ಜನಸಾಮಾನ್ಯರ ಆಶಯ, ಸಂಕಲ್ಪಗಳಿಗೆ ಮೂಡಿದ ರೆಕ್ಕೆ
ಹೊಸ ವರ್ಷ – ೨೦೨೫ ಬಂದಿದೆ. ವಿಶ್ವಾದ್ಯಂತ ಜನರು ನವ ವರ್ಷವನ್ನು ಅತ್ಯಂತ ಆನಂದ, ಸಂಭ್ರಮಗಳಿಂದ ಸ್ವಾಗತಿಸಿದ್ದಾರೆ. ಶುಭಾಶಯ ಪತ್ರಗಳ ವಿನಿಮಯವಾಗಿದೆ. ಯುವಜನರು, ಮಕ್ಕಳು, ಮಹಿಳೆಯರಾದಿಯಾಗಿ ಸಂಭ್ರಮಿಸಿದ್ದಾರೆ. ಹೊಸ ವರ್ಷ ಅಂದರೆ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಜನರು ಸಂಕಲ್ಪ ಮಾಡುವುದಕ್ಕೆ ಒಂದು ರೀತಿಯ ವೇದಿಕೆಯಾಗಿದೆ. ಇಡೀ ವರ್ಷದಲ್ಲಿ ಆ ಸಂಕಲ್ಪವನ್ನು ಜೀವನದಲ್ಲಿ ಅನುಷ್ಠಾನಗೊಳಿಸುವುದಕ್ಕೆ ಪ್ರಯತ್ನವನ್ನಂತೂ ಮಾಡುತ್ತಾರೆ. ಅದು ಪೂರ್ಣಗೊಳ್ಳುವುದು ಅಥವಾ ಆಗದಿರುವುದನ್ನು ಆ ವರ್ಷದ ಕೊನೆಯಲ್ಲಿ ತಿರುಗಿ ನೋಡಿದಾಗ ವಸ್ತು ಸ್ಥಿತಿ ಅರ್ಥವಾಗುತ್ತದೆ. ಸಂಕಲ್ಪ ಈಡೇರಿದ್ದರೆ, ಹೊಸ ಸಂಕಲ್ಪ ಮಾಡುವುದು, ಇಲ್ಲವೇ ಹಳೆಯದನ್ನೇ ಜಾರಿಗೊಳಿಸಲು ಕಟಿಬದ್ಧರಾಗುವುದನ್ನು ವಿಶೇಷವಾಗಿ ರೂಢಿಸಿಕೊಂಡು ಬಂದಿದ್ದಾರೆ. ಅದರ ಜೊತೆಗೆ ಹಳೆಯ ವರ್ಷದ ಕಹಿ ಘಟನೆಗಳು, ನೆನಪುಗಳು ಮರುಕಳಿಸದಂತೆ ಪ್ರತಿಯೊಬ್ಬರೂ ಮನಃಪೂರ್ವಕವಾಗಿ ಆಶಿಸುತ್ತಾರೆ. ಈ ಹಿನ್ನೆಲೆಯಲ್ಲಿ ೨೦೨೫ರಲ್ಲಿ ಕೆಲ ಗಣ್ಯರು ಹಾಗೂ ಜನಸಾಮಾನ್ಯರ ಆಶಯ, ಸಂಕಲ್ಪಗಳೇನು ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಆಂದೋಲನ ಮಾಡಿದೆ.
ಸಮಗ್ರವಾಗಿ ವ್ಯಕ್ತಿತ್ವ ವಿಕಸನವಾಗಬೇಕು:
ಹೊಸ ವರ್ಷಕ್ಕೆ ಅಂತಲ್ಲ, ಯಾವಾಗಲೂ ಇರುವ ಒಂದು ಸಂಕಲ್ಪ ಏನೆಂದರೆ, ‘every day, in every way, one should be better ಅಂತ. ಪ್ರತಿನಿತ್ಯ ಎಲ್ಲ ರೀತಿಯಲ್ಲೂ ನಾವು ನಮ್ಮನ್ನು ಶ್ರೇಷ್ಠಗೊಳಿಸಿಕೊಳ್ಳಬೇಕು. ನಿನ್ನೆಯ ರಮೇಶ್‌ಗಿಂತ ಇವತ್ತಿನ ರಮೇಶ್ ಇನ್ನೂ ಚೆನ್ನಾಗಿರಬೇಕು. ಇವತ್ತಿನ ರಮೇಶ್‌ಗಿಂತ ನಾಳೆಯ ರಮೇಶ್ ಎಲ್ಲ ರೀತಿಯಲ್ಲೂ ಚೆನ್ನಾಗಿರಬೇಕು. ಒಬ್ಬ ಸಿನಿಮಾ ನಟನಾಗಿ, ನಿರ್ದೇಶಕನಾಗಿ ಮಾತ್ರವಲ್ಲ, ಒಬ್ಬ ಗಂಡನಾಗಿ, ಅಪ್ಪನಾಗಿ, ಅಣ್ಣನಾಗಿ, ತಮ್ಮನಾಗಿ … ಎಲ್ಲ ರೀತಿಯಲ್ಲೂ ಸಮಗ್ರವಾಗಿ ವ್ಯಕ್ತಿತ್ವದ ವಿಕಾಸವಾದರೆ ಚೆಂದ. ಶಾಶ್ವತವಾಗಿ ಸಮಾಜ ಸಾಗಬೇಕಾಗಿರುವ ಒಂದೇ ದಿಕ್ಕೆಂದರೆ ಅದು ಪ್ರೀತಿ. ಇನ್ನಷ್ಟು ಪ್ರೀತಿ, ಇನ್ನಷ್ಟು ಆತ್ಮೀಯತೆ, ಇನ್ನಷ್ಟು ಹೊಂದಾಣಿಕೆ ಜನರ ಮಧ್ಯದಲ್ಲಿ ಆದಷ್ಟು ಸಮಾಜ ಚೆನ್ನಾಗಿರುತ್ತದೆ. ಎಲ್ಲರಿಗೂ ನಮ್ಮದೇ ಆದ ಶಕ್ತಿಗಳಿರುತ್ತವೆ, ಪ್ರತಿಭೆಗಳಿರುತ್ತವೆ. ಆ ಶಕ್ತಿಗಳನ್ನು ಮತ್ತು ಪ್ರತಿಭೆಗಳನ್ನು ರಚನಾತ್ಮಕ ರೀತಿಯಲ್ಲಿ, ಸಕಾರಾತ್ಮಕ ವಿಷಯಗಳಲ್ಲಿ ಉಪಯೋಗಿಸಿದರೆ ಚೆನ್ನಾಗಿರುತ್ತದೆ. ಹಾಗಾಗಿ ನಮ್ಮ ಕೌಶಲ, ಪ್ರತಿಭೆ, ಬುದ್ಧಿ ಶಕ್ತಿಯನ್ನು ರಚನಾತ್ಮಕ ಹಾದಿಯಲ್ಲಿ ಬಳಸಬೇಕು ಎನ್ನುವುದು ನನ್ನ ಆಶಯವಾಗಿದೆ.
– ರಮೇಶ್ ಅರವಿಂದ್, ನಟ, ನಿರ್ದೇಶಕ.
ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು:
೨೦೨೪ರಲ್ಲಿ ನಾನು ಅಭಿನಯಿಸಿದ ‘ಕೃಷ್ಣಂ ಪ್ರಣಯ ಸಖಿ’ ಪ್ರೇಕ್ಷಕರು ಇಷ್ಟಪಟ್ಟದ್ದು, ನೂರು ದಿನಗಳ ಪ್ರದರ್ಶನ ಕಂಡದ್ದು ಎಲ್ಲರಿಗೂ ತಿಳಿದೇ ಇದೆ. ಈ ವರ್ಷ ಇಲ್ಲಿಯವರೆಗೆ ನಿರ್ವಹಿಸದೇ ಇರುವ ಪಾತ್ರಗಳ ಮೂಲಕ ಚಿತ್ರರಸಿಕರನ್ನು ರಂಜಿಸುವ ಸಂಕಲ್ಪ ನನ್ನದು. ಅದಕ್ಕೆ ಪೂರಕವಾಗಿ ಈಗಾಗಲೇ ಸಿದ್ಧತೆಗಳು ನಡೆದಿವೆ. ದೇಶದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ‘ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ’ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದು, ಅದರಲ್ಲಿ ನಾನು ನಟಿಸಲಿದ್ದೇನೆ. ಜೊತೆಗೆ ವಿಖ್ಯಾತ್ ನಿರ್ದೇಶನದ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿದ್ಧವಾಗುತ್ತಿದೆ. ದೇಶ ವಿದೇಶಗಳಲ್ಲಿ ಪರಸ್ಪರ ದ್ವೇಷ, ಸಮರಗಳ ಸುದ್ದಿಗಳನ್ನು ಕೇಳುತ್ತಿದ್ದೇವೆ. ಸಮಾಜದಲ್ಲಿ ಎಲ್ಲೆಡೆ ಶಾಂತಿ ನೆಲೆಸಲಿ, ಪರಸ್ಪರ, ಪ್ರೀತಿ ವಿಶ್ವಾಸದಿಂದ, ನೆಮ್ಮದಿಯಿಂದ ಜನಜೀವನ ಸಾಗಲಿ ಎನ್ನುವ ಹರಕೆ, ಹಾರೈಕೆ ನನ್ನದು. ಯಶಸ್ಸಿನ ಹಾದಿ ಯಾವಾಗಲೂ ಕಠಿಣ ಎನ್ನುವುದನ್ನು ನಾವು ತಿಳಿದಿರಬೇಕು. ಅದೃಷ್ಟವನ್ನು ಮಾತ್ರ ನಂಬಿ ಕೂರುವುದಲ್ಲ. ಕರ್ಮಣ್ಯೇವಾಧಿಕಾರಸ್ಥೇ… ಎಲ್ಲರಿಗೂ ಒಳಿತಾಗಲಿ.
–ಗೋಲ್ಡನ್ ಸ್ಟಾರ್ ಗಣೇಶ್, ನಟ, ನಿರ್ಮಾಪಕ, ನಿರ್ದೇಶಕ.
ಶಿಸ್ತುಬದ್ಧ ಜೀವನ ನಡೆಸುವ ಸಂಕಲ್ಪ:
ಈ ವರ್ಷ ಇನ್ನಷ್ಟು ಶಿಸ್ತುಬದ್ಧವಾಗಿ ಜೀವನ ನಡೆಸಬೇಕು, ನಿರ್ಧಾರಕ್ಕೆ ಬದ್ಧವಾಗಿರಬೇಕು ಎನ್ನುವುದು ನನ್ನ ಸಂಕಲ್ಪ. ಪ್ರತಿದಿನ ಬೇಗ ಏಳಬೇಕು, ಜಿಮ್‌ಗೆ ಹೋಗಬೇಕು, ಅಂದುಕೊಂಡ ಕೆಲಸಗಳನ್ನು ಮುಗಿಸಬೇಕು ಅಂತಂದುಕೊಂಡಿರುತ್ತೇವೆ. ಆರಂಭದ ಕೆಲವು ಸಮಯ ಉತ್ಸಾಹವಿರುತ್ತದೆ. ಅದಾದ ಮೇಲೆ, ಕ್ರಮೇಣ ಕಡಿಮೆಯಾಗುತ್ತದೆ. ಆ ಉತ್ಸಾಹ ಕೆಲವು ಸಮಯಕ್ಕೆ ಮಾತ್ರ ಸೀಮಿತವಾಗಬಾರದು, ನಿರಂತರವಾಗಿರಬೇಕು ಎಂಬ ನಿಟ್ಟಿನಲ್ಲಿ ಸಂಕಲ್ಪ ಮಾಡಿದ್ದೇನೆ. ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ನಾವು ಮಾಡುವುದೆಲ್ಲ ಸರಿ ಅಂದುಕೊಳ್ಳಬಾರದು. ತಮಗೆ ಇಷ್ಟ ಬಂದಂತೆ ಇರುವುದರ ಬದಲು, ಸರಿ ತಪ್ಪುಗಳ ವಿಮರ್ಶೆ ಮಾಡಿಕೊಂಡು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದರೆ, ಸೂಕ್ತವಾಗಿ ನಿರ್ಧಾರಗಳನ್ನು ತೆಗೆದುಕೊಂಡರೆ, ಜನರ ಬದುಕೂ ಹಸನಾಗುತ್ತದೆ, ಸಮಾಜವೂ ಸುಧಾರಿಸುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಈ ವರ್ಷ ಹೆಚ್ಚು ಜವಾಬ್ದಾರರಾಗಿರಿ ಮತ್ತು ನಮ್ಮನ್ನು ಪ್ರೀತಿಸುವವರ, ಪ್ರೀತಿಪಾತ್ರರ ಕುರಿತು ಕೂಡ ಯೋಚನೆ ಮಾಡಿದರೆ, ಜೀವನ ಇನ್ನಷ್ಟು ಚೆನ್ನಾಗಿರುತ್ತದೆ.
-ಸೋನು ಗೌಡ, ನಟಿ
ಪರಿಸ್ಪರ ಪ್ರೀತಿ ವಿಶ್ವಾಸ ಇರಲಿ
ಹೊಸ ವರ್ಷದಲ್ಲಿ ನಾವು ಪರಿಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವುದನ್ನು ಕಲಿಯೋಣ. ಮತ್ತೊಬ್ಬರ ಬದುಕಿಗೆ ಆಸರೆಯಾಗೋಣ. ೨೦೨೫ರಲ್ಲಿ ಸಮಾಜವನ್ನು ಒಡೆಯುವುದಕ್ಕಿಂತ ಉತ್ತಮ ಸಮ ಸಮಾಜ ನಿರ್ಮಾಣ ಮಾಡುವ ಕಡೆ ನಾವೆಲ್ಲ ಶ್ರಮಿಸೋಣ.
– ವಿಶ್ವನಾಥ್ ಚಂಗಚಹಳ್ಳಿ, ರಂಗಭೂಮಿ ಕಲಾವಿದ
ಹಿರಿಯರ ಮಾರ್ಗದರ್ಶನದಂತೆ ಜೀವನ:
ಬದುಕು ಎಂಬುದು ಹೇಗಿರಬೇಕು ಎಂಬುದನ್ನು ನಾವು ನಿಜಕ್ಕೂ ಅಕ್ಷರಜ್ಞಾನವಿಲ್ಲದ ಹಿರಿಯರ ಬಳಿ ಕಲಿಯಬೇಕು. ಅವರು ಒಳ್ಳೆಯ ಬದುಕನ್ನು ಕಂಡಿರುತ್ತಾರೆ. ಅವರ ಮಾರ್ಗದರ್ಶನದಂತೆ ಸನ್ನಡತೆಯಿಂದ ಎಲ್ಲರನ್ನೂ ಪ್ರೀತಿಸುತ್ತಾ ಬದುಕೋಣ.
–ಪವಿತ್ರ, ಮೈಸೂರು
ಎಲ್ಲರೊಂದಿಗೆ ಬೆರೆತು ಸಾಗಬೇಕು:
ಈ ವರ್ಷ ಯಾವುದೇ ಅಹಿತಕರ ಘಟನೆಗಳು ನಮ್ಮ ಜೀವನದಲ್ಲಿ ಸಂಭವಿಸಬಾರದು. ಮತ್ತೊಬ್ಬರಿಗೆ ತೊಂದರೆ ನೀಡದೆ, ನಾವು ನಮ್ಮವರು ಎಂಬ ಸಂತೋಷದಿಂದ ವರ್ಷಪೂರ್ತಿ ಎಲ್ಲರೊಂದಿಗೆ ಬೆರೆತು ಸಾಗಬೇಕು. ಸಾಧ್ಯವಾದಷ್ಟು ಹೊಸ ವರ್ಷವನ್ನು ತಂದೆ, ತಾಯಿ, ಕುಟುಂಬದೊಂದಿಗೆ ಆಚರಿಸುವೆ.
– ಮಾನಸ, ಬೆಟ್ಟಹಳ್ಳಿ
ಒಂದಷ್ಟು ಉಳಿತಾಯ ಮಾಡಬೇಕು:
ಹೊಸ ವರ್ಷದಲ್ಲಿ ವೈಯಕ್ತಿಕ ಮತ್ತು ಕುಟುಂಬದ ಸಾಲವನ್ನು ತೀರಿಸುವುದರ ಜೊತೆಗೆ ಒಂದಷ್ಟು ಉಳಿತಾಯ ಮಾಡಬೇಕೆಂದು ಸಂಕಲ್ಪ ಮಾಡಿದ್ದೇನೆ. ಹೀಗಾಗಿ ನನ್ನ ಜೀವನ ಶೈಲಿಯಲ್ಲಿ ಅನೇಕ ಬದಲಾವಣೆ ತಂದುಕೊಂಡಿದ್ದೇನೆ. ಅದನ್ನು ಮುಂದುವರಿಸುವುದಕ್ಕೆ ಆದ್ಯತೆ ನೀಡುತ್ತೇನೆ.
– ಶ್ರೀನಿವಾಸ್, ಮೈಸೂರು
ಹೊಸ ವರ್ಷ ಆನಂದಮಯವಾಗಲಿ:
ಜೀವನ ಎಂಬುದು ಕ್ಷಣಿಕವಷ್ಟೇ. ಗತಿಸಿ ಹೊದ ಘಟನೆಗಳನ್ನೇ ನೆನೆಯುತ್ತ ಕಾಲ ಕಳೆಯುವ ಬದಲು ಇವತ್ತಿನ ಈ ಕ್ಷಣದ ಬಗ್ಗೆ ಯೋಚನೆ ಮಾಡಬೇಕು. ಹೊಸ ವರ್ಷದಲ್ಲಿ ಪ್ರತಿಯೊಬ್ಬರೂ ಪ್ರತೀ ಕ್ಷಣವನ್ನು ಆನಂದಮಯಗೊಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು.
– ಯಶ್ವಂತ್ ಕುಮಾರ್, ಬಿಂಡೇಹಳ್ಳಿ
ಆರೋಗ್ಯಕರ ಹವ್ಯಾಸದ ಗುರಿ:
ಹೊಸ ವರ್ಷದಂದು ಹೊಸ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಉತ್ತಮ ಗುರಿ ಹೊಂದಬೇಕು.ಗುರಿಯತ್ತ ಸಾಗಲು ಪರಿಶ್ರಮ ಹಾಕಬೇಕು. ಜೀವನವನ್ನು ಆರೋಗ್ಯವಾಗಿ ಕಳೆಯುವ ಕಡೆ ಗಮನಹರಿಸಬೇಕು.
– ಹರ್ಷ, ವಕೀಲ.
ಆರೋಗ್ಯ ಕಾಪಾಡಿಕೊಳ್ಳುವ ಸಂಕಲ್ಪ:
ನೂತನ ವರ್ಷದಲ್ಲಿ ಆರೋಗ್ಯ ಕಾಪಾಡಿ ಕೊಳ್ಳುವ ಸಂಬಂಧ ಉತ್ತಮ ಅಭ್ಯಾಸ ಗಳನ್ನು ರೂಢಿಸಿ ಕೊಳ್ಳಲು ಸಂಕಲ್ಪ ಮಾಡಿದ್ದೇನೆ. ನೂತನ ಸ್ಥಳಗಳಿಗೆ ಪ್ರವಾಸ ಮಾಡುವ ಆಸೆ ಇದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕುವಂತಾಗ ಬೇಕು. ಪಿರಿಯಾಪಟ್ಟಣದ ಪರಿಸರ ಅಭಿವೃದ್ಧಿಯಾಗಬೇಕು.
–ದೀಪ ದೇವರಾಜು, ಗೃಹಿಣಿ, ಹೌಸಿಂಗ್ ಬೋರ್ಡ್, ಪಿರಿಯಾಪಟ್ಟಣ.
ಆರೋಗ್ಯ ಭಾಗ್ಯದ ಕಡೆ ಗಮನ ಹರಿಸಬೇಕು:
೨೦೨೪ರ ವರ್ಷದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಎರಡನ್ನೂ ಕಂಡಿದ್ದೇವೆ. ಹಾಗಾಗಿ ಹೊಸ ವರ್ಷ ಹೊಸ ಕಿರಣದೊಂದಿಗೆ ಹೊಸ ಮುಂಜಾನೆ ಯಾಗಲೆಂಬುದು ನನ್ನ ಆಶಯ. ನಾವು ಸಂಪತ್ತಿನ ಹಿಂದೆ ಬಿದ್ದಿದ್ದೇವೆ. ಹೊಸ ವರ್ಷದಲ್ಲಿ ನಾವು ಆರೋಗ್ಯ ಭಾಗ್ಯದ ಕಡೆ ಹೆಚ್ಚು ಗಮನ ನೀಡಬೇಕಿದೆ.
–ಎಂ.ಎಸ್.ಅನುಷಾ, ಸಾಫ್ಟ್ವೇರ್ ಇಂಜಿನಿಯರ್, ಸ್ವರ್ಣಸಂದ್ರ, ಮಂಡ್ಯ
ಇತರರಿಗೂ ಒಳಿತನ್ನೇ ಬಯಸೋಣ:
ಹಳೆಯ ನೋವುಗಳು ಈ ವರ್ಷದ ನಲಿವಿನಲ್ಲಿ ಮರೆಯುವಂತಾಗಬೇಕು. ನಮ್ಮ ಬದುಕಿನಲ್ಲಿ ಇರುವಷ್ಟು ದಿನ ಇತರರಿಗೂ ಒಳಿತನ್ನೇ ಬಯಸೋಣ. ಕಳೆದ ವರ್ಷದ ಕಹಿ ಯನ್ನು ಮರೆತು ೨೦೨೫ರಲ್ಲಿ ಹೊಸ ಜೀವನಕ್ಕೆ ಹೆಜ್ಜೆ ಇಡೋಣ. ನಮ್ಮ ಗುರಿ, ನಮ್ಮ ಶ್ರಮ, ನಮ್ಮ ಪ್ರಯತ್ನ ಇವುಗಳೇ ನಮ್ಮ ಬದುಕಿನ ದಾರಿ ದೀಪ.
–ಜಿ.ಎಸ್.ಸತ್ಯನಾರಾಯಣ, ಮಂಡ್ಯ
ಬದುಕಿಗೆ ಹೊಸ ದಿಕ್ಕಾಗಲಿ:
೨೦೨೪ರಲ್ಲಿ ಹಲವು ಸಾಮಾಜಿಕ ಸಮಸ್ಯೆಗಳ ನಡುವೆಯೂ ನಲಿವುಗಳನ್ನೂ ಕಾಣುವಂತಾಯಿತು. ಆದರೆ, ೨೦೨೫ರ ವರ್ಷ ನಮ್ಮ ಬದುಕಿಗೆ ಹೊಸ ದಿಕ್ಕನ್ನು ತೋರು ವಂತಾಗಲಿ, ಎಲ್ಲರ ಮನೆ – ಮನಗಳು ಸದ್ಭಾವನೆಯಿಂದ ಬೆಳಗಬೇಕಾಗಿದೆ. ಪ್ರೀತಿ ವಿಶ್ವಾಸ ಚಿಗುರಲಿ. ಆ ಮೂಲಕ ಜೀವನ ಹಸನಾಗಲಿ ಎಂಬುದು ನನ್ನ ಹಾರೈಕೆ.
–ಕೆ.ಪಿ.ಕುಮಾರ್, ಛಾಯಾಗ್ರಾಹಕರು, ಹೊಳಲು.
ನೆಮ್ಮದಿ ನೀಡುವ ವಿಚಾರ ಅಳವಡಿಸಿಕೊಳ್ಳಬೇಕು:
ಹಳೆಯ ವರ್ಷದಲ್ಲಿ ಮಾಡಿರುವ ತಪ್ಪುಗಳನ್ನು ಹೊಸ ವರ್ಷದಲ್ಲಿ ತಿದ್ದಿಕೊಳ್ಳಬೇಕು ಹಾಗೂ ಹೊಸ ವಿಷಯಗಳಿಗೆ ಮನಸ್ಸನ್ನು ಹದಗೊಳಿಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು. ಇದಕ್ಕೆ ೨೦೨೫ ವೇದಿಕೆ ಯಾಗಬೇಕಿದೆ. ಮನಸ್ಸಿಗೆ ನೆಮ್ಮದಿ ನೀಡುವ ಎ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು.
–ರಶೀದ್, ವಿರಾಜಪೇಟೆ
ಒಳ್ಳೆಯ ರೀತಿಯಲ್ಲಿ ಗುರುತಿಸಿಕೊಳ್ಳುವ ಸಂಕಲ್ಪ:
೨೦೨೪ರಲ್ಲಿ ಹಲವಾರು ಏಳು ಬೀಳು ಗಳನ್ನು ಕಂಡಿzನೆ. ಎಲ್ಲವನ್ನೂ ಆತ್ಮಾವ ಲೋಕನ ಮಾಡಿ ಕೊಳ್ಳಬೇಕಾದ ಸಮಯ ಬಂದಿದೆ. ಸಮಯದ ಪ್ರಾಮು ಖ್ಯತೆ ಬಗ್ಗೆ ಗಮನ ಹರಿಸಬೇಕಿದೆ. ೨೦೨೪ ರಲ್ಲಿ ಸಮಯವನ್ನು ಸರಿಯಾಗಿ ಬಳಸಲಿಲ್ಲ ಎನ್ನುವ ಕೊರಗನ್ನು ನಿವಾರಿಸಬೇಕಿದೆ. ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಗುರುತಿಸಿಕೊಳ್ಳುವ ಸಂಕಲ್ಪ ಮಾಡಿದ್ದೇನೆ.
–ಎಚ್.ಎಸ್.ರವಿ, ಸಿದ್ದಾಪುರ.
ಎಲ್ಲ ವಿಚಾರದಲ್ಲೂ ಯಶಸ್ಸಿನ ಸಂಕಲ್ಪ:
೨೦೨೪ ನನಗೆ ತುಂಬಾ ದುಃಖ ಕರವಾದ ವರ್ಷ. ಕೆಲವು ಏಳು ಬೀಳುಗಳ ಜತೆಗೆ ಅಣ್ಣ, ತಮ್ಮ, ಚಿಕ್ಕಪ್ಪ ಇತರರನ್ನು ಕಳೆದುಕೊಂಡಿದ್ದೇನೆ. ೨೦೨೫ರಲ್ಲಿ ತುಂಬಾ ಸಂತೋಷದಿಂದ ಕಳೆಯಬೇಕು ಎಂದುಕೊಂಡಿದ್ದೇನೆ. ಪ್ರತಿಯೊಂದು ವಿಚಾರದಲ್ಲೂ ಯಶಸ್ಸು ಸಾಧಿಸಬೇಕು ಎಂಬ ಸಂಕಲ್ಪ ನನ್ನದಾಗಿದೆ.
–ಲತಾಶ್ರೀ, ಮಡಿಕೇರಿ
ಈ ವರ್ಷ ಉತ್ತಮ ಮಳೆ, ಬೆಳೆ ಆಗಲಿ:
ಕಳೆದ ವರ್ಷ ಕೇರಳದ ವಯನಾಡು ಗುಡ್ಡ ಕುಸಿತ ಪ್ರಕರಣದಲ್ಲಿ ಹಲವರು ಸಮಾಧಿಯಾದರು. ಇಂತಹ ಘಟನೆಗಳು ಮರುಕಳಿಸ ಬಾರದು. ನವ ವರ್ಷದಲ್ಲಿ ಸರ್ವರಿಗೂ ಆರೋಗ್ಯ ನೆಮ್ಮದಿ, ಐಶ್ವರ್ಯ ಸಂಪತ್ತು ದೊರಕಲಿ. ಒಳ್ಳೆಯ ಮಳೆ – ಬೆಳೆ ಯೊಂದಿಗೆ ನವ ವರ್ಷ ಎಲ್ಲರ ಬದುಕಿಗೂ ಹರ್ಷ ತರಲಿ.
– ಎಚ್.ವಿ.ನಯನಾ, ಹನೂರು.
ನೊಂದವರಿಗೆ ಸಹಾಯ ಮಾಡುವ ಸಂಕಲ್ಪ:
ಹೊಸ ವರ್ಷದಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಶ್ರದ್ಧೆಯಿಂದ ಶ್ರಮ ಹಾಕೋಣ. ಸುತ್ತ ಲಿನ ಸಮಾಜದಲ್ಲಿ ಸೌಹಾರ್ದತೆ ಇರಲು ಸಹಕರಿಸಬೇಕಿದೆ. ನಾನು ಅಸಹಾಯಕರಿಗೆ ಸಹಾಯ ಹಸ್ತ ನೀಡುವ ಸಂಕಲ್ಪ ಮಾಡುತ್ತೇನೆ. ಯಾವುದೇ ಸವಾಲು ಎದುರಾದರೂ ತಾಳ್ಮೆಯಿಂದ ಎದುರಿಸಲು ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳೊಣ.
– ಮಹೇಶ್, ಕುಲಗಾಣ, ಚಾಮರಾಜನಗರ ತಾ.
ಪ್ರಗತಿಪರ ಕೃಷಿ ಚಟುವಟಿಕೆ ಸಂಕಲ್ಪ:
೨೦೨೫ರಲ್ಲಿ ಪ್ರಗತಿ ಪರ ಕೃಷಿಯಲ್ಲಿ ತೊಡಗಿಸಿಕೊಂಡು ಅದ್ಭುತ ಬೆಳೆ ಬೆಳೆ ಯುವ ಜೊತೆಗೆ ಕುಟುಂಬದ ಜೊತೆ ಸವಿಯಾದ ಜೀವನ ಕಳೆಯುವ ಉತ್ಸಾಹವಿದೆ. ಕಳೆದ ವರ್ಷ ಸಮಾಜದಲ್ಲಿ ಅನೇಕ ಸಿಹಿ ಕಹಿ ಘಟನೆಗಳನ್ನು ನೋಡಿದ್ದೇನೆ. ಅವುಗಳನ್ನು ಮರೆತು ಸಂತೋಷದಿಂದ ಬದುಕುವ ಪ್ರಯತ್ನ ಮಾಡುತ್ತೇನೆ.
–ಎಚ್.ಎಂ.ನಂದೀಶ್, ಹಂಗಳ, ಗುಂಡ್ಲುಪೇಟೆ ತಾ.
ಕೃಷಿಯಲ್ಲಿ ಮತ್ತಷ್ಟು ಶ್ರಮಿಸುವ ಸಂಕಲ್ಪ:
೨೦೨೫ನೇ ಇಸವಿಯಿಂದಾದರೂ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿ. ಜತೆಗೆ ಕೇಂದ್ರ ಸರ್ಕಾರ ಜನರ ಮೇಲೆ ಹೊರಿಸಿರುವ ತೆರಿಗೆಯನ್ನು ಕಡಿಮೆ ಮಾಡಿ ಉತ್ತಮ ಆಡಳಿತ ನೀಡಲಿ. ಇನ್ನು ನಾನು ಈ ವರ್ಷ ಕೃಷಿಯಲ್ಲಿ ಮತ್ತಷ್ಟು ಶ್ರಮಿಸಬೇಕು, ಹೈನುಗಾರಿಕೆ ಮಾಡಬೇಕು ಎಂಬ ಹಂಬಲವಿದೆ.
–ಕಾರ್ತಿಕ್, ಅಂತರಸಂತೆ, ಎಚ್.ಡಿ.ಕೋಟೆ ತಾ.
೨೦೨೫ರಲ್ಲಿ ವಿಶ್ವದಲ್ಲಿ ಸಾಮರಸ್ಯ ಬಿತ್ತನೆಯಾಗಲಿ:
ಎಲ್ಲ ದೇಶಗಳ ಲ್ಲಿಯೂ ಈ ವರ್ಷ ಸಾಮರಸ್ಯವನ್ನು ಬಿತ್ತಲಿ. ಎಲ್ಲರೂ ಪರಸ್ಪರ ಪ್ರೀತಿ ಯಿಂದ ಬದುಕು ವಂತಾಗಬೇಕು. ಭಾರತದಂತಹ ಸರ್ವಧರ್ಮ ರಾಷ್ಟ್ರದಲ್ಲಿ ಸಹಬಾಳ್ವೆಯ ಭಾವನೆ ಹೆಚ್ಚಾಗಬೇಕು. ೨೦೨೫ರಲ್ಲಿ ನಾನು ನನ್ನ ಕೆಲಸದಲ್ಲಿ ಮತ್ತಷ್ಟು ಶ್ರಮಿಸಿ ಉನ್ನತ ಸ್ಥಾನಕ್ಕೇರಬೇಕು ಎಂದುಕೊಂಡಿದ್ದೇನೆ.
–ಬಿ.ಸಿ.ಚೇತನ್, ಕೆ.ಬೆಳತ್ತೂರು, ಸರಗೂರು ತಾ.
ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು:
ಹೊಸ ವರ್ಷದಲ್ಲಿ ಯುವ ಸಮೂಹವಾದ ನಾವು ಹೊಸ ವರ್ಷದಲ್ಲಿ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಅದಕ್ಕಾಗಿ ಉತ್ತಮ ಆಹಾರ ಶೈಲಿ, ಒಂದಿಷ್ಟು ವ್ಯಾಯಾಮದ ಜೊತೆ ಗುಣಮಟ್ಟದ ಜೀವನ ನಡೆಸುತ್ತೇವೆ ಎಂಬ ಸಂಕಲ್ಪ ನಮ್ಮದಾಗಬೇಕು.
– ಕಿರಣ್, ಬಾಡಿ ಬಿಲ್ಡರ್
ಬೆಂಗಳೂರು : ಬ್ಯಾನರ್ ಅಳವಡಿಕೆ ಸಂಬಂಧಪಟ್ಟ ಬಳ್ಳಾರಿಯಲ್ಲಿ ನಡೆದ ಗಲಭೆ ಖಂಡಿಸಿ ಪಾದಯಾತ್ರೆ ನಡೆಸುವ ವಿಷಯದಲ್ಲಿ ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.…
ಮೈಸೂರು: ವರ್ಕ್ ಫ್ರಂ ಹೋಂ ಕೆಲಸಕ್ಕೆ ಸೇರಿದ ಮಹಿಳೆ ನಂತರ ನಕಲಿ ಕಂಪೆನಿಯವರ ಮಾತನ್ನು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ…
ಮೈಸೂರು : ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಳವಾಡಿ ಹಾಗೂ ಕಡಕೊಳ ಬಳಿ ನಡೆದಿದೆ. ಮೊದಲನೇ…
ಮೈಸೂರು : ವರ್ಷದ ಮೊದಲ ಹಬ್ಬ ಸುಗ್ಗಿ ಸಂಕ್ರಾತಿ ಹಿನ್ನೆಲೆ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ…
ಹನೂರು : ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತನೋರ್ವ ಗಂಭೀರವಾಗಿ ಕೈಗೊಂಡಿರುವ…
ಹನೂರು : ನೆಮ್ಮದಿಯಾಗಿ ವಾಸಿಸಲು ಸ್ವಂತ ಸೂರಿಲ್ಲ, ಜೀವನೋಪಯಕ್ಕಾಗಿ ವೃದ್ಯಾಪ್ಯ ವೇತನವಿಲ್ಲ. ವಿಳಾಸಕ್ಕಾಗಿ ಆಧಾರ್ ಕಾರ್ಡ್ ಇಲ್ಲ. ತುತ್ತು ಅನ್ನಕ್ಕಾಗಿ…