ರವಿಚಂದ್ರ ಚಿಕ್ಕೆಂಪಿಹುಂಡಿ
ಕರುನಾಡಿನ ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆ ಬರೆದ ನಾಯಕ
ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ರಾಜ್ಯ ರಾಜಕಾರಣದಲ್ಲಿ ದೈತ್ಯ ವ್ಯಕ್ತಿಯಾಗಿ ಬೆಳೆದ ಸಿದ್ದರಾಮಯ್ಯ ಅವರು ಕರುನಾಡಿನ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಾಖಲೆಯಾಗಿದೆ.
ಕರ್ನಾಟಕದ ಸುದೀರ್ಘ ಅವಧಿಯ ಸಿಎಂ ಎನಿಸಿಕೊಳ್ಳಲು ಅವರು ಸವೆಸಿದ ಹಾದಿ ಬಹಳ ದುರ್ಗಮವಾದುದು. ಸಿದ್ದರಾಮಯ್ಯ ಅವರಿಗೆ ಅದು ಸುಲಭದ ತುತ್ತಾಗಿರಲಿಲ್ಲ. ಅದಕ್ಕಾಗಿ ಸಾಕಷ್ಟು ರಾಗಿ ಬೀಸಿದ್ದಾರೆ. ರಾಜಕಾರಣದಲ್ಲಿ ಅವರನ್ನು ತುಳಿಯಲು ನಡೆಸಿದ ಪ್ರಯತ್ನಗಳನ್ನು ಮೆಟ್ಟಿ ಹಂತಹಂತವಾಗಿ ಮೇಲೇರಿ ಬಂದರು.
ಅಕ್ಷರದ ಅರಿವನ್ನೇ ಕಾಣದ ಹಟ್ಟಿಯಲ್ಲಿ ಹುಟ್ಟಿದ ಸಿದ್ದರಾಮಯ್ಯ ತನ್ನ ಮನೆತನದ ಮೊದಲ ವ್ಯಕ್ತಿಯಾಗಿ ಅಕ್ಷರ ಲೋಕದ ಕದ ತಟ್ಟಿದರು. ಶಾಲಾ ಮಾಸ್ತರರೊಬ್ಬರ ಒತ್ತಾಸೆಯಿಂದ ನೇರವಾಗಿ ೫ನೇ ತರಗತಿ ಪ್ರವೇಶ ಪಡೆದರು. ಬಹುಶಃ ಅಂದು ಇದು ಘಟಿಸಿರಲಿಲ್ಲ ಎಂದಿದ್ದರೆ ಇಂದು ಕರ್ನಾಟಕವು ಸುದೀರ್ಘ ಅವಧಿಯ ಆಡಳಿತ ನಡೆಸಿದ ಒಬ್ಬ ಜನಪರ ಮುಖ್ಯಮಂತ್ರಿಯನ್ನು ಕಾಣುತ್ತಿರಲಿಲ್ಲವೇನೊ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಿದ್ದರಾಮಯ್ಯ ಅವರು ಎಳೆವೆಯಿಂದಲೇ ಶ್ರೀಸಾಮಾನ್ಯ ಪ್ರತಿನಿಧಿಯಾಗಿ ಬೆಳೆದರು. ಬಾಲ್ಯದಲ್ಲೇ ಸಾಮಾನ್ಯರೊಂದಿಗೆ ಬೆರೆಯುತ್ತಾ; ವೀರಮಕ್ಕಳ ಕುಣಿತ, ಕಂಸಾಳೆ ಕುಣಿತ, ಗೊರವರ ಕುಣಿತ ಹೀಗೆ ಜಾನಪದ ಕಲೆಗಳನ್ನು ಕಲಿಯುತ್ತಾ ಬಡ ಜನರ ಬವಣೆಗಳನ್ನು ಅರಿತುಕೊಂಡು ಬೆಳೆದರು. ಹಾಗಾಗಿಯೇ ಇಂದು ಬಡ ಜನರ ಬದುಕಿಗೆ ನೆಮ್ಮದಿಯ ದಾರಿ ತೋರಿದ್ದಾರೆ. ತುತ್ತು ಅನ್ನಕ್ಕೆ ಪರದಾಡುತ್ತಿದ್ದ ಆಹಾರ ಕ್ಷಾಮದ ದುರಿತ ಕಾಲದಲ್ಲಿ ಬಾಲ್ಯ ಕಳೆದ ಸಿದ್ದರಾಮಯ್ಯ ಅವರು ಅನ್ನದ ಮಹತ್ವವನ್ನು ಅರಿತು ಇಂದು ರಾಜ್ಯದ ಜನತೆಗೆ ಅನ್ನಭಾಗ್ಯದಂತಹ ಮಹತ್ತರ ಯೋಜನೆಯನ್ನು ನೀಡಿದ್ದಾರೆ. ಬಡ ಜನರ ಕಷ್ಟ ಕಾರ್ಪಣ್ಯಗಳನ್ನು ಕಂಡುಂಡು ಬೆಳೆದವರು ಅಧಿಕಾರ ಚುಕ್ಕಾಣಿ ಹಿಡಿದರೆ ಜನಪರ ನಿಲುವುಗಳು, ಜನಪರ ಯೋಜನೆಗಳನ್ನು ತರುತ್ತಾರೆ ಎಂಬುದಕ್ಕೆ ಸಿದ್ದರಾಮಯ್ಯ ಮಾದರಿಯಾಗಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಮನೆ ನಡೆಸುವ ಎಷ್ಟೋ ತಾಯಂದಿರು ಹೊಟ್ಟೆಬಟ್ಟೆಗೆ ನೆರೆಹೊರೆಯವರ ಬಳಿ ಕಾಡಿಬೇಡಿ ಒಂದಷ್ಟು ಕಾಸು ಪಡೆದು ದಿನ ದೂಡುತ್ತಿದ್ದರು. ಗ್ರಾಮೀಣ ಜನರ ಬದುಕನ್ನು ಹತ್ತಿರದಿಂದ ಬಲ್ಲವರೆಲ್ಲರಿಗೂ ಇದು ತಿಳಿದ ವಿಚಾರವೇ. ಹಾಗಾಗಿ ಹಳ್ಳಿಗಳಲ್ಲಿ ಮನೆ ನಡೆಸುವ ಮಹಿಳೆಯರ ಬವಣೆಗಳನ್ನು ಸಿದ್ದರಾಮಯ್ಯ ಅವರು ಕಣ್ಣಾರೆ ಕಂಡಿದ್ದರಿಂದಲೇ ಆ ತಾಯಂದಿರಿಗೆ ಆಸರೆ ಯಾಗುವಂತೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಯಿತು.
ಗ್ರಾಮೀಣ ಭಾಗಗಳಲ್ಲಿ ಈಗಲೂ ಎಷ್ಟೋ ಮನೆಗಳು ಮುನ್ನಡೆಯುತ್ತಿರುವುದೇ ಹೆಣ್ಣು ಮಕ್ಕಳ ದುಡಿಮೆಯಿಂದಲೇ. ಅಂತಹ ಹೆಣ್ಣು ಮಕ್ಕಳು ನಗರ ಪ್ರದೇಶಗಳಲ್ಲಿ ದುಡಿದು ಸಿಗುವ ಅಲ್ಪ ಮೊತ್ತದ ಹಣದಲ್ಲಿ ಕುಟುಂಬವನ್ನು ನಿಭಾಯಿಸುವುದು ಕಷ್ಟಕರವಾಗಿತ್ತು. ಜೊತೆಗೆ ದುಡಿಮೆಗೆ ನಗರಪ್ರದೇಶಕ್ಕೆ ತೆರಳಲು ಪ್ರತಿನಿತ್ಯ ಬಸ್ ಚಾರ್ಜ್‌ಗೆ ನೆರೆಹೊರೆಯವರನ್ನು ಕೇಳಬೇಕಾಗಿತ್ತು. ಇದನ್ನು ಮನಗಂಡಿದ್ದ ಸಿದ್ದರಾಮಯ್ಯ ಅವರು ದುಡಿಯುವ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ನಂತರ ಹೆಚ್ಚು ಜನಪ್ರಿಯರಾದ ಮುಖ್ಯಮಂತ್ರಿ ಎಂದರೆಸಿದ್ದರಾಮಯ್ಯ ಅವರು, ಅದಕ್ಕೆ ಕಾರಣ ದೇವರಾಜ ಅರಸು ಆಡಳಿತ ಮಾದರಿಯಲ್ಲೇ ಸಿದ್ದರಾಮಯ್ಯ ಅವರ ಆಡಳಿತದ ಮಾರ್ಗವೂ ಇದೆ. ದೇವರಾಜ ಅರಸು ಯಾವ ವರ್ಗದ ಜನರನ್ನು ಮುನ್ನೆಲೆಗೆ ತರಲು ಹೋರಾಟ ನಡೆಸಿ ದರೋ ಸಿದ್ದರಾಮಯ್ಯ ಅವರೂ ಅಂತಹದ್ದೇ ವರ್ಗದ ಜನರ ಬದುಕು ಹಸನಾಗಿಸಲು ಹೋರಾಟ ನಡೆಸಿದರು.
ಹಾಗಾಗಿಯೇ ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರ ಪ್ರತಿಬಿಂಬ ಎಂಬಂತೆ ನೋಡಲಾಗುತ್ತಿದೆ. ಹಿಂದುಳಿದ ವರ್ಗಗಳ ಬಗ್ಗೆ ದೇವರಾಜ ಅರಸು ಅವರಿಗೆ ಇದ್ದಷ್ಟೇ ಕಮಿಟ್‌ಮೆಂಟ್ ಸಿದ್ದರಾಮಯ್ಯ ಅವರಿಗೂ ಇದೆ. ಈ ಕಾರಣದಿಂದಾಗಿಯೇ ಸದ್ಯ ಕರ್ನಾಟಕದಲ್ಲಿ ಹಿಂದುಳಿದ ವರ್ಗ ಎಂದರೆ ಸಿದ್ದರಾಮಯ್ಯ; ಸಿದ್ದರಾಮಯ್ಯ ಎಂದರೆ ಹಿಂದುಳಿದ ವರ್ಗ ಎಂಬ ಮಾತು ಜನಜನಿತವಾಗಿದೆ. ಏಕೆಂದರೆ ಅರಸು ನಂತರ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸಿದಷ್ಟು ಬೇರೆ ಯಾವ ನಾಯಕರೂ ಈ ವರ್ಗಗಳನ್ನು ಪ್ರತಿನಿಧಿಸಲಿಲ್ಲ. ಈಗ ಯಾವುದೇ ರಾಜಕೀಯ ನಾಯಕರು ತಾವು ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಂಡರೂ ಸಿದ್ದರಾಮಯ್ಯ ಅವರಂತೆ ಈ ವರ್ಗಗಳ ಬೆನ್ನಿಗೆ ನಿಲ್ಲಲಿಲ್ಲ. ಅವರಿಗಾಗಿ ರಾಜಕೀಯ ದುಡಿಮೆ ಮಾಡಲಿಲ್ಲ. ಹಾಗಾಗಿಯೇ ಹಿಂದುಳಿದ ವರ್ಗಗಳ ಜನರು ಸಿದ್ದರಾಮಯ್ಯ ಅವರನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರು ಕರ್ನಾಟಕದ ಮಾಸ್ ಲೀಡರ್ ಎಂಬುದು ನಿಸ್ಸಂದೇಹ. ಏಕೆಂದರೆ ಸದ್ಯದ ರಾಜ್ಯ ರಾಜಕಾರಣದಲ್ಲಿ ಯಾವುದೇ ಪಕ್ಷದ ನಾಯಕರಿರಲಿ ಅವರು ಒಂದೊಂದು ವರ್ಗವನ್ನು ಅಘೋಷಿತವಾಗಿ ಪ್ರತಿನಿಽಸುತ್ತಿದ್ದಾರೆ. ತಾವು ಎಲ್ಲ ವರ್ಗಗಳನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಂಡರೂ ಅದರಂತೆ ನಡೆಯಲಿಲ್ಲ. ಆದರೆ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ, ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿ ನಿಂತಿದ್ದರಿಂದ ಮುಖ್ಯಮಂತ್ರಿಯಾಗಿ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ಆಡಳಿತಾತ್ಮಕ ಯೋಜನೆಗಳನ್ನು ನೀಡಿದ್ದರಿಂದ ಕರ್ನಾಟಕದ ಮಾಸ್ ಲೀಡರ್ ಎನಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಒಂದು ಪ್ರಾಂತ್ಯದ, ಒಂದು ವರ್ಗದ ನಾಯಕರಾಗಿಲ್ಲದೆ; ಕರುನಾಡಿನ ಎಲ್ಲ ಪ್ರಾಂತ್ಯಗಳ, ಎಲ್ಲ ವರ್ಗಗಳ ಪ್ರತಿನಿಧಿಯಾಗಿ ಸಂವಿಧಾನದ ಆಶಯದಂತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಆಡಳಿತ ನಡೆಸುತ್ತಿರುವುದರಿಂದ ಕರ್ನಾಟಕದ ಮಾಸ್ ಲೀಡರ್ ಎಂಬ ಗುಣವಾಚಕ ಪಡೆದುಕೊಂಡಿದ್ದಾರೆ.
ಹಾಗಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಜಾತಿ, ಧರ್ಮ, ವರ್ಗ ಎಂಬ ಭಿನ್ನಭೇದವಿಲ್ಲದೆ ಸಂವಿಧಾನದ ಆಶಯದಲ್ಲಿ, ಸಾಮಾಜಿಕ ನ್ಯಾಯದ ಅಡಿಯಲಿ ಜನಮಾನಸ ಒಪ್ಪುವಂತಹ ಆಡಳಿತ ನಡೆಸಿ ಕರ್ನಾಟಕದ ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆಯನ್ನು ಬರೆದಿದ್ದಾರೆ.
ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ದಾಖಲೆ: ೨೬ ವರ್ಷಗಳಲ್ಲಿ ೧೬ ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ಅದರಲ್ಲಿ ಎರಡು ಬಜೆಟ್‌ಗಳನ್ನು ಹಣಕಾಸು ಸಚಿವರಾಗಿ ಮಂಡಿಸಿದ್ದರೆ, ಐದು ಬಜೆಟ್‌ಗಳನ್ನು ಉಪಮುಖ್ಯಮಂತ್ರಿಯಾಗಿ ಮಂಡಿಸಿದ್ದಾರೆ. ಇನ್ನು ಮುಖ್ಯಮಂತ್ರಿಯಾಗಿ ಸತತ ೮ ಬಜೆಟ್‌ಗಳನ್ನು ಮಂಡಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರ ಸತತ ಬಜೆಟ್ ಮಂಡನೆ ಸಾಧನೆಯನ್ನು ಮುರಿದಿದ್ದಾರೆ. ರಾಮಕೃಷ್ಣ ಹೆಗಡೆ ಅವರು ೧೩ ಬಾರಿ ಬಜೆಟ್ ಮಂಡಿಸಿದ್ದರು. ಸಿದ್ದರಾಮಯ್ಯ ೧೬ ಬಾರಿ ಬಜೆಟ್ ಮಂಡಿಸಿದ್ದು, ಇದೊಂದು ದಾಖಲೆಯಾಗಿದೆ.
ಚಾ.ನಗರ-ಸಿಎಂ ಅಧಿಕಾರ!:
ಸಿಎಂ ಆದ ನಂತರ ಚಾಮರಾಜನಗರಕ್ಕೆ ಇಪ್ಪತ್ತು ಬಾರಿ ಭೇಟಿ ನೀಡಿದ್ದಾರೆ. ಆ ಮೂಲಕ ಅಲ್ಲಿಗೆ ಭೇಟಿ ನೀಡಿದ ಸಿಎಂ ಆರು ತಿಂಗಳೊಳಗೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಪ್ರತೀತಿಗೆ ಸಡ್ಡು ಹೊಡೆದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಂದ ಆ ಮೌಢ್ಯದ ಪ್ರತೀತಿ ಈಗ ಚಲಾವಣೆಯಲ್ಲಿದ್ದ ನಾಣ್ಯದಂತಾಗಿದೆ.
ರಾಜಕೀಯ ಹಾದಿ…:
೧೯೭೮: ಮೊದಲ ಚುನಾವಣೆ : ಮೈಸೂರಿನ ತಾಲ್ಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು.
೧೯೮೫: ಮೊದಲ ಬಾರಿ ಸಚಿವ ಸ್ಥಾನ: ೧೯೮೫ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆ ಬಳಿಕ ಪಶುಸಂಗೋಪನಾ ಸಚಿವರನ್ನಾಗಿ ನೇಮಕ ಮಾಡಲಾಯಿತು. ಸಂಪುಟ ಪುನಾರಚನೆಯ ಬಳಿಕ ಸಿದ್ದರಾಮಯ್ಯ ಅವರು ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಸಿದರು.
೧೯೯೪: ಹಣಕಾಸು ಸಚಿವ : ಚುನಾವಣೆಯಲ್ಲಿ ಗೆದ್ದು ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರಾದರು.
೧೯೮೩ ವಿಧಾನಸಭೆಗೆ ಸ್ಪರ್ಧೆ : ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು. ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಇವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
೧೯೮೯ ಜನತಾದಳ ಸೇರ್ಪಡೆ : ಚುನಾವಣೆ ಸೋತ ಸಿದ್ಧರಾಮಯ್ಯ ನಂತರದಲ್ಲಿ ಜನತಾದಳ ಸೇರಿದರು. ಜನತಾದಳದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು.
೧೯೯೯ ಜಾತ್ಯತೀತ ಜನತಾದಳದ ಅಧ್ಯಕ್ಷ: ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಸಿದ್ದಾರೆ.
೨೦೧೩ ಮೊದಲ ಬಾರಿಗೆ ಸಿಎಂ: ಅಹಿಂದ ಸಂಘಟನೆ ಸ್ಥಾಪನೆಯ ಹಿನ್ನೆಲೆಯಲ್ಲಿ ಜಾ.ದಳದೊಂದಿಗೆ ಬಿರುಕು ಉಂಟಾಗಿದ್ದರಿಂದ ಜಾ.ದಳ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿಸಿದರು. ೨೦೧೩ರಲ್ಲಿ ಸಿಎಂ ಆಗಿ ಆಯ್ಕೆಯಾದರು.
ಎರಡು ಬಾರಿ ಉಪಮುಖ್ಯಮಂತ್ರಿ
೧೯೯೬ -೧೯೦೯೯ವರೆಗೆ ಮೊದಲ ಬಾರಿ ದಳದಿಂದ ಹಾಗೂ ೨೦೦೪-೨೦೦೫ರಲ್ಲಿ ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ೨ನೇ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷ/ ವಿರೋಧ ಪಕ್ಷದ ನಾಯಕ:
೨೦೧೮ರ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್ ಹಾಗೂ ಜಾ.ದಳ ಸಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು.
ನಂಜನಗೂಡು : ಅಪ್ರಾಪ್ತೆಯ ಹಿಂದೆ ಬಿದ್ದು ಪ್ರೀತಿಗೆ ಒತ್ತಾಯಿಸಿ ಮದುವೆ ಆಗುವಂತೆ ಪೀಡಿಸಿ ಮಾನಸಿಕ ಕಿರುಕುಳ ನೀಡಿದ ಹಿನ್ನಲೆ ವಿಧ್ಯಾರ್ಥಿನಿ…
ಮೈಸೂರು : ನಾನು ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ರಾಷ್ಟ್ರ ಮಟ್ಟಕ್ಕೆ ಹೋಗಲಿಲ್ಲ ಅಂದ್ರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಆಗುತ್ತಾ?…
ಮೈಸೂರು : ರಾಜ್ಯದಲ್ಲಿ ಸರಿಯಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳು ಹೇಗೆಲ್ಲಾ ಅನುಷ್ಠಾನ…
ಮೈಸೂರು : ರಂಗಾಯಣದ ಮಹತ್ವಾಕಾಂಕ್ಷೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ‘ಬಾಬಾ ಸಾಹೇಬ್-ಸಮತೆಯೆಡೆಗೆ ನಡಿಗೆ’ ಆಶಯದಡಿ ಜ.11 ರಿಂದ…
ಮೈಸೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ನಿನ್ನೆ(ಜ.6) ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಸಂಸದ ಪ್ರತಾಪ್…
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸುತ್ತಿಗೆ ಹಿಡಿದುಕೊಂಡು ಕೂತಿದೆ. ಯಾವಾಗ ಹೊಡೆಯುತ್ತದೆಯೋ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು…