆ ಸ್ಥಗಿತವಾಗಿದೆ.
ಮೈಸೂರು ಸೇರಿದಂತೆ ಇಡೀ ರಾಜ್ಯದ ಎಲ್ಲ ಜಿಲ್ಲೆಗಳ ಯಾವ ಎಪಿಎಲ್ ಕಾರ್ಡುದಾರರಿಗೂ ಅಕ್ಕಿ ವಿತರಣೆ ಯಾಗಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಸಂಪೂರ್ಣ ಸ್ಥಗಿತವಾಗುತ್ತದೆಯೇ ಅಥವಾ ಇಲ್ಲವೇ ಎನ್ನುವುದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೂ ತಿಳಿಯದಂತಾಗಿದೆ.
ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತವಾಗಿ ಯಾವುದೇ ಅಡ್ಡಿಯಿಲ್ಲದೇ ಪಡಿತರ ಸಿಗುತ್ತಿದೆ. ಆದರೆ, ಹಣ ಕೊಟ್ಟು ಪಡಿತರ ಅಕ್ಕಿ ಪಡೆಯುವ ಎಪಿಎಲ್ ಪಡಿತರ ಚೀಟಿದಾರರಿಗೆ ನಾಲೈದು ತಿಂಗಳಿಂದ ಪಡಿತರ ಸಿಗುತ್ತಿಲ್ಲ. ಇದರಿಂದ ನಿತ್ಯ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆಯುತ್ತಿದೆ.
ಜಿಲ್ಲಾವಾರು ಎಪಿಎಲ್ ಕಾರ್ಡುಗಳ ಸಂಖ್ಯೆ:
ಮೈಸೂರು: 1,10,953
ಮಂಡ್ಯ: 4,41,801
ಕೊಡಗು: 37,187
ಚಾಮರಾಜನಗರ: 14,000
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಭರಾಟೆಯಲ್ಲಿ ಎಪಿಎಲ್ ಕಾರ್ಡ್ ದಾರರಿಗೆ ಪಡಿತರ ಅಕ್ಕಿ ವಿತರಣೆ ಮಾಡದೇ ನಿರ್ಲಕ್ಷ್ಯ ವಹಿಸಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಎಪಿಎಲ್ ಕಾರ್ಡ್ ದಾರರು ಇದ್ದು, ಜನವರಿಯಲ್ಲಿ 5ರಿಂದ 10 ಕೆಜಿ ಪಡಿತರ ಅಕ್ಕಿ ಪಡೆದಿರುವುದನ್ನು ಬಿಟ್ಟರೆ ಫೆಬ್ರವರಿಯಿಂದ ಇದುವರೆಗೂ 1 ಕೆಜಿ ಅಕ್ಕಿಯೂ ಎಪಿಎಲ್ ಪಡಿತರದಾರರನ್ನು ತಲುಪಿಲ್ಲ.
ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಕಾರ ರಾಜ್ಯದಲ್ಲಿ 29 ಲಕ್ಷಕ್ಕೂ ಹೆಚ್ಚು ಎಪಿಎಲ್ ಕಾರ್ಡ್ ಗಳಿದ್ದು, ಅದರಲ್ಲಿ 85 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 1.10 ಲಕ್ಷ ಮಂದಿ ಎಪಿಎಲ್ ಪಡಿತರ ಚೀಟಿದಾರರಿದ್ದು, ಅದರಲ್ಲಿ ಮೈಸೂರು ನಗರದಲ್ಲಿಯೇ 73 ಸಾವಿರ ಮಂದಿ ಇದ್ದಾರೆ. ರಾಜ್ಯ ಸರ್ಕಾರ ಪೂರೈಸುವ ಪಡಿತರ ಪಡೆದುಕೊಳ್ಳಲು ಅರ್ಹರಾಗಿದ್ದರೂ ಇವರಿಗೆ ಅಕ್ಕಿ ಪೂರೈಕೆಯಾಗಿಲ್ಲ. ನ್ಯಾಯ ಬೆಲೆ ಅಂಗಡಿಗಳಲ್ಲಿ ಕೇಳಿದರೆ ಸರ್ಕಾರದಿಂದ ಸರಬರಾಜು ಆಗಿಲ್ಲ ಎಂದು ಸಬೂಬು ಹೇಳುತ್ತಾರೆ ಎಂದು ಎಪಿಎಲ್ ಪಡಿತರ ಚೀಟಿದಾರ ಪ್ರದೀಪ್ ಎಂಬವರು ಅಳಲು ತೋಡಿಕೊಂಡಿದ್ದಾರೆ.
ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ಇಲಾಖೆಯಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಉಚಿತವಾಗಿ ನೀಡಲಾಗುವ ಅಕ್ಕಿಯನ್ನು ಮಾತ್ರ ವಿತರಿಸಲಾಗುತ್ತದೆ. ಆದರೆ, ಎಪಿಎಲ್ ಕಾರ್ಡ್ ದಾರರಿಗೆ ನೀಡಲಾಗುವ ಅಕ್ಕಿ ಪೂರೈಕೆಯ ಸ್ಟಾಕ್ ಬಂದಿಲ್ಲ ಎಂದು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಕಾರ್ಯದರ್ಶಿ ರಮ್ಯ ಹೇಳುತ್ತಾರೆ.
ಕೋಟ್ಸ್:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ನೀಡುವ ಪಡಿತರ ಅಕ್ಕಿ ಮಾತ್ರ ನೀಡಲಾಗುತ್ತಿದ್ದು, ಎಪಿಎಲ್ ಕಾರ್ಡ್‌ದಾರರಿಗೆ ನೀಡುವ ಅಕ್ಕಿ ಪೂರೈಕೆ ಮಾಡಲಾಗುತ್ತಿಲ್ಲ. ಇದರಿಂದ ವಿತರಣೆಯಲ್ಲಿ ತೊಡಕಾಗಿದೆ. ಮೈಸೂರು ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಬರುತ್ತಿಲ್ಲ. ಸರ್ಕಾರ ಬಿಡುಗಡೆ ಮಾಡಿದರೆ ಹಂಚಿಕೆ ಮಾಡಲಾಗುವುದು.
-ಕುಮುದಾ, ಜಂಟಿ ನಿರ್ದೆಶಕರು, ಆಹಾರ ಇಲಾಖೆ.
ನಾವು ಎಪಿಎಲ್ ಪಡಿತರ ಚೀಟಿದಾರರಾಗಿದ್ದು ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಹಣ ನೀಡಿ ಅಕ್ಕಿ ಹಾಗೂ ಇತರೆ ಧಾನ್ಯಗಳನ್ನು ತೆಗೆದುಕೊಳ್ಳಬೇಕಿದೆ. ಆದ್ದರಿಂದ ನಾವು ಪಡಿತರ ಧಾನ್ಯಗಳನ್ನು ಪಡೆದುಕೊಳ್ಳುತ್ತಿಲ್ಲ.
-ಸುಲೋಚನಾ, ಹೌಸಿಂಗ್ ಬೋರ್ಡ್ ಕಾಲೋನಿ, ಚಾ.ನಗರ
ನನ್ನ ಕುಟುಂಬ ಎಪಿಎಲ್ ಕಾರ್ಡ್ ಹೊಂದಿದೆ. ಆದರೆ, ಹೆಸರಿಗೆ ಮಾತ್ರ ಒಂದು ಕಾರ್ಡ್ ಇದೆ ಅಷ್ಟೇ. ನಮಗೆ ಕಳೆದ ಎರಡು ವರ್ಷಗಳಿಂದ ಪಡಿತರ ಅಕ್ಕಿ ಬರುತ್ತಿಲ್ಲ. ನ್ಯಾಯ ಬೆಲೆ ಅಂಗಡಿ, ಗ್ರಾಮ ಪಂಚಾಯಿತಿ, ಆಹಾರ ಇಲಾಖೆ ಅಂತ ಅಲೆದಾಡಿ ಸುಸ್ತಾಗಿದೆ.
-ಮಹೇಶ್, ಕರಡಿಗೋಡು, ಕೊಡಗು ಜಿಲ್ಲೆ.
ಕಳೆದ ಎರಡು ವರ್ಷಗಳಿಗಿಂತ ಮೊದಲು 150 ರೂ.ಗಳಿಗೆ 10 ಕೆ.ಜಿ ಅಕ್ಕಿ ಸಿಗುತ್ತಿತ್ತು. ಆದರೆ, ಕಳೆದ 2 ವರ್ಷಗಳಿಂದ ಎಪಿಎಲ್ ಕಾರ್ಡ್ ಇರುವವರಿಗೆ ಅಕ್ಕಿ ಸಿಗುತ್ತಿಲ್ಲ. ಬಡವ ಮತ್ತು ಮಧ್ಯಮ ವರ್ಗದವರನ್ನು ಗಮದಲ್ಲಿಟ್ಟುಕೊಂಡು ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು.
-ಎ.ಎಂ.ಕಾಶಿ, ಕೃಷಿಕ, ಕಾನೂರು ಗ್ರಾಮ, ಕೊಡಗು ಜಿಲ್ಲೆ.
ಕಳೆದ ನಾಲೈದು ತಿಂಗಳಿಂದ ಪಡಿತರ ಕೊಟ್ಟಿಲ್ಲ. ಪ್ರತಿ ಕೆ.ಜಿ. ಅಕ್ಕಿಗೆ 15 ರೂ. ಕೊಟ್ಟರೂ ಅಕ್ಕಿ ನೀಡುತ್ತಿಲ್ಲ. 60 ಸಾವಿರ ಬಾಡಿಗೆ ತೆಗೆದುಕೊಳ್ಳುವವರಿಗೆ ಬಿಪಿಎಲ್ ಕಾರ್ಡ್ ಕೊಟ್ಟು, ಅವರಿಗೆ ಬಿಟ್ಟಿಯಾಗಿ ಅಕ್ಕಿ ಕೊಡುತ್ತಿದ್ದಾರೆ. ಹತ್ತಾರು ಎಕರೆ ಕೃಷಿ ಜಮೀನು ಇದ್ದು, 25 ಲಕ್ಷ ರೂ. ಮೌಲ್ಯದ ಕಾರು ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ.
-ನಾಗರಾಜು, ನಿವೃತ್ತ ಚಾಲಕರು, ಕೆಎಸ್‌ಆರ್‌ಟಿಸಿ, ಮಂಡ್ಯ,
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…