Andolana originals

ಶತಮಾನ ಕಳೆದರೂ ಹೊಸತನ ಮೆರೆವ ಶಾಲೆ!

• ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ : ಹತ್ತಿರತ್ತಿರ ಒಂದೂ ಕಾಲು ಶತಮಾನದ ಚಿರನೂತನ ಶಾಲೆ… ವೃದ್ಧಾಪ್ಯದಲ್ಲೂ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡು ದಾಪುಗಾಲಿಡುತ್ತ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದು ಬಿರುಸಾಗಿ ಹೆಜ್ಜೆ ಹಾಕುತ್ತಿರುವುದು ಹೆಮ್ಮೆಯ ಸಂಗತಿ ನೆನಪಿಡಲೇಬೇಕಾದ ಒಂದು ವಿಚಾರವೆಂದರೆ ನಿಜವಾಗಿಯೂ ಸರ್ಕಾರಿ ಶಾಲೆ ಇದು!

ಪಟ್ಟಣದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಇದು 1903ರಲ್ಲಿ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗುಂಡ್ಲುಪೇಟೆ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಕಟ್ಟಿಸಿದ ಶಾಲೆ ಎನ್ನಲಾಗಿದೆ.

ಸದ್ಯಕ್ಕೆ 123 ವರ್ಷಗಳು ಕಳೆದರೂ ಶಾಲೆಯ ಕಟ್ಟಡ ಸುಸ್ಥಿತಿಯಲ್ಲಿದ್ದು, 17 ಕೊಠಡಿಗಳಿವೆ. 13 ಶಿಕ್ಷಕರು ಇದ್ದಾರೆ. 313 ವಿದ್ಯಾರ್ಥಿಗಳಿದ್ದಾರೆ. ಭಾಗಶಃ ನವೀಕರಣ ಮಾಡಲಾಗಿದೆ. ಶಾಲೆಯಲ್ಲಿ ಬೆಂಚ್ ಡೆಸ್ಕ್ ಬೋರ್ಡ್ ಪ್ಯಾನ್ ಅಳವಡಿಕೆ ಮಾಡಿದ್ದು, ಎಲ್ಲಿಯೂ ಸೋರಿಕೆಯಾಗದಂತೆ ನವೀಕರಿಸಲಾಗಿದೆ. ವಿಶಾಲವಾದ ಆಟದ ಮೈದಾನ ಹಾಗೂ ವಿಶಾಲ ಆವರಣ ಇರುವ ಉತ್ತಮ ಗುಣಮಟ್ಟದ ಶಾಲೆಯಾಗಿದೆ.

ಈ ಶಾಲೆಯಲ್ಲಿ ಪ್ರಸ್ತುತ ಒಂದ ರಿಂದ ಎಂಟನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿದ್ದು, ಮುಂದಿನ ವರ್ಷದಿಂದ ಎಲ್‌ಕೆಜಿ ತರಗತಿ ಆರಂಭಿಸಲು ಅನುಮತಿ ದೊರಕಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವಸಾಧ್ಯತೆ ಇದೆ. ನುರಿತ ಶಿಕ್ಷಕರ ತಂಡ, ಗ್ರಂಥಾಲಯ ಸೌಲಭ್ಯ, ಬಿಸಿಯೂಟ, ಕ್ಷೀರಭಾಗ್ಯ, ಕ್ರೀಡಾ ಚಟುವಟಿಕೆ, ಉಚಿತ ಪಠ್ಯಪುಸ್ತಕ, ಉಚಿತ ಸಮವಸ್ತ್ರ, ಉಚಿತ ಶೂ ಸಾಕ್ಸ್ ವಿತರಣೆ ಸೌಲಭ್ಯಗಳು ಇವೆ. ಅಲ್ಲದೆ, ಶಾಲೆಯು ಕ್ರಿಯಾಶೀಲ ಎಸ್‌ಡಿಎಂಸಿಯನ್ನು ಹೊಂದಿದೆ.

ಶಾಲೆಗೆ ಬೇಕಿರುವ ಸೌಲಭ್ಯಗಳು
ಶಾಲೆಯಲ್ಲಿ ವಿದ್ಯಾರ್ಥಿ ಗಳ ಸಂಖ್ಯೆಗೆ ಅನುಗುಣವಾಗಿ ಸ್ಲಾರ್ಟ್ ಬೋರ್ಡ್, ಶಾಲೆಯ ಕೊಠಡಿಗಳ ದುರಸ್ತಿ, ಗ್ರಂಥಾಲಯ, ಸ್ಟೋರ್ ರೂಂ, ವಿಶಾಲ ಅಡುಗೆ ಮನೆ, ಊಟದ ಹಾಲ್, ವ್ಯವಸ್ಥೆ ಕಲ್ಪಿಸಿದರೆ ಶಾಲೆ ಮತ್ತಷ್ಟು ಅಭಿವೃದ್ಧಿಯಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಶಾಸಕರ ವಿಶೇಷ ಅನುದಾನದಲ್ಲಿ ನವೀಕರಣ
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರ ವಿಶೇಷ ಅನುದಾನದಲ್ಲಿ ಕೊಠಡಿಗಳು, ಚಾವಣಿ ಮುಂತಾದವುಗಳನ್ನು ನವೀಕರಿಸಲಾಗಿದೆ.

ಶಾಲೆಯಲ್ಲಿ ಓದಿ ಸಾಧನೆ ಮಾಡಿದ ಗಣ್ಯರು
ಗುಂಡ್ಲುಪೇಟೆ ಸರ್ಕಾರಿ ಶಾಲೆಯಲ್ಲಿ ಓದಿದವರ ಪೈಕಿ ರಾಜ್ಯದ ಪ್ರಸಿದ್ಧ ಕವಿ ಜಿ.ಪಿ.ರಾಜರತ್ನಂ, ಕೆಎಸ್ಎನ್ ಸಂಸ್ಥೆ ಸಂಸ್ಥಾಪಕ ಶಿವಲಿಂಗಯ್ಯ, ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಬಾಬು,ಕಸಾಪ ಜಿಲ್ಲಾಧ್ಯಕ್ಷ ಶೈಲಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕಿ ಲಕ್ಷ್ಮಮ್ಮ, ಸಾವಕನಹಳ್ಳಿ ಪಾಳ್ಯದ ಜಿಲ್ಲಾಧಿಕಾರಿ ನಾರಾಯಣಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗಮಲ್ಲೇಶ್, ಪ್ರೊ.ಬಿ.ಪಿ. ಮಹೇಶ್ ಚಂದ್ರಗುರು ಮುಂತಾದವರು. ವಿದೇಶದಲ್ಲಿಯೂ ಶಾಲೆಯ ಹಲವು ಹಳೆಯ ವಿದ್ಯಾರ್ಥಿಗಳು ನೆಲೆಸಿದ್ದಾರೆ.

ತಾಲ್ಲೂಕಿನಲ್ಲಿ 12 ಶತಮಾನ ಶಾಲೆಗಳು
ಗುಂಡ್ಲುಪೇಟೆ ತಾಲ್ಲೂಕಿನ ಮೊದಲ ಶಾಲೆ ಹಾಗೂ 157 ವರ್ಷಗಳ ಹಿಂದೆ ಆರಂಭಗೊಂಡ ಶಾಲೆ ಎಂದರೆ ಅದು ಬೆರಟಹಳ್ಳಿ ಶಾಲೆ. ಆದರೆ ಆ ಶಾಲೆ ಉಳಿದಿಲ್ಲ. ಹಸಗೂಲಿ ಸರ್ಕಾರಿ ಶಾಲೆ, ಬಾಚಹಳ್ಳಿ ಶಾಲೆ, ಅಗತಗೌಡನಹಳ್ಳಿ ಶಾಲೆ, ಮಾಡಹಳ್ಳಿ ಶಾಲೆ, ಹಂಗಳ ಶಾಲೆ, ಗುಂಡ್ಲುಪೇಟೆ ಸ.ಹಿ.ಪ್ರಾ. ಶಾಲೆ, ಕೋಟೆಕೆರೆ ಶಾಲೆ, ಹುಂಡೀಪುರ ಶಾಲೆ, ಕಬ್ಬಹಳ್ಳಿ ಶಾಲೆ, ತೆರಕಣಾಂಬಿ ಶಾಲೆ ಶತಮಾನ ಕಂಡಿವೆ.

ಗುಂಡ್ಲುಪೇಟೆ ಶಾಲೆಗೆ ಈ ವರ್ಷ ಹೆಚ್ಚುವರಿಯಾಗಿ ಒಂದು ಕೊಠಡಿ ನಿರ್ಮಾಣಕ್ಕೆ ಶಾಸಕರು ಅನುದಾನ ಬಿಡುಗಡೆ ಮಾಡಿದ್ದಾರೆ. ಹಿಂದೆ 9.70 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ನವೀಕರಣವಾಗಿದೆ. ಎಲ್‌ ಕೆಜಿ, ಯುಕೆಜಿ ಪ್ರಾರಂಭ ಮಾಡುತ್ತೇವೆ. ರಂಗಮಂದಿರ, ಹೆಚ್ಚುವರಿ ಮೂರು ಕೊಠಡಿಗಳು, ಶತಮಾನೋತ್ಸವ ಭವನ ಅವಶ್ಯಕತೆ ಇದೆ. – ಟಿ.ಆರ್.ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ

ಈ ಶಾಲೆ 2003ರಲ್ಲಿ ಶತಮಾನ ಅಚರಿಸಿದೆ. ಶಾಲೆ ಇನ್ನಷ್ಟು ಅಭಿವೃದ್ಧಿಯಾಗ ಬೇಕು. ಈಗಿನ ಕಾಲಕ್ಕೆ ತಕ್ಕಂತೆ ಶಿಕ್ಷಕರ ಬೋಧನೆ ಮತ್ತು ಮಕ್ಕಳ ಕಲಿಕೆ ಅಪ್ ಡೇಟ್ ಆಗಬೇಕು. ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಕೂಡ ಇದೆ. 2026-27 ನೇ ಸಾಲಿನಿಂದ ಎಲ್‌ ಕೆಜಿ ಪ್ರಾರಂಭಿಸಲು ಅವಕಾಶ ಸಿಕ್ಕಿದೆ. -ಎಂ.ಬಿ.ಸಿದ್ದಾರ್ಥ್, ಪ್ರಭಾರ ಮುಖ್ಯೋಪಾಧ್ಯಾಯ

ಕಡುಬಡವರು, ಹಿಂದುಳಿದ ವರ್ಗದ ಮಕ್ಕಳು ಓದುತ್ತಿರುತ್ತಾರೆ ಎಂಬ ಮನೋ ಭಾವ ಹಲವು ಪೋಷಕರಲ್ಲಿ ಇದೆ. ಅಂತಹ ಮಕ್ಕಳ ಜೊತೆಯಲ್ಲಿ ಓದಿಸಿದರೆ ತಮ್ಮ ಪ್ರತಿಷ್ಠೆಗೆ ಕುಂದು ಉಂಟಾಗುತ್ತದೆ ಎಂಬ ಭ್ರಮೆ ಹಾಗೂ ಖಾಸಗಿ ಶಾಲೆಗಳ ವ್ಯಾಮೋಹದಿಂದಾಗಿ ಪೋಷ ಕರು ಸಾಲ ಮಾಡಿಕೊಳ್ಳುತ್ತಿದ್ದಾರೆ. ನನ್ನ ಮಗಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು, ವರ್ಷಕ್ಕೆ 50 ಸಾವಿರ ರೂ. ಉಳಿತಾಯ ವಾಗುತ್ತಿದೆ. ಆ ಹಣವನ್ನು ಅವಳ ಹೆಸರಿನಲ್ಲಿ ಡೆಪಾಸಿಟ್ ಇಟ್ಟಿದ್ದು, ಮಗಳ ಭವಿಷ್ಯಕ್ಕೆ ಅನುಕೂಲವಾಗಲಿದೆ. –ಜಿ.ಎಸ್.ಮೋಹನ್ ಕುಮಾರ್, ಎಸ್ಡಿಎಂಸಿ ಅಧ್ಯಕ್ಷ

1988 ರಿಂದ 1991 ರವರೆಗೆ ಐದರಿಂದ ಏಳನೇ ತರಗತಿವರೆಗೆ ಈ ಶಾಲೆಯಲ್ಲಿಯೇ ಓದಿದೆ. ಈಗ ಇದೇ ಶಾಲೆಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿರುವುದು ನನಗೆ ತುಂಬಾ ಹೆಮ್ಮೆ. ಇದು ಪಟ್ಟಣದಲ್ಲಿಯೇ ಅತ್ಯುತ್ತಮ ಶಾಲೆಯಾಗಿ ಹೊರಹೊಮ್ಮಿದೆ.
-ರೇಖಾ, ಸಹ ಶಿಕ್ಷಕರು

ಶಾಲೆಯಲ್ಲಿ 13 ಜನ ಶಿಕ್ಷಕರಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮ ತರಗತಿಗಳು ನಡೆಯುತ್ತಿದ್ದು, ಉತ್ತಮ ಶಿಕ್ಷಕರು ಮಕ್ಕಳ ಅಭ್ಯುದಯಕ್ಕೆ ಶ್ರಮಿಸುತ್ತಿದ್ದೇವೆ. ಸರ್ಕಾರಿ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣ ಸಿಗು ತಿದ್ದು ಪೋಷಕರು ಇದನ್ನು ಅರಿತು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳು ಹಿಸಬೇಕು.-ಅನಿತಾ, ಶಿಕ್ಷಕರು

ಈ ಶಾಲೆಯಲ್ಲಿ ಓದಿದ್ದೇನೆ ಎಂಬುದೇ ನನಗೆ ಹೆಮ್ಮೆ. 1978-79ನೇ ಸಾಲಿನಲ್ಲಿ ಈ ಶಾಲೆಯಲ್ಲಿ 5ನೇ ತರಗತಿಗೆ ಸೇರಿದೆ. ಬಡವರು, ಶ್ರೀಮಂತರು, ಸರ್ಕಾರಿ ನೌಕರರು, ಉದ್ಯಮಿಗಳು ಎಂಬ ಭೇದ ಇಲ್ಲದೆ ಎಲ್ಲರ ಮಕ್ಕಳೂ ಇದೇ ಶಾಲೆಯಲ್ಲಿ ಒಟ್ಟಾಗಿ ಓದುತ್ತಿದ್ದೆವು. ಹಿಂದಿನ ಸರ್ಕಾರಗಳು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಒತ್ತು ನೀಡಿದ ಪರಿಣಾಮವಾಗಿ ಸರ್ಕಾರಿ ಶಾಲೆಗಳು ದುಸ್ಥಿತಿ ಎದುರಿಸುತ್ತಿವೆ. –ಶೈಲಕುಮಾರ್, ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಳೆಯ ವಿದ್ಯಾರ್ಥಿ

ಗುಂಡ್ಲುಪೇಟೆ ನಮ್ಮ ಶಾಲೆಯ ವಾತಾ ವರಣ ಉತ್ತಮವಾಗಿದೆ. ಮಕ್ಕಳ ಕಲಿಕಾ ದೃಷ್ಟಿಕೋನ ಬದಲಾಗುತ್ತಿದ್ದು, ಕ್ರಿಯಾ ಶೀಲ ಎಸ್‌ ಡಿಎಂಸಿ ತಂಡ ಕೆಲಸ ಮಾಡುತ್ತಿದೆ. ಶಿಕ್ಷಣ ಇಲಾಖೆಯ ಸಹಕಾರದಿಂದ ಶಾಲೆ ಇಂದಿಗೂ ಸುಸ್ಥಿತಿಯಲ್ಲಿದ್ದು ಮಾದರಿ ಶಾಲೆಯಾಗಿದೆ. –ಮನು, ಸಹ ಶಿಕ್ಷಕ

ಆಂದೋಲನ ಡೆಸ್ಕ್

Recent Posts

ಬಾವಿ ನೀರಿಗಾಗಿ ಅನಸೂಯ ಅವಿಸ್ಮರಣೀಯ ಹೋರಾಟ

ಆನಂದ್ ತೇಲ್ತುಂಬ್ಡೆ ಅಮ್ಮನೂ ಹೋರಾಟಗಾರರು! ವಿ.ಎಲ್.ನರಸಿಂಹಮೂರ್ತಿ ಹೆಸರಾಂತ ಚಿಂತಕ, ಮಾನವ ಮಾನವ ಹಕ್ಕುಗಳ 'ಹೋರಾಟ ಗಾರ ಡಾ.ಆನಂದ್ ತೇಲ್ತುಂಬ್ಡೆಯವರ ತಾಯಿ…

32 mins ago

ಆಂದೋಲನ ಸಂಪಾದಕೀಯ | ರೈಲ್ವೆ ಇಲಾಖೆಗೆ ಕನ್ನಡ, ಕನ್ನಡಿಗರ ಬಗ್ಗೆ ತಾತ್ಸಾರ ಸಲ್ಲದು

ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬುದು ಇಂದು ನಿನ್ನೆಯ ಆರೋಪವಲ್ಲ. ಮೊದಲಿನಿಂದಲೂ ಈ ಆರೋಪ ಇದೆ. ರೈಲ್ವೆಯಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ…

59 mins ago

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

ರಾಮನಗರ : ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ವ್ಯಾಪ್ತಿಯಲ್ಲಿ…

1 hour ago

ಗ್ಯಾಸ್‌ ಸಿಲಿಂಡರ್ ಅಭಾವ : ಗ್ರಾಹಕರ ಕಿಸೆಗೆ ಕತ್ತರಿ

ಹಲವು ಹೋಟೆಲ್‌ಗಳಲ್ಲಿ ತಿಂಡಿಗಳ ಬೆಲೆ ಶೇ.5 ಹೆಚ್ಚಳ ಫಾಸ್ಟ್ ಫುಡ್, ಜಂಕ್‌ಫುಡ್‌ಗಳ ದರವೂ ಗಗನಮುಖಿ   • ಚಿರಂಜೀವಿ ಸಿ…

1 hour ago

ಸಿದ್ದಾಪುರ | ಉಪಟಳ ನೀಡುತ್ತಿದ್ದ ಒಂಟಿ ಸಲಗ ಸೆರೆ

ಕೃಷಿ ಫಸಲು ನಾಶ ಮಾಡಿ, ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ…

11 hours ago

ಇರಾನ್‌ ಈವರೆಗೆ 400ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದೆ ; ಇಸ್ರೇಲ್‌

ಜೆರುಸಲೆಂ : ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕ ಇರಾನ್‌ನಿಂದ ಇಸ್ರೇಲ್‌ ಮೇಲೆ ಈವರೆಗೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ…

12 hours ago