Andolana originals

ಜೀತಕ್ಕಿದ್ದ ವ್ಯಕ್ತಿ ಸಮುದಾಯದ ಹಕ್ಕಿಗೆ ಹೋರಾಡಿದ ಯಶೋಗಾಥೆ

ಡಾ.ಎಸ್‌.ಶ್ರೀಕಾಂತ್‌ 

೪ನೇ ತರಗತಿಗೆ ಓದು ನಿಲ್ಲಿಸಿ, ಜೀತಕ್ಕೆ ಸೇರಿದ ಹುಡುಗನೊಬ್ಬ, ಕಾಡಿನ ಕಣ್ಣೊಳಗೇ ಬೆಳೆಯುತ್ತಾ, ತನ್ನ ಆದಿವಾಸಿ ಸಮುದಾಯದ ಜನರ ನೋವು, ಸಂತಸಗಳಿಗೆ ಸ್ಪಂದಿಸಿದ್ದಲ್ಲದೆ, ಇಡೀ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ಮಾಡಿ ರಾಷ್ಟ್ರಮಟ್ಟದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಹೆಸರು ಸೋಮಣ್ಣ.

ನಾಗರಹೊಳೆ ಅಭಯಾರಣ್ಯ ಪಶ್ಚಿಮ ಘಟ್ಟ ಪ್ರದೇಶದ ಪ್ರಮುಖ ಆಕರ್ಷಣೆ. ಹುಣಸೂರಿನ ಕಚುವಿನಹಳ್ಳಿ ಅರಣ್ಯ ಇದರ ಭಾಗ. ಈ ಅರಣ್ಯದಲ್ಲಿ ಸೋಮಣ್ಣರ ತಾತ ಜೀವಿಸಿ ಬದುಕು ನಡೆಸಿದವರು. ಸೋಮಣ್ಣರ ತಂದೆ ಕುನ್ನಯ್ಯ ಎನ್.ಬೇಗೂರಿನ ದೇವಲಾಪುರದ ಬಸಮ್ಮ ಅವರ ಜತೆ ಮದುವೆ ಆಗಿ ೮ ಮಕ್ಕಳ ಹಡೆದರು. ಸೋಮಣ್ಣ ೮ನೆಯವರು. ತಂದೆ ಕುನ್ನಯ್ಯ, ಸೋಮಣ್ಣ ೪ ವರ್ಷದವರಿದ್ದಾಗ ತೀರಿಕೊಂಡರು. ಜತೆಗೆ ಸೋಮಣ್ಣನ ಒಡಹುಟ್ಟಿದ ಮೂವರು ತೀರಿಕೊಂಡರು.

ಮಕ್ಕಳನ್ನು ಸಾಕುವ ಹೊಣೆ ತಾಯಿ ಬಸಮ್ಮನದಾಯಿತು. ಸೋಮಣ್ಣ ೬ ವರ್ಷದವರಿದ್ದಾಗ ಶಾಲೆಗೆ ಸೇರಿಸಿದರು. ಮೊತ್ತ ಹಾಡಿಯ ಆಲ್ತಾಳಹುಂಡಿಯಲ್ಲಿ ಜೀವನ ಸಾಗಿತ್ತು. ತಾಯಿ ಕೋಟೆ ಹತ್ತಿರ ಹಾಲಿಗಾಗಿ ಹಸು ಸಾಕುತ್ತಿದ್ದವರಿಗೆ ಹಸಿರು ಹುಲ್ಲಿನ ಹೊರೆ ತಂದು ಕೊಡುತ್ತಿದ್ದರು.

ಸೋಮಣ್ಣ ೪ನೇ ತರಗತಿಯಲ್ಲಿ ಇದ್ದಾಗ ಒಂದುದಿನ, ಶಾಲೆಯಿಂದ ಮನೆಗೆ ಬರುವಾಗ ರಸ್ತೆಯಲ್ಲಿ ದನಗಳು ಹಸಿರು ಹುಲ್ಲು ತಿನ್ನುತ್ತಿದ್ದವು. ಸಮೀಪದಲ್ಲೇ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಗಾಬರಿಗೊಂಡ ಸೋಮಣ್ಣ ಅಳುತ್ತಲೇ ದನಗಳನ್ನು ಅಟ್ಟಿ, ತಾಯಿಯನ್ನು ಎತ್ತಿ ಕೂರಿಸಿದರು. ತಾಯಿ ಸುಧಾರಿಸಿಕೊಂಡ ಬಳಿಕ ಮೆತ್ತಗೆ ನಡೆಸಿಕೊಂಡು ಮನೆಗೆ ಕರೆದೊಯ್ದರು. ಅಂದಿನಿಂದ ಸೋಮಣ್ಣ ಶಾಲೆಗೆ ಹೋಗಲಿಲ್ಲ. ತಾನೇ ಜೀತಕ್ಕೆ ಸೇರಿ ಅಮ್ಮನನ್ನು ಸಾಕಲು ಪ್ರಾರಂಭಿಸಿದರು. ರೈತರ ಮನೆಯಲ್ಲಿ ವ್ಯವಸಾಯ ಕಲಿತರು. ೧೬.೫೦ ರೂ. ವಾರ್ಷಿಕ ಜೀತದ ಮೊತ್ತ! ರಾಜ್‌ಕುಮಾರ್ ಅಭಿನಯದ ಸಿನಿಮಾ ನೋಡಲು ೫೦ ಪೈಸೆ ತನಗೆ. ಉಳಿದ ಹಣ ಅಮ್ಮನಿಗೆ. ೧೦ ಪೈಸೆ ಖರ್ಚಿನಲ್ಲಿ ನೆಲದ ಮೇಲೆ ಕುಳಿತು ಸಿನಿಮಾ ನೋಡಿ ಸವಿಯುವುದು.

ದೇವರಾಜ ಅರಸು ಅವರ ಜೀತ ವಿಮುಕ್ತಿ ಕಾಯ್ದೆ ಅನ್ವಯ ದಲಿತ ಸಂಘರ್ಷ ಸಮಿತಿ ಜೀತ ಬಿಡಿಸಿತು. ವ್ಯವಸಾಯ ಕಲಿತಿದ್ದ ಸೋಮಣ್ಣ ಭೂಮಿ ಹುಡುಕಾಟ ಪ್ರಾರಂಭಿಸಿದರು. ಬೂದನೂರು ಬಳಿ ನೆಲಕಾಡು ಕಡಿದು ಭೂಮಿ ಹಸನು ಮಾಡಿದರು. ಎನ್.ಬೇಗೂರು ಮೂಲದ ಚಾಮಯ್ಯ ಪುಟ್ಟಮ್ಮ ದಂಪತಿ ಮಗಳು ರಾಜಮ್ಮನನ್ನು ಮದುವೆಯಾಗಿ ಮೊತ್ತ ಹಾಡಿಯಲ್ಲಿ ನೆಲೆಸಿದರು.

ಹುಣಸೂರಿನ ಹಾಡಿಗಳಲ್ಲಿ ಡೀಡ್ ಸಂಸ್ಥೆಯ ಪ್ರೇರಣೆಯಿಂದ ಸ್ಥಾಪನೆಗೊಂಡಿದ್ದ ಬುಡಕಟ್ಟು ಕೃಷಿಕರ ಸಂಘ ಎಚ್.ಡಿ.ಕೋಟೆಗೂ ಹಬ್ಬಿತು. ೧೯೮೩ ರಲ್ಲಿ ಮೊದಲ ತಾಲ್ಲೂಕು ಅಧ್ಯಕ್ಷರಾಗಿ ಮೊತ್ತ ಬಸವರಾಜ್ ಜವಾಬ್ದಾರಿ ನಿರ್ವಹಿಸಿದರು. ನಂತರ ಸೋಮಣ್ಣ ೧೯೮೫ ರಲ್ಲಿ ಎಚ್.ಡಿ.ಕೋಟೆ ತಾಲ್ಲೂಕು ಅಧ್ಯಕ್ಷರಾಗಿ ಸೋಮಣ್ಣ ಆಯ್ಕೆಯಾದರು. ಫೆಡಿನಾ ವಿಕಾಸ ನೆರವು ಪಡೆದು ಭೂ ಹೋರಾಟ ಪ್ರಾರಂಭಿಸಿದರು. ೧೯೮೭ರಲ್ಲಿ ಅಂದಿನ ಮೈಸೂರು ಜಿಲ್ಲಾಧಿಕಾರಿ ವಿ.ಪಿ.ಬಳಿಗಾರ್ ಅವರ ಬೆಂಬಲ ಪಡೆದು ಹಾಗೂ ನಂತರ ಬಂದ ತ.ಮ.ವಿಜಯಭಾಸ್ಕರ್ ಸೇರಿದಂತೆ ಹಲವು ಗಣ್ಯರ ನೆರವಿನಿಂದ ಬುಡಕಟ್ಟು ಕೃಷಿಕರ ಸಂಘ (ಬಿಕೆಎಸ್)ದ ಭೂ ಹೋರಾಟ ಫಲ ನೀಡಿತು. ಆ ಸಮಯದಲ್ಲಿ ಕೆಎಸ್‌ಬಿ ಕಾರ್ಯದರ್ಶಿಯಾಗಿದ್ದ ಬಿ.ಎಸ್.ವಿಠಲ್ ಜತೆಗೂಡಿ ಕಾಡಿನಿಂದ ವನ್ಯ ಜೀವಿಗಳ ಸಂರಕ್ಷಣೆ ಹೆಸರಿನಲ್ಲಿ ಹೊರಹಾಕಿದ್ದ ಬಂಡೀಪುರ, ನಾಗರಹೊಳೆ ಅಭಯಾರಣ್ಯಗಳ ಕೋಟೆ ಭಾಗದ ೫,೦೦೦ ಕುಟುಂಬಗಳ ಪೈಕಿ ೧,೫೦೦ ಕುಟುಂಬಗಳಿಗೆ ಸ್ವಲ್ಪ ಸ್ವಲ್ಪ ಭೂಮಿ ಕೊಡಿಸಲು ಪ್ರಾರಂಭಿಸಿದ ಹೋರಾಟಕ್ಕೆ ಮುಂದಾಳತ್ವ ವಹಿಸಿದರು ಸೋಮಣ್ಣ.

೧೯೯೯ರಲ್ಲಿ ಡೀಡ್ ಸಂಸ್ಥೆಯು ಕರ್ನಾಟಕ ಹೈ ಕೋರ್ಟ್ ಮೆಟ್ಟಿಲೇರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ಸಲ್ಲಿಸಿ, ‘ಕಾಡಿನಿಂದ ಹೊರಹಾಕಿದ್ದವರಿಗೆ ಕಾಡು ಕೊಡಿ, ಇಲ್ಲ ಪುನರ್ವಸತಿ ನೀಡಿ’ ಎಂದು ಮನವಿ ಮಾಡಿತ್ತು. ಆಗ ಕೋಟೆ ಬುಡಕಟ್ಟು ಕೃಷಿಕರ ಸಂಘ ಕೂಡ ಅರ್ಜಿ ದಾರರಾಗಿ ಸೇರಿಕೊಂಡು ೧೦ ವರ್ಷಗಳು ಸೆಣಸಾಟನಡೆಸಿತು. ೨೦೦೯ರಲ್ಲಿ ಆದಿವಾಸಿಗಳ ಪರ ತೀರ್ಪು ಬಂದು ಕಾಡಿನಿಂದ ಹೊರಹಾಕಿರುವ ೩,೪೧೮ ಕುಟುಂಬಗಳಿಗೆ ಪುನರ್ವಸತಿ ನೀಡಲು ಸರ್ಕಾರಕ್ಕೆ ಆದೇಶಿಸಿತು.

ಸೋಮಣ್ಣ ಅರಣ್ಯ ಹಕ್ಕು ಹೋರಾಟದಲ್ಲಿಯೂ ಪಾಲ್ಗೊಂಡು ೨೦೦೬ರಲ್ಲಿ ಜಾರಿಗೆ ಬಂದ ಅರಣ್ಯ ಹಕ್ಕು ಕಾಯ್ದೆ ಅನ್ವಯ ಕಾಕನಕೋಟೆ ಅರಣ್ಯದಲ್ಲಿ ವಾಸವಿರುವ ೬೦೦ ಆದಿವಾಸಿ ಕುಟುಂಬಗಳಿಗೂ ಅರಣ್ಯ ಹಕ್ಕು ಪಡೆಯಲು ಬೆಂಬಲವಾಗಿ ನಿಂತರು. ೨೦೨೪ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು. ಕಾಡಿನಿಂದ ಹೊರಗೆ ಹಾಕಿರುವ ಹುಣಸೂರು, ಎಚ್.ಡಿ.ಕೋಟೆ, ಸರಗೂರು, ವಿರಾಜಪೇಟೆ ಹಾಗೂ ಪಿರಿಯಾಪಟ್ಟಣದ ಸಾವಿರಾರು ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ನೀಡದೆ, ಕಾನೂನಿನ ಪ್ರಕಾರ ಅರಣ್ಯ ಹಕ್ಕು ನೀಡದೆ, ಹೈಕೋರ್ಟ್ ಆದೇಶ ಇದ್ದರೂಪುನರ್ವಸತಿ ನೀಡದೆ ಆದಿವಾಸಿಗಳ ಬದುಕು ಕಡೆಗಣಿಸಲ್ಪಟ್ಟಿರುವುದು ನೋವಿನ ಸಂಗತಿ. ಆದಿವಾಸಿಗಳ ಭೂಮಿ ಹಕ್ಕು, ಅರಣ್ಯ ಹಕ್ಕು, ಸ್ವಯಂ ಆಡಳಿತ ಹಕ್ಕು ಗೌರವಿಸಲ್ಪಟ್ಟು ಸರ್ಕಾರ ಹಕ್ಕು ನೀಡಿದರೆ ನನಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಗೆ ಗೌರವ ಎನ್ನುತ್ತಾರೆ ಸೋಮಣ್ಣ.

ಸೋಮಣ್ಣ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವಿಭಜಿತ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕನ್ನು ೬ ಭಾಗಗಳಾಗಿ ವಿಂಗಡಿಸಿ ಕ್ಷೇತ್ರಕ್ಕೊಬ್ಬ ಅಧ್ಯಕ್ಷನನ್ನು ನೇಮಿಸಿದರು. ಸೋಮಣ್ಣ ೧೧೯ ಹಾಡಿಗಳಿಗೂ ತಲುಪಿ ಸರ್ಕಾರಿ ಯೋಜನೆಗಳು ಅದಿವಾಸಿಗಳಿಗೆ ತಲುಪಲು ಜನಸಂಪರ್ಕ ಸಭೆಗಳನ್ನು ಏರ್ಪಡಿಸಿದರು. ಫೆಡಿನಾ ವಿಕಾಸದ ಬೆಂಬಲ ಪಡೆದು, ಹೊಸಬರನ್ನು ಅಧ್ಯಕ್ಷರಾಗಿಸಿ ಬೆಂಬಲ ನೀಡಿದರು. ಚಿಕ್ಕಯ್ಯ, ರಾಜಣ್ಣ, ರಾಜು, ಕೆಂಚಯ್ಯ ಮುಂತಾದವರು ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಮತ್ತಿ ತರ ಸೇವಾ ಸಂಸ್ಥೆಗಳು, ಅಧಿಕಾರಿಗಳ ಸಹಕಾರ ಪಡೆದು ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾದರು. ಜಿಲ್ಲಾ ಅರಣ್ಯ ಹಕ್ಕು ಸಮಿತಿ, ಎಸ್‌ಸಿ/ಎಸ್‌ಟಿ ಹಿತರಕ್ಷಣಾ ಸಮಿತಿ, ಮೂಲ ನಿವಾಸಿ ಬುಡಕಟ್ಟು ಜಿಲ್ಲಾ ಸಮಿತಿಗಳಲ್ಲಿ ಜಿಲ್ಲಾಧಿಕಾರಿಗಳ ಬೆಂಬಲ ಪಡೆದು ಕೆಲಸ ನಿರ್ವಹಿಸಿದರು. ಡೀಡ್ ಸಂಸ್ಥೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾಗಿ, ರಾಜ್ಯ ಮೂಲ ನಿವಾಸಿ ಸಂಘಟನೆಯ ಸಂಚಾಲಕರಾಗಿ ಜಾಜಿ ತಿಮ್ಮಯ್ಯ, ಕೊಡಗಿನ ಜೆ.ಪಿ. ರಾಜು, ಚಾಮರಾಜನಗರದ ಮುತ್ತಯ್ಯ ಇವರೊಡನೆ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡರು. ನಂಜುಂಡಯ್ಯ, ಸಾಗರ್ ಮುಂತಾದವರ ನಿಕಟ ಸಹವಾಸದಲ್ಲಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ನೆಹರು ಯುವ ಕೇಂದ್ರದ ಮುಂದಾಳತ್ವ ದಲ್ಲಿ ನಡೆದ ಅದಿವಾಸಿ ಅಂತಾರಾಜ್ಯ ಯುವಜನ ಮೇಳದಲ್ಲಿ ಸೋಮಣ್ಣ ಪಾಲ್ಗೊಂಡು ಅದಿವಾಸಿ ಯುವಜನರೊಡನೆ ತಮ್ಮ ಭಾವನೆ ಹಂಚಿಕೊಂಡರು. ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ ಅಧಿಕಾರಿಗಳಿಂದ, ರಾಜಕಾರಣಿಗಳಿಂದ ಕೆಲಸ ಮಾಡಿಸಬೇಕು ಎಂಬ ನಿರೀಕ್ಷೆ ಜನರಲ್ಲಿ ಇದೆ. ತಿರುಗಾಡುವ ಖರ್ಚಿಗೂ ತಿಣುಕಾಡುವ ಸ್ಥಿತಿ ಸೋಮಣ್ಣ ಅವರದ್ದು. ಸರ್ಕಾರ ಸೋಮಣ್ಣ ಮತ್ತು ಆದಿವಾಸಿಗಳತ್ತ ಗಮನಹರಿಸುವ ಅಗತ್ಯವಿದೆ.

ಆಂದೋಲನ ಡೆಸ್ಕ್

Recent Posts

ಬಂಡೀಪುರ, ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭ : ಸಿಎಂ

ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…

9 hours ago

ಜ.5, 6ರಂದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ; ತವರಲ್ಲಿ ಸಂಭ್ರಮ ಸಾಧ್ಯತೆ?

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…

9 hours ago

ಜ.4ರಂದು ʼಚಾ.ಬೆಟ್ಟಕ್ಕೆ ನಡಿಗೆʼ ಜಾಗೃತಿ ಜಾಥ ; ಬೆಂಬಲಿಸಲು ಮನವಿ

ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…

9 hours ago

ದೇಶದ ಸ್ವಚ್ಛ ನಗರ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ 11 ಮಂದಿ ಸಾವು!

ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…

10 hours ago

ಬಳ್ಳಾರಿ ಘರ್ಷಣೆ | ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ; ಬಿವೈವಿ ಆಗ್ರಹ

ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…

12 hours ago

ಬಳ್ಳಾರಿ ಘರ್ಷಣೆ | ಕೈ ಕಾರ್ಯಕರ್ತ ಸಾವು, ಘಟನೆ ಬಗ್ಗೆ ಸಿಎಂ ಹೇಳಿದ್ದೇನು?

ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ  ಬ್ಯಾನರ್‌ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್‌ ಆಗಿ…

13 hours ago