Andolana originals

ಏ.26ರ ಮತದಾನದ ಬಳಿಕ ನರಕವಾಯಿತು ಇಂಡಿಗನತ್ತ ಜನರ ಬಾಳು: ಕುಗ್ರಾಮದ ಬದುಕೇ ಸಂಗ್ರಾಮ

ವಾಹನದ ಸದ್ದಾದರೆ ಕಾಡಿನೊಳಗೆ ಪೇರಿ ಕೀಳುವ ಜನ… ಯಾವುದಾದರೂ ವಾಹನದ ಸದ್ದಾದರೆ ಸಾಕು ಬೆಚ್ಚಿ ಬೀಳುವ ಅಲ್ಲಿನ ಜನರು ಓಡಿ ಹೋಗಿ ಮನೆಯೊಳಗೆ ಅವಿತುಕೊಳ್ಳುತ್ತಿದ್ದಾರೆ. ಕೆಲವರು ಕಾಡಿನತ್ತ ಪೇರಿ ಕೀಳುತ್ತಾರೆ. ಪೊಲೀಸರು ಮನೆಗಳಿಗೆ ನುಗ್ಗಿ ನಮ್ಮನ್ನು ಎಳೆದುಕೊಂಡು ಹೋಗಿ ಜೈಲಿಗೆ ಹಾಕಿಬಿಟ್ಟಾರು ಎಂದು ಭಯಭೀತರಾಗಿದ್ದಾರೆ. ಪೊಲೀಸ್, ಕೇಸು, ಜೈಲು ಎಂಬ ಭೀತಿಯಿಂದ ಜನರು ಕಂಗಾಲಾಗಿದ್ದಾರೆ.

ವರದಿ: ರವಿಚಂದ್ರ ಚಿಕ್ಕೆಂಪಿಹುಂಡಿ/ಪ್ರಸಾದ್ ಲಕ್ಕೂರು

ಹೆಸರಿಗೆ ಕಾಡು. ಆದರೆ ವನ್ಯಧಾಮದ ರಮ್ಯ ಸೌಂದರ್ಯವಿಲ್ಲ. ಭೋರ್ಗರೆಯುವ ಜಲಪಾತಗಳಿಲ್ಲ. ಸುತ್ತಲೂ ಬಟಾ ಬಯಲು, ಕಾದ ಕೆಂಡದಂತಹ ಕಲ್ಲು-ಬಂಡೆಗಳ ದುರ್ಗಮ ಹಾದಿ, ಹಳ್ಳ-ದಿಣ್ಣೆ, ಕೊರಕಲುಗಳು ಕಮ್ಮಿ ಇಲ್ಲ.

ಇಂತಹ ದುರ್ಗಮ ಹಾದಿಯಲ್ಲಿ ಸಾಗಬೇಕೆಂದರೆ ಎಂಟೆದೆ ಇರಬೇಕು. ಇನ್ನು ಕವಲೊಡೆದ ಈ ಹಾದಿಯ ತುದಿಯಲ್ಲಿ ಹತ್ತಾರು ಗೂಡುಗಳಿರುವ ಊರೆಂಬ ಕಾಡಲ್ಲಿ ಬದುಕಬೇಕೆಂದರೆ…?

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ದೇವಾಲಯ ಸೇರಿದಂತೆ 77 ಬೆಟ್ಟಗಳ ಸಾಲಿನ ನಟ್ಟನಡುವೆ ಇರುವ ಕುಗ್ರಾಮ ಇಂಡಿಗನತ್ತ. ಇದನ್ನು ದಾಟಿ ಎರಡು ಮೈಲು ನಡೆದೇ ಹೋಗಬೇಕಾದ ದುರ್ಗಮ ಹಾದಿಯಲ್ಲಿ ಇದೆ ಇಂಡಿಗನಕ್ಕಿಂತಲೂ ಅತ್ತತ್ತ ಎನ್ನುವ ಮತ್ತೊಂದು ಕುಗ್ರಾಮ ಮಂದಾರೆ.

ಈಗ ಈ ಎರಡೂ ಗ್ರಾಮಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿವೆ. ಪ್ರಜಾಪ್ರಭುತ್ವದ ಹಬ್ಬದಂದು ನಡೆದ ಆ ಒಂದು ವಿಲಕ್ಷಣ ಘಟನೆ ಇಂಡಿಗನತ್ತ ಗ್ರಾಮವನ್ನು ಅಪಖ್ಯಾತಿಗೆ ದೂಡಿದೆ. ಮೂಲ ಸೌಕರ್ಯವಿಲ್ಲದೆ ನೊಂದು ಬೆಂದು ಹೋಗಿದ್ದ ಇಂಡಿಗನತ್ತ ಗ್ರಾಮದ ಜನರಲ್ಲಿ ಕೆಲವರು ಆ ಒಂದು ಕ್ಷಣ ತಾಳ್ಮೆ ಕಳೆದುಕೊಂಡು ಮತಗಟ್ಟೆ ಧ್ವಂಸ ಮಾಡಿ, ಮಂದಾರೆ ಪೋಡಿನ ಜನರ ಮೇಲೆ ಹಲ್ಲೆ ಮಾಡಿದ ಪರಿಣಾಮ ಇಂದು ಇಡೀ ಇಂಡಿಗನತ್ತ ಗ್ರಾಮವೇ ಸಾಮಾಜಿಕ ಸಂಕಷ್ಟಕ್ಕೆ ಸಿಲುಕಿ ನಲುಗುವಂತಾಗಿದೆ.

ಮೂಲ ಸೌಕರ್ಯ ನೀಡದಿರುವ ವಿಚಾರಕ್ಕೆ ಇಂಡಿಗನತ್ತ ಹಾಗೂ ಮಂದಾರೆ ಗ್ರಾಮದವರು ಕಳೆದ ಮೂರು ಬಾರಿ ನಡೆದ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡಿದರು. ಆಗ ಅಧಿಕಾರಿಗಳು ಮೂಲ ಸೌಕರ್ಯದ ಭರವಸೆ ನೀಡಿ ಮತದಾನ ಆಗುವಂತೆ ನೋಡಿಕೊಂಡಿದ್ದರು. ಆದರೆ ಆ ಭರವಸೆ ಹುಸಿಯಾಗಿದ್ದರಿಂದ ಏ.26 ರಂದು ನಡೆದ ಲೋಕಸಭಾ ಚುನಾವಣೆಯ ಮತದಾನವನ್ನು ಇಂಡಿಗನತ್ತ ಗ್ರಾಮಸ್ಥರು ಬಹಿಷ್ಕರಿಸಿದ್ದರು.

ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲವೆಂದು ಪಟ್ಟು ಹಿಡಿದು ಕುಳಿತರು. ಅಧಿಕಾರಿಗಳ ಭರವಸೆಯ ಆಟ ನಡೆಯಲಿಲ್ಲ. ಗ್ರಾಮಸ್ಥರೂ ಪಟ್ಟು ಬಿಡಲಿಲ್ಲ. ಆದರೆ ಈ ಬಾರಿ ಅಧಿಕಾರಿಗಳು ಬೇರೆಯೇ ದಾಳ ಹೂಡಿದರು. ತಲೆ ಬಿಟ್ಟು ಬಾಲ ಹಿಡಿದಂತೆ ಮಂದಾರೆ ಗ್ರಾಮಕ್ಕೆ ತೆರಳಿ ಮಂದಾರೆ ಗ್ರಾಮದವರು ಹೇಳುವ ಪ್ರಕಾರ ನೀವು ಮತದಾನ ಮಾಡದಿದ್ದರೆ ಈಗ ನಿಮಗೆ ಸಿಗುತ್ತಿರುವ ಸವಲತ್ತುಗಳು ನಿಂತು ಹೋಗುತ್ತವೆ ಎಂದು ಗ್ರಾಮದವರನ್ನು ಮತದಾನಕ್ಕೆ ಮನವೊಲಿಸಿದರು. ದುರ್ಘಟನೆಯ ಮೂಲ ಇಲ್ಲಿ ಆರಂಭವಾಯಿತು.

ಏ.26ರಂದು ನಡೆದ ಮತದಾನದ ದಿನದಂದು ಇಂಡಿಗನತ್ತ ಗ್ರಾಮಸ್ಥರು ಮತಗಟ್ಟೆಯತ್ತ ತೆರಳದೆ ಮುಗುಮ್ಮಾಗಿದ್ದರು. ಮಧ್ಯಾಹ್ನದ ನಂತರ ಇಂಡಿಗನತ್ತ ಗ್ರಾಮಕ್ಕೆ ಮತ ಹಾಕಲು ಬಂದ ಮಂದಾರೆ ಪೋಡಿನ ಗಿರಿಜನರನ್ನು ಮತ ಹಾಕಬಾರದೆಂದು ಕೆಲವರು ತಡೆದು ಗಲಾಟೆ ನಡೆಸಿದರು. ಇದು ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ಜನರು ಗ್ರಾಮದ ಸರ್ಕಾರಿ ಕಿರಿಯ ಶಾಲೆಯಲ್ಲಿ ತೆರೆದಿದ್ದ ಮತಗಟ್ಟೆ ಕೇಂದ್ರದ ಪೀಠೋಪಕರಣಗಳು, ಮತಯಂತ್ರವನ್ನು ಧ್ವಂಸ ಮಾಡಿದರು. ಈ ವೇಳೆ ಕಲ್ಲುತೂರಾಟ ನಡೆಯಿತು. ತಹಸಿಲ್ದಾರ್, ಇನ್‌ಸ್ಪೆಕ್ಟರ್‌, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಎಆರ್‌ ಒ, ಪೊಲೀಸ್ ಪೇದೆಗಳಿಗೆ ಗಾಯವಾಯಿತು. ಈ ಘಟನೆಗೆ ಕಾರಣರೆನ್ನಲಾದ ಗ್ರಾಮದ 35 ಜನರ ಮೇಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.

ತದನಂತರ ಗ್ರಾಮಕ್ಕೆ ನುಗ್ಗಿದ ಪೊಲೀಸರು ಕೈಗೆ ಸಿಕ್ಕವರನ್ನು ಎಳೆದೊಯ್ದು ಜೈಲಿಗೆ ತಳ್ಳಿದರು. ಈ ವಿಲಕ್ಷಣ ಘಟನೆಯಿಂದ ಇಡೀ ಗ್ರಾಮದಲ್ಲಿ 10 ದಿನಗಳಿಂದ ಸೂತಕದ ಛಾಯೆ ಆವರಿಸಿದೆ. ಪೊಲೀಸ್, ಕೇಸು, ಜೈಲು ಎಂಬ ಭೀತಿಯಿಂದ ಜನರು ಕಂಗಾಲಾಗಿದ್ದಾರೆ. ಇಂಡಿಗನತ್ತ ಗ್ರಾಮವು ಜನರಿಲ್ಲದೆ ಭಣಗುಡುತ್ತಿದೆ. ಈ ಗ್ರಾಮದ ಬಹುತೇಕ ಪುರುಷರೆಲ್ಲರೂ ಗ್ರಾಮವನ್ನೇ ತೊರೆದಿದ್ದಾರೆ. ಸದ್ಯ ಊರಿನಲ್ಲಿರುವುದು ವಯೋವೃದ್ಧರು, ಮಕ್ಕಳು, ಬಾಣಂತಿಯರು. ಇವರು ಊಟ ತಿಂಡಿಗೂ ಪರದಾಡುತ್ತಿದ್ದಾರೆ.

ಇನ್ನು ಇಂಡಿಗನತ್ತ ಗ್ರಾಮದವರು ನಡೆಸಿದ ಗಲಾಟೆ ಹಾಗೂ ಮಂದಾರೆ ಗ್ರಾಮದವರ ಮೇಲೆ ನಡೆದ ಹಲ್ಲೆಯಿಂದ ಹಲವರು ಜೈಲು ಸೇರಿದ್ದು, ಈ ಘಟನೆ ಎರಡು ಗ್ರಾಮಗಳ ನಡುವಿನ ಸಂಬಂಧಕ್ಕೆ ಬಿರುಕು ತಂದಿಟ್ಟಿದೆ. ಜೈಲಿನಲ್ಲಿರುವವರು ಹೊರಗೆ ಬಂದರೆ ಎಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತಾರೋ ಎಂಬ ಭೀತಿಯಲ್ಲಿ ಮೆಂದಾರೆ ಗ್ರಾಮಸ್ಥರು ದಿನ ದೂಡುತ್ತಿದ್ದಾರೆ. ಈಗ ಈ ಎರಡೂ ಗ್ರಾಮಗಳಿಗೆ ಬಂದೊದಗಿರುವ ಸಂಕಟವನ್ನು ಪರಿಹರಿಸಲು ಸರ್ಕಾರ, ಜಿಲ್ಲಾಡಳಿತ ಒಳಗಣ್ಣು ತೆರೆದು ನೋಡಬೇಕಿದೆ.

ಮಂದಾರೆ ಪೋಡು ಹೇಳತೀರದ ಪಾಡು

ಇಂಡಿಗನತ್ತ ಗ್ರಾಮದಿಂದ 2 ಕಿ.ಮೀ. ದೂರದಲ್ಲಿರುವ ಮಂದಾರೆ ಪೋಡು ಎಂಬ ಗ್ರಾಮ ಈ ಭೂಮಿಯ ಮೇಲೆ ಉಸಿರಾಡುತ್ತಿರುವುದೇ ಆಶ್ಚರ್ಯಕರ ವಿಷಯ.

ಬದುಕಿಗಾಗಿ ಗುಟುಕು ಜೀವ ಹಿಡಿದುಕೊಂಡು ಏದುಸಿರು ಬಿಡುತ್ತಿರುವ ಗ್ರಾಮವು ಸಾವು ಬದುಕಿನ ನಡುವೆ ಹೋರಾಡುತ್ತಿದೆ. 80 ಕುಟುಂಬಗಳಿರುವ ಪೋಡಿನ ಬಹುತೇಕ ಜನರಿಗೆ ಆರೋಗ್ಯ ಸಮಸ್ಯೆ ಇದೆ. ಎಲ್ಲರೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಲ್ಲಿನ ಜನರಿಗೆ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳೆಂದರೆ ಪಡಿತರ ಹಾಗೂ ಸೋಲಿಗರಿಗೆ ನೀಡುವ ಪೌಷ್ಟಿಕ ಆಹಾರ ಧಾನ್ಯ. ಇಲ್ಲಿ 4ನೇ ತರಗತಿಯ ತನಕ ಓದಿದ ವ್ಯಕ್ತಿಯೇ ಉನ್ನತ ಶಿಕ್ಷಣ ಪಡೆದಿದ್ದಾನೆಂಬ ಹೆಗ್ಗಳಿಕೆ. ಇಲ್ಲಿನ ಕುಟುಂಬಗಳಿಗೆ ವ್ಯವಸಾಯಕ್ಕೆ ಜಮೀನಿಲ್ಲ, ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಲೈಸನ್ಸ್ ಇಲ್ಲ. ರಸ್ತೆ, ನೀರು, ವಿದ್ಯುತ್‌, ವಾಸಕ್ಕೆ ತಕ್ಕಮಟ್ಟಿಗಿನ ಮನೆ ಇಲ್ಲವೇ ಇಲ್ಲ. ಕೂಲಿಯನ್ನೇ ನಂಬಿಕೊಂಡಿರುವ ಗ್ರಾಮದ ಜನರು ಪುರುಷರಿಗೆ ಸಿಗುವ 200 ರೂ. ಮಹಿಳೆಯರಿಗೆ ಸಿಗುವ 100 ರೂ. ಕೂಲಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕೆಲವರು ಹೆಚ್ಚಿನ ಕೂಲಿ (500 ರೂ.) ಸಿಗುತ್ತದೆ ಎಂಬ ಉದ್ದೇಶದಿಂದ ದೂರದ ತಮಿಳುನಾಡಿಗೆ ತೆರಳಿದ್ದಾರೆ.

ಇಂಡಿಗನತ್ತ ಗ್ರಾಮದ ತನಕ ಮಾತ್ರ ವಾಹನ ಸೌಲಭ್ಯವಿದೆ. ಅಲ್ಲಿಂದ ಕಾಲ್ನಡಿಗೆಯಲ್ಲಿ ಕಾಡು-ಮೇಡು ತುಳಿದು ಗ್ರಾಮವನ್ನು ತಲುಪಬೇಕು. ದಿನಸಿ ಸೇರಿದಂತೆ ಮನೆ ಬಳಕೆಯ ವಸ್ತುಗಳು ಬೇಕೆಂದರೆ ದೂರದ ಮಲೆ ಮಹದೇಶ್ವರ ಬೆಟ್ಟ ತಲುಪಬೇಕು. ಉಪ್ಪು ಖಾಲಿಯಾದರೂ ತರಲು ಎಂಟತ್ತು ಮೈಲಿ ದೂರ ಅಲೆಯಬೇಕು. ತಮಗೆ ಸಿಗದ ಸೌಲಭ್ಯಕ್ಕೆ ವ್ಯವಸ್ಥೆಯನ್ನು ದೂಷಿಸುವ ಬದಲು ತಮ್ಮದೇ ಪಾಡು ಎಂಬಂತೆ ಇಲ್ಲಿನ ಜನರು ಎಂಟತ್ತು ಮೈಲಿ ದೂರದಿಂದ ಅಗತ್ಯ ವಸ್ತುಗಳನ್ನು ತಲೆಯ ಮೇಲೆ ಹೊತ್ತು (ಇಂಡಿಗನತ್ತ ತನಕ ವಾಹನ ಸೌಲಭ್ಯವಿದ್ದರೂ) ನಡೆದೇ ಸಾಗುತ್ತಾರೆ. ತಮ್ಮದಲ್ಲದ ತಪ್ಪಿಗೆ ಜೀವನ ನಡೆಸಲು ಏದುಸಿರು ಬಿಡುತ್ತಿರುವ ನಿವಾಸಿಗಳು ಸರ್ಕಾರ ಸಣ್ಣ ಸೌಲಭ್ಯ ಕಲ್ಪಿಸಿದರೂ ಮಂದಾರೆ ಪೋಡನ್ನೇ ತೊರೆಯಲು ಮುಂದಾಗಿದ್ದಾರೆ

 

ವಿದ್ಯುತ್, ನೀರು, ರಸ್ತೆ ಏನೇನೂ ಇಲ್ಲದ ಕುಗ್ರಾಮ

ಮಂಡಿಯುದ್ದದ ಹೊಂಡಗಳ ರಸ್ತೆ ಬೆಟ್ಟದಿಂದ ಹೊರಟರೆ ಇಂಡಿಗನತ್ತ, ತುಳಸೀಕೆರೆ, ಮಂದಾರೆ, ಪಡಸಲನತ್ತ ಗ್ರಾಮಗಳಿಗೆ ಸಂಪರ್ಕ ರಸ್ತೆಯಿದೆ. ಆದರೆ, ಕಾಡು ಮೇಡುಗಳ ನಡುವೆ ಇರುವ ಇಕ್ಕಟ್ಟಾದ ಕಲ್ಲು, ಮಣ್ಣಿನ ಈ ರಸ್ತೆಯಲ್ಲಿ ಜೀಪುಗಳ ಮೂಲಕ ಎದ್ದು ಬಿದ್ದು, ಓಲಾಡಿಕೊಂಡು ಸಂಚರಿಸಬೇಕಿದೆ. ಗ್ರಾಮದ ಜನರು ಅನಾರೋಗ್ಯಕ್ಕೆ ಈಡಾದರೆ ಡೋಲಿ ಮೂಲಕ 8 ಕಿ.ಮೀ. ನಡೆದು ಇಲ್ಲವೇ ಯಾವುದಾದರೂ ಆಟೋ ಮೂಲಕ ಬೆಟ್ಟಕ್ಕೆ ತೆರಳಬೇಕು. ಬೆಳಿಗ್ಗೆ ಹಾಗೂ ರಾತ್ರಿ ವೇಳೆಯೂ ಆನೆ, ಚಿರತೆ, ಹುಲಿಗಳ ಭಯದಲ್ಲಿ ಡೋಲಿಯಲ್ಲಿ ಹೊತ್ತು ಸಾಗಬೇಕಿದೆ.

ವಿದ್ಯುತ್ ಇಲ್ಲ, ಸೋಲಾರ್ ದೀಪ ಉರಿಯಲ್ಲ

ಗ್ರಾಮವು ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ವ್ಯಾಪ್ತಿಗೆ ಸೇರುವುದರಿಂದ ಕಂಬಗಳ ಮೂಲಕ ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ. 2016-17ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ದೀನ ದಯಾಳ್ ಉಪಾಧ್ಯಾಯ ವಿದ್ಯುದ್ದೀಕರಣ ಯೋಜನೆಯಡಿ ಸೋಲಾರ್ ವಿದ್ಯುತ್ ಸೌಲಭ್ಯ ನೀಡಲಾಗಿತ್ತು. ಅದಕ್ಕಾಗಿ ಗ್ರಾಮದಲ್ಲಿಯೇ ಸೋಲಾರ್‌ ಘಟಕ ಸ್ಥಾಪಿಸಿ 5 ವರ್ಷಗಳ ತನಕ ಅದನ್ನು ನಿರ್ವಹಿಸಲಾಯಿತು. ಅಲ್ಲಿಯ ತನಕ ಗ್ರಾಮದಲ್ಲಿ ಚೆನ್ನಾಗಿಯೇ ಸೋಲಾರ್ ದೀಪಗಳು ಬೆಳಗುತ್ತಿದ್ದವು. ನಂತರ ಘಟಕವನ್ನು ಸೆಸ್ಕ್‌ನವರಿಗೆ ವಹಿಸಿದ ಬಳಿಕ ಘಟಕಕ್ಕೆ ಬೀಗ ಹಾಕಲಾಗಿದೆ. ಮಿಣುಕುವ ಮೊಂಬತ್ತಿ ಇಲ್ಲವೆ, ಎಣ್ಣೆ ದೀಪವೇ ಆಧಾರ. ಕತ್ತಲಾಗುತ್ತಿದ್ದಂತೆ ಗ್ರಾಮದ ಮನೆಗಳು ಕತ್ತಲೆಯೊಳಗೆ ಲೀನವಾಗುತ್ತವೆ.

800 ಜನಸಂಖ್ಯೆ: ಗುಟುಕು ನೀರು

ಇಂಡಿಗನತ್ತ ಗ್ರಾಮದಲ್ಲಿ ಕುಡಿಯುವ ನೀರಿಗೆ 3 ಬೋರ್ ವೆಲ್‌ಗಳೇ ಆಧಾರ. ಅವುಗಳಲ್ಲಿನ ನೀರು ಬತ್ತಿಹೋಗಿದ್ದು ಸಣ್ಣ ಪ್ರಮಾಣದಲ್ಲಿ ನೀರು ಬರುತ್ತದೆ. ಇಲ್ಲಿನ ಜನ ಜಾನುವಾರುಗಳಿಗೆ ನೀರು ಸಾಕಾಗುತ್ತಿಲ್ಲ. ಜಲ ಜೀವನ್‌ ಮಿಷನ್‌ನಡಿ ಮನೆ ಮನೆಗೆ ನೀರು ಪೂರೈಸಲು ಪೈಪ್‌ ಲೈನ್ ಅಳವಡಿಸಲಾಗಿದೆ. ಆದರೆ, ನೀರು ಮಾತ್ರ ಬರುತ್ತಿಲ್ಲ. ನಡೆದಾಡಲು ಕಷ್ಟಕರವಾದ ಇಂಡಿಗನತ್ತ ಗ್ರಾಮಕ್ಕೆ ತೆರಳುವ ಕೊರಕಲು ರಸ್ತೆ. ಊರಿಗೊಂದೇ ಇರುವ ಬೋರ್‌ವೆಲ್‌ನಲ್ಲಿ ಸಣ್ಣಗೆ ನೀರು. ಯಾವುದೇ ಮೂಲ ಸೌಲಭ್ಯಗಳಿಲ್ಲದ ಗೂಡಿನಂತಹ ಮನೆ.

 

ಇಂಡಿಗನತ್ತದಿಂದ ಮಕ್ಕಳನ್ನು ಶಾಲೆಗೆ ಕರೆತರುವ ಸಾಹಸಿ!

ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದ ನಡುವೆ ಇರುವ ಇಂಡಿಗನತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೆಟ್ಟ ಗುಡ್ಡಗಳ, ಕಲ್ಲು ಮಣ್ಣಿನ ಇಕ್ಕಟ್ಟಾದ ರಸ್ತೆಯಲ್ಲಿ ಜೀಪ್ ಓಡಿಸುವುದೇ ಒಂದು ಬಗೆಯ ತ್ರಾಸದಾಯಕ ಕೆಲಸ. ಆದರೆ, ಅದನ್ನು ಉತ್ಸಾಹದಿಂದಲೇ ಮಾಡುತ್ತಿದ್ದಾರೆ ವೆಂಕಟರಾಜು.

ತಾಳಬೆಟ್ಟದ ವೆಂಕಟರಾಜು ಜೀಪ್ ಚಾಲಕರಾಗಿ ಮಕ್ಕಳನ್ನು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಜನವನ ಜೀಪ್‌ ನಲ್ಲಿ ಪ್ರತಿದಿನ ಶಾಲೆಗೆ ಕರೆತರುವುದು ಮತ್ತು ವಾಪಸ್‌ ಅದೇ ಗ್ರಾಮಕ್ಕೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ. ಬೆಟ್ಟದಿಂದ 8 ಕಿ.ಮೀ. ದೂರದಲ್ಲಿರುವ ಇಂಡಿಗನತ್ತಕ್ಕೆ ಹೋಗುವಾಗ ಹಲವು ಬಾರಿ ಕಾಡಾನೆ, ಚಿರತೆ ಎದುರಾಗಿವೆ. ಜೀವ ಕೈಯಲ್ಲಿ ಹಿಡಿದು ವಾಹನ ಓಡಿಸಬೇಕಾಗುತ್ತದೆ ಎಂಬುದಾಗಿ ವೆಂಕಟರಾಜು ಹೇಳುತ್ತಾರೆ. ಸಾಮಾನ್ಯ ಬಸ್, ಲಾರಿ, ಕಾರು, ಬೈಕ್‌ಗಳು ಇಂಡಿಗನತ್ತಕ್ಕೆ ಹೋಗಲು ಸಾಧ್ಯವಿಲ್ಲ. ವಿಶೇಷವಾಗಿ ರೂಪಿಸಿರುವ ಜನವನ ಜೀಪ್ ಹೋಗುತ್ತದೆ. ಎದ್ದುಬಿದ್ದು ಹೋಗುವ ಜೀಪ್ ನಲ್ಲಿ ಕುಳಿತು ಹೋಗುವ ಜನರ ಸ್ಥಿತಿ ಹೇಳುವುದೇ ಬೇಡ. ಹೊಸಬರಿಗಂತೂ ಇದೊಂದು ಕಷ್ಟದಾಯಕ ಪ್ರಯಾಣ. ಅಲ್ಲಿನ ಜನರು ಶತಮಾನಗಳಿಂದಲೂ ಹೀಗೆಯೇ ಓಡಾಡಿಕೊಂಡು ಬದುಕುತ್ತಿದ್ದಾರೆ.

ಅವರಿಗೆ ಇದೆಲ್ಲ ಮಾಮೂಲಿಯಾಗಿದೆ. ಆದರೂ, ಸರ್ಕಾರ, ಜನಪ್ರತಿನಿಧಿಗಳು ಗ್ರಾಮಕ್ಕೆ ರಸ್ತೆ ಮಾಡಿಸಿದರೆ ಅವರ ಬದುಕು ಸುಧಾರಣೆ ಆಗಲಿದೆ ಎನ್ನುತ್ತಾರೆ ವೆಂಕಟರಾಜು.

 

ಇಂಡಿಗನತ್ತ ಗ್ರಾಮದಲ್ಲಿರುವ ಜನರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಅವರು ಗ್ರಾಮಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿ ಬಗ್ಗೆ ವರದಿ ಸಂಗ್ರಹಿಸಿ ನನ್ನ ಗಮನಕ್ಕೆ ತಂದಿದ್ದಾರೆ. ಇಲಾಖೆಯಿಂದ ಗ್ರಾಮದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ಊಟ, ತಿಂಡಿ ವ್ಯವಸ್ಥೆ, ಜಾನುವಾರುಗಳಿಗೆ ಮೇವು ಪೂರೈಕೆಗೆ ಕ್ರಮ ವಹಿಸಲಾಗಿದೆ.

-ಸಿ.ಟಿ.ಶಿಲ್ಪಾ ನಾಗ್, ಜಿಲ್ಲಾಧಿಕಾರಿ.

 

ಮತದಾನದ ದಿನ ಗಲಾಟೆ ಆದಾಗ ನಾನು ಗ್ರಾಮದಲ್ಲೇ ಇರಲಿಲ್ಲ. ಈ ವಿಷಯ ತಿಳಿದು ಮಾರನೇ ದಿನ ಗ್ರಾಮಕ್ಕೆ ಬಂದ ನನ್ನನ್ನು ಪೊಲೀಸರು ಬೆಟ್ಟದಲ್ಲಿರುವ ಠಾಣೆಗೆ ಕರೆದೊಯ್ದರು. ಬಳಿಕ ನನ್ನ ಜೊತೆ ಸಣ್ಣ ಮಗು ಇರುವ ಕಾರಣ ವಾಪಸ್ ಕರೆತಂದು ಗ್ರಾಮಕ್ಕೆ ಬಿಟ್ಟು ಹೋದರು.
-ಸುಕನ್ಯಾ, ಇಂಡಿಗನತ್ತ

 

ಗ್ರಾಮದಲ್ಲಿ ನೀರು, ರಸ್ತೆ, ವಿದ್ಯುತ್‌ ಇಲ್ಲ. ಅಡುಗೆ ಅನಿಲ ತುಂಬಿಸಲು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಬೇಕಿದೆ. ರಾಗಿ, ಅವರೆ ಬೆಳೆದು ಜೀವನ ನಡೆಸುತ್ತಿದ್ದೇವೆ. ಆದರೆ ಹಂದಿಗಳು, ಆನೆಗಳ ಕಾಟ ಜಾಸ್ತಿ. ಹಿಂದೆ ಮನೆಗಳಿಗೆ ಅಳವಡಿಸಿದ್ದ ಸೋಲಾರ್‌ ದೀಪಗಳು ಕೆಟ್ಟಿವೆ. ನಾವೇ ಸ್ವಂತಕ್ಕೆ ಹಾಕಿಸಿಕೊಂಡಿದ್ದೇವೆ. ಇಲ್ಲಿ ಯಾವ ಕಾಲಕ್ಕೆ ಸೌಕರ್ಯ ಸಿಗುತ್ತದೋ ಗೊತ್ತಿಲ್ಲ. ನಮ್ಮ ಕಷ್ಟವನ್ನು ಯಾರಿಗೆ ಹೇಳಿಕೊಳ್ಳೋಣ.
-ಮಹದೇವಮ್ಮ, ಇಂಡಿಗನತ್ತ

 

ಇಂಡಿಗನತ್ತ ಗ್ರಾಮದಲ್ಲಿ ಮತದಾನದ ದಿನ ನಡೆದ ಗಲಾಟೆ ಮತ್ತು ಮತ ಯಂತ್ರ ಧ್ವಂಸ ಪ್ರಕರಣ ಸಂಬಂಧ ಗ್ರಾಮದ 20 ಮಹಿಳೆಯರು ಮತ್ತು 26 ಪುರುಷರು ಸೇರಿದಂತೆ ಒಟ್ಟು 46 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರೆಲ್ಲರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಬೇಕಾಗಿರುವ 6 ಮಂದಿ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಗ್ರಾಮದ ಅಮಾಯಕರನ್ನು ಬಂಧಿಸಿಲ್ಲ. ಗಲಾಟೆ ನಡೆದಾಗ ಪೊಲೀಸರು ಚಿತ್ರೀಕರಿಸಿರುವ ವಿಡಿಯೋ ದೃಶ್ಯಗಳನ್ನು ಆಧರಿಸಿ ಬಂಧಿಸಲಾಗಿದೆ. 2-3 ಬಾರಿ ವಿಡಿಯೋ ವೀಕ್ಷಿಸಿ ಬಂಧನಕ್ಕೆ ಕ್ರಮ ವಹಿಸಲಾಗಿದೆ.
– ಧರ್ಮೇಂದ್ರ, ಡಿವೈಎಸ್ಪಿ, ಕೊಳ್ಳೇಗಾಲ ವಿಭಾಗ.

 

ಗಲಾಟೆಯಾದ ನಂತರ ನಮ್ಮ ಸಂಬಂಧಿಕರು ಪೊಲೀಸರ ಭಯಕ್ಕೆ ಓಡಿಹೋದರು. ಮನೆಯ ಪರಿಸ್ಥಿತಿ ತಿಳಿಯಲು ಗ್ರಾಮಕ್ಕೆ ಬಂದಾಗ ಹಾಲು ಕರೆಯುವ ಹಸು ಮೇವು ಮತ್ತು ನೀರು ಇಲ್ಲದೆ ಸೊರಗಿ ಸತ್ತು ಹೋಗಿತ್ತು. ಸುಮಾರು 20 ಸಾವಿರ ಬೆಲೆಬಾಳುವ ಹಸು. ಈ ಸಂಬಂಧ ಯಾವ ಅಧಿಕಾರಿಯೂ ನಮ್ಮ ಬಳಿ ಬಂದಿಲ್ಲ. ಪರಿಹಾರವನ್ನೂ ನೀಡಿಲ್ಲ.
– ನಾಗತಂಬಡಿ, ತುಳಸೀಗೆರೆ

 

ಮಗ ಜೈಲು ಸೇರಿದ್ದಾನೆ. ಸೊಸೆ ಬಾಣಂತಿಯಾಗಿದ್ದು, ಆಕೆಯನ್ನು ನೋಡಿಕೊಳ್ಳುವವರಿಲ್ಲ. ನನಗೆ ವಯಸ್ಸಾಗಿದ್ದು ನೀರು, ಊಟ ನೀಡಲು ಕಷ್ಟವಾಗಿದೆ. ಇಂತಹ ಘಟನೆ ಗ್ರಾಮದಲ್ಲಿ ಯಾವಾಗಲೂ ನಡೆದಿರಲಿಲ್ಲ. ನಮ್ಮ ಮನೆ ಪರಿಸ್ಥಿತಿ ಚಿಂತಾಜನಕವಾಗಿದೆ.
– ದುಂಡಮ್ಮ, ಇಂಡಿಗನತ್ತ.

andolana

Recent Posts

ಅಕ್ರಮ ವಾಸಿಗಳ ಪತ್ತೆಗೆ ಸರ್ಕಾರದಿಂದ ಹೊಸ ಕ್ರಮ: ಸಚಿವ ಜಿ.ಪರಮೇಶ್ವರ್‌ ಮಾಹಿತಿ

ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ…

21 mins ago

ಮಂಡ್ಯ ನುಡಿಜಾತ್ರೆಗೆ ಬರುವವರಿಗೆ ಭರ್ಜರಿ ಭೋಜನ ವ್ಯವಸ್ಥೆ

ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ನಾಳೆ ಅದ್ಧೂರಿ ಚಾಲನೆ ಸಿಗಲಿದ್ದು,…

35 mins ago

ಅಂಬೇಡ್ಕರ್‌ ಕುರಿತು ಅಮಿತ್‌ ಶಾ ವಿವಾದಾತ್ಮಕ ಹೇಳಿಕೆ: ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ನವದೆಹಲಿ: ಬಾಬಾಸಾಹೇಬ್‌ ಅಂಬೇಡ್ಕರ್‌ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಯ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.…

1 hour ago

ಸಿದ್ಧಗಂಗಾ ಮಠಕ್ಕೆ ನೀಡಿದ್ದ ನೋಟಿಸ್‌ ಹಿಂಪಡೆದ ರಾಜ್ಯ ಸರ್ಕಾರ

ತುಮಕೂರು: 70 ಲಕ್ಷ ಕರೆಂಟ್‌ ಬಿಲ್‌ ಕಟ್ಟುವಂತೆ ಸಿದ್ಧಗಂಗಾ ಮಠಕ್ಕೆ ನೀಡಿದ್ದ ನೋಟಿಸನ್ನು ಸರ್ಕಾರ ಹಿಂಪಡೆದಿದೆ. ಸರ್ಕಾರಿ ನೀರಾವರಿ ಯೋಜನೆಗೆ…

2 hours ago

ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಮೊಗಿಲಯ್ಯ ವಿಧಿವಶ

ಹೈದರಾಬಾದ್:‌ ಟಾಲಿವುಡ್‌ ಚಲನಚಿತ್ರ ಬಳಗಂ ಮೂಲಕ ಪ್ರಖ್ಯಾತಿ ಗಳಿಸಿದ್ದ ಜನಪ್ರಿಯ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.…

2 hours ago

ರಾಜಕೀಯ ಅಧಿಕಾರ ಹಿಡಿಯಲು ಅಂಬೇಡ್ಕರ್‌ ಹೆಸರು ಬಳಕೆ: ಸಿದ್ದರಾಮಯ್ಯ ವಿರುದ್ಧ ಆರ್‌.ಆಶೋಕ್‌ ವಾಗ್ದಾಳಿ

ಬೆಂಗಳೂರು: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಕುರಿತಂತೆ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಗೆ ರಾಜ್ಯದ ಮುಖ್ಯಮಂತ್ರಿ ಸಿಎಂ…

2 hours ago