ಕೆ.ಬಿ.ರಮೇಶನಾಯಕ
ಮೈಸೂರು: ರಾಜ್ಯದಲ್ಲಿ ಎರಡು ವರ್ಷಗಳಿಗೂ ಹೆಚ್ಚು ಅವಧಿಯಿಂದ ಖಾಲಿ ಉಳಿದಿರುವ ನಿಗಮ- ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ಯಾವುದೇ ಕ್ಷಣದಲ್ಲಿ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿ ಸುವ ಸಾಧ್ಯತೆ ಇದ್ದು, ಮೈಸೂರು ಭಾಗದ ಎರಡು ಹುದ್ದೆಗಳು ಸೇರಿದಂತೆ ಇನ್ನಿತರ ರಾಜ್ಯಮಟ್ಟದ ನಿಗಮ- ಮಂಡಳಿ, ಪ್ರಾಽಕಾರಗಳ ಅಧ್ಯಕ್ಷ ಸ್ಥಾನಕ್ಕಾಗಿ ೨೦ಕ್ಕೂ ಹೆಚ್ಚು ಆಕಾಂಕ್ಷಿಗಳ ನಡುವೆ ಪೈಪೋಟಿ ಶುರುವಾಗಿದೆ.
ಅಧ್ಯಕ್ಷ ಸ್ಥಾನಗಳ ಹುದ್ದೆ ಮತ್ತು ಸದಸ್ಯ ಸ್ಥಾನಗಳಿಗೆ ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದಿಂದ ೨೦೦ ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಅವರ ಪೈಕಿ ೨೦ ಮಂದಿ ಹಿರಿಯ ಮುಖಂಡರು ಅಧ್ಯಕ್ಷ ಸ್ಥಾನಕ್ಕಾಗಿ ಲಾಭಿ ಶುರುಮಾಡಿದ್ದಾರೆ. ದಿಲ್ಲಿಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ನಡೆಸಿರುವ ಮಾತುಕತೆ ಫಲವಾಗಿ ಅಂತಿಮವಾಗಿ ಹೈಕಮಾಂಡ್‌ನಿಂದ ಅಂಕಿತ ಬೀಳುತ್ತಿದ್ದಂತೆ, ಸರ್ಕಾರ ಆಯಾ ಇಲಾಖಾವಾರು ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಲಿದೆ ಎಂದು ಹೇಳಲಾಗಿದೆ.
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದ ಕಾಂಗ್ರೆಸ್ ಪಕ್ಷವು ನಿಗಮ-ಮಂಡಳಿಗಳು, ಪ್ರಾಧಿಕಾರ, ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಆದರೆ, ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನವನ್ನು ತಣಿಸಲು ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ಬಸವರಾಜ ರಾಯರಡ್ಡಿ, ಸಿ.ಪುಟ್ಟರಂಗಶೆಟ್ಟಿ, ಪಿ.ಎಂ.ನರೇಂದ್ರಸ್ವಾಮಿ, ಅನಿಲ್ ಚಿಕ್ಕಮಾದು, ಎನ್.ಎ. ಹ್ಯಾರೀಸ್, ಕೆ.ಎಂ.ಶಿವಲಿಂಗೇಗೌಡ, ಟಿ.ಸಿ.ರಘು ಮೂರ್ತಿ ಸೇರಿದಂತೆ ೨೫ಕ್ಕೂ ಹಿರಿಯ ಶಾಸಕರನ್ನು ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕೆ.ಮರೀಗೌಡ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಅಯೂಬ್ ಖಾನ್, ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ(ಕಾಡಾ) ಅಧ್ಯಕ್ಷರನ್ನಾಗಿ ಚಾಮರಾಜನಗರ ಜಿಲ್ಲೆಯ ಮರಿಸ್ವಾಮಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಮುಡಾ ದಲ್ಲಿ ನಡೆದ ಹಲವಾರು ಬೆಳವಣಿಗೆಗಳಿಂದಾಗಿ ಕೆ.ಮರೀಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಧ್ಯಕ್ಷ ಸ್ಥಾನ ಖಾಲಿ ಉಳಿದಿದ್ದರೆ, ಎರಡು ವರ್ಷಗಳಿಂದ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್(ಮೈಲ್ಯಾಕ್), ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನೇಮಕವನ್ನೇ ಮಾಡಿಲ್ಲ. ಇದೀಗ ಮತ್ತೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಪ್ರಕ್ರಿಯೆ ಆರಂಭಿಸಲು ಹೈಕಮಾಂಡ್ ಒಪ್ಪಿಗೆ ಕೂಡ ಪಡೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಭ್ಯರ್ಥಿಗಳ ನೇಮಕಾತಿ ಕುರಿತಂತೆ ಚರ್ಚೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸುತ್ತಿರುವುದರಿಂದ ಅನೇಕರಿಗೆ ಶುಭ ಸುದ್ದಿ ಸಿಗಲಿದೆ.
ಯಾರ‍್ಯಾರ ನಡುವೆ ಪೈಪೋಟಿ?:
ಮೈಸೂರು ನಗರದ ಎರಡು ಪ್ರಾಧಿಕಾರಗಳ ಅಧ್ಯಕ್ಷಗಾದಿ ಸೇರಿದಂತೆ ರಾಜ್ಯಮಟ್ಟದ ಪ್ರಮುಖ ನಿಗಮ-ಮಂಡಳಿಗಳು, ಪ್ರಾಧಿಕಾರಗಳು, ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯ ಸ್ಥಾನಕ್ಕೆ ತಮ್ಮನ್ನು ನೇಮಕ ಮಾಡಬೇಕೆಂದು ೨೦೦ಕ್ಕೂ ಹೆಚ್ಚು ಅರ್ಜಿಗಳು ಕೆಪಿಸಿಸಿಗೆ ಸಲ್ಲಿಕೆಯಾಗಿವೆ. ಅವುಗಳ ಪೈಕಿ ಅಧ್ಯಕ್ಷಗಾದಿಗೆ ೨೦ಕ್ಕೂ ಹೆಚ್ಚು ಮಂದಿ ತಮ್ಮದೇ ಆದ ಶಕ್ತಿ, ಸಾಮರ್ಥ್ಯದೊಂದಿಗೆ ಪೈಪೋಟಿ ನಡೆಸುತ್ತಿದ್ದಾರೆ.
ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಕೆಪಿಸಿಸಿ ಸಂಯೋಜಕ ಎನ್.ಭಾಸ್ಕರ್, ಮಾಜಿ ಮಹಾಪೌರರಾದ ಬಿ.ಕೆ.ಪ್ರಕಾಶ್. ಮೋದಾಮಣಿ, ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ನಾರಾಯಣ, ಅನಂತು, ಆರಿ- ಹುಸೇನ್, ಪುರುಷೋತ್ತಮ್, ಮಾಜಿ ಉಪ ಮಹಾಪೌರರಾದ ಬಿ.ಸಿದ್ದರಾಜು, ಪುಷ್ಪವಲ್ಲಿ, ಜಿಪಂ ಮಾಜಿ ಅಧ್ಯಕ್ಷರಾದ ಕೂರ್ಗಳ್ಳಿ ಮಹದೇವು, ಬಿ.ಎಂ. ರಾಮು, ಲತಾ ಸಿದ್ದಶೆಟ್ಟಿ, ಜಿ.ಪಂ.ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಜವರಪ್ಪ, ಲೇಖಾ ವೆಂಕಟೇಶ್, ಶಶಿರೇಖಾ, ಸುಧಾ ಮಹದೇವಯ್ಯ, ಕಡಕೊಳ ನಾರಾಯಣ್, ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ತಿ.ನರಸೀಪುರ ತಾ.ಪಂ. ಮಾಜಿ ಅಧ್ಯಕ್ಷ ಮರಯ್ಯ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಐಶ್ವರ್ಯ ಮಹದೇವು, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ನಾಗವಾಲ ನರೇಂದ್ರ, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ವೀರಶೈವ-ಲಿಂಗಾಯತ ಮುಖಂಡ ವರುಣ ಮಹೇಶ್, ಪಿರಿಯಾಪಟ್ಟಣದ ಮುಖಂಡ ಎಚ್.ಡಿ.ಗಣೇಶ್, ಒಕ್ಕಲಿಗ ಸಮುದಾಯದ ಕೃಷ್ಣಕುಮಾರ್ ಸಾಗರ್, ನಾಯಕ ಸಮುದಾಯದ ಉದ್ಬೂರು ಕೃಷ್ಣನಾಯಕ, ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ ಶ್ರೀನಾಥ್ ಬಾಬು, ಶಾಸಕ ಕೆ.ಹರೀಶ್ ಗೌಡರ ಆಪ್ತ ಮಾರ್ಕೆಟ್ ದಿನೇಶ್ ಅವರುಗಳು ಅಧ್ಯಕ್ಷ ಗಾದಿಗಾಗಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಹಾಲಿ ಅಧ್ಯಕ್ಷರಲ್ಲಿ ಒಬ್ಬರು ಅಲ್ಪಸಂಖ್ಯಾತ, ಒಬ್ಬರು ವೀರಶೈವ ವರ್ಗದವರಿದ್ದು, ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಳಗಾವಿ: ದ್ವೇಷ ಭಾಷಣ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ದ್ವೇಷ ಭಾಷಣ ಮಾಡದೇ…
ಮೈಸೂರು: ಅಕ್ರಮವಾಗಿ ಶ್ರೀಗಂಧ ಶೇಖರಣೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮೈಸೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಕೆಸರೆಯಲ್ಲಿ ಈ ಘಟನೆ…
ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಂದು ಕೂಡ 60 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ…
ನಂಜನಗೂಡಿನ ಸದ್ವೈದ್ಯ ಶಾಲಾ ಸಂಸ್ಥಾಪಕರಾಗಿದ್ದ ಬಿ.ವಿ.ಪಂಡಿತರು ಆಯುರ್ವೇದ ಉತ್ಪನ್ನಗಳನ್ನು ರೂಪಿಸಿದ ಹಿರಿಮೆ ಹೊಂದಿದ್ದಾರೆ. ದಂತಧಾವನ ಚೂರ್ಣ (ನಂಜನಗೂಡು ಹಲ್ಲು ಪುಡಿ)…
ಮೈಸೂರಿನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕ ನಿರ್ಮಾಣ ಹಾಗೂ ಬೇಲೂರಿನಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ವಸ್ತು ಸಂಗ್ರಹಾಲಯ…
ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ…