ಬಾ.ನಾ. ಸುಬ್ರಹ್ಮಣ್ಯ
ಕನ್ನಡ ಚಿತ್ರಗಳು ಅಖಿಲ ಭಾರತ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದು ಹೊಸದೇನೂ ಅಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೆಲವಾರು ಚಿತ್ರಗಳಿವೆ. ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳು, ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆರೆದ ಚಿತ್ರಗಳು, ಹೀಗೆ. ಅವುಗಳಲ್ಲಿ ಮುಖ್ಯವಾಹಿನಿ ಹೆಸರಲ್ಲಿ ಗಲ್ಲಾಪೆಟ್ಟಿಗೆಯನ್ನು ಗಮನದಲ್ಲಿಟ್ಟುಕೊಂಡು ತಯಾರಾದವು ಕಡಿಮೆ. ಹಾಗಂತ ಅವು ಇರಲಿಲ್ಲ ಎಂದೇನೂ ಇಲ್ಲ.
ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಚಿತ್ರರಂಗ ಸುದ್ದಿ ಮಾಡುತ್ತಿರುವುದು ಬೇರೆಯೇ ರೀತಿಯಲ್ಲಿ. ಅದು ಗಲ್ಲಾಪೆಟ್ಟಿಗೆ ದಾಖಲೆಯ ಮೂಲಕ. ಕೆಜಿಎಫ್ ಮತ್ತು ಕಾಂತಾರ ಚಿತ್ರಗಳು ಕನ್ನಡ ಚಿತ್ರೋದ್ಯಮದ ಹರವನ್ನು ವಿಸ್ತರಿಸಿದ ರೀತಿಯೇ ಅನನ್ಯ. ಬಾಲಿವುಡ್ ಹೆಸರಿನಲ್ಲಿ ಪ್ರಚಾರದಲ್ಲಿ ಇರುವ ಹಿಂದಿ ಚಿತ್ರರಂಗ ಕೂಡ ಕನ್ನಡ ಚಿತ್ರಗಳ ಈ ಸಾಧನೆಗೆ ಬೆರಗಾಗಿತ್ತು. ಕನ್ನಡ ಮಾತ್ರವಲ್ಲ, ದಕ್ಷಿಣ ಭಾರತದ ಇತರ ಚಿತ್ರರಂಗಗಳೂ ಈ ಬೆಳವಣಿಗೆಗೆ ಪೂರಕವಾಗಿ ಸಾಧನೆ ಮಾಡಿದ್ದವು. ಈ ಎರಡೂ ಚಿತ್ರಗಳು ಕರ್ನಾಟಕ ಮಾತ್ರವಲ್ಲ, ಅಖಿಲ ಭಾರತ ಮಟ್ಟ ದಾಟಿ, ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ವಿಜೃಂಭಿಸಿದವು.
ಇದರ ಬೆನ್ನಲ್ಲೇ ಪ್ಯಾನ್ ಇಂಡಿಯಾ ಹೆಸರಲ್ಲಿ ಚಿತ್ರಗಳು ತಯಾರಾಗತೊಡಗಿದವು. ಕನ್ನಡದಲ್ಲಿ ಮಾತ್ರವಲ್ಲ, ಭಾರತದ ಬಹುತೇಕ ಭಾಷೆಗಳಲ್ಲಿ. ಪ್ಯಾನ್ ಇಂಡಿಯಾ ಚಿತ್ರ ಎನ್ನುವ ಹೆಸರಲ್ಲಿ ಸಿನಿಮಾಗಳು ತಯಾರಾಗತೊಡಗಿದವು. ಅವುಗಳಲ್ಲಿ ಈ ಚಿತ್ರಗಳಂತೆ ಗೆದ್ದವುಗಳು ಕಡಿಮೆ. ಯಾವುದೇ ಚಿತ್ರ ಭಾರೀ ಗೆಲುವನ್ನು ಕಂಡಾಗ ಅಂತಹದೇ ರೀತಿಯಲ್ಲಿ ಚಿತ್ರಗಳ ತಯಾರಿಕೆಗೆ ಮುಂದಾದ ಹಲವಾರು ಉದಾಹರಣೆಗಳಿವೆ. ಕನ್ನಡ ಚಿತ್ರರಂಗದಲ್ಲಿ ಅಂತಹದೊಂದು ಬೆಳವಣಿಗೆ ೨೦೦೬ರ ಕೊನೆಯಲ್ಲಿ ತೆರೆಕಂಡ ‘ಮುಂಗಾರು ಮಳೆ’ಯ ನಂತರ ಆಯಿತು. ನಿವೇಶನೋದ್ಯಮಿ ಎ. ಕೃಷ್ಣಪ್ಪ ಈ ಚಿತ್ರವನ್ನು ನಿರ್ಮಿಸಿದ್ದರು. ಅದರ ಯಶಸ್ಸು ಹತ್ತಾರು ಮಂದಿ ನಿವೇಶನೋದ್ಯಮಿಗಳನ್ನು ಚಿತ್ರರಂಗದತ್ತ ಬರುವಂತೆ ಮಾಡಿತ್ತು. ಬಂಡವಾಳ ಹೂಡುವಂತೆ ಮಾಡಿತ್ತು. ಕೆಲವರು ಬಂಡವಾಳ ಹೂಡಿದ್ದು ಮಾತ್ರವಲ್ಲ, ತಾವೇ ನಟಿಸಿದರು, ಇಲ್ಲವೇ ತಮ್ಮ ಮಕ್ಕಳನ್ನೋ, ತಮ್ಮಂದಿರನ್ನೋ ತೆರೆಗೆ ಪರಿಚಯಿಸಿದರು. ಕನ್ನಡದಲ್ಲಿ ತಯಾರಾಗುತ್ತಿರುವ ಚಿತ್ರಗಳ ಸಂಖ್ಯೆಯ ದಿಢೀರ್ ಏರಿಕೆಗೆ ಇಂತಹ ಬಂಡವಾಳ ಹೂಡುವವರ ಸಂಖ್ಯೆ ಹೆಚ್ಚಾಗಿರುವುದೂ ಕಾರಣ ಎನ್ನುವುದು ಗಾಂಧಿನಗರಿಗರ ಅಂಬೋಣ.
ಚಿತ್ರಕ್ಕೆ ಬಂಡವಾಳ ಹೂಡಿದರೇ ಹೊರತು ಬಹಳಷ್ಟು ಸಂದರ್ಭಗಳಲ್ಲಿ ಅವುಗಳ ಗುಣಮಟ್ಟದ ಕುರಿತಂತೆ ಗಮನ ಹರಿಸಿದ್ದು ಕಡಿಮೆ ಎನ್ನುವುದು ಅಂತಹ ಚಿತ್ರಗಳೇ ಹೇಳಿದವು. ಚಿತ್ರಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಧನ ಯೋಜನೆಯ ಸಕಾರಾತ್ಮಕ ಪ್ರಯೋಜನ ಉದ್ಯಮಕ್ಕೆ ಆದ ಹಾಗೆಯೇ ನಕಾರಾತ್ಮಕವಾಗಿಯೂ ಆಯಿತು. ಕೇವಲ ಸಹಾಯಧನಕ್ಕಾಗಿ ನಿರ್ಮಿಸಲಾಗುತ್ತಿರುವ ಚಿತ್ರಗಳ ಸಂಖ್ಯೆ ಕಡಿಮೆ ಏನೂ ಅಲ್ಲ. ಕೆಲವು ವರ್ಷಗಳಿಂದ ಸಹಾಯಧನ ನೀಡದೆ ಇರುವುದರಿಂದ ಇಂತಹ ಚಿತ್ರಗಳ ಸಂಖ್ಯೆ ಕಡಿಮೆ ಏನೂ ಆಗಿಲ್ಲ. ಅಖಿಲ ಭಾರತ ವ್ಯಾಪ್ತಿಯ ಪ್ರಚಾರದ ವಿಷಯಕ್ಕೆ ಬರೋಣ. ಹಿಂದಿನ ವಾರ ತೆರೆಕಂಡ ಕನ್ನಡ ಚಿತ್ರದ ಕುರಿತಂತೆ ಅಖಿಲ ಭಾರತ ಮಟ್ಟದಲ್ಲಿ ಆಗುತ್ತಿರುವ ವರದಿಗಳು, ವಿಶ್ಲೇಷಣೆಗಳು ಕನ್ನಡ ಚಿತ್ರೋದ್ಯಮ ಸಂಭ್ರಮಿಸುವಂತಹ ದೇನೂ ಅಲ್ಲ. ಇಂಡಿಯಾ. ಕಾಂ ಈ ಚಿತ್ರವನ್ನು ವರ್ಷದ ಅತಿ ದೊಡ್ಡ ಫ್ಲಾಪ್ ಎಂದು ಹೇಳಿದೆ ಕೆಜಿಎಫ್, ಕಲ್ಕಿ ೨೮೯೮ ಎಡಿ, ಗೋಟ್ ಮುಂತಾದ ಚಿತ್ರಗಳ ಗಳಿಕೆಯನ್ನು ಮೀರಿಸುವ ನಿರೀಕ್ಷೆಯ ಚಿತ್ರ ಸೋತಿದೆ ಎಂದು ಹೇಳಿದೆ. ೨೦೨೪ರ ಸೋಲಿನ ಚಿತ್ರಗಳ ಸಾಲಿನಲ್ಲಿ ತೆಲುಗು, ತಮಿಳು ಚಿತ್ರಗಳೂ ಇವೆ. ಇತ್ತೀಚೆಗೆ ಕನ್ನಡ ಚಿತ್ರನಿರ್ಮಾಪಕರಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ನಿರ್ಮಾಣದತ್ತ ಹೊರಳಿದವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಹೆಚ್ಚಿನ ಸಂದರ್ಭದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳು ಹಿಂದೆಯೂ ತಯಾರಾಗಿವೆ.
ಅವು ನಿಜ ಪ್ಯಾನ್ ಇಂಡಿಯಾ ಚಿತ್ರಗಳು. ಬೇರೆ ಬೇರೆ ಭಾಷೆಗಳಿಗೆ ಆಯಾ ಭಾಷೆಗಳ ನಟರನ್ನೇ, ವಿಶೇಷವಾಗಿ ಮುಖ್ಯಪಾತ್ರಧಾರಿಗಳನ್ನು ಆರಿಸಿಕೊಳ್ಳುತ್ತಿದ್ದರು. ಆದರೆ ಈಗ ಹಾಗೇನಿಲ್ಲ. ಕನ್ನಡದಲ್ಲಿ ಚಿತ್ರ ನಿರ್ಮಿಸಿ, ಇತರ ಭಾಷೆಗಳಿಗೆ ಡಬ್ ಮಾಡಿ, ಅದನ್ನು ಪ್ಯಾನ್ ಇಂಡಿಯಾ ಚಿತ್ರ ಎಂದು ಪ್ರಚಾರ ಮಾಡಲಾಗುತ್ತದೆ. ಚಿತ್ರ ಹೇಗಾದರೂ ಇರಲಿ, ಅದರ ಕುರಿತಂತೆ ಇನ್ನಿಲ್ಲದ ಪ್ರಚಾರ ನಡೆಯುತ್ತದೆ. ಅದಕ್ಕೆ ನೀರೆರೆಯುವಂತೆ ನವಮಾಧ್ಯಮಗಳು ಕೆಲಸ ಮಾಡುತ್ತವೆ. ಸಿನಿಮಾಗಳು ಉದ್ಯಮವಾದಂತೆ, ನವಮಾಧ್ಯಮಗಳೂ ಅದೇ ಹಾದಿಯನ್ನು ಹಿಡಿದಿವೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಈ ದಿನಗಳಲ್ಲಿ ಚಿತ್ರ ನಿರ್ಮಾಣಕ್ಕಿಂತ ಅದರ ಪ್ರಚಾರಕ್ಕೆ ಹೆಚ್ಚು ಬಂಡವಾಳ ಹೂಡಬೇಕು ಎನ್ನುವುದು ಕಡಿಮೆ ವೆಚ್ಚದ ಚಿತ್ರಗಳ ನಿರ್ಮಾಪಕರ ಅಂಬೋಣ, ಅನುಭವ. ಈಗ ಪ್ರಚಾರ ಹಿಂದಿ ನಂತಲ್ಲ. ಡಿಜಿಟಲ್ ದಿನಗಳು. ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು, ಗೋಡೆಗಳಲ್ಲಿ ಭಿತ್ತಿಪತ್ರಗಳು, ಸ್ಲೈಡ್‌ಗಳು ಇತ್ಯಾದಿ ಪ್ರಚಾರ ಈಗ ಕಡಿಮೆ. ಈಗೇನಿದ್ದರೂ ಸಾಮಾಜಿಕ ತಾಣಗಳ ಸಾಮ್ರಾಜ್ಯ. ಸುದ್ದಿವಾಹಿನಿಗಳು, ಮನರಂಜನಾ ವಾಹಿನಿಗಳು, ಯೂಟ್ಯೂಬ್ ವಾಹಿನಿಗಳದೇ ಪ್ರಚಾರ. ಅವುಗಳಲ್ಲಿ ಪ್ರಚಾರ ಎಂದರೆ ಸಾಕಷ್ಟು ವೆಚ್ಚದ ಬಾಬತ್ತು ಎನ್ನುವುದು ಅವರ ಅನುಭವ. ಪ್ಯಾನ್ ಇಂಡಿಯಾ ಚಿತ್ರಗಳ ನಿರ್ಮಾಣ ಒಂದು ಭಾಷೆಯಲ್ಲಿ ಆಗಿ ಇತರ ಭಾಷೆಗಳಿಗೆ ಡಬ್ ಅದರೂ, ಅವುಗಳ ಪ್ರಚಾರ ಬಹುತೇಕ ನಗರಗಳಲ್ಲಿ ನಡೆಯುತ್ತಿರುತ್ತವೆ. ಮುಂಬೈ, ಚೆನ್ನೈ, ಹೈದರಾಬಾದ್, ದೆಹಲಿ ಅಂತ ಪ್ರಚಾರಕ್ಕಾಗಿ ನಿರ್ಮಾಪಕರು ಚಿತ್ರತಂಡವನ್ನು ಕರೆದೊಯ್ಯುವ ವೆಚ್ಚವೂ ಪ್ರಚಾರಕ್ಕೆ ಬಂಡವಾಳ.
ಚಿತ್ರ ತೆರೆಕಂಡ ಮೇಲೆ ಕೂಡ ಪರೋಕ್ಷ ಪ್ರಚಾರಗಳಾಗುವುದನ್ನು ಈ ಅಂಕಣದಲ್ಲಿ ಹಿಂದೆಯೂ ಪ್ರಸ್ತಾಪಿಸಲಾಗಿತ್ತು. ರಾಜಕೀಯ ಸಭೆ, ಸಮಾರಂಭಗಳಿಗೆ ಪಕ್ಷಗಳ ಮಂದಿ ಜನಸೇರಿಸುವಂತೆ, ಅದ್ಧೂರಿ ವೆಚ್ಚದ ಚಿತ್ರಗಳು ತೆರೆಕಂಡಾಗ, ಆರಂಭದ ದಿನಗಳಲ್ಲಿ ಚಿತ್ರತಂಡದಿಂದಲೇ ಟಿಕೆಟು ಕೊಟ್ಟು, ಅವರಿಗೆ ಉಪಾಹಾರ ನೀಡಿ, ಚಿತ್ರಗಳನ್ನು ತೋರಿಸುವ ಪ್ರವೃತ್ತಿ. ಇತ್ತೀಚೆಗೆ ಇದು ಹೆಚ್ಚಾಗತೊಡಗಿದೆ ಎನ್ನುವ ಮಾತು ಗುಟ್ಟಾಗಿ ಉಳಿದಿಲ್ಲ. ಉಚಿತವಾಗಿ ಚಿತ್ರಗಳನ್ನು ನೋಡಿದ ಮಂದಿ ಸಹಜವಾಗಿಯೇ ಅವುಗಳ ಕುರಿತಂತೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಈ ಮಾತು ಪ್ರೀಮಿಯರ್ ಪ್ರದರ್ಶನಗಳಿಗೂ ಅನ್ವಯವಾಗುತ್ತದೆ. ಪ್ರದರ್ಶನಗಳನ್ನು ವೀಕ್ಷಿಸುವ ಸೆಲೆಬ್ರಿಟಿಗಳು ಚಿತ್ರದ ಕುರಿತಂತೆ ಸಹಜವಾಗಿಯೇ ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಒಟ್ಟಿನಲ್ಲಿ ಚಿತ್ರದ ಕುರಿತಂತೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಬೇಕಾದ ಎಲ್ಲ ಪ್ರಯತ್ನಗಳನ್ನೂ ಬಂಡವಾಳ ಹೂಡಿದ ನಿರ್ಮಾಪಕ, ನಿರ್ಮಾಣ ಸಂಸ್ಥೆ ಮಾಡುತ್ತದೆ. ಆದರೆ ಚಿತ್ರರಸಿಕರ ಇಷ್ಟಾನಿಷ್ಟಗಳು ಕೆಲವೊಮ್ಮೆ ಬೇರೆಯೇ ಆಗಿರುತ್ತದೆ.
ಅವರ ಒಲವಿನ ಮೇಲೆಯೇ ಚಿತ್ರದ ಸೋಲು-ಗೆಲುವು ನಿರ್ಧಾರವಾಗುತ್ತದೆ. ಯಾವುದೇ ಭಾಷೆಯ ಚಿತ್ರವಿರಲಿ, ಇದೇ ಮಾತು ಅನ್ವಯವಾಗುತ್ತದೆ. ಸಾಮಾಜಿಕ ತಾಣಗಳ ಅಭಿಪ್ರಾಯ, ಅನಿಸಿಕೆಗಳು, ಇತ್ತೀಚೆಗೆ ಹುಟ್ಟಿಕೊಂಡ ಡಿಜಿಟಲ್ ಮಾಧ್ಯಮಗಳ ಪ್ರಭಾವಿಗಳ ಪ್ರಭಾವ ಎಲ್ಲವೂ ಚಿತ್ರವನ್ನು ಗೆಲ್ಲಿಸಬೇಕಾದರೆ, ಚಿತ್ರ ಪ್ರೇಕ್ಷಕನಿಗೆ ಇಷ್ಟವಾಗಬೇಕು. ಇಲ್ಲದೆ ಹೋದರೆ ಯಾವ ಪ್ರಚಾರವೂ ಚಿತ್ರದ ಗೆಲುವಿಗೆ ನೆರವಾಗಲಾರದು. ಸಾಮಾಜಿಕ ಮಾಧ್ಯಮಗಳ ವಿಮರ್ಶೆಯ ಹೆಸರಿನ ಅನಿಸಿಕೆಗಳ ಕುರಿತಂತೆ ಆಗಿರುವ ಬೆಳವಣಿಗೆ ಕೂಡ ಅಂತಹ ಹಿತಕರವೇನೂ ಇದ್ದಂತಿಲ್ಲ. ಮಲಯಾಳದಲ್ಲಿ ಅದಾಗಲೇ ಅವುಗಳ ನಿಯಂತ್ರಣದ ಬಗ್ಗೆ ನಿರ್ಮಾಪಕರು ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಹಿಂದಿ ಚಿತ್ರವೊಂದರ ಬಿಡುಗಡೆ ವೇಳೆ ಈ ಮಂದಿಗೆ ಆಹ್ವಾನ ಇರಲಿಲ್ಲ ಎಂದು ವರದಿಯಾಗಿತ್ತು. ಕನ್ನಡದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನಿಸಿಕೆಯನ್ನು ಹೇಳಿದ ಪ್ರಭಾವಿಯ ವಿರುದ್ಧ ಕಾನೂನು ಕ್ರಮ ಕೈಗೊಂಡದ್ದು ರಾಷ್ಟ್ರಮಟ್ಟದಲಿ ಸುದ್ದಿಯಾಗಿದೆ. ಕೆಲವು ಯೂಟ್ಯೂಬ್ ವಾಹಿನಿಗಳು ಕನ್ನಡ ಚಿತ್ರಗಳ ವಿಮರ್ಶೆ ಮಾಡದೆ ಇರಲು ನಿರ್ಧರಿಸಿದ್ದು ವರದಿಯಾಗಿದೆ. ಪ್ಯಾನ್ ಇಂಡಿಯಾ ಚಿತ್ರ, ಪ್ಯಾನ್ ಇಂಡಿಯಾ ಸುದ್ದಿ, ಒಟ್ಟಿನಲ್ಲಿ ಕನ್ನಡ ಚಿತ್ರಗಳು ಸುದ್ದಿಯಲ್ಲಿವೆ. ‘ಕಾಂತಾರ’ದಂತಹ ಚಿತ್ರ ಕನ್ನಡದಲ್ಲೇ ತಯಾರಾಗಿ ವಿಶ್ವಾದ್ಯಂತ ಜನಮೆಚ್ಚುಗೆ ಗಳಿಸಿ, ನಂತರ, ಬೇರೆಬೇರೆ ಭಾಷೆಗಳಿಗೆ ಡಬ್ ಆಗಿ ಗಲ್ಲಾಪೆಟ್ಟಿಗೆ ದೋಚಿದ್ದು, ಇತಿಹಾಸ. ಗೆದ್ದ ಚಿತ್ರಗಳ ನೊಣಂಪ್ರತಿಯ, ಛಾಯೆಯ ಚಿತ್ರಗಳ ಬದಲು, ಹೊಸಹೊಸ ಸಾಹಸಗಳಿಗೆ ಕನ್ನಡ ಚಿತ್ರರಂಗ ತೆರೆದು ಸುದ್ದಿಯಾಗಲಿ.
ಮೈಸೂರು : ‘ಹಳೆಯ ಮೈಸೂರು ರಕ್ಷಣೆಯ ನಿಟ್ಟಿನಲ್ಲಿ ಕಾಲಕಾಲಕ್ಕೆ ಸೂಕ್ತ ಕ್ರಮ ವಹಿಸಬೇಕು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕು.…
ಬೆಳಗಾವಿ : ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಇದೇ ಪ್ರಥಮಬಾರಿಗೆ ಬೆಳಗಾವಿ ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದ ಬಳಿ ಇರುವ…
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…