Andolana originals

ಮುಗಿದ ಸಾಹಿತ್ಯ ಸಮ್ಮೇಳನ; ಇಲ್ಲಿವೆ ನಾಲ್ಕು ಅವಲೋಕನ

ಸಾಹಿತ್ಯ ಸಮ್ಮೇಳನ ಎಂಬ ಹುಲಿ ಸವಾರಿ

 

ವಸುಧೇಂದ್ರ

 

ಸಾಹಿತ್ಯಕ್ಕೆ ರಾಜಕೀಯ ಬೆರತಂತೆಲ್ಲಾ ಭ್ರಷ್ಟತೆ ಹೆಚ್ಚುತ್ತದೆ. ಸಾಹಿತ್ಯ ಸಮ್ಮೇಳನವನ್ನಂತೂ ರಾಜಕೀಯ ನಾಯಕರು ಆಪೋಶನ ತೆಗೆದುಕೊಂಡು ಬಿಟ್ಟಿದ್ದಾರೆ. ಕೇವಲ ಶೀರ್ಷಿಕೆಯಲ್ಲಿ ‘ಸಾಹಿತ್ಯ’ ಎನ್ನುವ ಪದ ಇದೆ ಎನ್ನುವುದನ್ನು ಹೊರತು ಪಡಿಸಿದರೆ, ಸಾಹಿತ್ಯ ಸಮ್ಮೇಳನಕ್ಕೂ ಸಾಹಿತ್ಯಕ್ಕೂ ಅಂತಹ ಸಂಬಂಧ ಇಲ್ಲ.

ಸಮ್ಮೇಳನದಲ್ಲಿ ಸ್ವಲ್ಪ ಮಟ್ಟಿಗೆ ಓದುಗರಿಗೆ ಇಷ್ಟವಾಗುವುದು ಪುಸ್ತಕ ಮಳಿಗೆಗಳು ಮಾತ್ರ. ನಾಡಿನ ಮೂಲೆ ಮೂಲೆಯಿಂದ ಪ್ರಕಾಶಕರು ತಮ್ಮ ಸರಕನ್ನು ಹೊತ್ತು ತಂದಿರುತ್ತಾರೆ. ಬಾಕಿ ದಿನಗಳಲ್ಲಿ ನಮಗೆ ಲಭ್ಯವಾಗದ ಪುಸ್ತಕಗಳು ಸಮ್ಮೇಳನದ ನೆಪದಲ್ಲಿ ಒಂದೆಡೆ ದೊರಕುತ್ತವೆ. ಹಲವಾರು ಸಾಹಿತಿಗಳು ಮಾತನಾಡಲು, ಸಹಿ ಮಾಡಲು ದೊರಕುತ್ತಾರೆ. ಅವರೊಡನೆ ನಿಂತು ಒಂದು ಸೆಲ್ಛೀ ತೆಗೆದುಕೊಳ್ಳು ವುದು ಸಂಭ್ರಮದ ಸಂಗತಿಯೇ ಆಗಿರುತ್ತದೆ.

ಅವೆಲ್ಲ ಓದುಗರಿಗೆ ಮುದ ನೀಡುವ ಸಂಗತಿಗಳೇ ಆಗಿವೆ. ಹಲವು ದಶಕಗಳ ಕೆಳಗೆ ನಮ್ಮ ಹಿರಿಯ ಸಾಹಿತಿ ಗಳು ಸದುದ್ದೇಶದಿಂದಲೇ ಸಾಹಿತ್ಯ ಸಮ್ಮೇಳನ ಪ್ರಾರಂಭಿಸಿದ್ದಾರೆ. ಅದಕ್ಕೆ ತಕ್ಕಂತೆ ಪ್ರತಿವರ್ಷವೂ ಸಾಹಿತ್ಯಕ್ಕೆ ಸಂಬಂಽಸಿದ ಸಂಗತಿಗಳನ್ನು ಚರ್ಚಿಸುತ್ತಾ, ಕರ್ನಾಟಕದ ಏಳಿಗೆಯ ಕಡೆಗೆ ಗಮನ ಹರಿಸುತ್ತಾ ಬಂದಿದ್ದಾರೆ. ಆ ಹೊತ್ತಿನಲ್ಲಿ ರಾಜಕೀಯ ನಾಯಕರು ಸಮ್ಮೇಳನದಲ್ಲಿ ಮೂಗು ತೂರಿಸದೇ ಇರುವುದರಿಂದ ಅದು ತನ್ನ ಪಾವಿತ್ರ್ಯತೆಯನ್ನು ಉಳಿಸಿಕೊಂಡಿತ್ತು. ಯಾವುದೇ ದುಂಧು ಖರ್ಚಿನ ಹೊರೆಯಿಲ್ಲದೆ, ಸಾಹಿತಿಗಳು ಮತ್ತು ಓದುಗರ ಪ್ರೀತಿಯ ನೆರಳಲ್ಲಿ ಅಂತಹ ಸಮ್ಮೇಳನಗಳು ನಡೆದಿರುವುದು ಕಂಡು ಬರುತ್ತದೆ.

ಯಾವಾಗ ಕನ್ನಡ ಸಾಹಿತ್ಯ ಸಮ್ಮೇಳನದ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಬಂದಿತೋ, ಆಗ ಅದರೆಡೆಗೆ ರಾಜಕೀಯ ನಾಯಕರ ಕಣ್ಣು ಹೋಗಿದೆ. ಈಗ ಅದನ್ನು ಸಂಪೂರ್ಣವಾಗಿ ಕಬಳಿಸಿಕೊಂಡು ಬಿಟ್ಟಿದ್ದಾರೆ. ಸಾಹಿತ್ಯ ಸಮ್ಮೇಳನ ಇಂದು ಹುಲಿಸವಾರಿ ಆಗಿ ಹೋಗಿದೆ. ನಿಲ್ಲಿಸುವಂತಿಲ್ಲ, ಹೀಗೇ ಸಾಗುವುದೂ ಸರಿಯಲ್ಲ. ಕೊನೆಯ ಪಕ್ಷ ಅದರ ಸ್ವರೂಪವನ್ನಾದರೂ ಬದಲಿಸಲು ನಾವು ಸಿದ್ಧರಾಗಬೇಕು. ರಾಜಕೀಯ ನಾಯಕರು ಬೇಕಿದ್ದರೆ ಇಡೀ ಜನಸಮುದಾಯವನ್ನು ಆಕರ್ಷಿಸುವ ಜಾತ್ರೆಗಳನ್ನು ಮಾಡಲಿ. ತಪ್ಪೇನಿಲ್ಲ. ಆದರೆ ಸಾಹಿತ್ಯಕ್ಕೆ ತನ್ನದೇ ಆದ ಘನತೆಯನ್ನು ಕಾಪಾಡಿ ಕೊಳ್ಳುವ ಅವಶ್ಯಕತೆಯಿದೆ.

ಸಾಹಿತ್ಯದ ಹೆಸರಲ್ಲಿ ಜನರ ಹಣವನ್ನು ಪೋಲು ಮಾಡುವುದು ಬೇಡ. ಹಿರಿಯ ಸಾಹಿತಿಗಳು ಸೇರಿ ನಮಗೇನು ಬೇಕು ಎನ್ನುವುದನ್ನು ನಿರ್ಧರಿಸಲಿ. ಈ ದೊಡ್ಡ ಮೊತ್ತದಲ್ಲಿ ಹಲವಾರು ಸಾಹಿತ್ಯದ ಕೆಲಸ ಗಳನ್ನು ಪೂರೈಸಬಹುದು. ಪ್ರತಿ ಯೊಂದು ಜಿಲ್ಲೆಯಲ್ಲೂ ಅಚ್ಚುಕಟ್ಟಾಗಿ ಪುಸ್ತಕ ಸಂತೆ ಯನ್ನು ಮಾಡಬಹುದು. ಕನ್ನಡದಿಂದ ಬೇರೆ ಭಾಷೆಗೆ, ಪ್ರಮುಖವಾಗಿ ಇಂಗ್ಲೀಷಿಗೆ, ಮುಖ್ಯ ಕೃತಿಗಳನ್ನು ತರ್ಜುಮೆ ಮಾಡಿಸಿ ಉತ್ತಮ ಪ್ರಕಾಶಕರಿಂದ ಪ್ರಕಟಿ ಸಬಹುದು, ಅವರಿಗೆ ಅಗತ್ಯವಾದ ಸಾ-ವೇರ್ ಗಳನ್ನು ಕೊಟ್ಟು ತರಬೇತಿಗಳನ್ನು ನೀಡಬಹುದು, ಮುಖ್ಯ ಲೇಖಕರನ್ನು ಹಲವು ಊರುಗಳಿಗೆ ಕಳುಹಿಸಿ ಓದುಗರೊಡನೆ ಒಡನಾಟ ಮಾಡಿಸಬಹುದು-ಹೀಗೆ ಹಲವಾರು ಉತ್ತಮ ಕೆಲಸಗಳನ್ನು ಮಾಡುವ ಅವಕಾಶ ನಮಗೆ ದಕ್ಕುತ್ತದೆ.

ಅದೊಂದೂ ಇಲ್ಲದೆ ದೀಪಾವಳಿಯಲ್ಲಿ ಪಟಾಕಿ ಸಿಡಿಸಿ ಹಣವನ್ನು ಪೋಲು ಮಾಡಿದಂತೆ ಮೂವತ್ತೊಂದು ಕೋಟಿ ರೂ. ಅನ್ನು ಉಡಾಯಿಸುವುದು ಸಾಹಿತ್ಯದ ಯಾವ ಸೌಭಾಗ್ಯಕ್ಕೆ? ಪ್ರತಿ ಸಾಹಿತ್ಯ ಸಮ್ಮೇಳನ ಮುಗಿದ ನಂತರ ನಾವು ಸಾಽಸಿದ ಸಾಹಿತ್ಯದ ಸಾಧನೆಗಳನ್ನು ಪಟ್ಟಿ ಮಾಡುವ ಸಂಪ್ರದಾಯವನ್ನು ಸಾಹಿತ್ಯ ಪರಿಷತ್ತು ಎತ್ತಿಕೊಳ್ಳಬೇಕು. ಇಂತಹ ದೊಡ್ಡ ವೆಚ್ಚವನ್ನು ಮಾಡಿದ ಮೇಲೆ ಅದಕ್ಕೆ ಉತ್ತರದಾಯಿತ್ವ ಹೊರುವುದು ಅಷ್ಟೇ ಮುಖ್ಯವಾಗಿರುತ್ತದೆ. ಕೇವಲ ಒಂದು ಅಥವಾ ಎರಡು ಕೋಟಿ ಹಣದಲ್ಲಿ ದೇಶದಲ್ಲಿ ಅತ್ಯಂತ

ಅಚ್ಚುಕಟ್ಟಾಗಿ ಲಿಟರರಿ ಫೆಸ್ಟಿವಲ್‌ಗಳು ನಡೆಯುತ್ತಿವೆ. ಅಲ್ಲಿ ಹಲವಾರು ಪುಸ್ತಕಗಳ ಬಗ್ಗೆ ಚರ್ಚೆಯಾಗುತ್ತದೆ, ಹತ್ತಾರು ಹೊಸ ಲೇಖಕರ ಪರಿಚಯವಾಗುತ್ತದೆ, ದೇಶದ ಜ್ವಲಂತ ಸಮಸ್ಯೆಗಳ ಚರ್ಚೆಯೂ ಆಗುತ್ತದೆ. ಅದು ನಮಗೆ ಮಾದರಿಯಾಗಬಾರದೇಕೆ? ವಿಶೇಷವೆಂದರೆ ಇವೆಲ್ಲ ಲಿಟರರಿ ಫೆಸ್ಟಿವಲ್‌ಗಳು ಖಾಸಗಿಯಾಗಿ ನಡೆಯುತ್ತವೆ. ಅಲ್ಲಿ ಸರಕಾರ ಮೂಗು ತೂರಿಸುವುದಿಲ್ಲ. ರಾಜಕೀಯ ನಾಯಕರು ಭಾಗವಹಿಸಿದರೂ ಸಾಹಿತ್ಯದ ವಿದ್ಯಾರ್ಥಿಯಾಗಿ ಬರುತ್ತಾರೆ. ಖಾಸಗಿ ಕಾರ್ಪೊರೇಟ್ ಕೈಗೆ ಚುಕ್ಕಾಣಿ ಸಿಗದಂತೆ ಸಾಹಿತ್ಯಾಸಕ್ತರೇ ಅಂತಹ ಸಮ್ಮೇಳನವನ್ನು ನಿರ್ವಹಿಸಿದರೆ, ಅದು ನಿಜಕ್ಕೂ ಕನ್ನಡಕ್ಕೆ ಸಾಕಷ್ಟು ಉಪಕಾರವನ್ನು ಮಾಡುತ್ತದೆ.

ಇಲ್ಲಿ ಮತ್ತೊಂದು ಮರೆಯಬಾರದ ಸಂಗತಿಯಿದೆ. ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಪರ ಪ್ರೀತಿ, ಆವೇಶ ಇರುತ್ತದೆ. ಇದು ಅತ್ಯಂತ ಪವಿತ್ರವಾದದ್ದು. ಬೀದರ್, ಕಲಬುರಗಿ, ವಿಜಯಪುರ, ಕರಾವಳಿಯಿಂದೆಲ್ಲಾ ಕನ್ನಡದ ಪುಳಕದಲ್ಲಿ ಜನರು ಸಮ್ಮೇಳನಕ್ಕೆ ಬರುತ್ತಾರೆ. ಈ ಭಾವನಾತ್ಮಕ ಬೆಸುಗೆಯನ್ನು ಸುಲಭವಾಗಿ ಸಾಽಸುವುದು ಸಾಧ್ಯವಿಲ್ಲ. ಇದಕ್ಕೆ ದಶಕಗಳ ಇತಿಹಾಸ, ಶ್ರಮದ ಕೊಡುಗೆಯಿದೆ. ಅದನ್ನು ಕುಗ್ಗಿಸದಂತೆ, ಅದು ಮತ್ತಷ್ಟು ಹಿಗ್ಗುವಂತೆ ಮಾಡಬೇಕಿದೆ. ಬಂದವರಿಗೆ ಒಳ್ಳೆಯ ಆತಿಥ್ಯ ಸಿಗಬೇಕು, ಅಚ್ಚುಕಟ್ಟಾಗಿ ನಡೆಯುವ ಗೋಷ್ಠಿಗಳಲ್ಲಿ ಅವರು ಭಾಗವಹಿಸಬೇಕು, ಮಾತುಗಳನ್ನು ಕೇಳಬೇಕು, ಪುಸ್ತಕ ಕೊಳ್ಳಬೇಕು, ಲೇಖಕರೊಡನೆ ಒಡನಾಡಿ ಮನೆಗೆ ಹೋಗವಾಗ ಏನೋ ಕನ್ನಡದ ಕೆಲಸದಲ್ಲಿ ಭಾಗಿಯಾದ ಭಾವ ಅವರಲ್ಲಿ ಮೂಡಬೇಕು.

ಆದರೆ ಸದ್ಯ ನಡೆಯುತ್ತಿರುವ ಸಮ್ಮೇಳನಗಳು ಅಂತಹವರಿಗೆ ಸುಸ್ತು ತರಿಸುತ್ತಿವೆ. ದೂಳು, ಕೆಸರು, ಊಟದ ಹೋರಾಟ, ಬಿಸಿಲು, ಗಲಾಟೆ-ಯಾವುದೂ ಮುದ ನೀಡುವುದಿಲ್ಲ. ಸಾಹಿತ್ಯದ ಉದ್ದೇಶಕ್ಕಿಂತಲೂ ಜಾತ್ರೆಯ ಉದ್ದೇಶಕ್ಕೆ ಬರುವವರ ಸಂಖ್ಯೆ ಹೆಚ್ಚಿರುವುದರಿಂದಲೇ ಈ ಸಮಸ್ಯೆಯಾಗುತ್ತದೆ. ಕನ್ನಡದ ಜಾತ್ರೆಯೂ ಬೇಕು. ಅದನ್ನು ಬೇರೆಯಾಗಿ ಸರಕಾರ ನಿರ್ವಹಿಸಲಿ. ಆದರೆ ಸಾಹಿತ್ಯಕ್ಕೆ ಮಾತ್ರ ಗಲಾಟೆಯಿಲ್ಲದ ತುಸು ನೆಮ್ಮದಿಯ ಗಳಿಗೆಗಳನ್ನು ನೀಡಲಿ. ಶ್ರವಣಬೆಳಗೊಳಕ್ಕೆ ಹೋಗಿ, ಬಾಹುಬಲಿಯ ಸನ್ನಿಽಯಲ್ಲಿ ಶಾಂತಿಯನ್ನು ಹೊಂದಿದಂತಹ ಭಾವವನ್ನು ಸಾಹಿತ್ಯ ಸಮ್ಮೇಳನ ನೀಡಬೇಕು.

ಎಷ್ಟೋ ಜನರಿಗೆ ಸಮ್ಮೇಳನದ ಗಲಾಟೆ ಅದೆಷ್ಟು ಭಯ ತರಿಸುತ್ತದೆಂದರೆ, ಅವರು ಮಂಡ್ಯದಲ್ಲಿದ್ದೂ ಸಮ್ಮೇಳನಕ್ಕೆ ಬರಲಿಲ್ಲ. ಎಷ್ಟೇ ಸಾಹಿತ್ಯದ ಆಸಕ್ತಿಯಿದ್ದರೂ ದೂಳು, ಗಲಾಟೆ ತಮಗೆ ಆಗಿ ಬರುವುದಿಲ್ಲ ಎಂದು ಬಹುತೇಕರು ಹಿಂಜರಿಯುತ್ತಾರೆ. ಸಮ್ಮೇಳನದ ಈ ರೌದ್ರ ಅವತಾರ ಬದಲಾಗಿ ಸೌಮ್ಯವಾಗಬೇಕು, ಶಾಂತವಾಗಬೇಕು. ಸಮ್ಮೇಳನಕ್ಕೆ ಬಂದವರಿಗೆಲ್ಲಾ ಉಚಿತವಾಗಿ ಆಹಾರದ ಪೂರೈಕೆ ಇರುವುದು ಇಂತಹ ಗದ್ದಲಕ್ಕೆ ಕಾರಣವಾಗುತ್ತದೆ. ಅದಕ್ಕೆ ಬದಲು ಊಟಕ್ಕೆ ಒಂದಿಷ್ಟು ಹಣವನ್ನು ನಿಗದಿ ಪಡಿಸಿದರೆ ಸಾಹಿತ್ಯದ ಆಸಕ್ತಿ ಇರುವವರು ಮಾತ್ರ ಬರುತ್ತಾರೆ. ಆಗ ದೊಡ್ಡ ಮಟ್ಟದ ಖರ್ಚೂ ಆಗುವುದಿಲ್ಲ, ಯಾವುದಾದರೂ ಒಳಾಂಗಣದಲ್ಲೇ ಸಾಹಿತ್ಯ ಸಮ್ಮೇಳನ ನಿರ್ವಹಿಸ ಬಹುದು.

ಮಂಡ್ಯದಲ್ಲಿ ಗಲಾಟೆಗೆ ಕಾರಣವಾದ ಆಹಾರದ ವೈವಿಧ್ಯವನ್ನೂ ಈ ಕ್ರಮದಲ್ಲಿ ಸುಲಭವಾಗಿ ನಿರ್ವಹಿಸಬಹುದು. ಧಾರವಾಡ ಸಾಹಿತ್ಯ ಸಂಭ್ರಮ ಶುರುವಾದಾಗ ಅಂತಹದೊಂದು ಪರ್ಯಾಯ ಸಮ್ಮೇಳನವೆನ್ನಿಸಿ ಸಾಹಿತ್ಯಾಸಕ್ತರಲ್ಲಿ ಭರವಸೆ ಮೂಡಿಸಿತ್ತು. ಆದರೆ ಅದು ದುರಾದೃಷ್ಟದಿಂದಾಗಿ ಒಂದೆರಡು ವರ್ಷಕ್ಕೆ ಮಾತ್ರ ಸೀಮಿತವಾಯ್ತು. ಈಗ ಬುಕ್‌ಬ್ರಹ್ಮದವರು ದೊಡ್ಡ ಪ್ರಮಾಣದಲ್ಲಿ ಅಂತಹದೇ ಶುದ್ಧ ಸಾಹಿತ್ಯಕ್ಕೆ ಸೀಮಿತವಾದ ಉತ್ಸವವನ್ನು ಮಾಡಲು ಶುರು ಮಾಡಿದ್ದಾರೆ. ಅದು ಹಲವು ವರ್ಷಗಳ ಕಾಲ ನಿರಂತರವಾಗಿ ನಡೆದರೆ, ಸಾಹಿತ್ಯಪ್ರಿಯರು ಅತ್ತ ಕಡೆಗೆ ವಾಲುವುದು ನಿಶ್ಚಯ.

 

ತುಂಟಿ ಕಸಿನ್‌ ಜೊತೆ ಅಕ್ಷರ ಸಂತೆಯಲ್ಲಿ

 

  • ಹಿಮ ಪೂರ್ವಿ

 

‘ಅಲ್ನೋಡೆ’, ಖುಷಿಯಿಂದ ಅಕ್ಷರಶಃ ಕಿರುಚಿದ್ದಳು ಕಸಿನ್, ಸಾಲು ಸಾಲು ಪುಸ್ತಕಗಳ ರಾಶಿಯಲ್ಲಿ ಅವಳಿಗೆ ಅಂತದ್ದೇನು ಕಂಡೀತು ಎಂದು ಅವಳು ಬೆರಳು ತೋರಿಸಿದ ಕಡೆ ಕಣ್ಣು ಕೀಲಿಸಿ ನೋಡಿದರೆ, ಪುಸ್ತಕ ಮಳಿಗೆಗಳ ಸಾಲಿನ ಕೊನೆಯಲೊಂದು ಇಳಕಲ್ ಸೀರೆ ಮಳಿಗೆ. ಇದಕ್ಕಾ ನೀ ಇಲ್ಲಿಗೆ ಬಂದಿದ್ದು ಎಂದು ಅವಳ ಮುಖ ನೋಡಿ ದಾಗ ಅರ್ಥವಾದವಳಂತೆ ಹೀ ಹೀ ಎಂದಳು, ನುಡಿ ಜಾತ್ರೆಗಿನ್ನೂ ವಾರವಿರುವಾಗಲೇ ಎಕ್ಸಿಬಿಷನ್‌ಗೆ ಹೋಗೋಣ ಎಂದು ಎಡೆಬಿಡದೆ ಕಾಡುವಾಗಲೇ ಅರ್ಥವಾಗಬೇಕಿತ್ತು ನನಗೆ.

ಅತ್ತ ಗಂಭೀರ ಸಾಹಿತ್ಯಾಭಿಮಾನಿಗಳನ್ನು ಒಳಗೊಂಡ ಫಾರ್ಮಲ್ ಅಲ್ಲದ, ಇತ್ತ ಬರೀ ಬೆಂಡು ಬತ್ತಾಸು ಭೇಲ್‌ಪುರಿ ಗಾಗಿ ಜೀವ ಬಿಡುವ ಜಾತ್ರೆ ವ್ಯಾಮೋಹಿಗಳನ್ನು ಒಳಗೊಂಡ ಕ್ಯಾಷುಯಲ್ ಅಲ್ಲದ, ಎಲ್ಲರನ್ನೂ ಒಳಗೊಂಡ, ಎಲ್ಲರಿಗೂ ಸಂದ ಜಾತ್ರೆಯಾಗಿತ್ತು ಕಳೆದ ವಾರ ಈ ದಿನ ಮಂಡ್ಯದಲ್ಲಿ ಮುಗಿದ ನುಡಿ ಹಬ್ಬ. ಆಗಾಗ ಒಂದಷ್ಟು ಸಾಹಿತಿಗಳನ್ನು, ಪ್ರಕಾಶಕರನ್ನೂ, ಒದುಗರನ್ನೂ, ಅಭಿಮಾನಿಗಳನ್ನೂ, ನಿರಭಿಮಾನಿಗಳನ್ನೂ, ಹೋರಾಟಗಾರರನ್ನೂ ಹೀಗೆ ಒಂದೆಡೆ ಹಬ್ಬದ ನೆಪದಲ್ಲಿ ಒಟ್ಟಾ ಗಿಸದಿದ್ದರೆ ಸೋಷಿಯಲ್ ಸರ್ಕಲ್‌ನಲ್ಲಿ ಒಳಗೊಳ್ಳುವುದಾದರೂ ಹೇಗೆ? ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳನ್ನು ಹಾದು ಹೋಗುವಾಗ ಕಸಿನ್ ಮೆಲ್ಲಗೆ ಉಸಿರಿದ್ದಳು, ಓದುಗರಷ್ಟೇ ಸಂಖ್ಯೆಯಲ್ಲಿ ಪಬ್ಲಿಷರಸ್ಸು ಇದ್ದಾರೆ ಕಣೇ, ಬೇಕಾದ್ರೆ ಎಣಿಸು ಎಂದು ಹಲ್ಲು ಕಿರಿದಿದ್ದಳು. ರಾಶಿ ರಾಶಿ ಪ್ರಕಾಶಕರನ್ನು ಒಂದೇ ಸೂರಿನಡಿ ನೋಡಿದ್ದು ನಾನೂ ಇದೇ ಮೊದಲು.

ಕೆಲವು ಮಳಿಗೆಗಳಲ್ಲಿ ತಮ್ಮ ಸ್ವಂತ ಪುಸ್ತಕಗಳಿಗೆ ಹಸ್ತಾಕ್ಷರ ನೀಡಲು ಲೇಖಕರು ತಯಾರಾಗೇ ನಿಂತಿದ್ದರು, ಅಭಿಮಾನಿಗಳು ಸೆಲ್ಛಿಗೆ ಮುಗಿಬಿದ್ದಷ್ಟು ಪುಸ್ತಕ ಕೊಳ್ಳಲು ಮುಗಿಬೀಳದ್ದು ಢಾಳಾಗಿ ಕಾಣುತ್ತಿತ್ತು. ನುರಿತ ಲೇಖಕರು ಅದಾಗಲೇ ತಮ್ಮ ಹಸ್ತಾಕ್ಷರ ವಿರುವ ಪುಸ್ತಕವನ್ನು ಅಭಿಮಾನಿಯ ಕೈಗೆ ತುರುಕಿ -ಟೋಗೆ ಫೋಸ್ ನೀಡುತ್ತಿದ್ದರು, ಕೊಳ್ಳುವ ದಾಕ್ಷಿಣ್ಯಕ್ಕೆ ಬೀಳುತ್ತಿದ್ದರು ಅಭಿಮಾನಿ ದೇವರುಗಳು. ಇಂತಹ ತಾಂತ್ರಿಕತೆಗಳು ಗೊತ್ತಿಲ್ಲದ ಹೊಸ ಬರಹಗಾರರು ತಮ್ಮ ಪುಸ್ತಕಗಳು ಖರ್ಚಾಗುತ್ತಿಲ್ಲದರ ಬಗೆಗೆ ಗಂಭೀರ ಚಿಂತನೆಯಲ್ಲಿದ್ದರು. ಆದರೆ ಗಂಭೀರ ಓದುಗರಿಗಂತೂ ಈ ನುಡಿಜಾತ್ರೆ ಹಬ್ಬವೇ ಸರಿ. ನಾಡಿ ಶಾಸ್ತ್ರದಿಂದ ಹಿಡಿದು ಚಂದ್ರಯಾನದ ವರೆಗೂ ಪುಸ್ತಕಗಳ ರಾಶಿಯೇ ತುಂಬಿ ತುಳುಕುತ್ತಿತ್ತು. ಪುಸ್ತಕ ಮಳಿಗೆಗುಂಟ ಹಾಯುವಾಗ ಪರಿಚಯದ ಯುವ ಪ್ರಕಾಶಕರನ್ನು ಕಂಡು ಕೈ ಬೀಸಿದಾಗ, ಭರ್ಜರಿ ವ್ಯಾಪಾರವಾಗುತ್ತಿದೆಯೆಂದು ಹೇಳಿದಷ್ಟೇ ಅಲ್ಲದೇ ಹೆಂಡತಿಯನ್ನು ಕರೆತರಬೇಕಿತ್ತು ಎಂದು ಅಲವತ್ತುಕೊಂಡರು. ಅವರೂ ಸಾಹಿತ್ಯಾಭಿಮಾನಿಯೆ?

ಏ ಏ ಇಲ್ಲಪ್ಪ ಫಿಟ್ನೆಸ್ ಫ್ರೀಕು, ಮೂರು ದಿನ ಈ ಮಳಿಗೆಯಲ್ಲಿ ಇದ್ದಿದ್ದರೆ ಮಿನಿಮಮ್ ಎರಡು ಕೆಜಿ ಸಣ್ಣ ಆಗಿರೋಳು ಈ ಸೆಕೆ, ಬೆವರಿಗೆ ಎಂದು ಜಿನುಗುತ್ತಿದ್ದ ಹನಿಗಳನ್ನು ಎಗ್ಗಿಲ್ಲದೆ ತೊಟ್ಟ ಶರ್ಟಿನಿಂದಲೇ ಒರೆಸಿಕೊಂಡರು, ಆದರೂ ಮಾರಾಟ ಮಾಡುವ ಉಮೇದಿಗಂತೂ ಹೊಡೆತ ಬಿದ್ದಿರಲಿಲ್ಲ. ಸೃಜನಾತ್ಮಕ ಓದಿಗಾಗಲೀ, ಬರಹಕ್ಕಾಗಲೀ ಒಂಚೂರು ಸಂಬಂಧಪಡದ ನನ್ನ ಕಾರ್ಪೋರೇಟ್ ಸಂಸ್ಕ ತಿಯ ಕಸಿನ್ ಇದನ್ನು ಅದ್ಬುತದಂತೆ ನೋಡುತ್ತಿದ್ದಳು. ವಾಣಿಜ್ಯ ಮಳಿಗೆಗಳಿಗೆ ಭೇಟಿಕೊಡಲು ತುದಿಗಾಲಲ್ಲಿ ನಿಂತಿದ್ದ ಕಸಿನ್‌ನನ್ನು ಗೋಷ್ಠಿ ಕೇಳಲು ಎಳೆದೊಯ್ದಿದ್ದೆ, ದಣಿವಾರಿಸಿಕೊಳ್ಳಲೋ, ಲೋಕಾಭಿರಾಮ ಮಾತಿಗೋ ಹೆಚ್ಚಿನ ಸಭಿಕರು ಪಕ್ಕಾಗಿದ್ದರು. ಮುಂದಿನ ಸಾಲಿನಲ್ಲಿ ಕುಳಿತವರು ಮಾತ್ರವೇ ಕಿವಿಯಾಗಿದ್ದರು, ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೇದಿಕೆಯ ಮೇಲಿದ್ದ ಗಣ್ಯರ ಕುಟುಂಬಸ್ಥರು ಮತ್ತು ನೆಂಟರಿಷ್ಟರು.

ಊಟದ ಸಮಯ ಮೀರುತ್ತಿದ್ದರೂ ವೇದಿಕೆಯಲ್ಲಿನ ಗಣ್ಯರ ಮಾತುಗಳ ತುಂತುರು ನಿಲ್ಲದ ಲಕ್ಷಣ ಕಾಣದಾದಾಗ ಕಸಿನ್ ಮತ್ತೆ ಹಲ್ಲು ಕಿರಿದಿದ್ದಳು, ಮಹತ್ವವಾದ ಯಾವುದಕ್ಕೋ ಸಲ್ಲುತ್ತಿದ್ದೇವೆ ಎಂಬ ನಶೆ ಏರಿದಾಗ ಈಗಾಗುತ್ತೆ ಕಣೇ ಎಂದು ರಾಗ ತೆಗೆದಳು. ಅಲ್ಲೆಲ್ಲೋ ಬಂಡಾಯಗಾರರು ಕೊಡುತ್ತಿದ್ದ ಬಾಡೂಟದ ಮೇಲಿನ ಆಸೆ ಅವಳ ಕಣ್ಣುಗಳಲ್ಲಿ ಜಿನುಗುತ್ತಿತ್ತು ಗೋಷ್ಠಿಯ ಪೆಂಡಾಲಿನಿಂದ ಆಚೆ ಬಂದಾಗ, ಮುಂದಿನ ಗೋಷ್ಠಿಯ ಪ್ರಧಾನ ಭಾಷಣಕಾರರು ಬಾಗಿಲಲ್ಲೇ ಕಂಡರು. ಆಯಾ ಸರ್ಕಾರಗಳ ಆಸ್ಥಾನ ಕವಿಗಳು ಸಮ್ಮೇಳಗಳಲ್ಲಿ ರಾರಾಜಿಸುವುದು ವಾಡಿಕೆ, ಆದರೆ ಇವರು ಎಲ್ಲಾ ಸರ್ಕಾರಗಳ ಸಮ್ಮೇಳನದಲ್ಲೂ ಇವರ ಠಳಾಯಿಸುವಿಕೆ ಅದೇಗೆ ಸಾದ್ಯ ಎಂದು ನನ್ನ ಕಸಿನ್‌ಗೆ ಎಲ್ಲಿಲ್ಲದ ಕುತೂಹಲ, ಅವರು ನಡು ಪಂಥೀಯರು ಎಲ್ಲಾ ಕಡೆ ಸಲ್ಲುವರು ಎಂದು ಮುಗುಳ್ನಕ್ಕಾಗ, ಬಕೆಟ್ ಪಂಥ ಅಂತೊಂದಿದೆಯಂತೆ ಕಣೇ ಎಂದು ಕಣ್ಣು ಮಿಟುಕಿಸಿದಳು.

ವಿಚಿತ್ರವಾದ ಭಾರ, ಮಿಶ್ರ ಭಾವ ಅನುಭವಕ್ಕೆ ಬಂತು, ಸುಡುವ ಬಿಸಿಲು, ನೆಟ್ವರ್ಕ್ ಸಮಸ್ಯೆಯಿಂದಾಗಿ ಇಷ್ಟವಾದದ್ದನ್ನು ಕೊಳ್ಳಲು, ಮಾತನಾಡಲು ಜನ ಪರದಾಡುತ್ತಿದ್ದುದು ಸರ್ವೆಸಾಮಾನ್ಯವಾಗಿತ್ತು. ಮಕ್ಕಳಿಬ್ಬರಿಗೂ ರಜೆ ಇತ್ತಲ್ಲ, ಮನೇಲಿ ಸುಮ್ಮನೆ ಗಲಾಟೆ ಒಂದು ರೌಂಡ್ ಆಟ ಆಡಿಸಿಕೊಂಡು ಹೋಗೋಣ ಅಂತ ಬಂದೆ, ಬೇಗ ಬಂದ್ಬಿಡ್ತೀನಿ ಅಂತ ಎರಡು ಮಕ್ಕಳ ಎಳೆ ತಾಯಿ ಮೊಬೈಲ್‌ನಲ್ಲಿ ಕಿರುಚಿ ಕಿರುಚಿ ಯಾರಿಗೋ ಹೇಳುತ್ತಿದ್ದರೆ, ಮುಖಕ್ಕೆ ಪ್ಲಾಸ್ಟಿಕ್ ಮಾಸ್ಕ್ ಧರಿಸಿ ಬೀಡು ಬೀಸಾಗಿ ಓಡಾಡಿಕೊಂಡಿದ್ದ ಪ್ರೇಮಿಗಳ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. ಪ್ರೀತಿಯಿಂದ ಕೊಂಡ ಪುಸ್ತಕಗಳನ್ನು ಎದೆಗವಚಿಕೊಂಡವರು, ಹಳದಿ ಕೆಂಪು ಶಾಲಿನ ಮರಿ ಪುಢಾರಿಗಳು, ಟೀಚರ್ ಕೈ ಹಿಡಿದು ಸಾಗುತ್ತಿದ್ದ ಬೆರಗು ಕಣ್ಣಿನ ಮಕ್ಕಳು, ಈ ದುಡ್ಡಿನಲ್ಲಿ ಅದೆಷ್ಟು ಕನ್ನಡ ಶಾಲೆಗಳನ್ನು ಉದ್ದರಿಸಬಹುದಿತ್ತಲ್ಲ ಎಂದು ಗೊಣಗುತ್ತಿದ್ದ ಹಿರಿಯರು, ಕರ ಪತ್ರಗಳನ್ನು ಹಂಚುತ್ತಿರುವ ಹೋರಾಟಗಾರರು ಹೀಗೆ ಹಲವು ಭಿನ್ನ ಸಂಸ್ಕ ತಿಗಳನ್ನು ಮುಖಾಮುಖಿಯಾಗಿಸಿದ ನುಡಿ ಜಾತ್ರೆ ಕಾಲ, ಶಬ್ದ, ದನಿ, ಗಂಧಗಳ ಜೊತೆ ಇನ್ನೊಂದಷ್ಟು ದಿನ ನನ್ನೊಂದಿಗೆ ಉಳಿಯಲಿದೆ.

 

ಈ ಕೆಳಕಂಡ ಮೂರ್ಖ ಯೋಚನೆಗಳಿಗಾಗಿ ಕ್ಷಮೆ ಇರಲಿ 

 

ಹನಿ ಉತ್ತಪ್ಪ ಯಾಕೋ ಏನೋ ಗೊತ್ತಿಲ್ಲಪ್ಪ. ಈ ಬಾರಿ ಮಂಡ್ಯದಲ್ಲಿ ನಡೆದ ಸಮ್ಮೇಳನಕ್ಕೆ ಹೋಗಲು ನನಗೂ ಮುಹೂರ್ತ ಕೂಡಿ ಬಂತು. ಈವರೆಗೆ ನಾನು ಅಂದುಕೊಂಡದ್ದು ಅಂದುಕೊಳ್ಳದ್ದು ಎಲ್ಲವೂ ನನ್ನ ಕಣ್ಣೆದುರು ತೆರೆದುಕೊಂಡಿತು. ನೋಡಿ ಕನ್ನಡದ ಜನಗಳನ್ನು ಹೆಂಗೆ ಕುರಿ ಮಾಡ್ತೀವಿ ಅನ್ನೋದನ್ನು ಸಾಂಕೇತಿಕವಾಗಿ ತೋರಿಸಲೋ ಎಂಬಂತೆ ಹೊಕ್ಕ ಕೂಡಲೇ ಕಾಣುವಂತೆ ಬನ್ನೂರು ಕುರಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಟಾಯ್ಲೆಟ್ ವ್ಯವಸ್ಥೆ ಸರಿಯಿಲ್ಲ ಅಂತಲೋ ಏನೋ ಹೊಟ್ಟೆ ತುಂಬ ತಿನ್ನಲು ಕೊಟ್ಟ ಹಾಗೆ ಕಾಣಲಿಲ್ಲ.

ಪಾಪ ಎಷ್ಟೆಂದರೂ ಕುರಿಯಲ್ವಾ? ಯಾರು ಪಟ ತೆಕ್ಕೊಂಡರೂ ತಕರಾರಿಲ್ಲದೇ ಅರೆ ಹೊಟ್ಟೆ ಯಲ್ಲೇ ಪೋಸು ಕೊಡುತ್ತಿತ್ತು. ಮೂವತ್ತಕ್ಕೂ ಹೆಚ್ಚು ಪುಟಗಳ ಆಮಂತ್ರಣ ಪತ್ರಿಕೆ ಎಂಬ ಸುದ್ದಿ ಓದಿ, ಪುಟಗಳನ್ನು ಬಿಡಿಬಿಡಿಯಾಗಿ ಫೇಸ್ ಬುಕ್ ಎಂಬ ಮಾಯಾಲೋಕದಲ್ಲಿ ನೋಡಿದವರು ಒಟ್ಟಿಗೇ ನೋಡುವ ಆತುರಕ್ಕೋ ಏನೇನು ಕಾರ್ಯಕ್ರಮವಿದೆ ಮಾಹಿತಿಗೋ ಹುಡುಕಿಕೊಂಡು ಹೋದರೆ ಕನ್ನಡ ಸಾಹಿತ್ಯ ಪರಿಷತ್ತಿನ ಮಳಿಗೆಯಲ್ಲೂ ಆ ಆಮಂತ್ರಣ ಪತ್ರಿಕೆ ಎಂಬುದು ನಾಪತ್ತೆಯಾಗಿತ್ತು! ಆಮಂತ್ರಣ ಪತ್ರಿಕೆಯಂತೇ ಕಾಣೆಯಾದ ಸಮಾನಾಂತರ ವೇದಿಕೆಗಳನ್ನು ಹುಡುಕಲು ಪೊಲೀಸರ ಸಹಾಯ ಕೇಳ ಹೋದರೆ ಪಾಪ ಬಹಳಷ್ಟು ಮಂದಿ ಇದ್ಯಾವುದೂ ತಮ್ಮ ಅರಿವಿಗೆ ಬರುವುದೇ ಬೇಡವೆಂಬ ಪರಮ ಜ್ಞಾನೋದಯವಾದವರಂತೆ ಮಧ್ಯಾಹ್ನದ ಹೊತ್ತಿಗೇ ಪರಮಾತ್ಮನ ಸಾನ್ನಿಧ್ಯದ ಆನಂದದಲ್ಲಿ ತೇಲುತ್ತಿದ್ದರು.

ಶಾಂತಿಪ್ರಿಯ ಕನ್ನಡಿಗರು ಯಾವುದಕ್ಕೂ ಗಲಾಟೆ ಮಾಡಲಾರರು; ಹಾಗಾಗಿ ನಾವು ಅಲರ್ಟ್ ಆಗಿರಲೇಬೇಕು ಎಂದಿಲ್ಲ ಎಂಬ ಗಟ್ಟಿ ನಂಬಿಕೆಯೂ ಅವರಿಗಿದ್ದ ಹಾಗಿತ್ತು. ಅಷ್ಟು ಜಂಗುಳಿಯ ನಡುವೆಯೂ ಜನಸಾಮಾನ್ಯರ ಊಟದ ಕೌಂಟರ್ ಮೂರೂ ಹೊತ್ತು ತೆರೆದೇ ಇತ್ತು ಮತ್ತು ಯಾರೂ ಆಹಾರವಿಲ್ಲದೇ ತೆರಳಿದಂತೆ ಕಾಣಲಿಲ್ಲ. ಹಾಗೆ ಹೊಟ್ಟೆ ತುಂಬ ತಿಂದ ನಂತರ ಹೊರಹಾಕುವುದಕ್ಕೇನು ವ್ಯವಸ್ಥೆ ಎಂಬ ಲೌಕಿಕವಾದ ಪ್ರಶ್ನೆಯನ್ನು ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ ಬಿಡಿ. ಗಂಡಸರು ಹೇಗೋ ನಿಭಾ ಯಿಸುತ್ತಿದ್ದರು; ಹೆಣ್ಣು ಮಕ್ಕಳ ಪಾಡು ಹೇಳತೀರದು. ಹೆಣು ಮಗಳೊಬ್ಬಳನ್ನು ಮಾತನಾಡಿಸಿ ಶೌಚದ ವ್ಯವಸ್ಥೆ ಪರವಾಗಿಲ್ವಾ ಎಂದು ಕೇಳಿದರೆ ‘ಕರ್ತವ್ಯದ ಮೇಲೆ ಮುಂಚಿನ ದಿನವೇ ಬಂದೆ.

ಇನ್ನೇನು ಇವತ್ತೋ ನಾಳೆಯೋ ಪೀರಿಯಡ್ಸ್ ಆಗ ಬಹುದು, ಇಲ್ಲಿ ನೋಡಿದರೆ ಸರಿಯಾಗಿ ಪ್ಯಾಡ್ ಹಾಕಿಕೊಳ್ಳು ವುದಕ್ಕೆ ಬೇಕಾದ ಕನಿಷ್ಠ ಸೌಲಭ್ಯವಿಲ್ಲ. ಆಗಲಿ ಆಗದಿರಲಿ, ಪ್ಯಾಡ್ ಹಾಕಿಕೊಂಡೇ ಬಂದೆ. ಈ ಬಿಸಿಲಿನಲ್ಲಿ ಬೆವರಿಗೇ ಹಿಂಸೆ; ಅದರ ಜೊತೆಗೆ ಇದು ಇನ್ನೂ ಹಿಂಸೆ. ಅದರಿಂದಾಗಿ ಇನ್‌ಫೆಕ್ಷನ್ ಆದರೆ ಅನ್ನೋ ಭಯ, ಆತಂಕದಲ್ಲೇ ನಾಲ್ಕು ದಿನ ಕಳೀಬೇಕಾಗಿದೆ. ಕರ್ತವ್ಯಕ್ಕೆ ಕರೆಯುವವರಿಗೆ ಹೆಣ್ಣು ಮಕ್ಕಳ ಮೂಲಭೂತ ಅವಶ್ಯಕತೆಗೆಳ ಬಗ್ಗೆ ಯೋಚನೆ ಬರುವುದಿಲ್ಲ, ನೋಡಿ ನಮ್ಮ ಹಣೆ ಬರಹ’ ಅಂದರು. ತಮ್ಮೂರಿನಲ್ಲಿ ದಶಕಗಳ ನಂತರ ನಡೆದ ಕನ್ನಡದ ಹಬ್ಬ ನೋಡಲಿಕ್ಕಾಗಿ ಹಸುಗೂಸುಗಳನ್ನೆತ್ತಿಕೊಂಡು ಬಂದವರ ಪಾಡು ಇನ್ನೊಂದೇ ಕಥೆ. ಬಿರು ಬಿಸಿಲಿನ ತಾಪ ದಲ್ಲಿ ಬಾಯಾರಿ ಅಳುವ ಕಂದನಿಗೆ ಹಾಲೂಡಿಸುವುದಕ್ಕೆ ನಾಲ್ಕೂ ಸುತ್ತ ಪರದೆ ಕಟ್ಟಿ ಜನರಿಂದ ಮರೆಯಾಗಿ ಕೂರಲೊಂದು ತಾವಿಲ್ಲ.

ಆ ತಾಯಿ ಪುಸ್ತಕ ಮಳಿಗೆ ಹಾಗೂ ಅದರ ಆವರಣದ ಟೆಂಟ್‌ನ ನಡುವಿದ್ದ ಸಂದಿಯ ಒಂದಡಿ ಜಾಗದಲ್ಲಿ ಹಾಲುಣಿಸಿದ್ದಳು. (ಇಲ್ಲಿ ಸ್ವಚ್ಛವಿತ್ತಾ ಕೇಳುವುದನ್ನು ನಿಷೇಧಿಸಲಾಗಿದೆ) ಇಂಥ ಮೂಲಭೂತ ಅವಶ್ಯಕತೆಗಳ ಬಗ್ಗೆ ಯೋಚನೆ ಬಾರದ ಕೆ. ಎ. ಎಸ್. , ಐ. ಎ. ಎಸ್. ಅಲಂಕೃತ ಅಽಕಾರಿಗಳು/ ಆಯೋಜಕರು ಉದ್ಭವ ಮೂರ್ತಿ ಗಳೋ ಏನೋಪಾ! ಅಮ್ಮನ ಹೊಟ್ಟೆಯಿಂದ ಬಂದವರೇ ಅಗಿದ್ದರೆ ಇದೆಲ್ಲ ಅರ್ಥವಾಗಬೇಕಿತ್ತು ಎಂಬ ನನ್ನ ಮೂರ್ಖ ಯೋಚನೆಗಳಿಗಾಗಿ ದಯವಿಟ್ಟು ನಿಮ್ಮ ಕ್ಷಮೆಯಿರಲಿ ಇಷ್ಟೆಲ್ಲದರ ನಡುವೆಯೂ ಕನ್ನಡಿಗರು ನಾವು ಎಲ್ಲಕ್ಕೂ ಅಡ್ಜಸ್ಟ್ ಮಾಡ್ಕೊಳೋದು ನಮ್ಮ ಪರಮಗುರಿಯೆಂಬಂತೆ ಸಾಗರೋಪಾದಿಯಲ್ಲಿ ಬಂದರು. ಕನ್ನಡಮ್ಮನ ಮುಂದೆ ತಲೆ ಬಾಗಿದರು. ಬೆವರಿನಿಂದ ಅಂಟಾದ ಕೈಯಲ್ಲೇ ಪುಸ್ತಕಗಳನ್ನು ಅಪ್ಪಿಕೊಂಡರು, ಎಲ್ಲ ಅಧ್ವಾನಗಳನ್ನೂ ಒಪ್ಪಿಕೊಂಡರು ಎಂಬಲ್ಲಿಗೆ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶುಭವೂ ಮಂಗಳಕರವಾಗಿಯೂ ಸಂಪನ್ನಗೊಂಡಿತು.

ಅರೆಸ್ಟಾದ ಮುದ್ದೆ ಮತ್ತು ಕೋಳಿ ಸಾರು

 

ಡಾ. ಕಲೀಮ್‌ ಉಲ್ಲಾ

 

ಮಂಡ್ಯದಲ್ಲಿ ಹಳ್ಳಿ ಶೈಲಿಯ ಮಟನ್ ಮುದ್ದೆ ಊಟ ಎಲ್ಲಿ ಸಿಗುತ್ತದೆ ಎಂದು ಫೋನು ಹಚ್ಚಿ ಅನೇಕರ ವಿಚಾರಿಸಿದೆವು. ನಮ್ಮ ಸಂಪರ್ಕದ ಮಾಹಿತಿ ವ್ಯಕ್ತಿಗಳು ಸಮ್ಮೇಳನದಲ್ಲಿ ಸಿಕ್ಕಿಬಿದ್ದು ಕರೆ ಅವರ ತನಕ ಹೋಗುತ್ತಿರಲಿಲ್ಲ. ಲತಕ್ಕ ಮತ್ತು ಸುಶಿಯಕ್ಕ ಉಪ್ಪು ಸಾರು ಮುದ್ದೆ ಹುಡುಕುತ್ತಾ ಹೊರಟರು ರೈಲು ನಿಲ್ದಾಣದ ದಾರಿ ಹಿಡಿದರು. ನನ್ನ ಮಂಡ್ಯದ ಗೆಳೆಯ ನಿಂಗೇಗೌಡನಿಗೆ ಪೋನು ಹಚ್ಚಿ ಕೇಳಲಾಗಿ ಅವನು ಯಾರಿಗೋ ಕೇಳಿ ಒಂದು ಹೊಟೆಲ್ಲು ಹೆಸರು ಸೂಚಿಸಿದ. ಊಟ ಮುಗಿಸಿ ಸಮ್ಮೇಳನಕ್ಕೆ ಬಂದಾಗ ಬಿಸಿಲು ತಾರಾಮಾರಿ ಬಾರಿಸುತ್ತಿತ್ತು.

ಬಣ್ಣಬಣ್ಣದ ಬಟ್ಟೆಯ ಶಾಲೆಯ ಚಿಣ್ಣರು ಟೀಚರ್‌ಗಳ ಸೂಚನೆ ಮೀರಿ ತಮ್ಮಿಷ್ಟವಾಗಿ ಕುಣಿದು ಓಡುತ್ತಿದ್ದರು. ಅವರಿಗೆ ದೂಳು, ಬಿಸಿಲು, ಸೆಕೆಯ ಯಾವ ಬಾಧೆಗಳು ತಲುಪಿರಲಿಲ್ಲ. ಅವ್ವ ಅಪ್ಪನ ಬಾಲ ಹಿಡಿದು ಬಂದ ಮಕ್ಕಳಿಗೆ ಶುರುವಿನಿಂದಲೇ ಆಕರ್ಷಣೆಗಳಿದ್ದವು. ಗೊಂಬೆ, ಪೀಪಿ, ಐಸು. ‘ಹೊತ್ತೂಡಿದ ಇಲ್ಲೀಗಂಟ ಕೊಡ್ಸುಸ್ತೀನಂತ ಸುಳ್ಳೇ ಹೇಳೀಯಾ? ’ ಎಂದು ಅವು ಮುನಿಸಿಕೊಂಡು ಬಂಡಾಯ ಹೇಳುತ್ತಿದ್ದವು. ಕೈಯನ್ನು ಹಿಂದಕ್ಕೆ ಜಗ್ಗುತ್ತಿದ್ದವು. ‘ಯೇ. . . ಕೊಡ್ಸೋಗಂಟ ಸುಮ್ನಿರು ಮೂದೇವಿ’ ಎಂದು ಅವ್ವ ತಿವಿಯುತ್ತಿದ್ದಳು. ಯುವತಿಯರು ಮೊಬೈಲ್ ಸೆಲ್ಛಿಗಳಲ್ಲಿ, ನಾಚಿಕೆಯ ನಗುವಿನಲ್ಲಿ ಮಗ್ನರಾಗಿದ್ದರು.

ಹಬ್ಬದ ಸಡಗರವ ಮೈತಾಳಿ ಸಿಂಗಾರಗೊಂಡು ಅನೇಕ ಹಳ್ಳಿಯ ಹೆಣ್ಣು ಮಕ್ಕಳು ನಲುವಿನಿಂದ ಎಲ್ಲವನ್ನೂ ಗಮನಿಸುತ್ತಿದ್ದರು. ಸಮ್ಮೇಳನದ ಒಳಗೆ ಏನು ನಡೆಯುತಿದೆಯೋ ಇನ್ನೂ ಗೊತ್ತಿಲ್ಲ. ಹೊರಗಂತೂ ಪರಿಷೆಯ ಸಡಗರ, ಸಂಭ್ರಮ ತುಂಬಿತ್ತು. ಇಲ್ಲೊಂದು ಕಡೆ ಕನ್ನಡದ ತೇರಿನ ಎದುರು ಅನೇಕರು ಗೀತೆಗಳಿಗೆ ನೃತ್ಯ ಮಾಡುತ್ತಿದ್ದರು. ಬಸವಣ್ಣನವರ ಪ್ರತಿಮೆಯ ಮುಂದೆ ಪಟ ತೆಗೆಸುವವರದು ನೂಕು ನುಗ್ಗಲು. ನಡುವೆ ತೂರಿ ಬರುವ ನಡಿಗೆಯ ವ್ಯಾಪಾರಗಾರರು. ಮುದ್ದು ಮಕ್ಕಳು. ಹೈರಾಣಾಗಿ ಹೋದ ಪೊಲೀಸರು. ರಸ್ತೆಯಲ್ಲೇ ಸಿ. ಬಸಲಿಂಗಯ್ಯ ಅವರನ್ನು ಕಂಡು ಅನೇಕರು ಸುತ್ತುವರೆದರು. ಮಾತಾಡಿಸಿ ಪಟಕ್ಕೆ ನಿಲ್ಲುತ್ತಿದ್ದರು. ‘ಇಷ್ಟು ದೊಡ್ಡ ಸಮ್ಮೇಳನದಲ್ಲಿ ಒಂದು ನಾಟಕ ಪ್ರದರ್ಶನಕ್ಕೆ ಅವಕಾಶ ಇಲ್ಲದಂತಾಯಿತಲ್ಲ’ ಎಂದು ಬಸು ಅವರು ಚಡಪಡಿಸುತ್ತಿದ್ದರು. ಮೊದಲು ಪುಸ್ತಕ ಮಳಿಗೆಗೆ ಹೋಗೋಣ ಎಂದು ಹೊರಟೆವು.

ಇಕ್ಕಟ್ಟಾದ ಜಾಗೆಯಲ್ಲಿ ಕಣ್ಣು ಎತ್ತರಿಸಿದಷ್ಟು ದೂರಕ್ಕೂ ಜನರ ಮಂಡೆಗಳೇ. ಪುಸ್ತಕ ಮಳಿಗೆ ಒಳ ಹೋಗುವ ಮತ್ತು ಹೊರ ಬರುವ ಹಾದಿಯಲ್ಲಿ ಚಕ್ರವ್ಯೂಹದ ರಚನೆ ಹಾಸಲಾಗಿತ್ತು. ಜನರ ಕೇಳಿ ವಿಚಾರಿಸಿ ನುಗ್ಗಬೇಕಿತ್ತು. ಮೊದಲ ಗುಡಾರಗಳಲ್ಲಿದ್ದ ಜನರ ಪ್ರವಾಹ ನೋಡಿ ಹೆದರಿ ನಾವು ಕೊನೆಯ ಗುಡಾರಗಳತ್ತ ಹೋದೆವು. ಬಿಳಿಯ ಜರ್ಮನ್‌ಗುಡಾರಗಳಿಂದ ಹೊರ ಬರುತ್ತಿದ್ದ ಜನರ ಮುಖ, ಹಣೆ, ಬೋಳು ತಲೆಗಳು ಹನಿ ನೀರ ಸಿಂಪಡಿಸಿಕೊಂಡು ಮಿಂಚುತ್ತಿದ್ದವು. ಉಸಿರು ಸಿಗದೆ ಒದ್ದಾಡುವ ಗುಹೆಗಳಾಂತಾಗಿ ಜನ ಹೆಚ್ಚು ಹೊತ್ತು ಒಳಗೆ ನಿಲ್ಲದೆ ಹೊರ ಬಂದು ಜೀವ ತಡವಿ ನೋಡಿಕೊಂಡರು.

ಮುಖ್ಯ ವೇದಿಕೆಯ ಮಾತುಗಳು ಎಲ್ಲಾ ಕಡೆಗೂ ಕೇಳುತ್ತಿದ್ದ ಕಾರಣ ನಾವು ಓಡಾಡಿಕೊಂಡೇ ರೇಡಿಯೋ ತರಹ ಆಲಿಸುತ್ತಿದ್ದೆವು. ಅನೇಕ ಗೆಳೆಯರು, ಕನ್ನಡದ ಲೇಖಕರು, ಕಲಾವಿದರು ಸಿಕ್ಕರು. ತಮ್ಮ ವಿದ್ಯಾರ್ಥಿಗಳ ಕರಕೊಂಡು ಬಂದು ಸಾಹಿತ್ಯದ ಹಂಬಲ ಹೆಚ್ಚಿಸುವ ಅನೇಕ ಮೇಷ್ಟ್ರುಗಳು ಸಿಕ್ಕರು. ಭಾವನಾತ್ಮಕವಾಗಿ ಕಂಡು ಮಾತಾಡುವ ಓದುಗ ಅಭಿಮಾನಿಗಳು ಸಿಕ್ಕು ಪುಸ್ತಕದ ಮೇಲೆ ಹಸ್ತಾಕ್ಷರ ಪಡೆದರೆ ಅಲ್ಲೇ ಸ್ವರ್ಗ. ಈಗ ಪಟ ಪಡೆದು ನೆನಪು ಉಳಿಸಿಕೊಳ್ಳುವ ಹೊಸ ಐಡಿಯಾ ಕೂಡ ಚೆನ್ನ. ಮಳೆ, ಸೆಕೆ, ನೂಕು ನುಗ್ಗಲು, ಇಕ್ಕಟ್ಟು, ನೆರಳಿಲ್ಲದ ಕೊರಗು.

ಕೊನೆಯ ದಿನ ಮಳೆ ಕೆಸರ ಪಿಚಿಪಿಚಿ ಎಂಬ ಅನಿವಾರ್ಯಗಳು. ಕೊನೆಯ ದಿನ ಬಾಡೂಟ ಸಿಗುವ ವಿಚಾರ ತಲುಪಿ ಮುಖ್ಯ ಸ್ಥಳಕ್ಕೆ ಹೋಗುವಲ್ಲಿಗೆ ಹೋರಾಟಗಾರ ರಾಜೇಂದ್ರ ಪ್ರಸಾದ್‌ಸಿಕ್ಕರು. ಬಾಡೂಟದ ಪಾತ್ರೆ ಪಗಡೆ ಬಂದ ಕ್ಷಣ ಮಾತ್ರದಲ್ಲಿ ಮಾಧ್ಯಮದವರ ಆಗಮನವೂ ಹಿಂದೆಯೇ ಪೋಲೀಸರ ದೌಡು ನಡೆಯಿತು. ಕಣ್ಣೆದುರೇ ಅನ್ನ, ಸಾರು, ಮುದ್ದೆಗಳು ಅರೆಸ್ಟ್ ಆಗಿ ಜೀಪು ಸೇರಿದವು. ಎಳೆದಾಟದಲ್ಲಿ ಘಮಘಮಿಸುವ ಚಿಕನ್ ಸಾರ್ ಕಪ್ಪು ನೆಲ ಹೀರಿತು. ಮೊಟ್ಟೆಯ ಪೊಟ್ಟಣವನ್ನು ಪೊಲೀಸರ ವಶದಿಂದ ಕಿತ್ತು ತಂದ ಧೈರ್ಯಶಾಲಿ ಸಲೀಸಾಗಿ ಹಂಚಿ ಯಶಸ್ಸು ಕಂಡರು. ತಕ್ಷಣ ಜಗಿದು ನುಂಗಲು ಸಾಧ್ಯವಿದ್ದ ಬೇಯಿಸಿದ ಮೊಟ್ಟೆ ಎಲ್ಲರ ಕೈ ಸೇರಿ ದಸ್ತಗಿರಿ ಆಗುವುದರಿಂದ ಬಚಾವಾಯಿತು. ಮಾಂಸದಡಿಗೆ ತಿನ್ನುವ ಚಟವೂ, ಹಟವೂ ಅದಾಗಿರಲಿಲ್ಲ. ಯಾರಿಗೂ ಮುಜುಗರ ಮಾಡುವ ಇರಾದೆಯೂ ಅಲ್ಲಿರಲಿಲ್ಲ. ಅನಗತ್ಯವಾಗಿ ಕೆಣಕಿ ಅವಮಾನ ಮಾಡಿದವರಿಗೆ ಆಹಾರ ನಮ್ಮ ಹಕ್ಕು ಎಂದು ಹೇಳುವ ಸ್ವಾಭಿಮಾನದ ದನಿ ಅದಾಗಿತ್ತು. ನಂತರ ನಾವು ಬೇಸರವಾಗಿ ಉಣ್ಣದೆ ಉಪವಾಸದಿಂದ ಅಲ್ಲಿಂದ ಹೊರಟೆವು.

 

andolana

Recent Posts

ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿ

ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ ಹಾಗೂ…

20 mins ago

ಅಸ್ಸಾಂನಲ್ಲಿ ಘೋರ ದುರಂತ: ರೈಲು ಡಿಕ್ಕಿಯಾಗಿ 7 ಆನೆಗಳು ಸಾವು

ಗುವಾಹಟಿ: ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಆನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನ…

1 hour ago

ಬುರುಡೆ ಗ್ಯಾಂಗ್‌ನಲ್ಲಿ ಬಿರುಕು: ಏನಾಗಿದೆ ಗೊತ್ತಾ?

ಮಂಗಳೂರು: ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ಪ್ರಮುಖ ಆರೋಪಿ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಇದೀಗ ಬುರುಡೆ ಗ್ಯಾಂಗ್‌ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.…

1 hour ago

ದ್ವೇಷ ಭಾಷಣ ಪ್ರತಿಬಂಧನ ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಗೆ ಅಂಕಿತ ಹಾಕಬಾರದು…

2 hours ago

ಓದುಗರ ಪತ್ರ: ಕಾನೂನು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೆ?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಡಿ.೧೮ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ…

2 hours ago

ಓದುಗರ ಪತ್ರ:  ಸಾಮಾಜಿಕ ಬಹಿಷ್ಕಾರ ನಿಷೇಧ ಕಾನೂನು ಸ್ವಾಗತಾರ್ಹ

ರಾಜ್ಯದಲ್ಲಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ’ ಕಾನೂನನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರದ ಕ್ರಮ ಶ್ಲಾಘನೀಯ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾರ್ವಭೌಮತೆ,…

2 hours ago