Andolana originals

ಎಂಡಿಎ ಆರ್ಥಿಕ ಸ್ಥಿತಿ ಸುಧಾರಣೆಗೆ ಆದ್ಯತೆ

ಬರೀ ಹೆಸರಿಗಷ್ಟೇ ಬದಲಾವಣೆ, ಆಡಳಿತದಲ್ಲೂ ಬದಲಾವಣೆ ತರುತ್ತೇವೆ
ಆಂದೋಲನಕ್ಕೆ ನೀಡಿದ ಸಂದರ್ಶನದಲ್ಲಿ ನೂತನ ಆಯುಕ್ತ ರಕ್ಷಿತ್‌ ಭರವಸೆ

ಕೆ. ಬಿ. ರಮೇಶನಾಯಕ

ಮೈಸೂರು: ಒಂದು ವರ್ಷದಿಂದ ನಿವೇಶನಗಳ ಹಂಚಿಕೆ, ಭೂ ಪರಿಹಾರ ಸೇರಿದಂತೆ ಹಲವು ಆರೋಪಗಳಿಂದ ತೀವ್ರ ಚರ್ಚೆಗೆ ಗುರಿಯಾಗಿದ್ದ ಮುಡಾವನ್ನು ವಿಸರ್ಜಿಸಿ ಮೈಸೂರು ಅಭಿವೃದ್ಧಿ ಪ್ರಾಧಿಕಾರವನ್ನು (ಎಂಡಿಎ)ಅಸ್ತಿತ್ವಕ್ಕೆ ತಂದಿರುವ ರಾಜ್ಯ ಸರ್ಕಾರ, ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಎಂಡಿಎ ಅಸ್ತಿತ್ವಕ್ಕೆ ತರುವುದಕ್ಕೆ ಸೀಮಿತವಾಗದೆ ಇಲ್ಲಿರುವ ಆಡಳಿತ ಮತ್ತು ಜನರ ಕೆಲಸಗಳು ಸುಲಲಿತವಾಗಿ ನಡೆಯು ವಂತೆ ಮಾಡಲು ಅಧಿಕಾರಿ ವರ್ಗವನ್ನೂ ಬದಲಾವಣೆ ಮಾಡಿದೆ. ಹಾಗಾಗಿ, ಎಂಡಿಎ ಅಸ್ತಿತ್ವಕ್ಕೆ ಬಂದ ನಂತರ ಐದೇ ದಿನಗಳಲ್ಲಿ ಪ್ರಭಾರ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಕೆ. ಆರ್. ರಕ್ಷಿತ್ ಅವರೊಂದಿಗೆ ‘ಆಂದೋಲನ’ ದಿನಪತ್ರಿಕೆ ನಡೆಸಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮುಂದಿನ ಯೋಜನೆಗಳು, ಸುಧಾರಣೆಗೆ ರೂಪಿಸಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು.

ಆಂದೋಲನ: ಎಂಡಿಎ ಆಯುಕ್ತರಾಗುವ ನಿರೀಕ್ಷೆ ಇತ್ತೇ? ಏನನ್ನಿಸುತ್ತಿದೆ?
ಕೆ. ಆರ್. ರಕ್ಷಿತ್: ಎಂಡಿಎ ಆಯುಕ್ತನಾಗುವ ನಿರೀಕ್ಷೆ ಇರಲಿಲ್ಲ. ನನಗೆ ದೊರೆತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಮೈಸೂರು ತಾಲ್ಲೂಕು ತಹಸಿಲ್ದಾರ್, ಎಸಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೈಸೂರಿನ ಬಗ್ಗೆ ಚೆನ್ನಾಗಿ ಅರಿತಿರುವ ಕಾರಣ ಕೆಲಸ ಮಾಡಲು ಅನುಕೂಲವಾಗಿದೆ. ಮಹಾರಾಜರ ಕಾಲದಲ್ಲಿ ರಚನೆಯಾದ ಈ ಸಂಸ್ಥೆಯ ಆಯುಕ್ತನಾಗಿ ಕೆಲಸ ಮಾಡಲು ಸಂತಸವಾಗಿದೆ.

ಆಂದೋಲನ: ಎಂಡಿಎ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಯಾವ ಕ್ರಮ ಕೈಗೊಂಡಿದ್ದೀರಿ?
ಕೆ. ಆರ್. ರಕ್ಷಿತ್: ಎಂಡಿಎ ಈಗ ಸ್ವತಂತ್ರ ಸಂಸ್ಥೆಯಾಗಿರುವ ಕಾರಣ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಜತೆಗೆ ಸ್ವಂತ ಸಂಪನ್ಮೂಲವನ್ನೂ ಕ್ರೋಢೀಕರಿಸಬೇಕಿದೆ. ಯಾವುದೇ ನೀತಿ, ನಿರ್ಧಾರ ಮಾಡುವ ಮುನ್ನ ನಗರಾಭಿವೃದ್ಧಿ ಇಲಾಖೆಯ ಅನುಮತಿ ಪಡೆಯಬೇಕಿತ್ತು. ಆದರೆ, ಈಗ ನಗರದ ಬೆಳವಣಿಗೆಗೆ ಪೂರಕವಾಗುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಯಾವ ಸಮಸ್ಯೆ ಇಲ್ಲ. ಆರ್ಥಿಕ ಸ್ಥಿತಿ ಗಟ್ಟಿಯಾಗಿದ್ದರೆ ಹೊಸ ಕಾರ್ಯಕ್ರಮಗಳನ್ನು ರೂಪಿಸಬಹುದು. ಹಾಗಾಗಿ, ಆರ್ಥಿಕ ಸ್ಥಿತಿ ಸುಧಾರಣೆಗೆ ಮೊದಲ ಆದ್ಯತೆ ನೀಡಲಾಗುವುದು.

ಆಂದೋಲನ: ಬಹುಮಹಡಿ ವಸತಿ ಸಮುಚ್ಚಯ ಯೋಜನೆ ಕೈಗೆತ್ತಿಕೊಳ್ಳುವಿರೇ? ಕೆ. ಆರ್. ರಕ್ಷಿತ್: ೨೫ ವರ್ಷಗಳಿಂದ ನಿವೇಶನಕ್ಕಾಗಿ ೯೫ಸಾವಿರ ಜನರು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಡಾವಣೆಗಳನ್ನು ರಚಿಸಲು ಆದ್ಯತೆ ನೀಡುವ ಜತೆಗೆ, ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಗುಂಪು ಮನೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಬಡವರು,ಮಧ್ಯಮ ವರ್ಗದವರಿಗೆ ನಿವೇಶನ, ಮನೆಗಳನ್ನು ಹಂಚಿಕೆ ಮಾಡುವ ಮೂಲ ಉದ್ದೇಶದಿಂದಲೇ ಪ್ರಾಧಿಕಾರಗಳನ್ನು ರಚನೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ಹಿಂದೆ ರೂಪಿಸಿದ್ದ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿ ತೀರ್ಮಾನಿಸ ಲಾಗುವುದು. ಹೊಸದಾಗಿ ಗುಂಪು ಮನೆ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಿ ಸರ್ಕಾರದ ಅನುಮತಿ ಪಡೆದು ಮುಂದುವರಿಯುತ್ತೇವೆ.

ಆಂದೋಲನ: ಆಸ್ತಿ ಸಂರಕ್ಷಣೆಗೆ ಏನಾದರೂ ಪ್ಲಾನ್ ಮಾಡಿದ್ದೀರಾ?
ಕೆ. ಆರ್. ರಕ್ಷಿತ್: ಎಂಡಿಎ ಆಸ್ತಿ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಬಡಾವಣೆ ರಚನೆ ಮಾಡಿದ ನಂತರ ಪ್ರಾಧಿಕಾರಕ್ಕೆ ಸೇರಿದ ಸಿಎ ನಿವೇಶನಗಳು ಇರುವುದನ್ನು ಗುರುತಿಸಿ ಸಂರಕ್ಷಣೆ ಮಾಡಬೇಕಿದೆ. ಸುಮಾರು ವರ್ಷಗಳಿಂದ ಲ್ಯಾಂಡ್ ಆಡಿಟಿಂಗ್ ಮಾಡಿಲ್ಲದ ಕಾರಣ ಮೊದಲು ಲ್ಯಾಂಡ್ ಆಡಿಟಿಂಗ್ ಮಾಡಿಸಲು ನಿರ್ಧರಿಸಲಾಗಿದೆ. ಪ್ರಾಽಕಾರಕ್ಕೆ ಸೇರಿದ ಆಸ್ತಿಗಳನ್ನು ಒತ್ತುವರಿ ಮಾಡಿದ್ದರೆ ಅದನ್ನು ತೆರವುಗೊಳಿಸಲಾಗುವುದು. ನ್ಯಾಯಾಲಯದಲ್ಲಿ ಇರುವ ಭೂ ವಿವಾದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಗಮನಹರಿಸಲಾಗುವುದು.

ಆಂದೋಲನ: ಮುಂದಿನ ದಿನಗಳಲ್ಲಿ ಏನೇನು ಯೋಜನೆ ರೂಪಿಸಬಲ್ಲಿರಿ?
ಕೆ. ಆರ್. ರಕ್ಷಿತ್: ಮೈಸೂರು ನಗರ ಅಭಿವೃದ್ಧಿ ಯೋಜನೆ(ಸಿಡಿಪಿ) ತಯಾರಿಸಿ ಸುಮಾರು ವರ್ಷಗಳಾಗಿರುವ ಕಾರಣ ಅದನ್ನು ಪರಿಷ್ಕರಣೆ ಮಾಡಬೇಕಿದೆ.

ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಮಾಡಿದರೆ ಹೊಸ ಹೊಸ ಯೋಜನೆಗಳ ಜತೆಗೆ ನಗರ ಪ್ರದೇಶದ ಬೆಳವಣಿಗೆಗೆ ಅನುಕೂಲವಾಗಲಿದೆ. ಮೈಸೂರು ನಗರ ವರ್ತುಲ ರಸ್ತೆಯ ಹೊರಗೆ ೧೦-೧೫ ಕಿಮೀ ಅಂತರದವರೆಗೂ ಬೆಳೆದಿದೆ. ಬಡಾವಣೆಗಳು ರಚನೆಯಾಗಿವೆ. ಸಾವಿರಾರು ಖಾಸಗಿ ಬಡಾವಣೆಗಳು ರಚನೆಯಾಗಿ ನಿವೇಶನ ಹಂಚಿಕೆ ಮಾಡಿದೆ. ಮುಂದೆ ವ್ಯವಸ್ಥಿತವಾಗಿ ಅಭಿವೃದ್ದಿಪಡಿಸಲು ಸಿಡಿಪಿ ಪರಿಷ್ಕರಣೆ ಮಾಡುವುದಕ್ಕೆ ಮುಂದಾಗುತ್ತೇವೆ.

ಆಂದೋಲನ: ಜನರ ನಿರೀಕ್ಷೆಗೆ ಸ್ಪಂದಿಸಲು ಎಲ್ಲರ ಸಹಕಾರ ಕೋರುವಿರಾ?
ಕೆ. ಆರ್. ರಕ್ಷಿತ್: ಹೆಸರು ಬದಲಾವಣೆಯಾದರಷ್ಟೇ ಸಾಲದು. ಆಡಳಿತ ಮತ್ತು ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡಬೇಕು. ಬರೀ ಹೆಸರು ಬದಲಿಸಿ ಬೇರೇನೂ ಬದಲಾವಣೆಯಾಗಿಲ್ಲ ಎನ್ನುವ ಮನೋಭಾವನೆ ಬರಬಾರದು. ಮುಖ್ಯಮಂತ್ರಿಗಳು, ನಗರಾಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಽಕಾರಿಗಳ ಸಹಕಾರ, ಮಾರ್ಗದರ್ಶನ ಪಡೆದು ಕೆಲಸ ಮಾಡಲಾಗುವುದು. ಕಂದಾಯ ಇಲಾಖೆಯ ಸಮಸ್ಯೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿ ಪರಿಹರಿಸಿರುವಂತೆ ಎಂಡಿಎಗೆ ಬರುವ ಜನರ ಕೆಲಸ ಕಾರ್ಯಗಳನ್ನು ಮಾಡುವೆ. ಸಾರ್ವಜನಿಕರ ಕೆಲಸ ಕಾರ್ಯಗಳ ವಿಳಂಬಕ್ಕೆ ಅವಕಾಶ ಇಲ್ಲದಂತೆ ಒಂದಿಷ್ಟು ಬದಲಾವಣೆ ಮಾಡಲಾಗುವುದು.

ಆಂದೋಲನ ಡೆಸ್ಕ್

Recent Posts

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

3 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

5 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

5 hours ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

5 hours ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

6 hours ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

6 hours ago