Mysore
30
clear sky

Social Media

ಗುರುವಾರ, 12 ಮಾರ್ಚ್ 2026
Light
Dark

ಮೈಸೂರು ಜಿಲ್ಲೆಗೆ 13 ನಮ್ಮ ಕ್ಲಿನಿಕ್ ಮಂಜೂರು

ಕೆ.ಬಿ.ರಮೇಶನಾಯಕ

ಯಾತ್ರಾಸ್ಥಳ ಚಾಮುಂಡಿಬೆಟ್ಟ, ಅಲ್ಪಸಂಖ್ಯಾತರು ಹೆಚ್ಚಿರುವ ಬಡೇಮಕಾನ್‌ನಲ್ಲಿ ಶೀಘ್ರ ಆರಂಭ

ಮೈಸೂರು: ನಗರ ಪ್ರದೇಶದ ಜನರಿಗೆ ಸ್ಥಳೀಯವಾಗಿ ಚಿಕಿತ್ಸೆ ದೊರೆಯುವಂತೆ ಮಾಡುವ ಜತೆಗೆ, ಖಾಸಗಿ ಆಸ್ಪತ್ರೆಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಗೂ ಬಡವರು, ಮಧ್ಯಮ ವರ್ಗದ ಜನರು ದುಬಾರಿ ಹಣ ತೆರುವುದನ್ನು ತಡೆಯಲು ರಾಜ್ಯ ಸರ್ಕಾರ ‘ನಮ್ಮ ಕ್ಲಿನಿಕ್’ ಯೋಜನೆ ಆರಂಭಿಸಿದ್ದು, ಮುಖ್ಯಮಂತ್ರಿ ಯವರ ತವರು ಜಿಲ್ಲೆಗೆ ಹೊಸದಾಗಿ ೧೩ ನಮ್ಮ ಕ್ಲಿನಿಕ್‌ಗಳು ಮಂಜೂರಾಗಿವೆ. ಯಾತ್ರಾ ಸ್ಥಳವಾದ ಚಾಮುಂಡಿಬೆಟ್ಟ, ಅಲ್ಪಸಂಖ್ಯಾತ ಸಮುದಾಯದ ಜನರೇ ಹೆಚ್ಚಾಗಿರುವ ಬಡೇ ಮಕಾನ್‌ನಲ್ಲೂ ಶೀಘ್ರ ನಮ್ಮ ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಲಿವೆ.

ಇದರಿಂದ ೧.೬೦ ಲಕ್ಷ ಜನರಿಗೆ ಆರೋಗ್ಯ ಸೇವೆ ಲಭ್ಯವಾಗಲಿದೆ. ವಿಜಯನಗರ ಮೂರನೇ, ನಾಲ್ಕನೇ ಹಂತ, ಹಳೆ ಕೆಸರೆ, ಭಾರತ್ ನಗರ, ಎಸ್‌ವಿಪಿ ನಗರ, ದಟ್ಟಗಳ್ಳಿ, ಏಕಲವ್ಯನಗರ, ರಾಜೀವ್‌ನಗರ, ಸಬ್ ಅರ್ಬನ್ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ಕೆ.ಆರ್.ನಗರ ಪಟ್ಟಣದ ಆಂಜನೇಯ ಬ್ಲಾಕ್, ಬನ್ನೂರು ಪಟ್ಟಣದಲ್ಲಿ ನಮ್ಮ ಕ್ಲಿನಿಕ್ ತೆರೆಯಲು ಸಿದ್ಧತೆ ನಡೆದಿದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ೧೩ ‘ನಮ್ಮ ಕ್ಲಿನಿಕ್’ಗಳ ಸ್ಥಾಪನೆಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ನೀಡಲಾಗಿದೆ.

ಮೂಲಸೌಕರ್ಯಗಳನ್ನು ಕಲ್ಪಿಸಿದ ಬಳಿಕ ವೈದ್ಯರು, ಸಿಬ್ಬಂದಿ ನಿಯೋಜಿಸಿದ ತಕ್ಷಣವೇ ರೋಗಿಗಳ ಸೇವೆ ಆರಂಭವಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ನಗರ ವ್ಯಾಪ್ತಿಯ ೬೫ ವಾರ್ಡ್‌ಗಳಲ್ಲಿ ೨೧ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದಲ್ಲದೇ ೨ ಸಮುದಾಯ ಆರೋಗ್ಯ ಕೇಂದ್ರ, ೨ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಕೆ.ಆರ್.ಆಸ್ಪತ್ರೆ, ಚೆಲುವಾಂಬ, ಸೂಪರ್ ಸ್ಪೆಷಾಲಿಟಿ, ಟ್ರಾಮಾ ಕೇರ್, ಜಯದೇವ ಆಸ್ಪತ್ರೆಗಳು ಜನತೆಗೆ ಆರೋಗ್ಯ ಸೇವೆ ನೀಡುತ್ತಿವೆ.

ನಗರದ ರಿಂಗ್ ರಸ್ತೆಯಿಂದ ೨೫ ಕಿ.ಮೀ. ದೂರದವರೆಗೆ ನಗರ ವಿಸ್ತರಣೆಯಾಗಿರುವುದಲ್ಲದೆ ಮೈಸೂರು ಬೃಹತ್ ನಗರಪಾಲಿಕೆಯಾಗಿಮೇಲ್ದರ್ಜೆಗೇರುವ ಹಂತಕ್ಕೆ ಬಂದಿದೆ. ಈ ಭಾಗದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಬಡಾವಣೆಗಳಿಗೆ ಸರ್ಕಾರಿ ಆರೋಗ್ಯ ಸೇವೆ ಲಭ್ಯವಿಲ್ಲದಂತಾಗಿದೆ. ಮಾತ್ರವಲ್ಲದೇ ಇವರೆಲ್ಲರೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಹತ್ತಾರು ಕಿ.ಮೀ. ದೂರದಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಬಂದು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಿಂಗ್ ರಸ್ತೆಯಿಂದ ಹೊರ ಭಾಗದ ೧೦ ಬಡಾವಣೆಗಳು ಸೇರಿ ಒಟ್ಟು ೧೩ ಕಡೆಗಳಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ.

ಜಾಗ, ಕಟ್ಟಡ ಹುಡುಕಾಟ: ೧೫ರಿಂದ ೨೦ ಸಾವಿರ ಜನರಿಗೆ ಒಂದರಂತೆ ಆಯ್ಕೆ ಮಾಡಿರುವ ೯ ಸ್ಥಳಗಳಲ್ಲಿ ‘ನಮ್ಮ ಕ್ಲಿನಿಕ್’ಗಳು ಈಗಾಗಲೇ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದೀಗ ೧೩ ನಮ್ಮ ಕ್ಲಿನಿಕ್‌ಗಳಿಗೆ ನಗರ, ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಕಟ್ಟಡ ಪಡೆಯುವ ಮೂಲಕ ಅಗತ್ಯ ಪೀಠೋಪಕರಣಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. ನಿತ್ಯ ಕರ್ನಾಟಕ, ಹೊರ ರಾಜ್ಯಗಳ ಪ್ರವಾಸಿಗರು, ಭಕ್ತಾದಿಗಳು ಹೆಚ್ಚಾಗಿ ಭೇಟಿ ನೀಡುವ ಚಾಮುಂಡಿಬೆಟ್ಟದಲ್ಲಿಯೂ ಕಟ್ಟಡ ದೊರೆತಿದೆ. ಇನ್ನುಳಿದಂತೆ ೧೦ ಬಡಾವಣೆಗಳ ಪೈಕಿ ೭ರಲ್ಲಿ ಜಾಗ ಮತ್ತು ಕಟ್ಟಡ ದೊರೆತಿದೆ. ಇನ್ನೂ ಮೂರು ಕಡೆ ಜಾಗ ದೊರೆತಿದ್ದು, ಕಟ್ಟಡ ಹುಡುಕಾಟ ನಡೆದಿದೆ. ಶೀಘ್ರದಲ್ಲೇ ಜಾಗ, ಕಟ್ಟಡ ಗುರುತಿಸುವ ಕಾರ್ಯ ಪೂರ್ಣಗೊಳ್ಳಲಿದ್ದು, ಬಳಿಕ ಕ್ಲಿನಿಕ್ ಆರಂಭವಾಗಲಿವೆ.

ಸಚಿವರಿಗೆ ಕೃತಜ್ಞತೆ : ಮೈಸೂರು ನಗರಕ್ಕೆ ಹೊಸದಾಗಿ ೧೩ ನಮ್ಮ ಕ್ಲಿನಿಕ್ಗಳು ಮಂಜೂರಾಗಲು ಕಾರಣಕರ್ತರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಬಸ್ ನಿಲ್ದಾಣಗಳಲ್ಲಿ ಆರೋಗ್ಯ ಸೇವೆ: 

ಮೈಸೂರು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಿಗೆ ಭೇಟಿ ನೀಡುವ ಪ್ರಯಾಣಿಕರ ಅನುಕೂಲಕ್ಕಾಗಿ ಎರಡೂ ನಿಲ್ದಾಣಗಳಲ್ಲಿಯೂ ನಮ್ಮ ಕ್ಲಿನಿಕ್ ಆರಂಭಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದಲೇ ಮನವಿ ಮಾಡಲಾಗಿತ್ತು. ಮೈಸೂರು ನಗರ ಬಸ್ ನಿಲ್ದಾಣದಲ್ಲಿ ೧೫೦ ಬಸ್ ಗಳು, ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ೪೦೦ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದರೆ, ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಓಡಾಡುತ್ತಿರುತ್ತಾರೆ. ಹೃದಯಾಘಾತ ಸೇರಿದಂತೆ ಏನಾದರೂ ಸಮಸ್ಯೆ ಉಂಟಾದಲ್ಲಿ ತಕ್ಷಣವೇ ಪ್ರಥಮ ಚಿಕಿತ್ಸೆ ಕೊಡುವುದಕ್ಕೂ ಸಾಧ್ಯವಿರಲಿಲ್ಲ. ಆದರೆ, ಈ ನಿಲ್ದಾಣಗಳಲ್ಲಿ ಕ್ಲಿನಿಕ್ ಆರಂಭವಾದರೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

Tags:
error: Content is protected !!