Andolana originals

ಹಾರ್ಮುಜ್ ಹಾದಿಯಲ್ಲಿ ಬಟ್ಟಬಯಲಾದ ನೀತಿ ವೈಫಲ್ಯ

ಭಾರತದ ಹೆಚ್ಚಿನ ಕುಟುಂಬಗಳಿಗೆ ಅಡುಗೆ ಅನಿಲ ಅಥವಾ ಎಲ್‌ಪಿಜಿ ಎಂಬುದು ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಸಿಲಿಂಡರ್ ಯಾವಾಗ ಖಾಲಿಯಾಗುತ್ತದೆ ಎನ್ನುವುದರತ್ತ ಪ್ರತಿ ಕುಟುಂಬವೂ ನಿಗಾ ಇರಿಸಿ, ಅದು ಮುಗಿಯುವ ಮುನ್ನವೇ ಮರುಪೂರಣ ಮಾಡುತ್ತದೆ. ಆದರೆ ಈಗ ಇಡೀ ಭಾರತದಲ್ಲಿ ಈ ದಿನಚರಿ ಅಡಚಣೆಗೊಳಗಾಗಿದೆ.

ಸಿಲಿಂಡರ್ ಮರುಭರ್ತಿಗೆ ಕುಟುಂಬಗಳು ಕಾಯುವಂತಹ ಪರಿಸ್ಥಿತಿ ಇದೆ. ರೆಸ್ಟೋರೆಂಟ್‌ಗಳು ಮುಚ್ಚುತ್ತಿವೆ, ಸಾರ್ವಜನಿಕ ಸಾರಿಗೆಗೆ ಹೊಡೆತ ಬಿದ್ದಿದೆ, ಕಾರ್ಖಾನೆಗಳ ಕಾರ್ಯನಿರ್ವಹಣೆ ನಿಧಾನಗೊಂಡಿದೆ, ಕೆಲವು ಕಾರ್ಖಾನೆಗಳು ಸಂಪೂರ್ಣ ಮುಚ್ಚಿವೆ. ಎಲ್‌ಪಿಜಿಯನ್ನು ಅವಲಂಬಿಸಿರುವ ಆಹಾರ ಸಂಸ್ಕರಣಾ ಘಟಕಗಳು ಮತ್ತು ಡೇರಿ ಘಟಕಗಳು ಕಾರ್ಯನಿರ್ವಹಿಸಲು ಹೆಣಗಾಡುತ್ತಿವೆ.

ಆತಿಥ್ಯ ಕ್ಷೇತ್ರಕ್ಕೆ ನೇರ ಹೊಡೆತ ತಟ್ಟಿದೆ. ರೆಸ್ಟೋರೆಂಟ್ಗಳು, ರಸ್ತೆಬದಿಯ ತಿಂಡಿ ಮಳಿಗೆಗಳು, ಬೇಕರಿಗಳು ಮತ್ತು ಸಿಹಿತಿಂಡಿ ಅಂಗಡಿಗಳು ಕಾರ್ಯಾಚರಣೆಯನ್ನು ಕಡಿಮೆ ಮಾಡಿವೆ ಅಥವಾ ಸ್ಥಗಿತಗೊಳಿಸಿವೆ. ಎಲ್‌ಪಿಜಿ ಅವಲಂಬಿತ ಆಟೋ ರಿಕ್ಷಾಗಳು ಮತ್ತು ಕ್ಯಾಬ್‌ಗಳು ರಸ್ತೆಗಳಿಂದ ದೂರ ಉಳಿದಿವೆ. ಇದೇ ವೇಳೆ, ಕಾಳಸಂತೆ ಮಾರಾಟ, ಅಕ್ರಮ ಪೂರೈಕೆ ಹೆಚ್ಚಾಗಿದ್ದು, ಸಿಲಿಂಡರ್ ಗಳನ್ನು ಅಧಿಕೃತ ಬೆಲೆಗಿಂತ ಅನೇಕ ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಈ ಸಮಸ್ಯೆ ಕೇವಲ ಕೊರತೆಗೆ ಸಂಬಂಧಿಸಿದ್ದಲ್ಲ; ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿ ರುವ ಜಾಗತಿಕ ಸಂಘರ್ಷವೊಂದು ರಾತ್ರೋರಾತ್ರಿ ಭಾರತದ ಇಂಧನ ಪೂರೈಕೆ ಸರಪಳಿಯ ದುರ್ಬಲತೆಯನ್ನು ಹೇಗೆ ಬಟ್ಟಬಯಲು ಮಾಡಿತು? ನರೇಂದ್ರ ಮೋದಿ ಸರ್ಕಾರ ಸಮಸ್ಯೆಯೇ ಇಲ್ಲ ಎಂಬ ನಿರಾಕರಣೆಯನ್ನೇ ಹೇಗೆ ತನ್ನ ಸಿದ್ಧ ಉತ್ತರವನ್ನಾಗಿಸಿಕೊಂಡಿತು ಎಂಬುದರ ಕುರಿತಾದದ್ದು.

ಹಾರ್ಮುಜ್ ಬಂದ್ ಎಫೆಕ್ಟ್: ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ದಾಳಿ ಮಾಡಿದವು. ಇದರ ಬೆನ್ನಿಗೇ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿತು. ಭಾರತಕ್ಕೆ, ಇದರ ನೇರ ಹೊಡೆತ ಬಿದ್ದಿತು. ಏಕೆಂದರೆ, ಭಾರತದ ಎಲ್‌ಪಿಜಿ ಬೇಡಿಕೆಯ ಸುಮಾರು ಶೇ.೬೦ರಷ್ಟನ್ನು ಆಮದುಗಳ ಮೂಲಕ ಪಡೆಯಲಾಗುತ್ತದೆ ಮತ್ತು ಆ ಆಮದುಗಳಲ್ಲಿ ಸುಮಾರು ಶೇ.೯೦ರಷ್ಟು ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕಿದೆ.

ಇಲ್ಲಿ ಭಾರತದ ದುರ್ಬಲತೆ ತಕ್ಷಣವೇ ಜಗಜ್ಜಾಹೀರಾಯಿತು. ದೇಶವು ಬಹಳ ಸೀಮಿತ ಎಲ್‌ಪಿಜಿ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ಅದು ಒಂದೆರಡು ದಿನಗಳ ಬಳಕೆಗೂ ಸಾಕಾಗುವುದಿಲ್ಲ ಎಂಬುದು ಬಯಲಾಯಿತು. ಇದೇ ವೇಳೆ, ಶೇಖರಣಾ ಮೂಲಸೌಕರ್ಯದ ಸಾಮರ್ಥ್ಯವನ್ನು ಹೆಚ್ಚಿಸದೆಯೇ, ಕಳೆದ ಎರಡು ದಶಕಗಳಲ್ಲಿ ಎಲ್‌ಪಿಜಿ ಸಂಪರ್ಕಕ್ಕೆ ಉತ್ತೇಜಿಸಲಾಗಿದೆ. ಬೇಡಿಕೆ ಅಧಿಕಗೊಂಡಿದೆ. ಪೂರೈಕೆಯ ಜೀವನಾಡಿಯ ಕತ್ತು ಹಿಸುಕಿದಾಗ ಇಡೀ ವ್ಯವಸ್ಥೆಯು ಉಸಿರುಗಟ್ಟುತ್ತದೆ. ಸಮರ್ಪಕ ಹೆಚ್ಚುವರಿ ಎಲ್‌ಪಿಜಿ ಸಂಗ್ರಹ ವ್ಯವಸ್ಥೆ ಇಲ್ಲದ ಕಾರಣ ಭಾರತದಲ್ಲೂ ಇದೇ ಪರಿಸ್ಥಿತಿ ಎದುರಾಯಿತು.

ಸರ್ಕಾರದ ಪ್ರತಿಕ್ರಿಯೆ: ನಿರಾಕರಣೆ ಮತ್ತು ಹೋಲಿಕೆ ಈ ಬಿಕ್ಕಟ್ಟಿಗೆ ಮೋದಿ ಸರ್ಕಾರದಿಂದ ಆರಂಭಿಕ ಹಂತದಲ್ಲಿ, ‘ಯಾವುದೇ ಕೊರತೆಯಿಲ್ಲ, ಭಯಪಡುವ ಅಗತ್ಯವಿಲ್ಲ, ಪೂರೈಕೆ ನಿಯಂತ್ರಣದಲ್ಲಿದೆ,’ ಎಂಬ ಸಂದೇಶ ರವಾನೆಯಾಯಿತು. ಆತಂಕದಿಂದ ಮುಂಗಡ ಖರೀದಿ ಅಥವಾ ತಪ್ಪು ಮಾಹಿತಿಯಿಂದಾಗಿ ಅಡಚಣೆಗಳು ಉಂಟಾಗಿವೆ ಎಂದು ಸರ್ಕಾರ ಪದೇ ಪದೇ ಹೇಳಿತು. ಜನರು ತಳಮಟ್ಟದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದ್ದರೂ, ರಾಹುಲ್ ಗಾಂಧಿ ಅವರಂತಹ ವಿರೋಧ ಪಕ್ಷದ ನಾಯಕರ ವಿರುದ್ಧ ಹಿರಿಯ ಮುಖಂಡರು ಆಕ್ರೋಶ ಹೊರಹಾಕಿದರು. ರಾಹುಲ್ ಗಾಂಧಿ ಅವರು ಜನರಲ್ಲಿ ಭಯವನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಕ್ಕಟ್ಟು ತೀವ್ರವಾಗುತ್ತಿದ್ದಂತೆ ಮೋದಿ ಅವರು ಎಲ್‌ಪಿಜಿ ಪರಿಸ್ಥಿತಿಯನ್ನು ಕೋವಿಡ್ ಸಾಂಕ್ರಾಮಿಕದ ಅವಧಿಗೆ ಹೋಲಿಸಲು ಪ್ರಾರಂಭಿಸಿದರು, ಇದು ಭಾರತವು ನಿರ್ವಹಿಸುವ ಜಾಗತಿಕ ಬಿಕ್ಕಟ್ಟು ಎಂದು ಉದ್ಗರಿಸಿದರು. ಕೋವಿಡ್ ಸಮಯದಲ್ಲೂ ತೀವ್ರತೆಯನ್ನು ಆರಂಭದಲ್ಲಿ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಹೆಚ್ಚಿನ ಸಿದ್ಧತೆ ಇಲ್ಲದೆಯೇ ದಿಢೀರನೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಲಾಯಿತು. ಈಗ, ಎಲ್‌ಪಿಜಿ ಬಿಕ್ಕಟ್ಟಿನ ಸಮಯದಲ್ಲಿ, ಅದೇ ರೀತಿಯ ಕಾರ್ಯವಿಧಾನವನ್ನು ನೋಡುತ್ತಿದ್ದೇವೆ – ಮೊದಲು ಸಮಸ್ಯೆಯೇ ಇಲ್ಲ ಎಂದು ನಿರಾಕರಿಸುವುದು, ಬಳಿಕ ಬಾಹ್ಯ ಕಾರಣಗಳತ್ತ ಬೊಟ್ಟು ಮಾಡುವುದು.

ಸರ್ಕಾರವು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು; ಸಂಸ್ಕರಣಾಗಾರಗಳಲ್ಲಿ ಎಲ್‌ಪಿಜಿ ಉತ್ಪಾದನೆ ಗರಿಷ್ಟಗೊಳಿಸುವುದು; ಪೆಟ್ರೋಕೆಮಿಕಲ್ ಉತ್ಪಾದನೆ ಕಡಿಮೆ ಮಾಡುವುದು; ಕುಟುಂಬಗಳಿಗೆ ಎಲ್‌ಪಿಜಿ ಆದ್ಯತೆ; ಕೊಳವೆ ಮೂಲಕ ನೈಸರ್ಗಿಕ ಅನಿಲ ಪೂರೈಕೆ (ಪಿಎನ್‌ಜಿ) ಹೆಚ್ಚಳಕ್ಕೆ ಉತ್ತೇಜನ… ಹೀಗೆ ಹಲವು ಕ್ರಮಗಳನ್ನು ಘೋಷಿಸಿದೆ. ಇವುಗಳು ಒಂದು ಮಟ್ಟದಲ್ಲಿ ಕೆಲಸ ಮಾಡಿವೆಯಾದರೂ ಸಮಸ್ಯೆ ಅಗಾಧತೆಯ ಮುಂದೆ ಇವು ತೀರಾ ಕಡಿಮೆ. ಪ್ರಸ್ತುತ ವ್ಯವಸ್ಥೆಯು ಸಾಮಾನ್ಯ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ಆದರೆ ಯಾವುದೇ ಬಿಕ್ಕಟ್ಟಿನ ಸಮಯದಲ್ಲಿ ಅದು ತಕ್ಷಣ ಒತ್ತಡಕ್ಕೆ ಸಿಲುಕುತ್ತದೆ. ಕಚ್ಚಾ ತೈಲಕ್ಕೆ ಹೋಲಿಸಿದರೆ, ಎಲ್‌ಪಿಜಿ ಸಂಗ್ರಹಣೆಯು ಅತ್ಯಂತ ಸೀಮಿತವಾಗಿದೆ.

ಹಾರ್ಮುಜ್ ಅವಲಂಬನೆ ಮತ್ತು ನೀತಿ ಅಂತರಗಳು ಭಾರತದ ಸುಮಾರು ಶೇ.೯೦ರಷ್ಟು ಎಲ್‌ಪಿಜಿ ಆಮದು ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತದೆ ಎಂಬುದು ಒಂದು ಪ್ರಮುಖ ದುರ್ಬಲತೆಯಾಗಿದೆ. ಆ ಪ್ರದೇಶದಲ್ಲಿ ಪುನರಾವರ್ತಿತ ಉದ್ವಿಗ್ನತೆಯ ಹೊರತಾಗಿಯೂ, ಪೂರೈಕೆ ಮಾರ್ಗಗಳು ಸಾಕಷ್ಟು ವೈವಿಧ್ಯಮ ಯವಾಗಿರಲಿಲ್ಲ. ಇದಲ್ಲದೆ, ಇಂಧನ ಪೂರೈಕೆ ಆಘಾತಗಳು ಸಂಭವಿಸಿದಾಗ ಅವುಗಳನ್ನು ನಿರ್ವಹಿಸಲು ಯಾವುದೇ ಸ್ಪಷ್ಟ, ಪೂರ್ವನಿರ್ಧರಿತ ವ್ಯವಸ್ಥೆ ಅಥವಾ ನೀತಿ ಸರ್ಕಾರದ ಬಳಿ ಇಲ್ಲ.

ಇಲ್ಲಿ ವ್ಯತ್ಯಾಸವು ತುಂಬಾ ಸರಳ: ಪೂರ್ವ ಸಿದ್ಧತೆ ನಡೆಸಿದ್ದ ದೇಶಗಳು ಆಘಾತವನ್ನು ಸುಲಭವಾಗಿ ನಿಭಾ ಯಿಸಿದವು. ಆದರೆ ಭಾರತವು ಬಿಕ್ಕಟ್ಟು ಸೃಷ್ಟಿ ಯಾದಾಗ ಕಣ್ಣು ತೆರೆಯಿತು. ಅಂತಿಮವಾಗಿ, ಈ ಬಿಕ್ಕಟ್ಟು ಕೇವಲ ಪೂರೈಕೆಯ ವೈಫಲ್ಯವನ್ನು ಮಾತ್ರವಲ್ಲ, ಯೋಜನೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಈ ನಿರ್ದಿಷ್ಟ ಬಿಕ್ಕಟ್ಟಿಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ನೈಜ ಪ್ರಶ್ನೆಯಲ್ಲ, ಬದಲಿಗೆ ಅದು ಮುಂದಿನ ಬಿಕ್ಕಟ್ಟಿಗೆ ವಿಭಿನ್ನವಾಗಿ ತಯಾರಿ ನಡೆಸುತ್ತದೆಯೇ ಎಂಬುದು ಪ್ರಶ್ನೆಯಾಗಿದೆ

” ಭಾರತದ ಸುಮಾರು ಶೇ.೯೦ರಷ್ಟು ಎಲ್‌ಪಿಜಿ ಆಮದು ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತದೆ ಎಂಬುದು ಒಂದು ಪ್ರಮುಖ ದುರ್ಬಲತೆಯಾಗಿದೆ. ಆ ಪ್ರದೇಶದಲ್ಲಿ ಪುನರಾವರ್ತಿತ ಉದ್ವಿಗ್ನತೆಯ ಹೊರತಾಗಿಯೂ, ಪೂರೈಕೆ ಮಾರ್ಗಗಳುಸಾಕಷ್ಟು ವೈವಿಧ್ಯಮಯವಾಗಿರಲಿಲ್ಲ. ಇದಲ್ಲದೆ, ಇಂಧನ ಪೂರೈಕೆ ಆಘಾತಗಳು ಸಂಭವಿಸಿದಾಗ ಅವುಗಳನ್ನು ನಿರ್ವಹಿಸಲು ಯಾವುದೇ ಸ್ಪಷ್ಟ, ಪೂರ್ವನಿರ್ಧರಿತ ವ್ಯವಸ್ಥೆ ಅಥವಾ ನೀತಿ ಸರ್ಕಾರದ ಬಳಿ ಇಲ್ಲ”

 

 

ಆಂದೋಲನ ಡೆಸ್ಕ್

Recent Posts

ಸಂಸತ್‌ ವಿಶೇಷ ಅಧಿವೇಶನ: ಮೂರು ಮಹತ್ವದ ಮಸೂದೆ ಮಂಡನೆ

ನವದೆಹಲಿ: ಇಂದಿನಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಿದೆ. ಸಂವಿಧಾನದ ತಿದ್ದುಪಡಿ ಮಸೂದೆ-2026,…

8 mins ago

ಪಶ್ಚಿಮಘಟ್ಟಗಳನ್ನು ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಪ್ರಕೃತಿ, ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆ ಹೆಚ್ಚಳದಲ್ಲಿ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪಾತ್ರ ಹಿರಿದಾಗಿದೆ ಎಂದು…

35 mins ago

ಲೋಕಸಭೆಯಲ್ಲಿ ಮಹತ್ವದ ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆ

ನವದೆಹಲಿ: ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರು ಇಂದು ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ 2026ನ್ನು ಮಂಡಿಸಿದರು. ಈ…

1 hour ago

ಲೋಕಸಭಾ ಕ್ಷೇತ್ರ ಮರು ವಿಂಗಡಣೆ ಮಸೂದೆಗೆ ತೀವ್ರ ವಿರೋಧ: ತಮಿಳುನಾಡು ಸಿಎಂ ಸ್ಟಾಲಿನ್‌ ಪ್ರತಿಭಟನೆ

ಚೆನ್ನೈ: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಲೋಕಸಭಾ ಕ್ಷೇತ್ರ ಮರು ವಿಂಗಡಣೆ ಮಸೂದೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು,…

1 hour ago

ತಾಪಮಾನ ಏರಿಕೆ ಬೆನ್ನಲ್ಲೇ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ರಣ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲ ಜಿಲ್ಲೆಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗುತ್ತಿದ್ದು, ಜನರು ಬಿಸಿಲ…

2 hours ago

ಓದುಗರ ಪತ್ರ: ವಿಶ್ವ ಶಾಂತಿಗೆ ಪೋಪ್ ಕರೆ ಸ್ವಾಗತಾರ್ಹ

ಮಧ್ಯ ಪ್ರಾಚ್ಯ ದೇಶಗಳಲ್ಲಿ ಕಳೆದ ೪೦ ದಿನಗಳಿಂದಲೂ ಯುದ್ಧ ನಡೆಯುತ್ತಿರುವುದರಿಂದ ವಿವಿಧ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಪೋಪ್ ೧೪ನೇ ಲಿಯೋರವರು…

3 hours ago