k harish gowda
‘ಆಂದೋಲನ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಶಾಸಕ ಕೆ.ಹರೀಶ್ ಗೌಡ ಆಶಯ
ಸಂದರ್ಶನ: ಗಿರೀಶ್ ಹುಣಸೂರು
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅದರಲ್ಲಿಯೂ ಆರೋಗ್ಯ ಕ್ಷೇತ್ರಕ್ಕೆ ಗಮನಾರ್ಹ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ನೂರಾರು ಕೋಟಿ ರೂ. ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ತರುವ ಮೂಲಕ ಚಾಮರಾಜ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಲು ಶ್ರಮಿಸುತ್ತೇನೆ ಎಂದು ಶಾಸಕ ಕೆ.ಹರೀಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಾನು ಪ್ರತಿನಿಧಿಸುವ ಚಾಮರಾಜ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಹುತೇಕ ಬೇಡಿಕೆಗಳನ್ನು ಸಿದ್ದರಾಮಯ್ಯ ಮಾನ್ಯ ಮಾಡಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರಕ್ಕೂ ಅನುದಾನ ನೀಡಿರುವುದು ಮುಖ್ಯಮಂತ್ರಿಗಳ ವಿಶೇಷವಾಗಿದೆ ಎಂದು ಹೇಳಿದ ಅವರು ‘ಆಂದೋಲನ’ ದಿನಪತ್ರಿಕೆಗೆ ದೂರವಾಣಿ ಮೂಲಕ ನೀಡಿದ ವಿಶೇಷ ಸಂದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಆಂದೋಲನ : ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದ ನೀವು ಆಡಳಿತ ಪಕ್ಷದ ಶಾಸಕರಾಗಿ ಕ್ಷೇತ್ರ ಹಾಗೂ ಮೈಸೂರು ನಗರದ ಅಭಿವೃದ್ಧಿಗೆ ಹಾಕಿಕೊಂಡಿರುವ ನೀಲನಕ್ಷೆಗಳೇನು?
ಹರೀಶ್ ಗೌಡ: ಚುನಾವಣೆ ಪೂರ್ವದಲ್ಲಿಯೇ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವುದಾಗಿ ಜನತೆಗೆ ಭರವಸೆ ನೀಡಿದ್ದೆ. ಗೆದ್ದ ನಂತರ ಕೊಟ್ಟ ಮಾತಿನಂತೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಿದ್ದರಾಮಯ್ಯ ಅವರು ಮೊದಲನೇ ಬಾರಿ ಮುಖ್ಯಮಂತ್ರಿಯಾದಾಗಲೂ ಚಾಮರಾಜ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಟ್ರಾಮಾ ಸೆಂಟರ್‌ಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.
ಕಿದ್ವಾಯಿ ಸಂಸ್ಥೆಯ ಘಟಕ, ನೆಫ್ರೊ ಯುರಾಲಜಿ, ಎಂಡೋ ಕ್ರೊನಾಲಜಿ ಘಟಕ, ಬೋನ್ ನ್ಯಾರೋ ಚಿಕಿತ್ಸಾ ಘಟಕ ಸ್ಥಾಪನೆಗಾಗಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಒಟ್ಟಾರೆ ನನ್ನ ಕ್ಷೇತ್ರ ಆರೋಗ್ಯ ವಲಯಕ್ಕೆ ೩೨೦ ಕೋಟಿ ರೂ.ಗಳಷ್ಟು ಅನುದಾನವನ್ನು ಸಿದ್ದರಾಮಯ್ಯ ನೀಡಿದ್ದಾರೆ.
ಮಹಾರಾಣಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜು ಕಟ್ಟಡಗಳ ವಿಸ್ತರಣೆ, ಸುಮಾರು ೩ ಸಾವಿರ ವಿದ್ಯಾರ್ಥಿನಿಯರ ವಸತಿಗಾಗಿ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕಾಗಿ ೧೪೦ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ಯುಜಿ ಕೇಬಲ್ ಅಳವಡಿಕೆಗಾಗಿ ೧೪೦ ಕೋಟಿ ರೂ. ಅನುದಾನ ದೊರೆತಿದ್ದು, ಈಗಾಗಲೇ ಶೇ.೭೦ರಷ್ಟು ಕೆಲಸ ಪೂರ್ಣಗೊಂಡಿದೆ. ಒಳಚರಂಡಿ, ಅಂತರ್ ಸಂಪರ್ಕ ಕಾಮಗಾರಿಗಳಿಗಾಗಿ ೫೦ ಕೋಟಿ ರೂ. ಅನುದಾನ ದೊರೆತಿದೆ.
ಆಂದೋಲನ: ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗಿದೆ ಎಂಬ ಆರೋಪ ಇದೆಯಲ್ಲಾ, ನಿಮ್ಮ ಅನಿಸಿಕೆ ಏನು?
ಹರೀಶ್ ಗೌಡ: ಇದು ವಿರೋಧಪಕ್ಷಗಳ ಆರೋಪ ಅಷ್ಟೇ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳಿಲ್ಲದಿದ್ದರೂ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ವಿರೋಧಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ೧ ರೂಪಾಯಿಯನ್ನೂ ಕೊಡಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ನಡುವೆಯೂ ಇಲಾಖಾ ಕಾರ್ಯಕ್ರಮಗಳ ಜೊತೆಗೆ ಪ್ರತಿ ಕ್ಷೇತ್ರಕ್ಕೆ ಯಾವುದೇ ತಾರತಮ್ಯ ಮಾಡದೆ ಹತ್ತು ಕೋಟಿ ರೂ. ಅನುದಾನ ನೀಡುತ್ತಿದ್ದಾರೆ. ಬಿಜೆಪಿ ಶಾಸಕರು ಪ್ರತಿನಿಽಸುವ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಗೆ ಬರುವ ವಸ್ತುಪ್ರದರ್ಶನ ಆವರಣದಲ್ಲಿ ಯೂನಿಟ್ ಮಾಲ್‌ಗೆ ಅನುದಾನ ನೀಡಿದ್ದಾರೆ.
ಆಂದೋಲನ: ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ನೀವು ನಿರೀಕ್ಷಿಸಿದಷ್ಟು ಅನುದಾನ ದೊರೆತಿದೆಯೇ? ಅಭಿವೃದ್ಧಿ ವೇಗ ಕುಂಠಿತವಾಗಿದೆ ಅನಿಸುತ್ತಿಲ್ಲವೇ?
ಹರೀಶ್ ಗೌಡ: ನಿರೀಕ್ಷೆ ಅನ್ನುವುದಕ್ಕಿಂತ ನನ್ನ ಎಲ್ಲಾ ಕೋರಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಇತರ ಸಚಿವರು -ಫುಲ್‌ಫಿಲ್ ಮಾಡಿದ್ದಾರೆ ಎಂಬ ಸಮಾಧಾನ ಇದೆ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ನನ್ನ ಎಲ್ಲಾ ಕೋರಿಕೆಗಳಿಗೂ ಒಪ್ಪಿಗೆ ನೀಡಿರುವುದರಿಂದ ಅಭಿವೃದ್ಧಿ ಕಾರ್ಯಗಳು ನಿರೀಕ್ಷೆಯಂತೆಯೇ ನಡೆಯುತ್ತಿವೆ. ಹೀಗಾಗಿ ಅಭಿವೃದ್ಧಿ ವೇಗ ಕುಂಠಿತ ಎನ್ನುವ ಪ್ರಶ್ನೆಯೇ ಬರುವುದಿಲ್ಲ.
ಆಂದೋಲನ: ನಿಮ್ಮ ಮತ್ತು ಕ್ಷೇತ್ರದ ಜನರ ಸಂಪರ್ಕ ಹೇಗಿದೆ? ಜನರ ನಿರೀಕ್ಷೆಗಳೇನು?
ಹರೀಶ್ ಗೌಡ: ನನ್ನ ಮೊಬೈಲ್ ಕರೆಯನ್ನು ಆಪ್ತ ಸಹಾಯಕರೋ ಮತ್ತೊಬ್ಬರೋ ಸ್ವೀಕರಿಸುವುದಿಲ್ಲ. ಬದಲಿಗೆ ಬಂದ ಎಲ್ಲಾ ಕರೆಗಳನ್ನು ಖುದ್ದು ನಾನೇ ಸ್ವೀಕರಿಸಿ, ಜನರ ಅಹವಾಲು ಆಲಿಸುತ್ತೇನೆ. ಬೆಳಿಗ್ಗೆ ೮.೩೦ ರಿಂದ ೧೦.೩೦ರವರೆಗೆ ಕ್ಷೇತ್ರದ ಜನರು ನನ್ನನ್ನು ಮನೆಯಲ್ಲಿ ಭೇಟಿ ಮಾಡುತ್ತಾರೆ. ಬಳಿಕ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿರುವ ನನ್ನ ಕಚೇರಿಯಲ್ಲಿ ಭೇಟಿ ಮಾಡಿ ತಮ್ಮ ಅಹವಾಲು ಹೇಳಿಕೊಳ್ಳುತ್ತಾರೆ. ಇದರ ಜೊತೆಗೆ ವಾರದಲ್ಲಿ ಕನಿಷ್ಠ ೨ ರಿಂದ ೩ ವಾರ್ಡ್‌ಗಳಿಗೆ ಅಧಿಕಾರಿಗಳನ್ನು ಭೇಟಿ ಮಾಡಿ, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಶ್ರಮಿಸುತ್ತಿದ್ದೇನೆ.
ಆಂದೋಲನ: ಚಾಮರಾಜ ಕ್ಷೇತ್ರದಲ್ಲಿ ಈವರೆಗೆ ಸಾಕಾರಗೊಂಡಿರುವ ನಿಮ್ಮ ಪ್ರಯತ್ನದ ಯೋಜನೆಗಳು ಯಾವುವು?
ಹರೀಶ್ ಗೌಡ: ಪ್ರಮುಖವಾಗಿ ನನೆಗುದಿಗೆ ಬಿದ್ದಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಳಿಸಲಾಗುವುದು. ಇದಲ್ಲದೆ ಅರಮನೆ ನಗರಿಯ ಹೆಮ್ಮೆ ಎನಿಸಿರುವ ಲ್ಯಾನ್ಸ್‌ಡೌನ್ ಕಟ್ಟಡವನ್ನು ಪಾರಂಪರಿಕ ಶೈಲಿಯಲ್ಲೇ ಪುನರ್ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲೇ ಘೋಷಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಹಳೆ ಕಟ್ಟಡ ಮ್ಯೂಸಿಯಂ ಆಗಲಿದೆ. ಜೊತೆಗೆ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಲು ೫೦ ಕೋಟಿ ರೂ. ಅನುದಾನ ದೊರೆತಿದೆ.
ಆಂದೋಲನ: ನಗರಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ, ನಿಮ್ಮ ಮೇಲೆ ಒತ್ತಡ ಹೆಚ್ಚಾಗಿದೆ ಅನಿಸುವುದಿಲ್ಲವೇ?
ಹರೀಶ್ ಗೌಡ: ಖಂಡಿತಾ ಹೌದು. ನಗರಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದಿರುವುದರಿಂದ ಸಹಜವಾಗಿ ನಮ್ಮ ಮೇಲೆ ಒತ್ತಡ ಹೆಚ್ಚಾಗಿದೆ. ನಗರಪಾಲಿಕೆಗೆ ಚುನಾವಣೆ ನಡೆಯಬೇಕು. ಆದರೆ, ಗ್ರೇಟರ್ ಮೈಸೂರು ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾಗಿರುವುದರಿಂದ ಚುನಾವಣೆ ವಿಳಂಬವಾಗಿದೆ. ಮುಂದಿನ ಐದಾರು ತಿಂಗಳಲ್ಲಿ ಗ್ರೇಟರ್ ಮೈಸೂರು ಪಾಲಿಕೆ ರಚನೆಯಾಗಿ ಚುನಾವಣೆ ನಡೆಯಲಿದ್ದು, ಜನರು ನಮ್ಮ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ.
ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…
ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…
ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…
ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…