• ಕೀರ್ತಿ
ತಾಯಿ ಶೀಲಾಕುಮಾರಿ ಅವರ ಪ್ರಭಾವವೇ ಭೀಮೇಶ್ ಅವರನ್ನು ಕಲೆಯತ್ತ ಸೆಳೆಯಿತು. ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಡಿ. ಶೀಲಾಕುಮಾರಿ ಅವರು ಚಿತ್ರಪ್ರದರ್ಶನ, ಶಿಲ್ಪಕಲೆಗಳಿಗೆ ಸಂಬಂಧಿಸಿದಂತೆ ತಮ್ಮ ಯಾವುದೇ ಕಾರ್ಯಕ್ರಮಗಳಿದ್ದರೂ ಮಗನನ್ನೂ ಕರೆದುಕೊಂಡು ಹೋಗುತ್ತಿದ್ದರು. ಆರಂಭದಲ್ಲಿ ಸುಮ್ಮನೆ ಕಾಣಿಸುತ್ತಿದ್ದ ಶಿಲ್ಪಗಳೆಲ್ಲ, ತಲ್ಲ, ಸ್ವಲ್ಪ ಸ್ವಲ್ಪ ಹೊತ್ತು ಕಳೆಯುತ್ತಾ, ತನ್ನೊಳಗಿನ ಕತೆಗಳನ್ನು ಹೇಳುತ್ತಿದ್ದಂತೆ ಭೀಮೇಶ್ ಅವರಿಗೆ ಅನಿಸುತ್ತಿತ್ತಂತೆ. ಇಂಜಿನಿಯರಿಂಗ್ ಓದಿದ್ದರಿಂದ ಸಹಜವಾಗಿ ಸಾಫ್ಟ್‌ವೇರ್ ಉದ್ಯಮ ಕೈಬೀಸಿ ಕರೆಯಿತು. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾ, ಅಮೆರಿಕದ ಶಿಕಾಗೋ ಕಡೆಗೂ ಉದ್ಯೋಗಕ್ಕಾಗಿ ಪ್ರಯಾಣ ಬೆಳೆಸಿದರು. ಕಲೆ ಅದ್ಯಾವ ಮಾಯಕದಲ್ಲಿ ಇವರ ಆಸಕ್ತಿಯನ್ನು ಹಿಡಿದಿಟ್ಟಿತೊ, ಕೆಲಸದ ಒತ್ತಡದ ನಡುವೆಯೂ ಒಂದಷ್ಟು ಸಮಯ ಹೊಂದಿಸಿಕೊಂಡು ಪೇಂಟಿಂಗ್ಸ್, ಶಿಲ್ಪಕೃತಿಗಳನ್ನು ಕಣ್ಣುಂಬಿಕೊಳ್ಳುತ್ತಿದ್ದರು. ಬೆಂಗಳೂರು, ಮುಂಬೈ, ದೆಹಲಿಯ ಕಲಾ ಪ್ರದರ್ಶನಕ್ಕೆ ಭೀಮೇಶ್ ಅವರ ಹಾಜರಾತಿ ಇರುತ್ತಿತ್ತು.
ಹಲವು ವರ್ಷಗಳು ಸಾಫ್ಟ್‌ವೇರ್ ಉದ್ಯಮದಲ್ಲಿದ್ದರೂ, ಅಂತರಂಗದ ತುಡಿತ ಮಾತ್ರ ಕಲೆಯ ಬದುಕನ್ನು ಬಯಸುತ್ತಿತ್ತು. ಕಲೆ ಕೈ ಹಿಡಿಯುತ್ತದೋ, ಇಲ್ಲವೋ? ಎಂಬ ತ್ರಿಶಂಕು ಸ್ಥಿತಿಯ ಒದ್ದಾಟವನ್ನು ಅನುಭವಿಸಿದ್ದರು. ಏನಾದರೂ ಸರಿ, ಆದದ್ದಾಗಲಿ ಎಂಬ ಧೈರ್ಯದಿಂದ ಅಮೆರಿಕದಿಂದ ಹೊರಟು ಭಾರತಕ್ಕೆ ಬಂದಿಳಿದಿದ್ದಾಯಿತು. ಈ ಸಂದರ್ಭದಲ್ಲಿ ಭೀಮೇಶ್ ಅವರು ನೆನೆಯುವುದು ಎರಡು ವ್ಯಕ್ತಿತ್ವಗಳನ್ನು ಕಲೆಯ ಬದುಕನ್ನು ಆಯ್ದುಕೊಳ್ಳುವುದಕ್ಕೆ ಜೀವಚೈತನ್ಯ ತುಂಬಿದವರು ತಾಯಿ ಶೀಲಾಕುಮಾರಿ. ಮಗನ ಬದುಕೆಲ್ಲಿ ಅತಂತ್ರವಾಗುವುದೆಂಬ ಕೊಂಚವೂ ಆತಂಕವಿಲ್ಲದೆ, ಮಗನ ಮೇಲಿಟ್ಟಷ್ಟೇ ನಂಬಿಕೆ, ಕಲೆಯ ಮೇಲೂ ಇದ್ದದ್ದರಿಂದ ಮಗನ ಆಸೆಗೆ ಬೆಂಬಲವಾಗಿದ್ದರು.
ಸಾಫ್ಟ್‌ವೇರ್ ಉದ್ಯೋಗ ಬಿಡಬೇಕೆಂಬ ದೃಢನಿಶ್ಚಯದ ಹಿನ್ನೆಲೆಗೂ ಒಂದು ಘಟನೆಯಿದೆ. ಭೀಮೇಶ್ ಆಗ ವಿದ್ಯಾರ್ಥಿ. ಒಮ್ಮೆ ಮೈಸೂರಿನ ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯಲ್ಲಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಮಾತಾಡಿಸಿದ್ದರು; ಅಂದಿನ ಸಂವಾದದಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದರು. ‘ಬದುಕಿನಲ್ಲಿ ಅನನ್ಯವಾಗಿರುವುದಕ್ಕೆ ಪ್ರಯತ್ನಿಸಿ. ನೆನಪಿಡಿ, ಆತ್ಮವಿಶ್ವಾಸವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಗುರಿಸಾಧನೆ ತಕ್ಷಣಕ್ಕೆ ಆಗುವುದಿಲ್ಲ; ದೀರ್ಘ ಸಮಯ ಹಿಡಿಯುತ್ತದೆ. ಕಾಯುವ ತಾಳೆ ಸಾಧಕನಾಗಬಯಸುವನಿಗೆ ಇರಬೇಕಷ್ಟೆ, ಅಕ್ಷರಶಃ ಕಲಾಂ ಅವರು ಹೇಳಿದ ಪದ ಪದವನ್ನೂ ಇಂದಿಗೂ ಗುನುಗಿಕೊಳ್ಳುತ್ತಾರೆ. 2015ಕ್ಕಾಗಲೇ ಭೀಮೇಶ್ ಅಮೆರಿಕದಿಂದ ಹೊರಟು, ಮೈಸೂರಿಗೆ ಬಂದಿಳಿದಾಗಿತ್ತು. ಏನು ಮಾಡಬೇಕು? ಜನರನ್ನು ತಲುಪುವ ಬಗೆ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳನ್ನು ತಾಯಿಯ ಜೊತೆ ಚರ್ಚಿಸಿದ್ದೂ ಆಯಿತು. ಅಂತೂ ಒಂದು ವರ್ಷದ ಅಂತರದೊಳಗೆ ಆನ್ ಲೈನ್ ಆರ್ಟ್ ಗ್ಯಾಲರಿಯನ್ನು ಬಲ್ಲಾಳ ವೃತ್ತದಲ್ಲಿರುವ ನಿತ್ಯೋತ್ಸವ ಕಟ್ಟಡದಲ್ಲಿ ತೆರೆದೇಬಿಟ್ಟರು.
ಎರಡು ವರ್ಷಗಳ ನಂತರ ಆನ್‌ಲೈನ್ ಆರ್ಟ್ ಗ್ಯಾಲರಿ, ಜೆಎಸ್‌ಎಸ್ ಕಾಲೇಜಿನ ಪಕ್ಕದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರವಾಯಿತು. ಗ್ಯಾಲರಿ ಮೂರು ಅಂಶಗಳನ್ನು ಮುಖ್ಯವಾಗಿಸಿಕೊಂಡಿತ್ತು. ಕೇವಲ ಕಲಾ ಪ್ರದರ್ಶನ ಮಾತ್ರವಲ್ಲ, ಕಲೆಯ ಕುರಿತ ಅರಿವನ್ನು ಮೂಡಿಸುವತ್ತವೂ ತಮ್ಮ ಗ್ಯಾಲರಿಯನ್ನು ಭೀಮೇಶ್ ವಿಸ್ತರಿಸಿದ್ದರು. ಕಲಾವಿದರು ತಮ್ಮ ಕಲಾಕೃತಿಯ ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ವಿವರಿಸುವ ಜೊತೆಗೆ ಪ್ರಶ್ನೆ ಕೇಳುವ, ಅಭಿಪ್ರಾಯವನ್ನು ಹಂಚಿಕೊಳ್ಳುವ ಮುಕ್ತ ಸಂವಾದದ ವಿಶೇಷ ಸಾಧ್ಯತೆಯನ್ನು ಸೃಷ್ಟಿಸಿದ್ದರು. ಈ ಮಾತುಕತೆಯ ನಡುವೆ ಡಾಕ್ಟರ್, ಇಂಜಿನಿಯರ್ ಅಥವಾ ಇನ್ಯಾವುದೋ ಸರ್ಕಾರಿ ಉದ್ಯೋಗವನ್ನು ಪಡೆಯುವಂತೆ, ಒಬ್ಬ ಕಲಾವಿದ ಕೂಡ ತನ್ನ ಬದುಕನ್ನು ಆರ್ಥಿಕವಾಗಿ ನಿಭಾಯಿಸಿಕೊಳ್ಳಬಲ್ಲ. ದೂರದೃಷ್ಟಿ ಇದ್ದರೆ ಚಿತ್ರಗಾರಿಕೆ, ಶಿಲ್ಪಕೆತ್ತನೆಯಿಂದಲೂ ಆದಾಯದ ಮಾರ್ಗಗಳನ್ನು ಹುಡುಕಬಹುದೆನ್ನುವ ವಿವೇಕವನ್ನು ದಾಟಿಸುತ್ತಿದ್ದರು.
ಕಲಾ ಪ್ರದರ್ಶನ, ಅರಿವಿನ ಜೊತೆಗೆ ಭೀಮೇಶ್ ಅವರಿಗೆ ಜನಪ್ರೀತಿಯನ್ನು ತಂದುಕೊಟ್ಟಿದ್ದು, ಆರ್ಟ್ ಪ್ರಾಜೆಕ್ಟ್‌ಗಳು, ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಜೆಕ್ಟ್ ಮಾಡುವ ಜವಾಬ್ದಾರಿ ಸಿಕ್ಕಾಗ, ಯೋಚನೆಗಳೆಲ್ಲ ಧುತ್ತೆಂದು ಕಣ್ಣುಂದೆ ಮೂರ್ತರೂಪ ಪಡೆದಂತಿತ್ತು. ಕಾಡಿನ ಸುತ್ತ ಇದ್ದ ಕಣ್ಣೂರಿನ ವಿಮಾನ ನಿಲ್ದಾಣದಲ್ಲಿ ತಿಂಗಳುಗಟ್ಟಲೆ ಕೆಲಸ ಮಾಡುವುದು ಸವಾಲಿನ ಕೆಲಸವೇ ಆಗಿತ್ತು. ಕಣ್ಣೆದುರೇ ಓಡಾಡುತ್ತಿದ್ದ ಕಾಡುಪ್ರಾಣಿಗಳು ಬೇರೆ. ಭಯಸ್ಥರಾಗಿದ್ದರೆ ಈ ಕೆಲಸಕ್ಕೆಲ್ಲ ಉದ್ದಂಡ ನಮಸ್ಕಾರ ಮಾಡಿ ಬರುತ್ತಿದ್ದರೋ ಏನೋ.
ಮುಂದೆ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉತ್ತರ ಕರ್ನಾಟಕದ ಜಂಗಮರ ಜೀವನಶೈಲಿ ಮತ್ತು ಸಂಸ್ಕೃತಿಯನ್ನು ಬಿತ್ತರಿಸುವ ಪ್ರಾಜೆಕ್ಟ್ ಸಿಕ್ಕಿತು. ಪೇಂಟಿಂಗ್ಸ್ ಮೂಲಕ ಕಲಾ ಪ್ರದರ್ಶನ ಜೊತೆಯಲ್ಲೇ ಮಾರಾಟವೂ ಭರದಿಂದ ಸಾಗಿತು. ಕನಸಿನ ಹಕ್ಕಿ ಹೀಗೆ ರಸ್ತೆಯಗಲಿಸಿ, ಹಾರುತ ಲಿತ್ತು; ಜಗತ್ತೂ ವಿಸ್ಮಯದ ಕಣೋಟದಿಂದ ಕಾಣುತ್ತಿತ್ತು. ಜಯದೇವ ಆಸ್ಪತ್ರೆಯಲ್ಲಿ ಕಲಾ ಪ್ರದರ್ಶನವನ್ನು ಮಾಡಬೇಕೆಂದು ಇನ್ಫೋಸಿಸ್ ಫೌಂಡೇಶನ್‌ನಿಂದ ಪ್ರಾಜೆಕ್ಟ್ ಸಿಕ್ಕಿದಾಗ ಮನಸ್ಸಿನೊಳಗೆ ತೀರದಷ್ಟು ಹಿಗ್ಗು. ವಿಶೇಷವಾಗಿ ಹೃದಯಕ್ಕೆ ಸಂಬಂಧಿಸಿದಂತೆ ಚಿತ್ರಕೃತಿಗಳನ್ನು ಪ್ರದರ್ಶಿಸಬೇಕಿತ್ತು. ಡಾ. ಮಂಜುನಾಥ್ ಅವರು ತಮಗೆ ಬೇಕಾದ ಅಗತ್ಯತೆಯನ್ನು ತಿಳಿಸಿ, ಸಲಹೆ ನೀಡಿದ ಕ್ಷಣಗಳೆಲ್ಲ ಭೀಮೇಶ್ ಅವರ
ಪಾಲಿಗೆ ಕಲಿಕೆಯ ನೆನಪಾಗಿದೆ.
ಎರಡು ವರ್ಷಗಳವರೆಗೆ ಭರದಿಂದ ನಡೆದಿದ್ದ ಚಟುವಟಿಕೆಗಳೆಲ್ಲ ಕೋವಿಡ್ ದುರಿತ ತ ಕಾಲಕ್ಕೆ ನೇಪಥ್ಯ ಸೇರಿದವು. ಜಗತ್ತಿಗೆ ಜಗತ್ತೇ ಮಹಾಮಾರಿಯ ಎದುರು ಕೈಚೆಲ್ಲಿ ಕುಳಿತಿದ್ದಾಗ, ತನ್ನಿಂದಾದಷ್ಟು ಪ್ರಯತ್ನ ಮಾಡಬೇಕೆಂದರೂ ಉತ್ತಮ ಫಲಿತಾಂಶ ದೊರೆಯಲಿಲ್ಲ. ತಾಯಿ ಶೀಲಾಕುಮಾರಿ ಅವರ ದೇಹ ಮನಸ್ಸುಗಳೆರಡೂ ಸದಾ ಚಲನಶೀಲವಾಗೇ ಇರುತ್ತವೆ. ಸಾಕ್ಷಿಯೆಂಬಂತೆ ಚಾರು ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ ಅಡಿಗಲ್ಲನ್ನು ಹಾಕುತ್ತಾ ಚಾರು ಸಾಂಸ್ಕೃತಿಕ ಪ್ರತಿಷ್ಠಾನದ ಕಟ್ಟಡ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ, ಎರಡು ಅಲೆಗಳು ಬಾಳ ಸಾಗರಕ್ಕೆ ತಂದೊಡ್ಡಿದ ಆತಂಕ ಇನ್ನೆಂದೂ ಕಾಡದಿರಲಿ ಎಂಬ ಪ್ರಾರ್ಥನೆ ಭೀಮೇಶ್ ಅವರದು.
ಕಲೆಯನ್ನು ಬದುಕಾಗಿಸಿಕೊಂಡ ಭೀಮೇಶ್ ಅವರು ಕಳೆದ ಭಾನುವಾರ ಮೈಸೂರಿನ ರಿಂಗ್‌ರೋಡ್ ನಲ್ಲಿರುವ ಎಸ್.ಬಿ.ಎಂ. ಮತ್ತು ಇತರ ಬ್ಯಾಂಕ್ ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಬಡಾವಣೆಯಲ್ಲಿರುವ ತಮ್ಮ ಸ್ವಂತ ಕಟ್ಟಡ, ಚಾರು ಸಾಂಸ್ಕೃತಿಕ ಪ್ರತಿಷ್ಠಾನದ ಮೇಲ್ಮಹಡಿಯಲ್ಲಿ ಚಾರು ಆರ್ಟ್ ಗ್ಯಾಲರಿಯನ್ನು ಮತ್ತೆ ಆರಂಬಿಸಿದ್ದಾರೆ. ಇಲ್ಲಿ ಆಯ್ದ ಕಲಾಕೃತಿಗಳ ಪ್ರದರ್ಶನದ ಜೊತೆಗೆ ಮಾರಾಟವೂ ಇದೆ.
keerthisba2018@gmail.com
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…