ಕೆ.ಬಿ.ರಮೇಶನಾಯಕ
ಹಂಚ್ಯಾ-ಸಾತಗಳ್ಳಿಯಲ್ಲಿ ಘಟಕ ನಿರ್ಮಾಣಕ್ಕೆ ಸಿದ್ಧತೆ
ಶೀಘ್ರದಲ್ಲೇ ಟೆಂಡರ್ ಕರೆಯಲು ಮುಂದಾದ ಪಾಲಿಕೆ
ಮೈಸೂರು: ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ನಗರಗಳಲ್ಲಿ ಕಟ್ಟಡ ತ್ಯಾಜ್ಯ(ಡೆಬ್ರಿಸ್)ವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಬಹುದೊಡ್ಡ ಸವಾಲಿನ ಕೆಲಸ. ಕಟ್ಟಡ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಸಾಂಸ್ಕೃತಿಕನಗರಿ ಮೈಸೂರು ಹಲವಾರು ವರ್ಷಗಳಿಂದ ಎದುರಿಸುತ್ತಾ ಬರುತ್ತಿದ್ದು, ಇದೀಗ ನಗರ ಪಾಲಿಕೆ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನು ಇರಿಸಿದೆ.
ಕಟ್ಟಡ ತ್ಯಾಜ ವಿಲೇವಾರಿಗೆ ಹಂಚ್ಯಾ- ಸಾತಗಳ್ಳಿಯಲ್ಲಿ ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ೯.೫ ಎಕರೆ ಜಾಗವನ್ನು ೩೦ ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಿದೆ. ಆದರೆ, ಈ ಜಾಗದ ವಿಚಾರವಾಗಿ ಕೆಲವು ಗೊಂದಲಗಳು ಇದ್ದ ಹಿನ್ನೆಲೆಯಲ್ಲಿ ಘಟಕ ನಿರ್ಮಾಣ ಸಾಧ್ಯವಾಗಿರಲಿಲ್ಲ. ಇದೀಗ ಗೊಂದಲಗಳೆಲ್ಲ ಪರಿಹಾರವಾಗಿದ್ದು, ನಗರ ಪಾಲಿಕೆ ಟೆಂಡರ್ ಕರೆದು ಘಟಕ ನಿರ್ಮಿಸಲು ಮುಂದಾಗಿದೆ. ಇಲ್ಲಿಗೆ ಸಾರ್ವಜನಿಕರು ಪ್ರತಿ ಟನ್ ಟಿಪ್ಪಿಂಗ್ ಶುಲ್ಕ (ಹೆಚ್ಚುವರಿ ಸೇವಾ ಶುಲ್ಕ) ನೀಡಿ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು.
ಖಾಸಗಿ ಸಹಭಾಗಿತ್ವ: ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕವನ್ನು ಖಾಸಗಿ ಸಹ ಭಾಗಿತ್ವದಲ್ಲಿ ತೆರೆಯಲು ನಗರ ಪಾಲಿಕೆ ನಿರ್ಧರಿಸಿದೆ. ಇದಕ್ಕಾಗಿ ಕೆಲ ತಿಂಗಳ ಹಿಂದೆ ಟೆಂಡರ್ ಕರೆಯಲಾಗಿತ್ತು. ಆದರೆ, ಘಟಕ ನಿರ್ಮಾಣಕ್ಕೆ ಸೂಕ್ತ ಸಂಸ್ಥೆ ಮುಂದೆ ಬರದ ಹಿನ್ನೆಲೆಯಲ್ಲಿ ಇದೀಗ ಮತ್ತೆ ಟೆಂಡರ್ ಕರೆಯಲು ಪಾಲಿಕೆ ಸಿದ್ಧತೆ ನಡೆಸಿದೆ. ನಗರದಲ್ಲಿ ಉತ್ಪಾದನೆಯಾಗುವ ಕಟ್ಟಡ ತ್ಯಾಜ್ಯದ ವಿಲೇವಾರಿ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಸಂಪೂರ್ಣ ಖಾಸಗಿಯವರಿಗೆ ನೀಡಲಿದ್ದು, ಇದರಿಂದ ದೊರೆಯುವ ಲಾಭಾಂಶದಲ್ಲಿ ಕೆಲವು ಭಾಗವನ್ನು ನಗರ ಪಾಲಿಕೆಗೆ ಖಾಸಗಿ ಸಂಸ್ಥೆ ನೀಡಬೇಕಾಗಿದೆ.
ಡೆಬ್ರಿಸ್ ತಾಣವಾಗಿರುವ ವರ್ತುಲ ರಸ್ತೆ : ನಗರದ ವರ್ತುಲ ರಸ್ತೆಯ ಸುತ್ತಲೂ ಹಲವಾರು ಖಾಸಗಿ ಬಡಾವಣೆಗಳು ತಲೆ ಎತ್ತಿದ್ದು, ಈಗಾಗಲೇ ಸಾವಿರಾರು ಮನೆಗಳು ನಿರ್ಮಾಣಗೊಂಡಿವೆ. ಪ್ರತಿನಿತ್ಯ ಹೊಸ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಲೇ ಇದೆ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರ ಜತೆಗೆ ನಗರದಲ್ಲಿ ಹಳೆಯ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಈ ಕಟ್ಟಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಇಲ್ಲ.ಹೀಗಾಗಿ ಜನರು ಎಲ್ಲೆಂದರಲ್ಲಿ ಲಾರಿ,ಟಿಪ್ಪರ್‌ಗಳಲ್ಲಿ ತಂದು ಸುರಿಯುತ್ತಿದ್ದಾರೆ. ವಿಶೇಷವಾಗಿ ವರ್ತುಲ ರಸ್ತೆಯ ಹಲವಾರು ಕಡೆಗಳಲ್ಲಿ ಕಟ್ಟಡ ತ್ಯಾಜ್ಯ ಸುರಿಯಲಾಗಿದ್ದು, ಇದು ನಗರದ ಸಹಜ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ.
ಕ್ರಿಮಿನಲ್ ಕೇಸ್ ಎಚ್ಚರಿಕೆ: ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯುವುದು ಕರ್ನಾಟಕ ಪೌರ ನಿಗಮಗಳ ಕಾಯ್ದೆ ಪ್ರಕರಣ ೨೫೬ಕ್ಕೆ ವಿರುದ್ಧವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ, ದುರಸ್ತಿ ಹಾಗೂ ಕಟ್ಟಡ ಕೆಡವುದರಿಂದ ಉತ್ಪತ್ತಿಯಾಗುವ ತ್ಯಾಜ್ಯ ವನ್ನು ಹಂಚ್ಯಾ- ಸಾತಗಳ್ಳಿಯಲ್ಲಿ ಗುರುತಿಸಿರುವ ಖಾಲಿ ಜಾಗದಲ್ಲಿಯೇ ವಿಲೇವಾರಿ ಮಾಡಬೇಕು. ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ (ಡೆಬ್ರಿಸ್) ಸುರಿದರೆ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಮಾತ್ರವಲ್ಲ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗುವುದು ಎಂದು ಪಾಲಿಕೆ ಈ ಹಿಂದೆ ಎಚ್ಚರಿಕೆ ನೀಡಿತ್ತು. ಆದರೆ, ಹಂಚ್ಯಾ-ಸಾತಗಳ್ಳಿಯಲ್ಲಿ ಗುರುತಿಸಿರುವ ಜಾಗದಲ್ಲಿ ಘಟಕ ನಿರ್ಮಾಣ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಾಲಿಕೆ ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಪ್ರತಿ ಬಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಹಿನ್ನಡೆ ಅನುಭವಿಸಲು ಕಟ್ಟಡ ತ್ಯಾಜ್ಯ ಸಮರ್ಪಕ ವಿಲೇವಾರಿ ಆಗದಿರುವುದೂ ಒಂದು ಕಾರಣವಾಗಿದೆ. ಈ ಸಮಸ್ಯೆಗೆ ಪರಿಹಾರ ದೊರೆತರೆ ನಗರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸ್ಥಾನ ಪಡೆಯಲು ಸಹಕಾರಿಯಾಗಲಿದೆ. ಈ ಹಿಂದೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಎಲ್ಲರೂ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದರು. ಬೆಟ್ಟದ ತಪ್ಪಲಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಪಾಲಿಕೆ ಕಡಿವಾಣ ಹಾಕಿದ ನಂತರ ಇದೀಗ ಜನರು ನಗರದ ವಿವಿಧೆಡೆ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲು ಪ್ರಾರಂಭಿಸಿದ್ದು, ಇದು ನಗರದ ಅಂದ ಗೆಡಿಸುತ್ತಿದೆ.
” ನಗರದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಹಂಚ್ಯಾ-ಸಾತಗಳ್ಳಿಯಲ್ಲಿ ಜಾಗ ಗುರುತಿಸಲಾಗಿದೆ. ಜಾಗದ ಗೊಂದಲದಿಂದ ಇದುವರೆಗೆ ಅಲ್ಲಿ ಘಟಕ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಹಂಚ್ಯಾ-ಸಾತಗಳ್ಳಿಯಲ್ಲಿಯೇ ಘಟಕ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಘಟಕ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುವುದು. ಜನರು ಇನ್ನು ಮುಂದೆ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮ ವಹಿಸಬೇಕು. ಆ ಮೂಲಕ ಸ್ವಚ್ಛ ನಗರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು.”
-ಡಾ. ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ
ಯಳಂದೂರು: ನುಡಿನಮನ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಬಣ್ಣನೆ ಯಳಂದೂರು: ಜನರ ಪ್ರೀತಿ ಗಳಿಕೆಯೇ ಸಾರ್ಥಕಜೀವನವಾಗಿದ್ದು, ಮನುಕುಲವನ್ನು ಕೃತಾರ್ಥ ಮಾಡುವ ಕೆಲಸವನ್ನು…
ಹುಬ್ಬಳ್ಳಿಯಲ್ಲಿ ನಡೆದ ಮಹಿಳೆಯ ವಿವಸ ಪ್ರಕರಣ ಅತ್ಯಂತ ಅಮಾನವೀಯವಾದುದು. ಸಂತ್ರಸ್ತ ಮಹಿಳೆ ಬಿಜೆಪಿಯೋ, ಕಾಂಗ್ರೆಸ್ಸೋ ಎನ್ನುವುದು ನಂತರದ ವಿಚಾರ. ಮೊದಲಿಗೆ…
ನಂಜನಗೂಡು ಬಜಾರ್ ರಸ್ತೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಇದೆ. ಇದನ್ನು ದಳವಾಯಿ ಶಾಲೆ…
ಮೈಸೂರಿನ ರಂಗಾಯಣದಲ್ಲಿ ಜ.೧೧ರಿಂದ ಆರಂಭವಾಗಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಧ್ಯೇಯವಾಕ್ಯ ಅತ್ಯಂತ ಸಮಂಜಸವಾಗಿದೆ. ‘ಬಾಬಾಸಾಹೇಬ್ -ಸಮತೆಯೆಡೆಗೆ ನಡಿಗೆ’ ಎಂಬ ಆಶಯದ…
ದಾ.ರಾ.ಮಹೇಶ್ ಜ.೧೫ರಿಂದ ೧೮ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು; ಗಿರಿಜನರು ಹೆಚ್ಚಾಗಿ ಭಾಗಿಯಾಗುವ ಜಾತ್ರೆ ವೀರನಹೊಸಹಳ್ಳಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ…
ಎಂ.ನಾರಾಯಣ ದೇವಾಲಯದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಈ ಬಾರಿಯೂ ರಥೋತ್ಸವ ಇಲ್ಲ ತಿ.ನರಸೀಪುರ: ಕಾವೇರಿ ನದಿ ದಡದಲ್ಲಿರುವ ತಾಲ್ಲೂಕಿನ ಪ್ರಸಿದ್ಧ ಪುಣ್ಯ…