ಚಾ.ನಗರ: ನ.೨೪ರಿಂದ ಡಿ.೯ರವರೆಗೆ ೧೪ ದಿನಗಳ ಕಾಲ ಅಭಿಯಾನ
ಚಾಮರಾಜನಗರ: ರಾಷ್ಟ್ರೀಯ ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ನ.೨೪ರಿಂದ ಡಿ.೯ರವರೆಗೆ ಒಟ್ಟು ೧೪ ದಿನಗಳು(ರಜಾ ಸಂದರ್ಭ ಹೊರತುಪಡಿಸಿ) ಕುಷ್ಠರೋಗ ಪತ್ತೆ ಅಭಿಯಾನವನ್ನು (ಎಲ್ ಸಿಡಿಸಿ) ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಇತರ ಜಿಲ್ಲೆಗಳಲ್ಲಿ ಮೊದಲೇ ಹಂತದ ಅಭಿಯಾನ ನಡೆದಿದ್ದು ಚಾಮರಾಜನಗರ ಸೇರಿದಂತೆ ೧೬ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಅಭಿಯಾನ ನಡೆಯಲಿದೆ. ಕಳೆದ ೫ ವರ್ಷಗಳಲ್ಲಿ ಕುಷ್ಠರೋಗ ಪ್ರಕರಣಗಳು ಆಗೊಮ್ಮೆ ಈಗೊಮ್ಮೆ ಕಂಡುಬಂದಿರುವ ೧೮೧ ಗ್ರಾಮಗಳ, ೮೮ ಸಾವಿರ ಮನೆಗಳ ೩.೭೦ ಲಕ್ಷ ಜನರನ್ನು ಕೇಂದ್ರವಾಗಿಟ್ಟುಕೊಂಡು ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನವನ್ನು ಈ ಬಾರಿ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಇದಕ್ಕಾಗಿ ೩೧೬ ತಂಡಗಳನ್ನು ನಿಯೋಜನೆ ಮಾಡಲಾಗಿದ್ದು ಪ್ರತಿ ತಂಡವೂ ಪ್ರತಿದಿನ ೨೦ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ.
ಇಲಾಖೆಯ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಸ್ವಯಂ ಸೇವಕರು ಮನೆ ಮನೆಗೂ ಭೇಟಿ ತಂಡದಲ್ಲಿದ್ದಾರೆ. ಮನೆಯ ಪ್ರತಿಯೊಬ್ಬ ಸದಸ್ಯರನ್ನು ಸಂಪೂರ್ಣ ತಪಾಸಣೆ ಮಾಡಲಿದ್ದಾರೆ. ದೇಹದ ಮೇಲಿನ ಯಾವುದೇ ತಿಳಿಬಿಳಿ ತಾಮ್ರ ವರ್ಣದ, ಕೆಂಪು ಮಿಶ್ರಿತ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ ಕುಷ್ಠರೋಗದ ಪ್ರಾರಂಭಿಕ ಲಕ್ಷಣವಾಗಿರಬಹುದು. ಕೈಕಾಲುಗಳಲ್ಲಿ ಜೋಮು ಹಿಡಿದು ಸ್ಪರ್ಶ ಜ್ಞಾನವಿಲ್ಲದಿರುವುದು, ಮುಖ ಮತ್ತು ಕಿವಿಗಳ ಮೇಲೆ ಎಣ್ಣೆ ಸವರಿದಂತಹ ಹೊಳಪು ಮತ್ತು ಗಂಟುಗಳು, ಕಣ್ಣು ರೆಪ್ಪೆ ಮುಚ್ಚಲು ಸಾಮರ್ಥ್ಯವಿಲ್ಲದಿರುವುದು, ಪಾದಗಳು ಹಾಗೂ ಅಂಗೈಯಲ್ಲಿ ಹುಣ್ಣುಗಳು, ಬಿಸಿ- ತಣ್ಣನೆಯ ವಸ್ತುಗಳನ್ನು ಮುಟ್ಟಿದಾಗ ಅದರ ಅನುಭವವಾಗದಿರುವುದು, ಅಂಗೈ ಮತ್ತು ಪಾದಗಳಲ್ಲಿ ಬಲಹೀನತೆ , ವಸ್ತುಗಳನ್ನು ಹಿಡಿಯಲು ಸಾಮರ್ಥ್ಯವಿಲ್ಲದಿರುವುದು ಈ ರೋಗದ ಪ್ರಮುಖ ಲಕ್ಷಣಗಳು. ಇಂತಹ ಲಕ್ಷಣವುಳ್ಳವರು ಕಂಡುಬಂದಲ್ಲಿ ಅವರನ್ನು ಹತ್ತಿರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಉಪ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆಗೆ ಒಳಪಡಿಸಿ ದೃಢಪಟ್ಟ ಪ್ರಕರಣಗಳಿಗೆ ವೈದ್ಯರ ಸಲಹೆಯಂತೆ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ.
ಈಗಾಗಲೇ ಸಂಬಂಧಪಟ್ಟ ಎಲ್ಲಾ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿಯಾನವನ್ನು ಕುರಿತ ಐ.ಇ.ಸಿ. ಶಿಕ್ಷಣ ಸಾಮಗ್ರಿಗಳಾದ ಬ್ಯಾನರ್, ಪೋಸ್ಟರ್ ಹಾಗೂ ಕರಪತ್ರಗಳನ್ನು ಹಂಚಲಾಗಿದೆ. ಜಾನಪದ ಕಲಾತಂಡಗಳಿಂದ ಬೀದಿ ನಾಟಕಗಳ ಮೂಲಕವೂಕುಷ್ಠ ರೋಗದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮ ನಡೆಯುವ ೧೪ ದಿನಗಳ ಅವಧಿಯಲ್ಲಿಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಪರೀಕ್ಷಿಸಲು ಬಂದಾಗ ಸಾರ್ವಜನಿಕರು ಸಹಕರಿಸಿ ಪರೀಕ್ಷಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು.
ಜಿಲ್ಲೆಯಲ್ಲಿ ಕುಷ್ಠ ರೋಗ ಪ್ರಕರಣಗಳು ಕಡಿಮೆಯಾಗುತ್ತಿವೆ. ೨೦೨೨-೨೩ರ ಸಾಲಿನಲ್ಲಿ ೭೨, ೨೦೨೩-೨೪ರಲ್ಲಿ ೭೮ ಪ್ರಕರಣ ವರದಿಯಾಗಿದ್ದವು. ೨೦೨೪-೨೫ರಲ್ಲಿ ಈ ಸಂಖ್ಯೆ ೬೦ಕ್ಕೆ ಇಳಿದಿತ್ತು. ೨೦೨೫ರ ಕಳೆದ ಏಪ್ರಿಲ್ ನಿಂದ ಅಕ್ಟೋಬರ್ ತನಕ ೩೧ ಸಕ್ರಿಯ ಪ್ರಕರಣಗಳು ಕಂಡುಬಂದಿವೆ. ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವ ಕಾರಣ ಕಳೆದ ೫ ವರ್ಷಗಳಲ್ಲಿ ಆಗೊಮ್ಮೆ ಈಗೊಮ್ಮೆ ಪ್ರಕರಣ ವರದಿಯಾಗುತ್ತಿರುವ ಜಿಲ್ಲೆಯಲ್ಲಿನ ಊರು, ವಾರ್ಡ್‌ಗಳನ್ನು ಗಮನದಲ್ಲಿಟ್ಟುಕೊಂಡು ಅಭಿಯಾನ ವೇಳೆ ತಪಾಸಣೆ ಮಾಡಲಾಗುತ್ತದೆ. ಈ ಮುಂಚೆ ಜಿಲ್ಲೆಯಾದ್ಯಂತ ಅಭಿಯಾನ ಮಾಡಲಾಗುತ್ತಿತ್ತು. ಹಾಗಾಗಿ ಕಳೆದ ವರ್ಷ ಮನೆ ಮನೆ ತಪಾಸಣೆಗೆ ೮೮೦ ತಂಡಗಳನ್ನು ರಚನೆ ಮಾಡಲಾಗಿತ್ತು. ಈ ಬಾರಿ ನಿರ್ದಿಷ್ಟ ವಾರ್ಡ್, ಊರುಗಳಲ್ಲಿ ಮಾತ್ರ ಮಾಡುತ್ತಿರುವುದರಿಂದ ೩೧೬ ತಂಡಗಳನ್ನಷ್ಟೇ ಮನೆ ಮನೆ ಭೇಟಿಗೆ ನಿಯೋಜನೆ ಮಾಡಲಾಗಿದೆ.
” ಜಿಲ್ಲೆಯನ್ನು ೨೦೨೭ಕ್ಕೆ ಕುಷ್ಠರೋಗ ಮುಕ್ತ ಮಾಡಬೇಕು ಎಂಬುದು ಇಲಾಖೆಯ ಆಶಯ. ಚರ್ಮಕ್ಕೆ ಸಂಬಂಧಿಸಿದ ಯಾವುದೇ ತೊಂದರೆಇದ್ದರೂ ತಪಾಸಣೆ ಮಾಡಿಸಿಕೊಳ್ಳಬೇಕು. ಕುಷ್ಠ ರೋಗ ಕಂಡು ಬಂದವರಿಗೆ ಉಚಿತವಾಗಿ ಔಷಧಿ ನೀಡಲಾಗುತ್ತದೆ. ಮಾತ್ರೆ ಸೇವಿಸಿದ ಕೇವಲ ಒಂದೇ ತಿಂಗಳಲ್ಲಿ ರೋಗ ನಿಯಂತ್ರಣಕ್ಕೆ ಬಂದು ಕ್ರಮೇಣ ಗುಣವಾಗುತ್ತದೆ.”
ಡಾ.ಚಂದ್ರಶೇಖರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ
ಮಹಾದೇಶ್ ಎಂ ಗೌಡ ಹನೂರು: ಮಳೆಯನ್ನೇ ಆಶ್ರಯಿಸಿ ಬೆಳೆಯಬೇಕಿದ್ದ ಸ್ಥಿತಿ, ಕುಸಿಯುತ್ತಿರುವ ಅಂತರ್ಜಲದಿಂದ ಪಡಿಪಟಾಲು ಪಡುತ್ತಿದ್ದ ರೈತರ ಕಷ್ಟ ಕೊನೆಗೂ…
ಪಂಜು ಗಂಗೊಳ್ಳಿ ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ.…
ದ್ವಿಚಕ್ರ ವಾಹನಗಳಿಗೆ ಸಂಚಾರ ನಿಯಮದಂತೆ ಎರಡೂ ಕಡೆ ದರ್ಪಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರಿಗೆ ಸಂಚಾರ…
ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯ ಶಾಂತಿ ಸಾಗರ್ ಕಾಂಪ್ಲೆಕ್ಸ್ ನ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಮದ್ದೂರು ವಡೆ ಸೆಂಟರ್ ಮತ್ತು…
ಪ್ರಶಾಂತ್ ಎಸ್. ಮೈಸೂರು: ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನಗಳ ಸವಾರರು ಜೀವವನ್ನು…