Andolana originals

ತುಂಟಿ ಕಸಿನ್‌ ಜೊತೆ ಅಕ್ಷರ ಸಂತೆಯಲ್ಲಿ

ಹಿಮ ಪೂರ್ವಿ

 

‘ಅಲ್ನೋಡೆ’, ಖುಷಿಯಿಂದ ಅಕ್ಷರಶಃ ಕಿರುಚಿದ್ದಳು ಕಸಿನ್, ಸಾಲು ಸಾಲು ಪುಸ್ತಕಗಳ ರಾಶಿಯಲ್ಲಿ ಅವಳಿಗೆ ಅಂತದ್ದೇನು ಕಂಡೀತು ಎಂದು ಅವಳು ಬೆರಳು ತೋರಿಸಿದ ಕಡೆ ಕಣ್ಣು ಕೀಲಿಸಿ ನೋಡಿದರೆ, ಪುಸ್ತಕ ಮಳಿಗೆಗಳ ಸಾಲಿನ ಕೊನೆಯಲೊಂದು ಇಳಕಲ್ ಸೀರೆ ಮಳಿಗೆ. ಇದಕ್ಕಾ ನೀ ಇಲ್ಲಿಗೆ ಬಂದಿದ್ದು ಎಂದು ಅವಳ ಮುಖ ನೋಡಿ ದಾಗ ಅರ್ಥವಾದವಳಂತೆ ಹೀ ಹೀ ಎಂದಳು, ನುಡಿ ಜಾತ್ರೆಗಿನ್ನೂ ವಾರವಿರುವಾಗಲೇ ಎಕ್ಸಿಬಿಷನ್‌ಗೆ ಹೋಗೋಣ ಎಂದು ಎಡೆಬಿಡದೆ ಕಾಡುವಾಗಲೇ ಅರ್ಥವಾಗಬೇಕಿತ್ತು ನನಗೆ.

ಅತ್ತ ಗಂಭೀರ ಸಾಹಿತ್ಯಾಭಿಮಾನಿಗಳನ್ನು ಒಳಗೊಂಡ ಫಾರ್ಮಲ್ ಅಲ್ಲದ, ಇತ್ತ ಬರೀ ಬೆಂಡು ಬತ್ತಾಸು ಭೇಲ್‌ಪುರಿ ಗಾಗಿ ಜೀವ ಬಿಡುವ ಜಾತ್ರೆ ವ್ಯಾಮೋಹಿಗಳನ್ನು ಒಳಗೊಂಡ ಕ್ಯಾಷುಯಲ್ ಅಲ್ಲದ, ಎಲ್ಲರನ್ನೂ ಒಳಗೊಂಡ, ಎಲ್ಲರಿಗೂ ಸಂದ ಜಾತ್ರೆಯಾಗಿತ್ತು ಕಳೆದ ವಾರ ಈ ದಿನ ಮಂಡ್ಯದಲ್ಲಿ ಮುಗಿದ ನುಡಿ ಹಬ್ಬ. ಆಗಾಗ ಒಂದಷ್ಟು ಸಾಹಿತಿಗಳನ್ನು, ಪ್ರಕಾಶಕರನ್ನೂ, ಒದುಗರನ್ನೂ, ಅಭಿಮಾನಿಗಳನ್ನೂ, ನಿರಭಿಮಾನಿಗಳನ್ನೂ, ಹೋರಾಟಗಾರರನ್ನೂ ಹೀಗೆ ಒಂದೆಡೆ ಹಬ್ಬದ ನೆಪದಲ್ಲಿ ಒಟ್ಟಾ ಗಿಸದಿದ್ದರೆ ಸೋಷಿಯಲ್ ಸರ್ಕಲ್‌ನಲ್ಲಿ ಒಳಗೊಳ್ಳುವುದಾದರೂ ಹೇಗೆ? ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳನ್ನು ಹಾದು ಹೋಗುವಾಗ ಕಸಿನ್ ಮೆಲ್ಲಗೆ ಉಸಿರಿದ್ದಳು, ಓದುಗರಷ್ಟೇ ಸಂಖ್ಯೆಯಲ್ಲಿ ಪಬ್ಲಿಷರಸ್ಸು ಇದ್ದಾರೆ ಕಣೇ, ಬೇಕಾದ್ರೆ ಎಣಿಸು ಎಂದು ಹಲ್ಲು ಕಿರಿದಿದ್ದಳು. ರಾಶಿ ರಾಶಿ ಪ್ರಕಾಶಕರನ್ನು ಒಂದೇ ಸೂರಿನಡಿ ನೋಡಿದ್ದು ನಾನೂ ಇದೇ ಮೊದಲು.

ಕೆಲವು ಮಳಿಗೆಗಳಲ್ಲಿ ತಮ್ಮ ಸ್ವಂತ ಪುಸ್ತಕಗಳಿಗೆ ಹಸ್ತಾಕ್ಷರ ನೀಡಲು ಲೇಖಕರು ತಯಾರಾಗೇ ನಿಂತಿದ್ದರು, ಅಭಿಮಾನಿಗಳು ಸೆಲ್ಛಿಗೆ ಮುಗಿಬಿದ್ದಷ್ಟು ಪುಸ್ತಕ ಕೊಳ್ಳಲು ಮುಗಿಬೀಳದ್ದು ಢಾಳಾಗಿ ಕಾಣುತ್ತಿತ್ತು. ನುರಿತ ಲೇಖಕರು ಅದಾಗಲೇ ತಮ್ಮ ಹಸ್ತಾಕ್ಷರ ವಿರುವ ಪುಸ್ತಕವನ್ನು ಅಭಿಮಾನಿಯ ಕೈಗೆ ತುರುಕಿ -ಟೋಗೆ ಫೋಸ್ ನೀಡುತ್ತಿದ್ದರು, ಕೊಳ್ಳುವ ದಾಕ್ಷಿಣ್ಯಕ್ಕೆ ಬೀಳುತ್ತಿದ್ದರು ಅಭಿಮಾನಿ ದೇವರುಗಳು. ಇಂತಹ ತಾಂತ್ರಿಕತೆಗಳು ಗೊತ್ತಿಲ್ಲದ ಹೊಸ ಬರಹಗಾರರು ತಮ್ಮ ಪುಸ್ತಕಗಳು ಖರ್ಚಾಗುತ್ತಿಲ್ಲದರ ಬಗೆಗೆ ಗಂಭೀರ ಚಿಂತನೆಯಲ್ಲಿದ್ದರು. ಆದರೆ ಗಂಭೀರ ಓದುಗರಿಗಂತೂ ಈ ನುಡಿಜಾತ್ರೆ ಹಬ್ಬವೇ ಸರಿ. ನಾಡಿ ಶಾಸ್ತ್ರದಿಂದ ಹಿಡಿದು ಚಂದ್ರಯಾನದ ವರೆಗೂ ಪುಸ್ತಕಗಳ ರಾಶಿಯೇ ತುಂಬಿ ತುಳುಕುತ್ತಿತ್ತು. ಪುಸ್ತಕ ಮಳಿಗೆಗುಂಟ ಹಾಯುವಾಗ ಪರಿಚಯದ ಯುವ ಪ್ರಕಾಶಕರನ್ನು ಕಂಡು ಕೈ ಬೀಸಿದಾಗ, ಭರ್ಜರಿ ವ್ಯಾಪಾರವಾಗುತ್ತಿದೆಯೆಂದು ಹೇಳಿದಷ್ಟೇ ಅಲ್ಲದೇ ಹೆಂಡತಿಯನ್ನು ಕರೆತರಬೇಕಿತ್ತು ಎಂದು ಅಲವತ್ತುಕೊಂಡರು. ಅವರೂ ಸಾಹಿತ್ಯಾಭಿಮಾನಿಯೆ?

ಏ ಏ ಇಲ್ಲಪ್ಪ ಫಿಟ್ನೆಸ್ ಫ್ರೀಕು, ಮೂರು ದಿನ ಈ ಮಳಿಗೆಯಲ್ಲಿ ಇದ್ದಿದ್ದರೆ ಮಿನಿಮಮ್ ಎರಡು ಕೆಜಿ ಸಣ್ಣ ಆಗಿರೋಳು ಈ ಸೆಕೆ, ಬೆವರಿಗೆ ಎಂದು ಜಿನುಗುತ್ತಿದ್ದ ಹನಿಗಳನ್ನು ಎಗ್ಗಿಲ್ಲದೆ ತೊಟ್ಟ ಶರ್ಟಿನಿಂದಲೇ ಒರೆಸಿಕೊಂಡರು, ಆದರೂ ಮಾರಾಟ ಮಾಡುವ ಉಮೇದಿಗಂತೂ ಹೊಡೆತ ಬಿದ್ದಿರಲಿಲ್ಲ. ಸೃಜನಾತ್ಮಕ ಓದಿಗಾಗಲೀ, ಬರಹಕ್ಕಾಗಲೀ ಒಂಚೂರು ಸಂಬಂಧಪಡದ ನನ್ನ ಕಾರ್ಪೋರೇಟ್ ಸಂಸ್ಕ ತಿಯ ಕಸಿನ್ ಇದನ್ನು ಅದ್ಬುತದಂತೆ ನೋಡುತ್ತಿದ್ದಳು. ವಾಣಿಜ್ಯ ಮಳಿಗೆಗಳಿಗೆ ಭೇಟಿಕೊಡಲು ತುದಿಗಾಲಲ್ಲಿ ನಿಂತಿದ್ದ ಕಸಿನ್‌ನನ್ನು ಗೋಷ್ಠಿ ಕೇಳಲು ಎಳೆದೊಯ್ದಿದ್ದೆ, ದಣಿವಾರಿಸಿಕೊಳ್ಳಲೋ, ಲೋಕಾಭಿರಾಮ ಮಾತಿಗೋ ಹೆಚ್ಚಿನ ಸಭಿಕರು ಪಕ್ಕಾಗಿದ್ದರು. ಮುಂದಿನ ಸಾಲಿನಲ್ಲಿ ಕುಳಿತವರು ಮಾತ್ರವೇ ಕಿವಿಯಾಗಿದ್ದರು, ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೇದಿಕೆಯ ಮೇಲಿದ್ದ ಗಣ್ಯರ ಕುಟುಂಬಸ್ಥರು ಮತ್ತು ನೆಂಟರಿಷ್ಟರು.

ಊಟದ ಸಮಯ ಮೀರುತ್ತಿದ್ದರೂ ವೇದಿಕೆಯಲ್ಲಿನ ಗಣ್ಯರ ಮಾತುಗಳ ತುಂತುರು ನಿಲ್ಲದ ಲಕ್ಷಣ ಕಾಣದಾದಾಗ ಕಸಿನ್ ಮತ್ತೆ ಹಲ್ಲು ಕಿರಿದಿದ್ದಳು, ಮಹತ್ವವಾದ ಯಾವುದಕ್ಕೋ ಸಲ್ಲುತ್ತಿದ್ದೇವೆ ಎಂಬ ನಶೆ ಏರಿದಾಗ ಈಗಾಗುತ್ತೆ ಕಣೇ ಎಂದು ರಾಗ ತೆಗೆದಳು. ಅಲ್ಲೆಲ್ಲೋ ಬಂಡಾಯಗಾರರು ಕೊಡುತ್ತಿದ್ದ ಬಾಡೂಟದ ಮೇಲಿನ ಆಸೆ ಅವಳ ಕಣ್ಣುಗಳಲ್ಲಿ ಜಿನುಗುತ್ತಿತ್ತು ಗೋಷ್ಠಿಯ ಪೆಂಡಾಲಿನಿಂದ ಆಚೆ ಬಂದಾಗ, ಮುಂದಿನ ಗೋಷ್ಠಿಯ ಪ್ರಧಾನ ಭಾಷಣಕಾರರು ಬಾಗಿಲಲ್ಲೇ ಕಂಡರು. ಆಯಾ ಸರ್ಕಾರಗಳ ಆಸ್ಥಾನ ಕವಿಗಳು ಸಮ್ಮೇಳಗಳಲ್ಲಿ ರಾರಾಜಿಸುವುದು ವಾಡಿಕೆ, ಆದರೆ ಇವರು ಎಲ್ಲಾ ಸರ್ಕಾರಗಳ ಸಮ್ಮೇಳನದಲ್ಲೂ ಇವರ ಠಳಾಯಿಸುವಿಕೆ ಅದೇಗೆ ಸಾದ್ಯ ಎಂದು ನನ್ನ ಕಸಿನ್‌ಗೆ ಎಲ್ಲಿಲ್ಲದ ಕುತೂಹಲ, ಅವರು ನಡು ಪಂಥೀಯರು ಎಲ್ಲಾ ಕಡೆ ಸಲ್ಲುವರು ಎಂದು ಮುಗುಳ್ನಕ್ಕಾಗ, ಬಕೆಟ್ ಪಂಥ ಅಂತೊಂದಿದೆಯಂತೆ ಕಣೇ ಎಂದು ಕಣ್ಣು ಮಿಟುಕಿಸಿದಳು.

ವಿಚಿತ್ರವಾದ ಭಾರ, ಮಿಶ್ರ ಭಾವ ಅನುಭವಕ್ಕೆ ಬಂತು, ಸುಡುವ ಬಿಸಿಲು, ನೆಟ್ವರ್ಕ್ ಸಮಸ್ಯೆಯಿಂದಾಗಿ ಇಷ್ಟವಾದದ್ದನ್ನು ಕೊಳ್ಳಲು, ಮಾತನಾಡಲು ಜನ ಪರದಾಡುತ್ತಿದ್ದುದು ಸರ್ವೆಸಾಮಾನ್ಯವಾಗಿತ್ತು. ಮಕ್ಕಳಿಬ್ಬರಿಗೂ ರಜೆ ಇತ್ತಲ್ಲ, ಮನೇಲಿ ಸುಮ್ಮನೆ ಗಲಾಟೆ ಒಂದು ರೌಂಡ್ ಆಟ ಆಡಿಸಿಕೊಂಡು ಹೋಗೋಣ ಅಂತ ಬಂದೆ, ಬೇಗ ಬಂದ್ಬಿಡ್ತೀನಿ ಅಂತ ಎರಡು ಮಕ್ಕಳ ಎಳೆ ತಾಯಿ ಮೊಬೈಲ್‌ನಲ್ಲಿ ಕಿರುಚಿ ಕಿರುಚಿ ಯಾರಿಗೋ ಹೇಳುತ್ತಿದ್ದರೆ, ಮುಖಕ್ಕೆ ಪ್ಲಾಸ್ಟಿಕ್ ಮಾಸ್ಕ್ ಧರಿಸಿ ಬೀಡು ಬೀಸಾಗಿ ಓಡಾಡಿಕೊಂಡಿದ್ದ ಪ್ರೇಮಿಗಳ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. ಪ್ರೀತಿಯಿಂದ ಕೊಂಡ ಪುಸ್ತಕಗಳನ್ನು ಎದೆಗವಚಿಕೊಂಡವರು, ಹಳದಿ ಕೆಂಪು ಶಾಲಿನ ಮರಿ ಪುಢಾರಿಗಳು, ಟೀಚರ್ ಕೈ ಹಿಡಿದು ಸಾಗುತ್ತಿದ್ದ ಬೆರಗು ಕಣ್ಣಿನ ಮಕ್ಕಳು, ಈ ದುಡ್ಡಿನಲ್ಲಿ ಅದೆಷ್ಟು ಕನ್ನಡ ಶಾಲೆಗಳನ್ನು ಉದ್ದರಿಸಬಹುದಿತ್ತಲ್ಲ ಎಂದು ಗೊಣಗುತ್ತಿದ್ದ ಹಿರಿಯರು, ಕರ ಪತ್ರಗಳನ್ನು ಹಂಚುತ್ತಿರುವ ಹೋರಾಟಗಾರರು ಹೀಗೆ ಹಲವು ಭಿನ್ನ ಸಂಸ್ಕ ತಿಗಳನ್ನು ಮುಖಾಮುಖಿಯಾಗಿಸಿದ ನುಡಿ ಜಾತ್ರೆ ಕಾಲ, ಶಬ್ದ, ದನಿ, ಗಂಧಗಳ ಜೊತೆ ಇನ್ನೊಂದಷ್ಟು ದಿನ ನನ್ನೊಂದಿಗೆ ಉಳಿಯಲಿದೆ.

andolana

Recent Posts

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

12 mins ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

17 mins ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

37 mins ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

45 mins ago

ರಾಜ್ಯದಲ್ಲಿ ತೀವ್ರ ಚಳಿ, ದಟ್ಟ ಮಂಜು : ವಾಹನ ಸವಾರರಿಗೆ ಮುನ್ನೆಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ತೀವ್ರ ಚಳಿ, ಶೀತಗಾಳಿಯ ಜೊತೆಗೆ ಬೆಳಗಿನ ವೇಳೆ ಕೆಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಬೆಳಗಿನ ವೇಳೆಯಲ್ಲಿ…

55 mins ago

ಅರಣ್ಯ ಇಲಾಖೆ ಖಾಯಂ ಅಧಿಕಾರಿ, ಸಿಬ್ಬಂದಿಗೆ ಸಿಹಿ ಸುದ್ದಿ : ೧ ಕೋಟಿ ರೂ.ಅಪಘಾತ ವಿಮೆ

ಬೆಂಗಳೂರು : ಅರಣ್ಯ ಇಲಾಖೆಯ ಖಾಯಂ ಅಧಿಕಾರಿ, ಸಿಬ್ಬಂದಿಗೆ ೧ ಕೋಟಿ ರೂ. ಅಪಘಾತ (ಮರಣ)ವಿಮೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ…

60 mins ago