Andolana originals

ವಿದ್ವತ್ತಿನೊಂದಿಗೆ ಹೃದಯ ವೈಶಾಲ್ಯತೆಯೂ ಇದ್ದ ವ್ಯಕ್ತಿತ್ವ

ಡಾ. ಸಂತೋಷ್ ನಾಯಕ್ ಆರ್.
೨೦೨೫ರ ನಾಲ್ಕನೆಯ ದಿನವೇ ಇಷ್ಟು ದುಃಖ ದಾಯಕವಾಗಿರತ್ತದೆಂದು ಅಂದುಕೊಂಡಿರಲಿಲ್ಲ. ಒಂದು ವಾರದ ಹಿಂದೆ ನಾನು ದೆಹಲಿಯಲ್ಲಿದ್ದಾಗ ಫೊನ್ ಮಾಡಿ ಯಾವುದೋ ಪುಸ್ತಕದ ಕುರಿತು ಅವರೊಂದಿಗೆ ಮಾತನಾಡಿದ್ದೆ. ಕಳೆದ ವಾರ ಅವರು ಮೈಸೂರಿನ ಕೆಲವು ಕಾರ್ಯ ಕ್ರಮಗಳಲ್ಲಿ ಭಾಗವಹಿಸಿದ್ದು, ಮೂರು ದಿನಗಳವರೆಗೂ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ತಾಣಗಳಲ್ಲೂ ಸಕ್ರಿಯವಾಗಿದ್ದರು. ಅವರು ಓದಿದ ಜೆಎನ್‌ಯುಗೆ ನಾನು ಭೇಟಿ ನೀಡಿದಾಗ ತಮಾಷೆ ಮಾಡಿ ನನಗೆ ಕಮೆಂಟ್ ಸಹ ಮಾಡಿದ್ದರು. ಕಳೆದು ಎರಡು ತಿಂಗಳುಗಳ ಹಿಂದೆ ನಾನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ವಾಪಸ್ ಬರುತ್ತಿದ್ದಾಗ ಕರೆ ಮಾಡಿ ‘ಸಂತೋಷ್ ನಿಮಗೆ ಅಭಿನಂದನೆಗಳು’ ಎಂದರು, ‘ಏಕೆ ಸರ್, ಯಾವ ವಿಷಯ’ ಎನ್ನಲು ತಮ್ಮ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದಕ್ಕೆ, ಅದಕ್ಕೆ ನಾವಿಬ್ಬರೂ ಕೋವಿಡ್ ಸಮಯದಲ್ಲಿ ಫೋನ್ ಮೂಲಕ ನಡೆಸಿದ ಚರ್ಚೆಗಳೇ ಕಾರಣವೆಂದೂ, ಮತ್ತು ಜಿ. ಎನ್. ಮೋಹನರಿಗೆ ಮಾತನಾಡಿ ಪ್ರಕಟಿಸಲು ಸಾಧ್ಯವಾಗಿ ದ್ದರಿಂದ ಪ್ರಶಸ್ತಿಯ ಶ್ರೇಯಸ್ಸನ್ನು ನನಗೆ ಕಟ್ಟಿದ್ದರು. ಅಷ್ಟು ಉದಾರ ಮನಸ್ಸಿನ, ನಮ್ಮಂತಹ ಕಿರಿ ಯರನ್ನು ಬೌದ್ಧಿಕವಾಗಿ ಒಳಗೊಳ್ಳುವ ತಾಯಿ ಹೃದಯದ ಅಸ್ಸಾದಿ ಸರ್ ಹೀಗೆ ಅನಿರೀಕ್ಷಿತವಾಗಿ ಅಗಲಿದ್ದು ನನಗೆ ವೈಯಕ್ತಿಕ ವಾಗಿ ಅಪಾರ ನಷ್ಟ. ರಾಜ್ಯಕ್ಕೆ ಇನ್ನೂ ದೊಡ್ಡ ನಷ್ಟ.

ಅವರಿಗೆ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಯಾ ಗುವ ಅವಕಾಶದ ಸುದ್ದಿ ಓಡಾಡಿದ್ದು, ಕೆಲವು ಕಡೆ ಅಂತಿಮ ಹಂತದಲ್ಲಿ ಹೆಸರೂ ಇರುತ್ತಿತ್ತು. ವಿಶ್ವವಿದ್ಯಾ ನಿಲಯಗಳನ್ನು ಮರುಕಟ್ಟುವ ಅನೇಕ ಯೋಜನೆಗಳನ್ನು ಸಹ ಇಟ್ಟುಕೊಂಡಿದ್ದರು. ನಿವೃತ್ತಿಯ ನಂತರ ಸೂಕ್ತ ರೀತಿಯಲ್ಲಿ ಅವರನ್ನು ಸರ್ಕಾರವು ಬಳಸಿಕೊಳ್ಳದ ಕುರಿತು ಬೇಸರವಿದ್ದರೂ ಇದಕ್ಕೆಲ್ಲಾ ಲಾಬಿ ಮಾಡುವ, ರಾಜಕಾರಣಿ ಗಳನ್ನು ಕೇಳುವ ಸ್ವಭಾವದವರಾಗಿರಲಿಲ್ಲ. ವಿಷಯ ಬಂದಾಗ ‘ನಮ್ಮನ್ನೆಲ್ಲ ಯಾರು ಕೇಳ್ತಾರೆ ಸಂತೋಷ್’ ಎಂದದ್ದು ಇಂದಿಗೂ ಕಿವಿಯಲ್ಲಿ ಮರುದನಿಸುತ್ತಿದೆ.

ಡಾ. ಮುಜಾಫ್ಛರ್ ಅಸ್ಸಾದಿಯವರ ಪರಿಚಯ ನನಗಾಗಿದ್ದು ಅವರ ಬರಹಗಳಿಂದ. ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಬರೆಯುತಿದ್ದ ಅಂಕಣವನ್ನು ನಿರಂತರವಾಗಿ ಓದುತ್ತಿದ್ದೆ. ಆಳವಾದ ಒಳನೋಟಗಳಿಂದ ಕೂಡಿರುತ್ತಿದ್ದ ಅವರ ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಣೆಗಳು ಅನೇಕ ಬಾರಿ ಚಿಂತನೆಗೆ ಹಚ್ಚುತ್ತಿದ್ದವು. ನಂತರ ನಾನು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಸೇವೆಗೆ ಸೇರಿದ ಮೇಲೆ ಅನೇಕ ಸಂರ್ದಭಗಳಲ್ಲಿ ನಮ್ಮ ಭೇಟಿ ಆಗುತ್ತಿತ್ತು. ಅವರ ಬರಹ ಮಾತ್ರ ನೋಡಿದ್ದ ನನಗೆ, ಅವರು ಬಹಳ ಗಂಭೀರ ಸ್ವಭಾವದವರೂ, ಜನರ ಜೊತೆ ಸರಳವಾಗಿ ಬೆರೆಯದ, ಕೇವಲ ಬೌದ್ಧಿಕ ಚಿಂತನೆಗಳಲ್ಲಿ ಇರುವ ರಿಸರ್ವ್ ವ್ಯಕ್ತಿತ ಎಂದು ಭಾವಿಸಿಕೊಂಡಿದ್ದೆ. ಆದರೆ, ಮುಂದೆ ಅನೇಕ ಕಡೆ ಸಂವಾದಗಳಲ್ಲಿ, ಪರೀಕ್ಷಾ ಸಂಬಂಽ ಕೆಲಸಗಳಲ್ಲಿ, ಸಮ್ಮೇಳನಗಳಲ್ಲಿ ಅಸ್ಸಾದಿಯವರನ್ನು ಭೇಟಿಯಾಗತೊಡಗಿದ ಮೇಲೆ ಅವರು ಎಷ್ಟು ಸ್ನೇಹಪರರು, ವಿನೋದ ಪ್ರವೃತ್ತಿಯವರು ಎಂಬುದು ಆಶ್ಚರ‍್ಯ ಮತ್ತು ಸಂತೋಷವನ್ನುಂಟು ಮಾಡಿತು.

ನಾವು ಭೇಟಿ ಆದಾಗಲೆಲ್ಲ ಅಂದಂದಿನ ಪ್ರಸ್ತುತ ವಿಷಯಗಳನ್ನು ಕುರಿತು ಚರ್ಚೆ ನಡೆಸುವುದು ನಡೆದೇ ಇತ್ತು. ಮುಂದೆ ನಾನು ‘ಭಾರತದ ಆದಿವಾಸಿ ಕಥನ- ಅಸ್ಮಿತೆ ಮತ್ತು ಅಸಮಾನತೆ’ ಪುಸ್ತಕವನ್ನು ಸಂಪಾದಿಸಿ ದಾಗ, ಪ್ರೊ. ಅಸ್ಸಾದಿಯವರು ಭಾರತದಲ್ಲಿನ ಆದಿವಾಸಿ ಗಳ ಅಸ್ಮಿತೆಯನ್ನು ಚರ್ಚಿಸುವ ಅಂದರೆ ಆದಿವಾಸಿಗಳ ಮತಾಂತರ, ಧರ್ಮ, ಹೋರಾಟ ಮತ್ತು ಆದಿವಾಸಿ ಪ್ರಜ್ಞೆಯ ಕುರಿತು ಸುದೀರ್ಘ ಲೇಖನವನ್ನು ಬರೆದು ಕೊಟ್ಟು ಆ ಗ್ರಂಥದ ಮೌಲಿಕತೆಯನ್ನು ಹೆಚ್ಚಿಸಿದರು ಮತ್ತು ಆದಿವಾಸಿಗಳ ಅಸ್ಮಿತೆಯನ್ನು ಕುರಿತು ತೀವ್ರ ತರವಾಗಿ ನಡೆಯಬೇಕಿದ್ದ ಸಂವಾದದ ವಿವಿಧ ಆಯಾಮಗಳನ್ನು ಪ್ರಸ್ತಾಪಿಸಿದ್ದರು.

ಕೋವಿಡ್-೧೯ರ ಲಾಕ್‌ಡೌನ್ ಸಂದರ್ಭದಲ್ಲಿ ಕಡ್ಡಾಯ ಗೃಹಬಂಧನದಲ್ಲಿ ಪ್ರತಿಯೊಬ್ಬರೂ ಇರಬೇಕಾದ ರಾಷ್ಟ್ರೀಯ ಸಂಕಷ್ಟದ ಸಂದರ್ಭದಲ್ಲಿ ನಮಗೆಲ್ಲಾ ದಾರಿ ತೋರಿದ್ದು ನಮ್ಮ ಓದು ಬರಹಗಳು. ಆಗ, ಅಸ್ಸಾದಿಯ ವರು ‘ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ’ ಪುಸ್ತಕ ವನ್ನು ಬರೆಯುತ್ತಿದ್ದು, ಸ್ತ್ರೀವಾದವು ಕರ್ನಾಟಕದಲ್ಲಿ ಬೆಳೆದ ಬಗೆಯನ್ನು ಕಥನಗಳು ಹಾಗೂ ಚಳವಳಿಗಳ ಮೂಲಕ ಗ್ರಹಿಸುವ ನಿಟ್ಟಿನಲ್ಲಿ ಸಂಶೋದನೆ ನಡೆಸುತ್ತಿದ್ದರು. ಇದರ ಕುರಿತು ಫೋನ್ ಮೂಲಕ ದೀರ್ಘಾವಧಿ ಚರ್ಚಿಸುತ್ತಿದ್ದ ನಂತರ, ತಾವು ಬರೆದ ಪ್ರತಿ ಅಧ್ಯಾಯಗಳನ್ನು ಇಮೇಲ್ ಮೂಲಕ ನನಗೆ ಕಳುಹಿಸಿ ಅದರ ಕುರಿತು ಅಭಿಪ್ರಾಯಗಳನ್ನು ಕೇಳುತ್ತಿದ್ದರು.

ಹೀಗೆ ಕರಡು ಹಂತದಿಂದ ಶುರುವಾಗಿ ಆ ಪುಸ್ತಕ ಪೂರ್ಣಗೊಳ್ಳುವವರೆಗೆ, ಭಾಷೆ, ವಿಷಯ ಮೊದಲಾದ ವುಗಳ ಕುರಿತು ನನ್ನ ಅನಿಸಿಕೆ ಅಭಿಪ್ರಾಯಗಳನ್ನು ಸೂಚಿಸುತ್ತಿದ್ದ ನನಗೆ ಆ ಕೃತಿ ರಚನೆಯ ಒಂದು ಭಾಗವಾಗಲು ಅವಕಾಶ ಮಾಡಿಕೊಟ್ಟರು. ಸಮಾಜ ಶಾಸ್ತ್ರದ ವಿದ್ಯಾರ್ಥಿಯಾಗಿ, ಸ್ತ್ರೀವಾದದ ಕುರಿತು ನನ್ನದೇ ಆದ ಗ್ರಹಿಕೆಗಳನ್ನು ಚರ್ಚಿಸುತ್ತ ಇರುವಾಗ ಪುಸ್ತಕದ ಕೊನೆಯ ಹಂತದ ಪರಿಷ್ಕರಣೆ ಸಮಯದಲ್ಲಿ, ಅಸ್ಸಾದಿ ಯವರು ಈ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಲು ಕೇಳಿದ್ದು ನನಗೆ ಆಶ್ಚರ್ಯಕರವಾದ ವಿಷಯವಾಗಿತ್ತು.

ಕರ್ನಾಟಕದಲ್ಲಿ ಸ್ತ್ರೀವಾದ ಬೆಳೆದು ಬಂದ ವಿಧವನ್ನು ದಲಿತ ಸ್ತ್ರೀವಾದ, ರೈತ ಸ್ತ್ರೀವಾದ, ಪರಿಸರ ಸ್ತ್ರೀವಾದ ಮೊದಲಾದವುಗಳ ಹಿನ್ನೆಲೆಯಲ್ಲಿ ಅಸ್ಸಾದಿಯವರು ಪುಸ್ತಕದಲ್ಲಿ ವಿಸ್ತೃತವಾಗಿ ಚರ್ಚಿಸಿದ್ದರಿಂದ, ಸ್ತ್ರೀವಾದ ಎಂದರೇನು? ಎಂಬ ಮೂಲಭೂತ ಪ್ರಶ್ನೆಯನ್ನು ನಾನು ಪ್ರವೇಶಿಕೆಯಲ್ಲಿ ಚರ್ಚಿಸಿ ಮುನ್ನುಡಿ ಬರೆಯಲು ಹೇಳಿದರು. ಕರ್ನಾಟಕದಲ್ಲಿನ ಸ್ತ್ರೀವಾದದ ವಿವಿಧ ಧಾರೆಗಳು ಹಾಗೂ ಅವುಗಳ ಉಗಮದ ಕುರಿತು ಬಂದ ಈ ಪುಸ್ತಕ, ಹಲವಾರು ಚರ್ಚೆಗಳನ್ನು ಹುಟ್ಟು ಹಾಕಿತು. ಹೀಗೆ ತಮ್ಮ ಅಕಾಡೆಮಿಕ್ ಬರವಣಿಗೆಯಲ್ಲಿ ಪಾಲು ದಾರನಾಗಿ ನನ್ನನ್ನು ಬರವಣಿಗೆಯ ಎಲ್ಲಾ ಹಂತಗಳಲ್ಲೂ ತೊಡಗಿಸಿಕೊಂಡು, ಕೊನೆಗೆ ನನ್ನ ಕೈಯಲ್ಲಿಯೇ ಮುನ್ನುಡಿ ಬರೆಸಿದ ಅಸ್ಸಾದಿಯವರದು ವಯಸ್ಸು, ಸ್ಥಾನಮಾನ ಮೊದಲಾದ ಹಿರಿಮೆಗಳ ಚಾಳಿಗೆ ಬೀಳದೆ ನನ್ನಂತಹ ಕಿರಿಯನನ್ನೂ ಸಮಾನಭಾವದಲ್ಲಿ ಕಾಣುವ ಮತ್ತು ವಿದ್ವತ್ತಿನೊಂದಿಗೆ ಹೃದಯ ವೈಶಾಲ್ಯತೆಯೂ ಇರುವ ವ್ಯಕ್ತಿತ್ವ.

ನಂತರ ೨೦೨೧ರಲ್ಲಿ ಅಸ್ಸಾದಿಯವರು ‘ಅಲ್ಪಸಂಖ್ಯಾ ತರು ಮತ್ತು ಜಾತಿ ವ್ಯವಸೆ’ ಎಂಬ ಅಲ್ಪಸಂಖ್ಯಾತರ ಅಸ್ಮಿತೆ, ವಸಾಹತುಶಾಹಿ ಮತ್ತು ಮೀಸಲಾತಿಯ ಸಂಕೀರ್ಣತೆ ಗಳನ್ನು ಭಾರತದ ಸಾಮಾಜಿಕ ನೆಲೆಗಟ್ಟಿನಲ್ಲಿ ಚರ್ಚಿಸುವ ಸಂಶೋಧನಾತ್ಮಕ ಕೃತಿಯನ್ನು ರಚಿಸಲು ಪ್ರಾರಂಭಿಸಿ ದ್ದರು. ಇದನ್ನು ಇಂಗ್ಲಿಷ್, ಕನ್ನಡ ಎರಡೂ ಭಾಷೆಗಳಲ್ಲಿ ಹಸ್ತಪ್ರತಿ ರೂಪದಲ್ಲಿಯೇ ಓದುವ ಅವಕಾಶ ನನ್ನದಾಯಿತು. ಎಂದಿನಂತೆ ಬರವಣಿಗೆಯ ಹಂತ ದಲ್ಲಿಯೇ ಅನೇಕ ಚರ್ಚೆಗಳು ನಡೆದವು; ಕೆಲವೊಮ್ಮ ನಾನು ಸೂಚಿಸಿದ ಸಲಹೆಗಳನ್ನು ಯಾವುದೇ ಹಮ್ಮಿಲ್ಲದೆ ಸ್ವೀಕರಿಸಿ ಪರಿಷ್ಕರಿಸುತ್ತಿದ್ದರು. ಪುಸ್ತಕವು ಇಂದಿನ ದಿನಗ ಳಲ್ಲಿ ಬಹಳ ಮುಖ್ಯವಾಗಿ ಚರ್ಚೆಗೆ ಒಳಗಾಗಬೇಕಿದ್ದ ಅಲ್ಪಸಂಖ್ಯಾತರೊಳಗಿನ ಶ್ರೇಣೀಕರಣದ ಹಾಗೂ ಜಾತಿ ವ್ಯವಸ್ಥೆಯ ಕುರಿತಾಗಿದ್ದು, ಜಿ. ಎನ್. ಮೋಹನ್ ಅವರು ತಮ್ಮ ಬಹುರೂಪಿ ಪ್ರಕಾಶನದ ಮೂಲಕ ಅದನ್ನು ಅದ್ಭುತವಾಗಿ ಹೊರತಂದರು.

ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಬಂತು. ಕರ್ನಾಟಕದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಒಳಪ್ರಭೇದಗಳ ಸಂಕಷ್ಟಗಳು, ಶ್ರೇಣೀಕರಣ, ಧರ್ಮ, ಜಾತಿ, ಮೀಸಲಾತಿ, ರಾಜಕಾರಣ ಮೊದಲಾದವುಗಳನ್ನು ವಿಸ್ತೃತವಾಗಿ ಚರ್ಚಿಸುವ ಅತ್ಯುತ್ತಮ ಆಕರ ಗ್ರಂಥವಾದ ಇದು ಕನ್ನಡದ ಅಪರೂಪದ ಸಮಾಜ ವಿಜ್ಞಾನದ ಕೃತಿ ಎಂದರೆ ತಪ್ಪಾಗಲಾರದು. ಹೀಗೆ ನನ್ನ ಮತ್ತು ಅಸ್ಸಾದಿಯವರ ಅಕಾಡೆಮಿಕ್ ಸಹವಾಸವು ಅವರ ಎರಡು ಪ್ರಮುಖ ಕೃತಿಗಳ ರಚನೆಯಲ್ಲಿ ಜೊತೆಗಿರುವ ಅವಕಾಶವಾಗಿ ಮಾರ್ಪಟಿದ್ದು, ನನಗೆ ಅತ್ಯಂತ ಮಹತ್ವದ ವಿಷಯವಾಗಿದೆ. ಸಜ್ಜನರೂ, ವಿದ್ವಾಂಸರೂ, ಅಪಾರ ವಿದ್ವತ್ತುಳ್ಳವರೂ ಆದ ಅಸ್ಸಾದಿಯವರು ನಮ್ಮ ನಾಡಿನ ಅಪರೂಪದ ರಾಜಕೀಯ ಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು.

ಕನ್ನಡದಲ್ಲಿ ಇಂದು ಮಾನವಿಕ ಮತ್ತು ಸಮಾಜ ವಿಜ್ಞಾನಗಳ ವಿಷಯದಲ್ಲಿ ಪ್ರೌಢಿಮೆಯ, ಒಳನೋಟಗಳುಳ್ಳ, ಸಂಶೋಧನಾತ್ಮಕ ಕೃತಿಗಳನ್ನು ರಚಿಸುವವರು ಬಹಳ ಕಡಿಮೆ. ಇವರುಗಳಲ್ಲಿ ಪ್ರೊ. ಅಸ್ಸಾದಿ ನಮ್ಮ ಕಾಲಮಾನದ ಬಹಳ ವಿಶಿಷ್ಟ ಸಂಶೋಧಕರಾಗಿ, ಲೇಖಕರಾಗಿ, ಚಿಂತಕರಾಗಿ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ.

ಇವರ ಸಂಶೋಧನೆಗಳು ಮುಂದಿನ ಪೀಳಿಗೆಗೆ ಆಕರ ವಾಗಿ ದಾರಿತೋರುವ ಹಾಗೂ ಒಳ್ಳೆಯ ಸಂಶೋಧನಾ ಬರವಣಿಗೆಗೆ ಮಾದರಿಯಾಗುವ ತೂಕದ ಬರವಣಿಗೆ ಗಳಾಗಿದ್ದು, ಅವರ ನಿವೃತ್ತಿಯ ನಂತರ, ಬಾಕಿ ಉಳಿಸಿರುವ ಎಲ್ಲಾ ತಿರುಗಾಟ, ಸಂಶೋಧನೆ ಮತ್ತು ಚರ್ಚೆಗಳನ್ನು ಮುಂದುವರಿಸುವ ಮೂಲಕ, ಇಷ್ಟು ದಿನಗಳ ಕಾಲ ವಿಶ್ವವಿದ್ಯಾನಿಲಯದಲ್ಲಿನ ಕಾರ್ಯ ದೊತ್ತಡದಿಂದಾಗಿ ಕರ್ತವ್ಯದಿಂದಾಗಿ ಪೂರೈಸಲಾಗದ ಬರಹಗಳನ್ನು ಈಡೇರಿಸಿ ತನ್ಮೂಲಕ ಕನ್ನಡ ನಾಡಿಗೆ ಕನ್ನಡಜ್ಞಾನ ಪರಂಪರೆಗೆ ಮತ್ತಷ್ಟು ಕೊಡುಗೆ ನೀಡುತ್ತಾರೆ ಎಂಬ ಆಶಯ ಇದ್ದಾಗಲೇ ಹೀಗೆ ಹಠಾತ್ ನಿರ್ಗಮಿಸಿದ್ದು, ನಾಡಿನ ಸಮಾಜ ವಿಜ್ಞಾನಕ್ಕೆ ಆದ ನಿಜವಾದ ನಷ್ಟ.

(ಲೇಖಕರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಮಾಜಶಾಸ ವಿಭಾಗದ ಮುಖ್ಯಸ್ಥರು)

 

ಆಂದೋಲನ ಡೆಸ್ಕ್

Recent Posts

ಎಚ್ಎಂಪಿವಿ ಬಗ್ಗೆ ಆತಂಕ ಬೇಡ, ಇರಲಿ ಎಚ್ಚರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಎಚ್‌ಎಂಪಿವಿ ವೈರಸ್‌ನ ಎರಡು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿದೆ…

10 hours ago

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ರಾಜೀನಾಮೆ ಘೋಷಣೆ

ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ…

10 hours ago

ನಟ ದರ್ಶನ್‌ಗೆ ಮತ್ತೆ ಸಂಕಷ್ಟ: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರೀಂ…

10 hours ago

ಪುಣಜನೂರು ಚೆಕ್‌ಪೋಸ್ಟ್ ನಲ್ಲಿ ಲಾರಿಗೆ ಸಿಲುಕಿ ಯುವಕ ಸಾವು

ಚಾಮರಾಜನಗರ : ತಮಿಳುನಾಡು ಕಡೆಗೆ ಕರಿಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಯ ಚಕ್ರಕ್ಕೆ ಯುವಕ ಸಿಲುಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಪುಣಜನೂರು…

11 hours ago

ಕುಶಾಲನಗರ ಮಸೀದಿಯಲ್ಲಿ‌ ಕಳ್ಳತನ: ಆರೋಪಿ ಬಂಧನ

ಕುಶಾಲನಗರ: ಮಸೀದಿಯಲ್ಲಿ‌ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ನಗರದ ಸುಣ್ಣದ ಬೀದಿಯ ನಿವಾಸಿಯಾದ…

11 hours ago

ಕಟ್ಟೆಮಾಡು ದೇವಾಲಯ ವಿವಾದ ಪ್ರಕರಣ: ಜ.14ರವರೆಗೆ ನಿಷೇಧಾಜ್ಞೆ ಮುಂದುವರಿಕೆ

ಮಡಿಕೇರಿ: ಮೂರ್ನಾಡು ಸಮೀಪದ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ವಸ್ತ್ರಸಂಹಿತೆ ವಿವಾದಕ್ಕೆ‌ ಸಂಬಂಧಪಟ್ಟಂತೆ ಜ.7ರವರೆಗೆ ಇದ್ದ‌ ನಿಷೇಧಾಜ್ಞೆಯನ್ನು ಜ.14ರವರೆಗೆ ಮುಂದುವರಿಸಲಾಗಿದೆ.…

11 hours ago