Andolana originals

ಮಕ್ಕಳ ಮನಸ್ಸಿಗೆ ರೆಕ್ಕೆ ಕಟ್ಟಿದ ರಂಗಭೂಮಿ

ಚಿರಂಜೀವಿ ಸಿ.ಹುಲ್ಲಹಳ್ಳಿ

ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಸಾಹಿತ್ಯ ನಿರ್ಲಕ್ಷಕ್ಕೆ ಒಳಗಾದ ಹಾಗೆಯೇ ರಂಗಭೂಮಿಯಲ್ಲೂ ‘ಮಕ್ಕಳ ರಂಗಭೂಮಿ’ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಗರಗಳಲ್ಲಿನ ಬೇಸಿಗೆ ಶಿಬಿರಗಳಲ್ಲಿ ತಯಾರಾಗುವ ಕೆಲವು ಮಕ್ಕಳ ನಾಟಕಗಳ ಪ್ರದರ್ಶನ, ಚಿಣ್ಣರ ಮೇಳದಂತಹ ರೆಪರ್ಟರಿ ಪ್ರದರ್ಶಿಸುವ ಮಕ್ಕಳ ನಾಟಕಗಳನ್ನು ಹೊರತುಪಡಿಸಿದರೆ ಮಕ್ಕಳ ರಂಗಭೂಮಿಯ ಬೆಳವಣಿಗೆ ರಂಗಭೂಮಿಯ ಒಟ್ಟಾರೆ ಬೆಳವಣಿಗೆಗೆ ಪೂರಕವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ‘ಆಂದೋಲನ’ ದಿನಪತ್ರಿಕೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಕ್ಕಳ ರಂಗಭೂಮಿಯ ಹಿನ್ನೆಲೆ, ಪ್ರಸ್ತುತತೆ ಮತ್ತು ಅಗತ್ಯವನ್ನು ಮಕ್ಕಳೇ ಹಂಚಿಕೊಂಡಿದ್ದಾರೆ.

ರಂಗಭೂಮಿಯಲ್ಲಿ ತೊಡಗಿಕೊಂಡ ಮಗು ಒಬ್ಬ ನಟನಾಗಿದ್ದರೂ ಖಂಡಿತಾ ಮಗುವಿನ ಮಾನಸಿಕ ಬದಲಾವಣೆ ಕಾಣಬಹುದು. ಕೆಲವರಲ್ಲಿ ಆ ಬದಲಾವಣೆ ಹೆಚ್ಚಿನ ಪ್ರಮಾಣದಲ್ಲಿ, ಕೆಲವರಲ್ಲಿ ಕಡಿಮೆ ಪ್ರಮಾಣದಲ್ಲಿ ಆಗಬಹುದು. ಆದರೆ, ಅಲ್ಪ ಮಟ್ಟಿನ ಸಕಾರಾತ್ಮಕ ಬದಲಾವಣೆಯಾಗುವುದಂತೂ ಸತ್ಯ. ಹೆಸರನ್ನು ಹೇಳಲು ಹಿಂಜರಿಯುವ ಮಗು ರಂಗದ ಮೇಲೆ ನಾಟಕದ ಸಂಭಾಷಣೆಯನ್ನು ಅಳುಕಿಲ್ಲದೆ ಹೇಳುವಷ್ಟು ಸಾಮರ್ಥ್ಯವನ್ನು ರಂಗಭೂಮಿ ನೀಡಲಿದೆ. ಇದರ ಜೊತೆಗೆ ಬೌದ್ಧಿಕತೆ, ಮನುಷ್ಯ ಪ್ರೇಮ, ಸಾಮಾಜಿಕ ಕಳಕಳಿಯ ಚಿಂತನೆಗಳನ್ನು ಬೆಳೆಸಲಿದೆ ಎಂಬ ಮಾತುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಯುದ್ಧಕ್ಕಿಂತ ಸೌಹಾರ್ದ ಮುಖ್ಯವೆಂದು ಕಲಿಸಿದ ರಂಗಭೂಮಿ: ವಿಜಯನಗರದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ೮ನೇ ತರಗತಿ ಓದುತ್ತಿರುವ ಸೌಹಾರ್ದನ ನುಡಿಗಳಿವು. ಕಳೆದ ೪ ವರ್ಷಗಳಿಂದ ಹಿರಿಯ ನಟ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯಲ್ಲಿ ರಂಗಭೂಮಿಯ ಅಭ್ಯಾಸದಲ್ಲಿ ತೊಡಗಿದ್ದು, ಹಲವಾರು ನಾಟಕಗಳಲ್ಲಿ ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿರುವ ಬಾಲ ಪ್ರತಿಭೆ.

೪ನೇ ತರಗತಿಯಲ್ಲಿ ನಾನು ಆನ್‌ಲೈನ್‌ನಲ್ಲಿ ತರಬೇತಿ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದೆ. ಆ ನಂತರ ರಂಗ ಶಿಬಿರದಲ್ಲಿ ಸೇರ್ಪಡೆಗೊಂಡು ನಟನೆ, ಗಾಯನ, ಯಕ್ಷಗಾನ, ಏಕಪಾತ್ರಾಭಿನಯಗಳನ್ನು ನಿರರ್ಗಳವಾಗಿ ಮಾಡುತ್ತೇನೆ ಎಂದು ಮುಗ್ಧ ಮಾತುಗಳಲ್ಲಿ ಹಂಚಿಕೊಂಡರು. ಬಹುತೇಕ ಮಕ್ಕಳಲ್ಲಿರುವ ‘ಸ್ಟೇಜ್ ಫಿಯರ್’ ಹೋಗಲಾಡಿಸಿ ತಾವು ಆಡುವ ಮಾತುಗಳಲ್ಲಿ ಸ್ಪಷ್ಟತೆ ಕೊಡಲಿದೆ. ದೊಡ್ಡವರೊಂದಿಗೆ ಹೇಗೆ ಬೆರೆಯಬೇಕು, ಮೊಬೈಲ್ ಬಳಕೆಯಿಂದ ದೂರ ಇರುವುದನ್ನು ರಂಗಭೂಮಿ ಕಲಿಸಲಿದೆ. ಏಕಾಗ್ರತೆ ಬೆಳೆಸುವ ಜೊತೆಗೆ ಓದಿನ ಆಸಕ್ತಿ ಮೂಡಿಸಲಿದೆ.

ರಂಗಗೀತೆಗಳನ್ನು ಹಾಡುವುದರಿಂದ ಸಂಗೀತ ಅಭಿರುಚಿ ಬೆಳೆಸಲಿದೆ. ಜಾನಪದ ಹಾಡುಗಳ ಬಗೆಗೂ ನಮ್ಮ ತಿಳಿವಳಿಕೆ ಮೂಡಲಿದೆ. ಒಂದೊಂದು ವರ್ಷವೂ ಮಕ್ಕಳು ಒಂದೊಂದು ತಪ್ಪುಗಳನ್ನು ತಿದ್ದಿಕೊಳ್ಳುವತ್ತಾ ಬೆಳೆಸಲಿದೆ. ಕೇವಲ ರಂಗ ಶಿಬಿರಕ್ಕೆ ಮಕ್ಕಳು ಸೀಮಿತವಾಗಬಾರದು. ನಿರಂತರ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಎಂದು ಸೌಹಾರ್ದ ಹೇಳಿದರು. ‘ಆಲಿಬಾಬಾ ಮತ್ತು ೪೦ ಕಳ್ಳರು’ ನಾಟಕದಲ್ಲಿ ಮುಖ್ಯ ಪಾತ್ರ, ವೈದೇಹಿ ಅವರ ರಚನೆ ‘ನಾಯಿ ಮರಿ’ ನಾಟಕದಲ್ಲಿ ಮುಸ್ತಾ- ಪಾತ್ರ, ಜಯತೀರ್ಥ ಅವರ ‘ಹೆಬ್ಬಾಲ’ ನಾಟಕದಲ್ಲಿ ಗಂಡನ ತಮ್ಮನ ಪಾತ್ರ, ಸಿದ್ದಲಿಂಗಯ್ಯ ಅವರ ‘ಏಕಲವ್ಯ’ದಲ್ಲಿ ಏಕಲವ್ಯ ಪಾತ್ರ ಮತ್ತು ‘ಮಕ್ಕಳ ಮಹಾಭಾರತ’ ನಾಟಕದಲ್ಲಿ ಸೂತ್ರಧಾರನ ಪಾತ್ರ ಮಾಡಿದ್ದೇನೆ. ಹೀಗಾಗಿ ನಟನೆಯ ಅನುಭವ ಚೆನ್ನಾಗಿದೆ. ಇತ್ತೀಚೆಗೆ ಅಭಿನಯಿಸಿದ ‘ಝೇಂಕಾರ’ ನಾಟಕವೂ ಯುದ್ಧದ ಪರಿಣಾಮ ಮತ್ತು ಸಾವು-ನೋವು ನನ್ನ ಮನಕ್ಕೆ ತಲುಪಿಸಿತು. ಯುದ್ಧ ಯಾರಿಗೂ ಒಳ್ಳೆಯದಲ್ಲ ಎಂಬುದು ನಾಟಕದಿಂದ ತಿಳಿಯಿತು. ‘ಭಾಷಾ ಪಂಚಕ’ ನಾಟಕದಲ್ಲಿ ಯುದ್ಧಕ್ಕೆ ಽಕ್ಕಾರ ಕೂಗುವ ಘೋಷಣೆಗಳಿದ್ದವು. ಪ್ರಸ್ತುತ ಸಮಾಜಕ್ಕೆ ಈ ಸಂದೇಶ ಬೇಕಾಗಿದೆ ಎಂದು ಪ್ರಬುದ್ಧ ಮಾತುಗಳನ್ನಾಡಿದರು.

ಅಭಿನಯ ಪುರಸ್ಕಾರ: ಎಂ.ಡಿ.ಕೌಶಿಕ್ ಅವರ ‘ಕೊನೆಯ ನಿಲ್ದಾಣ’ ಚಲನಚಿತ್ರದಲ್ಲಿ ಅಭಿನಯ ಹಾಗೂ ‘ಶಿವ’ ಕಿರುಚಿತ್ರದಲ್ಲಿ ಅಭಿನಯ.‘ಶಿವ’ ಪಾತ್ರದ ಅಭಿನಯಕ್ಕೆ ೨೦೨೩ರಲ್ಲಿ ಮೈಸೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉತ್ತಮ ಬಾಲನಟ ಪ್ರಶಸ್ತಿಯೂ ಸೌಹಾರ್ದ ಅವರಿಗೆ ದೊರಕಿದೆ.

ವೈಜ್ಞಾನಿಕ ಚಿಂತನೆ ಬೆಳೆಸಿದ ರಂಗಭೂಮಿ: ನಿಸರ್ಗ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಸರ್ಗ, ನಾಟಕ ಮತ್ತು ರಂಗಭೂಮಿಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಯಾವ ವೃತ್ತಿಯೂ ಕೀಳಲ್ಲ ಎಂಬುದನ್ನು ಕಲಿಸಿತು. ಏಕಾಗ್ರತೆ ಮತ್ತು ಜೀವನದಲ್ಲಿ ಶಿಸ್ತು ಮುಖ್ಯ. ಮೂಢನಂಬಿಕೆಗಳ ವಿರುದ್ಧ ಜಾಗೃತಿ, ಪರಿಸರ ಕಾಳಜಿ, ವೈಜ್ಞಾನಿಕ ಚಿಂತನೆಗಳನ್ನು ನಾಟಕ ಕಲಿಸಿದೆ. ನಾನು ಕಳೆದ ಮೂರು ವರ್ಷಗಳಿಂದ ಶಾಲೆಯಲ್ಲಿ ರಂಗ ತರಗತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ಶಿಕ್ಷಕರಾದ ಸಂತೋಷ ಗುಡ್ಡಿಯಂಗಡಿ ನಿರ್ದೇಶನದಲ್ಲಿ ಹಲವಾರು ನಾಟಕಗಳನ್ನು ಮಾಡಿದ್ದೇನೆ. ಅದರಲ್ಲಿ ಪ್ರಮುಖವಾಗಿ ನನ್ನ ಮೇಲೆ ಪರಿಣಾಮ ಬೀರಿದ ಎರಡು ನಾಟಕಗಳೆಂದರೆ ‘ದೆವ್ವವಲ್ಲ ಸಿಓ೨’ ಶೀರ್ಷಿಕೆಯ ಮೂಢನಂಬಿಕೆಯ ವಿರುದ್ಧದ ನಾಟಕ. ನಂತರ ಸ್ವೀಡನ್ ದೇಶದ ಪರಿಸರವಾದಿ ಗ್ರೆಟಾ ಥನ್ ಬರ್ಗ್ ಹೋರಾಟದ ‘ಹೌ ಡೇರ್ ಯೂ’ ನಾಟಕಗಳು. ಇದರಿಂದ ನನ್ನ ಅಲೋಚನಾ ಕ್ರಮ ಬದಲಾಯಿತು. ವಿಶೇಷವಾಗಿ ಮೂಢನಂಬಿಕೆಯ ಮೇಲೆ ಮತ್ತು ಪರಿಸರದ ಮೇಲೆ ಆಗುತ್ತಿರುವ ವೈಪರೀತ್ಯಗಳನ್ನು ತಿಳಿಸಿಕೊಟ್ಟಿತು. ಪಠ್ಯಗಳಲ್ಲಿರುವುದಷ್ಟೇ ವಿಜ್ಞಾನ ಎಂದು ತಿಳಿದಿದ್ದ ನಮಗೆ ವಿಜ್ಞಾನ ನಾಟಕವನ್ನೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದು ನಮ್ಮ ಶಿಕ್ಷಕರು. ಈಗ ನಾಟಕದ ಮೂಲಕವೇ ಇಡೀ ದಕ್ಷಿಣ ಭಾರತದ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ರಂಗ ಶಿಕ್ಷಣ ಬಹಳ ಅವಶ್ಯವಾಗಿದೆ. ಮಕ್ಕಳ ಓದಿಗೂ ರಂಗ ಶಿಕ್ಷಣ ಬಹಳ ಅನುಕೂಲವಾಗಲಿದೆ.

ಜೀವನಾನುಭವ ಕಲಿಸಿದ ರಂಗಭೂಮಿ: 

ಕಳೆದ ೧೦ ವರ್ಷಗಳಿಂದ ರಂಗ ಅಭ್ಯಾಸದಲ್ಲಿ ನಿರತನಾಗಿರುವೆ. ನನ್ನ ಜೀವನಾನುಭವವನ್ನು ರಂಗಭೂಮಿಯೇ ಕಲಿಸಿ ಕೊಡುತ್ತಿದೆ. ಭಾಷೆ ಮೇಲಿನ ಹಿಡಿತ ಜನರೊಂದಿಗೆ ಬೆರೆಯುವ ವಿಶ್ವಾಸವನ್ನು ಕಲಿಸಿದೆ. ನನ್ನ ತಾಯಿ ಕೂಡ ರಂಗಭೂಮಿ ಕಲಾವಿದರಾಗುವುದರಿಂದ ವಿಶೇಷ ಆಸಕ್ತಿ ಹೊಂದಿದ್ದೇನೆ. ಇಲ್ಲಿಯವರೆಗೂ ಹಲವಾರು ಪಾತ್ರಗಳಿಗೆ ಬಣ್ಣ ಹಚ್ಚಿ ರಂಗಾಸಕ್ತರ ಮೆಚ್ಚುಗೆ ಪಡೆದುಕೊಂಡಿರುವೆ.”

-ಪರಂ ಸ್ವಾಮಿ, ೧೦ನೇ ತರಗತಿ ವಿದ್ಯಾರ್ಥಿ, ಜೆಎಸ್‌ಎಸ್ ಪಬ್ಲಿಕ್ ಶಾಲೆ, ಸಿದ್ಧಾರ್ಥನಗರ

ಅಶಿಸ್ತಿನಿಂದಿದ್ದ ನನಗೆ ಶಿಸ್ತು ಕಲಿಸಿದ ರಂಗಭೂಮಿ: ರಂಗ ಶಿಕ್ಷಣ ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ದೊರೆಯುವಂತಾಗಬೇಕು. ನಾಟಕಗಳಲ್ಲಿ ಪಾತ್ರಗಳನ್ನು ಮಾಡುವ ಮುಂಚೆ ನಾನು ಅಶಿಸ್ತಿನಿಂದ ಇದ್ದೆ. ನಾಟಕಗಳು ನನಗೆ ಶಿಸ್ತನ್ನು ಕಲಿಸಿದವು. ಒಂದು ಪುಸ್ತಕ ಇಟ್ಟುಕೊಳ್ಳುವುದರಿಂದ ಹಿಡಿದು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಿದ್ದೇನೆ. ಕತ್ತೆ ಕಿವಿ ನಾಟಕದಲ್ಲಿ ಪರಿಸರಕ್ಕೆ ಮಾರಕವಾದ ಅಂಶಗಳನ್ನು ಅರಿತುಕೊಂಡೆ. ದಕ್ಷಿಣ ಭಾರತ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಯಲ್ಲಿಯೂ ಗುರುತಿಸಿಕೊಂಡಿದ್ದೇವೆ. ನಮ್ಮ ಗುರುಗಳಾದ ಸಂತೋಷ ಸರ್ ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಅವರು ನಮ್ಮ ಗುರುಗಳಾಗಿರುವುದು ನಮ್ಮ ಪುಣ್ಯ.”

– ವಿ.ಎನ್.ಭರತ್, ಕುಪ್ಪರವಳ್ಳಿ, ಸರ್ಕಾರಿ ಪ್ರೌಢಶಾಲೆ

ಓದಿಗೆ ಅನುಕೂಲ: ರಜೆ ಅವಧಿಯಲ್ಲಿ ಮಕ್ಕಳ ಲೋಕ ಮತ್ತು ನಟನ ರಂಗಶಾಲೆಯಲ್ಲಿ ನಡೆಯುವ ಶಿಬಿರದಲ್ಲಿ ಭಾಗವಹಿಸುತ್ತೇನೆ. ಶಿಬಿರದ ಅವಧಿಯಲ್ಲಿ ಕಲಿತದ್ದು, ಓದಿಗೆ ಬಹಳಷ್ಟು ಅನುಕೂಲವಾಗಿದೆ. ರಂಗ ಗೀತೆಗಳು, ಮಣ್ಣಿನಿಂದ ಮಾಡುವ ಆಕೃತಿಗಳು, ಮುಖವಾಡಗಳು, ನಾಟಕದಲ್ಲಿ ಅಭಿನಯಿಸುವುದು ಬಹಳ ಖುಷಿ ಕೊಟ್ಟಿದೆ. ನಿಂದಕ ಎನ್ನುವ ಪಾತ್ರದಲ್ಲಿ ನಾನು ನಟಿಸಿದ್ದೆ. ಶಾಲೆಯಲ್ಲಿ ಕುಳಿತು ಕಲಿಯುವುದನ್ನು ರಂಗ ಶಿಬಿರದಲ್ಲಿ ಆಟವಾಡುತ್ತಾ ಕಲಿಯಬಹುದು. ಹೊಸ ಸ್ನೇಹಿತರು ನನಗೆ ಸಿಕ್ಕರು.

– ವರ್ಷಿತ್, ೬ನೇ ತರಗತಿ, ಮೈಸೂರು

 

ಆಂದೋಲನ ಡೆಸ್ಕ್

Recent Posts

ಪೆಟ್ರೋಲ್‌,ಡೀಸೆಲ್‌ ಬೆಲೆ ಏರಿಕೆ ಆತಂಕದ ನಡುವೆ ಗುಡ್‌ ನ್ಯೂಸ್‌ ನೀಡಿದ ಕೇಂದ್ರ

ಹೊಸದಿಲ್ಲಿ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಆತಂಕ ಸೃಷ್ಠಿಯಾಗಿರುವ ನಡುವೆ ಕೇಂದ್ರ…

5 mins ago

ಇರಾನ್‌ ಮೇಲಿನ ದಾಳಿಗೆ ಮತ್ತೆ 10 ದಿನ ಗಡುವು ವಿಸ್ತರಿಸಿದ ಟ್ರಂಪ್!‌

ವಾಷಿಂಗ್ಟನ್‌ : ಇರಾನ್‌ ಕೋರಿಕೆಯ ಮೇರೆಗೆ ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು 10 ದಿನ ಮುಂದೂಡಿದ್ದೇವೆ ಎಂದು ಅಮೆರಿಕ ಅಧ್ಯಕ್ಷ…

34 mins ago

IPL 2ನೇ ಹಂತದ ವೇಳಾಪಟ್ಟಿ ಬಿಡುಗಡೆ

ಮುಂಬೈ : ಬಿಸಿಸಿಐ ಮಾರ್ಚ್ 26ರ ಗುರುವಾರದಂದು ಬಹುನಿರೀಕ್ಷಿತ 19 ನೇ ಸೀಸನ್ ಐಪಿಎಲ್‌ನ ಎರಡನೇ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ.…

1 hour ago

ಮೈಸೂರು ವಿಶ್ವವಿದ್ಯಾಲಯ : 53.76 ಕೋಟಿ ರೂ. ವಿತ್ತೀಯ ಕೊರತೆ ಬಜೆಟ್

ಮೈಸೂರು ವಿವಿಯಲ್ಲಿ ಆರ್ಥಿಕ ಶಿಸ್ತು ಇಲ್ಲ ; ಕೋವಿಡ್ ನಂತರದಲ್ಲಿ ಅನುದಾನದ ಕೊರತೆ : ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮೈಸೂರು :…

1 hour ago

ಓದುಗರ ಪತ್ರ: ವಿ…ರಾಮ ..!

ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…

6 hours ago

ಓದುಗರ ಪತ್ರ: ಗಿಡಗಳನ್ನು ನೆಟ್ಟು ಪರಿಸರ ಉಳಿಸಿ

ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…

6 hours ago