ಆನೆ-ಮಾನವ ಸಂಘರ್ಷ ತಡೆಯಲು ಕ್ರಮ; ಅರಣ್ಯ ಇಲಾಖೆಯ ಮೊದಲ ಹಂತದ ಕಾರ್ಯಾಚರಣೆ ಯಶಸ್ವಿ
ಪ್ರಶಾಂತ್ ಎಸ್.
ಮೊದಲ ಬಾರಿ ಕಾಡಾನೆಗಳಿಗೆ ಕರ್ನಾಟಕದಲ್ಲಿಯೇ ಅತ್ಯಾಧುನಿಕ ರೇಡಿಯೋ ಕಾಲರ್
ಆನೆ ಮತ್ತು ಮಾನವ ಸಂಘರ್ಷ ತಡೆಯಲು ರೇಡಿಯೋ ಕಾಲರ್ ಅಳವಡಿಕೆ
ನುರಿತ ವೈದ್ಯರು, ೪೦ ಸಿಬ್ಬಂದಿ, ೪ ಸಾಕಾನೆಗಳ ಸಹಕಾರ ಪರಿಸರ ಸ್ನೇಹಿ ಕಚ್ಚಾವಸ್ತು ಬಳಸಿ ರೇಡಿಯೊ ಕಾಲರ್ ತಯಾರಿಕೆ
ರೇಡಿಯೊ ಕಾಲರ್ ಅಳವಡಿಸಿರುವ ಬ್ಯಾಟರಿ ಬಲ್ಬ್ ಸರ್ಕ್ಯೂಟ್ ಸಮಸ್ಯೆ ಆದಲ್ಲಿ ತಕ್ಷಣ ಬದಲಾಯಿಸಲು ಅವಕಾಶ
ಮೈಸೂರು: ಕಾಡಾನೆ ಮತ್ತು ಮಾನವ ಸಂಘರ್ಷ ತಡೆಯಲು, ಆನೆಗಳ ಮೇಲೆ ನಿಗಾ ಇಡಲು ಹಾಗೂ ಸ್ಥಳೀಯರಿಗೆ ಆನೆಗಳ ಬರುವಿಕೆ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಲು ರೇಡಿಯೋ ಕಾಲರ್ ಅಳವಡಿಸಿ ಅವುಗಳ ಉಪಟಳ ತಡೆಯಲು ಅರಣ್ಯ ಇಲಾಖೆ ಮುಂದಾಗಿದ್ದು, ಮೊದಲ ಹಂತದಲ್ಲಿ ೪ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯ ಯಶಸ್ವಿಯಾಗಿದೆ.
ಜಿಎಎಸ್‌ಎಂ ತಂತ್ರಜ್ಞಾನದ ಮೂಲಕ ಡ್ಯಾಶ್ ಬೋರ್ಡ್ ಮಾಹಿತಿ ರವಾನೆಯಾಗಲಿದ್ದು ನಂತರ ಸ್ಥಳೀಯರಿಗೆ ಆನೆಗಳ ಬಗ್ಗೆ ಮಾಹಿತಿ ಕಳುಹಿಸಬಹುದಾಗಿದೆ.
ಈ ಹಿಂದೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಹತ್ತು ಆನೆಗಳ ಹಿಂಡಿನಲ್ಲಿ ತಂಡದ ನಾಯಕತ್ವ ವಹಿಸುವ ಹೆಣ್ಣಾನೆಯನ್ನು ಗುರುತಿಸಿ ಅದಕ್ಕೆ ಯಶಸ್ವಿಯಾಗಿ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಈ ಆನೆಗೆ ಸುಮಾರು ೩೦-೩೫ ವರ್ಷ ಆಗಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಕಾರ್ಯಾಚರಣೆ ವಿಧಾನ: ಮೊದಲು ಕಾಡಾನೆಗಳ ಹಿಂಡನ್ನು ಅರಣ್ಯ ಸಿಬ್ಬಂದಿ ಗುರುತಿಸಿ, ಅಲ್ಲಿನ ಮುಂಚೂಣಿ ಹೆಣ್ಣಾನೆಗೆ ಸಾಕಾನೆಗಳಾದ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಮತ್ತು ಬಳ್ಳೆ ಅನೆ ಶಿಬಿರದ ಗೋಪಾಲಸ್ವಾಮಿ ನೆರವಿನಿಂದ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು.
ಬಳಿಕ ಸುಮಾರು ೨೦ ನಿಮಿಷಗಳ ಕಾಲ ಓಡಾಡಿದ ಹೆಣ್ಣಾನೆಯನ್ನು ಸಾಕಾನೆಗಳ ಸಹಾಯದಿಂದ ಬೇರ್ಪಡಿಸಲಾಯಿತು. ಅಷ್ಟರಲ್ಲಿ ಮಂಕಾದ ಆನೆಗೆ ಸಾಕಾನೆಗಳ ಸಹಾಯದಿಂದ ರೇಡಿಯೋ ಕಾಲರ್ ಅಳವಡಿಸಿ ನಟ್ಟು ಮತ್ತು ಬೋಲ್ಟ್ ಹಾಕಿ ಭದ್ರಪಡಿಸಲಾಯಿತು. ಬೆಳಿಗ್ಗೆ ಆರಂಭವಾದ ಕಾರ್ಯಚರಣೆ ಮಧ್ಯಾಹ್ನ ೩.೩೦ರ ವೇಳೆಗೆ ಯಶಸ್ವಿಯಾಗಿ ಕೊನೆಗೊಂಡಿದೆ.
ಪ್ರಯೋಜನವೇನು?: ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವುದರಿಂದ ಎಸ್ಟೇಟ್ ಹಾಗೂ ಇತರೆಡೆಗೆ ಓಡಾಡುವ ಆನೆಗಳು ಯಾವ ಪ್ರದೇಶದಲ್ಲಿವೆ? ಎಷ್ಟಿವೆ? ಕಾರ್ಯಾಚರಣೆ ನಡೆಸಿ ಮತ್ತೆ ಹೇಗೆ ಕಾಡಿಗೆ ಸೇರಿಸಬಹುದು ಎಂಬ ಮಾಹಿತಿ ತಿಳಿಯಬಹುದಾಗಿದೆ. ಇದರಿಂದ ಕಾಡಾನೆಗಳ ಉಪಟಳವನ್ನು ಸಾಕಷ್ಟು ನಿಯಂತ್ರಿಸಬಹುದು. ಜೊತೆಗೆ ಸ್ಥಳೀಯರಿಗೂ ಆನೆಗಳ ಬಗ್ಗೆ ಮಾಹಿತಿ ನೀಡಲು ನೆರವಾಗಲಿದೆ.
ಹೊಸದಾಗಿ ನಾಲ್ಕು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದು ವಿವಿಧೆಡೆ ಉಪಟಳ ನೀಡುವ ಆನೆಗಳ ಹಿಂಡನ್ನು ಪತ್ತೆ ಹಚ್ಚಿ ಅಲ್ಲಿನ ಆನೆಗಳಿಗೂ ರೇಡಿಯೋ ಕಾಲರ್ ಅಳವಡಿಸ ಲಾಗುತ್ತದೆ. ಆನೆಗಳ ಓಡಾಟ ಹೆಚ್ಚು ಎಲ್ಲೆಲ್ಲಿದೆ ಎನ್ನುವ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಇದು ಸಹಕಾರಿಯಾಗಲಿದೆ. ಅಲ್ಲದೇ, ಈ ಹಿಂದೆ ಎಲ್ಲೆಲ್ಲಿ ಆನೆ ಗಳು ಓಡಾಡಿದ್ದವು ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ನೆರವಾಗಲಿದೆ.
ದಕ್ಷಿಣ ಆಫ್ರಿಕಾ ಹಾಗೂ ಜರ್ಮನಿ ಯಿಂದ ಆಮದು ಮಾಡಿಕೊಳ್ಳುತ್ತಿದ್ದ ರೇಡಿಯೋ ಕಾಲರ್ ಗಳಿಗೆ ೬.೫೦ ಲಕ್ಷ ರೂ. ವೆಚ್ಚ ತಗುಲುತ್ತಿತ್ತು. ತೂಕವೂ ೧೬ರಿಂದ ೧೭ ಕೆ.ಜಿ. ಇರುತ್ತಿತ್ತು. ಆದರೆ ಸ್ಥಳೀಯ ರೇಡಿಯೋ ಕಾಲರ್‌ಗಳು ೧.೮೦ ಲಕ್ಷ ರೂ.ಗೆ ಸಿಗುತ್ತವೆ. ೭.೫ ಕೆ.ಜಿ. ತೂಕವಿರುವ ಸ್ಥಳೀಯ ರೇಡಿಯೋ ಕಾಲರ್ ಬ್ಯಾಟರಿ ದೀರ್ಘ ಕಾಲದವರೆಗೆ ಬಾಳಿಕೆ ಬರಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
” ವಿದೇಶದಿಂದ ಆಮದು ಮಾಡಿಕೊಳ್ಳ ಲಾಗುತ್ತಿದ್ದ ರೇಡಿಯೋ ಕಾಲರ್‌ಗಳಿಂದ ನಮ್ಮ ಅರಣ್ಯ ಮತ್ತು ವನ್ಯಜೀವಿಗಳ ಮಾಹಿತಿ ಸೋರಿಕೆ ಆಗುವ ಅಪಾಯವೂ ಇತ್ತು. ಮೊದಲ ಹಂತದಲ್ಲಿ ದೇಶೀಯವಾಗಿ ನಾಲ್ಕು ಕಾಡಾನೆಗಳಿಗೆ ಈ ರೇಡಿಯೋ ಕಾಲರ್ ಅಳವಡಿಸಿದ್ದು ಯಾವ ಸಮಸ್ಯೆ ಇಲ್ಲದೇ ಯಶಸ್ವಿಯಾಗಿದೆ.”
-ಪಿ.ಎ.ಸೀಮಾ, ಡಿಸಿಎಫ್, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…