ಚಿರಂಜೀವಿ ಸಿ.ಹುಲ್ಲಹಳ್ಳಿ
ಮೈಸೂರು: ನಾಟಕ, ಸಂಗೀತ, ನಾಟ್ಯ ಕಲೆಗಳನ್ನು ಪಸರಿಸುವ ಕೇಂದ್ರವೇ ಆಗಿರುವ ನಗರದ ಕಲಾಮಂದಿರ ಕಾಯಕಲ್ಪದ ನಿರೀಕ್ಷೆಯಲ್ಲಿ ಸೊರಗುತ್ತಿದೆ. ಕಲಾಮಂದಿರದ ನವೀಕರಣಕ್ಕೆ ಕೆಲ ತಿಂಗಳ ಹಿಂದೆಯೇ ಶಂಕುಸ್ಥಾಪನೆ ನೆರವೇರಿಸಲಾಗಿದ್ದರೂ ಕಾಮಗಾರಿ ಆರಂಭ ಆಗಿಲ್ಲದಿರುವುದು ವಿಪರ್ಯಾಸ. ಇದರಿಂದ ಕಲಾಸಕ್ತರಲ್ಲಿ ನಿರಾಸೆ ಮೂಡಿದ್ದು, ಕಲಾ ಪ್ರದರ್ಶನಗಳಿಗೂ ಹಿನ್ನಡೆಯಾಗಿದೆ.
೨೦೨೫ರ ಜೂನ್ ತಿಂಗಳಲ್ಲಿ ನಡೆದ ಸರ್ಕಾರದ ಎರಡು ವರ್ಷಗಳ ‘ಸಾಧನಾ ಸಮಾವೇಶ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಾಮಂದಿರದ ನವೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕೆಲ ತಿಂಗಳುಗಳ ಹಿಂದೆಯೇ ಡಿಪಿಆರ್ ಕೂಡ ಸಿದ್ಧಪಡಿಸಲಾಗಿದೆ. ಆದರೂ ಕಾಮಗಾರಿ ಆರಂಭವಾಗಿಲ್ಲ.
ಸರ್ಕಾರದ ಅನುದಾನ ಬಿಡುಗಡೆ ಸಂಬಂಧ ಪತ್ರ ವ್ಯವಹಾರ ನಡೆದಿದ್ದು, ಇದರ ಜೊತೆಗೆ ಮುಂದಿನ ವಾರದೊಳಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಸ್.ಶಿವರಾಜ್ ತಂಗಡಗಿ ಅವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ತಿಳಿಸಿದರು.
ಏನಿದು ಯೋಜನೆ?: ಕಲಾಮಂದಿರದ, ರಂಗಾಯಣ ಹಾಗೂ ವಿಶ್ವ ಕನ್ನಡ ಸಮ್ಮೇಳನದ ೨೨ ಅತಿಥಿ ಗೃಹಗಳ ನವೀಕರಣಕ್ಕೆ ಸಮಗ್ರ ನವೀಕರಣ ಯೋಜನೆ ರೂಪಿಸಿ ೧೪.೬೩ ಕೋಟಿ ರೂ.ಅನುದಾನ ನೀಡಲು ಸರ್ಕಾರ ಸಮ್ಮತಿಸಿ ನಾಲ್ಕೈದು ತಿಂಗಳು ಕಳೆದಿವೆ.
ಕಲಾಮಂದಿರ ನಿರ್ಮಾಣವಾಗಿ ಹಲವು ದಶಕಗಳೇ ಕಳೆದಿವೆ. ಮಳೆಗಾಲದಲ್ಲಿ ನೀರು ಸೋರುತ್ತಿದೆ. ಶೌಚಾಲಯ ವ್ಯವಸ್ಥೆ ಸರಿಯಿಲ್ಲ. ಆಸನಗಳು ಹರಿದು ಹೋಗಿದ್ದು ಜನರು ಕೂರಲ ಮರ್ಪಕವಾಗಿಲ್ಲ. ಧ್ವನಿ ಮತ್ತು ಬೆಳಕಿನ ಲೋಪವಿದ್ದು ಇದರಿಂದ ಕಲಾಮಂದಿರ ಕಳೆಗುಂದುತ್ತದೆ. ರಂಗಾಯಣದ ಶ್ರೀರಂಗವೇದಿಕೆ ಹಾಗೂ ಲಂಕೇಶ್ ಸಭಾಂಗಣ ಕೂಡ ಮಳೆಗಾಲದಲ್ಲಿ ಸೋರುತ್ತವೆ. ಸರ್ಕಾರ ಘೋಷಣೆ ಮಾಡಿರುವ ಅನುದಾನದಲ್ಲಿ ಇವುಗಳಿಗೂ ಕಾಯಕಲ್ಪ ಮಾಡಲಾಗುವುದು.
ಕಲಾಮಂದಿರದ ವೇದಿಕೆಯ ಮರದ ನೆಲಹಾಸು ಬದಲಾವಣೆ. ಗ್ರೀನ್ ರೂಂ ಹಾಗೂ ಸಾರ್ವಜನಿಕ ಶೌಚಾಲಯಗಳ ನವೀಕರಣ. ಅವುಗಳಿಗೆ ಸೆನ್ಸಾರ್ ಆಧರಿತ ನಲ್ಲಿಗಳ ಅಳವಡಿಕೆ ಮಾಡಬೇಕು. ಒಟ್ಟು ೧,೨೮೦ ಕುರ್ಚಿಗಳಿದ್ದು, ಅವುಗಳ ಬದಲಾವಣೆ, ಅಕಾಸ್ಟಿಕ್ ವಾಲ್‌ಪ್ಯಾನಲಿಂಗ್ ಮೇಲ್ದರ್ಜೆಗೇರಿಸು ವುದು, ಮೊದಲ ಮಹಡಿಗೆ ಲಿಫ್ಟ್ ಅಳವಡಿಕೆ, ದೊಡ್ಡ ಪ್ರಮಾಣದಲ್ಲಿ ಕಟ್ಟಡ ಸೋರುತ್ತಿದ್ದು ತಡೆಗಾಗಿ ಚಾವಣಿಯಲ್ಲಿ ದುರಸ್ತಿ ಮತ್ತಿತರ ಕಾರ್ಯಗಳು ನಡೆಯಲಿವೆ.
ಕಲಾ ಪ್ರದರ್ಶನಗಳು ನಡೆಯುವ ಸುಚಿತ್ರಾ ಕಲಾ ಗ್ಯಾಲರಿಯ ನವೀಕರಣ, ಪುಸ್ತಕ ಮಳಿಗೆಯ ಪಕ್ಕದಲ್ಲೊಂದು ಹೊಸದಾಗಿ ಮೀಟಿಂಗ್ ಹಾಲ್ ನಿರ್ಮಾಣ, ಪುಸ್ತಕ ಮಳಿಗೆಯ ನವೀಕರಣ, ಕಲಾಮಂದಿರದ ಇಡೀ ಪ್ಲಂಬಿಂಗ್ ಲೈನ್ ಹೊಸದಾಗಿ ನಿರ್ಮಾಣ, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯ (ಎಸಿ) ಕಲ್ಪಿಸಲು ಇಲಾಖೆ ನಿರ್ಧರಿಸಿದೆ. ಆ ಮೂಲಕ ಕಲಾಮಂದಿರವನ್ನು ಅತ್ಯಾಧುನಿಕವಾಗಿ ರೂಪಿಸುವುದು ನಮ್ಮ ಉದ್ದೇಶ ಎಂದು ಸುದರ್ಶನ್ ಮಾಹಿತಿ ನೀಡಿದರು.
ಕಲಾಮಂದಿರ ಪ್ರವೇಶ ದ್ವಾರದಲ್ಲಿರುವ ಗಾಜುಗಳಿಗೆ ಟೀಕ್ ಮರದ ಫ್ರೇಮ್ ಅಳವಡಿಸಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗುವುದು, ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವ ಕೆಲಸವೂ ಆಗಲಿದೆ ಎಂದು ಅವರು ವಿವರಿಸಿದರು.
ರಂಗಾಯಣ ಹೊಸ ವಿನ್ಯಾಸ: ವಸತಿ ಗೃಹಗಳನ್ನು ರಂಗಾಯಣದ ರೆಪರ್ಟರಿ ಹಾಗೂ ಭಾರತೀಯ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಇಲಾಖೆಯ ಸುಪರ್ದಿಯಲ್ಲಿರುವ ಮನೆಗಳಲ್ಲಿ ೬ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. ಎಲ್ಲವನ್ನೂ ನವೀಕರಿಸಿ ಬಳಕೆಗೆ ಒದಗಿಸಲಾಗುವುದು. ಅತಿಥಿಗಳು ಬಂದಾಗ ತಂಗಲು ಅನುವಾಗುವಂತೆ ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು. ರಂಗಾಯಣದ ಶ್ರೀರಂಗ ವೇದಿಕೆಯನ್ನು ೧೦೦ ಆಸನಗಳ ಇಂಟಿಮೇಟ್ ಥಿಯೇಟರ್ ಆಗಿ ನವೀಕರಿಸುವುದು, ಭಾರತೀಯ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ಶಾಲೆ ನಡೆಯುವ ಘಟಕ ಗ್ರಂಥಾಲಯ ಲಂಕೇಶ್ ಹಾಲ್ ಹಾಗೂ ಆಡಳಿತ ಕಚೇರಿಯ ವ್ಯವಸ್ಥೆಯ ನವೀಕರಣ ಮಾಡಲಾಗುವುದು ಎಂದು ಸುದರ್ಶನ್ ವಿವರಿಸಿದರು.
೨೩ ಅತಿಥಿ ಗೃಹಗಳಿಗೆ ಹೊಸ ರೂಪ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಪರ್ದಿಯಲ್ಲಿ ೨೩ ಮನೆಗಳಿದ್ದು, ಇವುಗಳು ಸಂಪೂರ್ಣ ಹದಗೆಟ್ಟಿವೆ. ಮಳೆ ಬಂದರೆ ಸೋರುತ್ತಿವೆ. ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ಇವುಗಳ ನವೀಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಸುದರ್ಶನ್ ಮಾಹಿತಿ ನೀಡಿದರು.
” ಅನುದಾನ ಬಿಡುಗಡೆಗೆ ಈಗಾಗಲೇ ಪತ್ರ ವ್ಯವಹಾರ ನಡೆಸಲಾಗಿದೆ. ಇಲಾಖೆಯ ಸಚಿವರೊಂದಿಗೆ ಸಭೆ ನಡೆಸಿ ಅನುದಾನ ಬಿಡುಗಡೆಯ ಬಗ್ಗೆ ಚರ್ಚೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಬಹುರೂಪಿಯ ಬೆಳ್ಳಿ ಹಬ್ಬದ ಸಂಭ್ರಮ ಇರುವುದರಿಂದ ಸದ್ಯಕ್ಕೆ ಕಾಮಗಾರಿ ಆರಂಭಿಸಿ ಮುಗಿಸುವುದು ಕಷ್ಟ. ಹೀಗಾಗಿ ೨೦೨೬ರ ಜನವರಿ ತಿಂಗಳಿಂದ ಕಾಮಗಾರಿ ಪ್ರಾರಂಭಿಸಬಹುದು.”
ಎಂ.ಡಿ.ಸುದರ್ಶನ್, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಮೈಸೂರು: ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವ–2026ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕ ಪ್ರದರ್ಶನದಲ್ಲಿ ಇಂದು ಪ್ರದರ್ಶಿತವಾದ “ಸೂರ್ಯ–ಚಂದ್ರ”…
ಬೆಂಗಳೂರು: ಜನವರಿ.16ರಂದು ನಾನು ದೆಹಲಿಗೆ ಹೋಗುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇಂದು ಬೆಳಿಗ್ಗೆ ಪ್ರಯತ್ನ ವಿಫಲವಾದರೂ ಪ್ರಾರ್ಥನೆ…
ಥೈಲ್ಯಾಂಡ್‌ನ ಈಶಾನ್ಯದಲ್ಲಿ ಕ್ರೇನ್ ರೈಲಿನ ಮೇಲೆ ಬಿದ್ದು ಹಳಿತಪ್ಪಿದ ಪರಿಣಾಮ ಕನಿಷ್ಠ 22 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು…
ಹಾಸನ: ಅಂಗಡಿಯಲ್ಲಿ ವ್ಯಾಪಾರ ಮಾಡುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ. ಪ್ರವೀಣ್(45)…
ಮಂಡ್ಯ: ಮಹಾರಾಷ್ಟ್ರ ರಾಜ್ಯದ ಚಾಕೋರು ಜಿಲ್ಲೆಯ ಲಾತೂರ್‌ನ ಬಿಎಸ್ಎಫ್ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.…
ಬೆಂಗಳೂರು: ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ನಿನ್ನೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ…