ಚಾ.ನಗರ ಹೊರವಲಯದ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸುವ ಆಲೋಚನೆ
ಚಾಮರಾಜನಗರ: ನಗರದಲ್ಲಿ ವಿಶ್ವ ದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ಸ್ಥಾಪನೆ ಮಾಡುವುದಾಗಿ ಇತ್ತೀಚೆಗೆ ಘೋಷಣೆ ಮಾಡಲಾಗಿದ್ದು, ಇದು ಸಾಕಾರವಾದರೆ ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆ ದೊಡ್ಡ ಮಟ್ಟದಲ್ಲಿ ನಿವಾರಣೆಯಾಗಲಿದೆ ಎಂದು ಹೇಳಲಾಗುತ್ತಿದೆ.
ದೇವನಹಳ್ಳಿಯ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಕಾಲಿನ್ಸ್ ಏರೋಸ್ಪೇಸ್ ಕಂಪೆನಿಯು ಅಭಿವೃದ್ಧಿಪಡಿಸಿರುವ ಕಾಲಿನ್ಸ್ ಇಂಡಿಯಾ ಆಪರೇಷನ್ ಸೆಂಟರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಚಾಲನೆ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರದಲ್ಲಿ ವಿಶ್ವ ದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ಸ್ಥಾಪನೆ ಮಾಡುವ ಘೋಷಣೆ ಮಾಡಿದ್ದರು.
ಚಾಮರಾಜನಗರದಲ್ಲಿ ಅಂದರೆ ನಗರ-ನಂಜನಗೂಡು ಮುಖ್ಯರಸ್ತೆಯಲ್ಲಿರುವ ಬದನಗುಪ್ಪೆ -ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ನಿರ್ಮಾಣವಾಗಲಿದೆ ಎನ್ನಲಾಗಿದೆ. ಸದರಿ ಕೈಗಾರಿಕಾ ಪ್ರದೇಶದಲ್ಲಿ ಮೊದಲನೇ ಹಂತದಲ್ಲಿ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ೯೮೬ ಎಕರೆ ಪ್ರದೇಶದಷ್ಟು ಭೂಮಿಯನ್ನು ಕೈಗಾರಿಕೆಗಳವರಿಗೆ ಹಂಚಿಕೆ ಮಾಡುವ ಕಾರ್ಯ ಈಗಾಗಲೇ ಪೂರ್ಣವಾಗಿದೆ.
ಎರಡನೇ ಹಂತದಲ್ಲಿ, ೯೦೭ ಎಕರೆ ಸ್ವಾಧೀನ ಮಾಡಿದ್ದು ರೈತರಿಗೆ ಪರಿಹಾರ ನೀಡುವ ಕೆಲಸ ಪ್ರಗತಿಯಲ್ಲಿದೆ. ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ಎರಡನೇ ಹಂತದ ಈ ಭೂಮಿಯಲ್ಲೇ ತಲೆಎತ್ತಲಿದೆಯೋ ಅಥವಾ ೧,೨ನೇ ಹಂತದ ಭೂಮಿ ಸ್ವಾಧೀನ ಸ್ಥಳಕ್ಕೆ ಹೊಂದಿಕೊಂಡಂತೆ ಇನ್ನೂ ಸಾಕಷ್ಟು ಭೂಮಿ ಇದ್ದು ಅಲ್ಲಿ ಸ್ಥಾಪನೆಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್‌ಗೆ ನೂರಾರು ಎಕರೆಯಷ್ಟು ಭೂಮಿ ಬೇಕಾಗುತ್ತದೆ.ಇದರ ಒಟ್ಟು ಬಜೆಟ್ ಸುಮಾರು ೪ ಸಾವಿರ ಕೋಟಿ ರೂ. ಮೇಲಿದೆ ಎಂದು ಕೈಗಾರಿಕೋದ್ಯಮಿಯೊಬ್ಬರು ಮಾಹಿತಿ ನೀಡಿದ್ದಾರೆ. ಏರೋಸ್ಪೇಸ್‌ಗೆ ಸರ್ಕಾರ ಭೂಮಿ, ಸಬ್ಸಿಡಿಯನ್ನು ನೀಡು ತ್ತದೆ ಎಂದರೆ ಕನ್ನಡಿಗರಿಗೆ ಶೇ.೭೫ರಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ದೊರೆಯುತ್ತದೆ ಎಂಬ ಸದುದ್ದೇಶವೂ ಇದೆ. ಸರೋಜಿನಿ ಮಹಿಷಿ ವರದಿ ಪ್ರಕಾರ ಶೇ.೧೦೦ರಷ್ಟು ಡಿ ಗ್ರೂಪ್ ಉದ್ಯೋಗವೂ ಸ್ಥಳೀಯರಿಗೆ ದೊರೆಯಲಿದೆ. ಏರೋಸ್ಪೇಸ್ ತುಂಬಾ ದೊಡ್ಡ ಇಂಡಸ್ಟ್ರಿ ಆಗಿರುವುದರಿಂದ ಇದಕ್ಕೆ ಪೂರಕವಾದ ಮೈಕ್ರೋ ಇಂಡಸ್ಟ್ರಿಗಳು ಕೂಡ ಕೆಲಸ ಶುರು ಮಾಡಲಿದ್ದು ಅವುಗಳಿಂದಲೂ ಹೆಚ್ಚಿನ ಉದ್ಯೋಗ ದೊರೆಯಲಿದೆ ಎಂಬ ನಿರೀಕ್ಷೆ ಇದೆ. ಇದೆಲ್ಲದರ ಹಿನ್ನೆಲೆಯಲ್ಲಿ ಸ್ಥಳೀಯ ಜನರ ಜೀವನ ಮಟ್ಟ ಸುಧಾರಿಸುತ್ತದೆ. ಆರ್ಥಿಕ ಬೆಳವಣಿಗೆ ಆಗುತ್ತದೆ. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗೆ ಇದು ಮುಂಗಾಣಿಕೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಎರಡನೇ, ಮೂರನೇ ಮತ್ತು ನಂತರದ ನಗರಗಳಲ್ಲೂ ಇಂತಹ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಆಸಕ್ತಿ ತೋರಲು ಮುಖ್ಯ ಕಾರಣಗಳಲ್ಲಿ ಉದ್ಯೋಗ ಸೃಷ್ಟಿಯೂ ಒಂದಾಗಿದೆ.ಅದೇ ಕಾರಣಕ್ಕೆ ಸರ್ಕಾರ ಗಡಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ.
‘ಕೆಐಎಡಿಬಿ ಭೂಮಿ ಹಂಚಿಕೆ ಘೋಷಣೆ ಆಗಬಹುದು’:
ವಿಶ್ವ ದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ಗಾಗಿ ಬದನಗುಪ್ಪೆ -ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಹಂಚಿಕೆ ಅಥವಾ ಒಪ್ಪಂದ ಆಗಿದೆಯೇ ಎಂದು ಕೆಐಎಡಿಬಿ ಇಂಜಿನಿಯರ್‌ವೊಬ್ಬರನ್ನು ಕೇಳಿದಾಗ ಅಂತಹ ಯಾವುದೇ ಮಾಹಿತಿ ಇಲ್ಲ. ಈಗಷ್ಟೇ ಘೋಷಣೆ ಆಗಿರುವುದರಿಂದ ಮುಂದೆ ಈ ಸಂಬಂಧ ಆದೇಶ ಆಗಬಹುದು ಎಂದು ಪ್ರತಿಕ್ರಿಯಿಸಿದರು.
” ವಿಶ್ವ ದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ಅನ್ನು ಚಾಮರಾಜನಗರದಲ್ಲಿ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿಯವರು ಇತ್ತೀಚೆಗೆ ಘೋಷಣೆ ಮಾಡಿದ್ದಾರೆ. ಇದು ಹೈಪವರ್ ಕಮಿಟಿ ತೀರ್ಮಾನ. ಹೆಚ್ಚಿನ ಮಾಹಿತಿ ಸದ್ಯಕ್ಕೆ ನಮಗೆ ಲಭ್ಯ ಇಲ್ಲ.”
ದೊರೆರಾಜು, ಜಂಟಿ ನಿರ್ದೇಶಕರು, ಕೈಗಾರಿಕಾ ಇಲಾಖೆ, ಚಾ.ನಗರ.
” ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ಅನ್ನು ಸ್ಥಾಪನೆಮಾಡುವುದಾಗಿ ಸಿಎಂ ಹೇಳಿರುವುದು ತುಂಬಾ ಒಳ್ಳೆಯ ಬೆಳವಣಿಗೆ. ಇದರಿಂದ ನಿರುದ್ಯೋಗಸಮಸ್ಯೆ ಆದಷ್ಟು ಕಡಿಮೆಯಾಗಿ ಜನರು ಉತ್ತಮ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಲಿದೆ.”
ಕೆ.ಎಸ್.ಸೋಮಶೇಖರ್, ಗ್ರಾಪಂ ಸದಸ್ಯ, ಕೆಲ್ಲಂಬಳ್ಳಿ
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…