ಸಿಎಸ್‌ಆರ್ ಸೌಲಭ್ಯದ ಸಮಗ್ರ ಆನ್‌ಲೈನ್ ವೇದಿಕೆ ‘ಆಕಾಂಕ್ಷಾ’ ಪೋರ್ಟಲ್‌ಗೆ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಸಿಎಸ್‌ಆರ್‌ ಸೌಲಭ್ಯದ ಸಮಗ್ರ ಆನ್‌ಲೈನ್ ವೇದಿಕೆ ‘ಆಕಾಂಕ್ಷಾ’ ಪೋರ್ಟಲ್‌ಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಗಳನ್ನು ಸುಗಮವಾಗಿ ಮುಂದುವರೆಸಲು ಸರ್ಕಾರ ಮತ್ತು ದಾನಿಗಳ ನಡುವೆ ಒಂದು ಪಾರದರ್ಶಕ ಸೇತುವೆಯಾಗಿ ಈ ಪೋರ್ಟಲ್ ಕಾರ್ಯನಿರ್ವಹಿಸಲಿದೆ. ಇದರಿಂದ ಸಿಎಸ್‌ಆರ್‌ ಅನುದಾನವನ್ನು ನಿಜಕ್ಕೂ ಅಗತ್ಯವಿರುವ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಕೋವಿಡ್ ನಿಯಂತ್ರಣ ಪ್ರಕ್ರಿಯೆಯಲ್ಲಿ ಕಾರ್ಪೊರೇಟ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರವನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಈಗಾಗಲೇ ಆರೋಗ್ಯ ವಲಯಕ್ಕೆ 175 ಕೋಟಿ ಸಿಎಸ್ ಆರ್ ನಿಧಿಯನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್-19ರ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನಿರ್ಬಂಧದಿಂದ ಬಾಧಿತರಾದವರಿಗೆ 1250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಿಸಲಾಗಿದೆ. ಅಲ್ಲದೆ, 2.06 ಲಕ್ಷ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, 956 ಕೋಟಿ ರೂ. ವೆಚ್ಚ ಭರಿಸಲಾಗುತ್ತಿದೆ. ಕೊರೊನಾ ಸಂಕಷ್ಟಕ್ಕೆ ನೆರವಾಗಲು ಬಯಸುವವರು ಹಾಗೂ ಇತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವು ನೀಡಲು ಬಯಸುವ ದಾನಿಗಳು ಆಕಾಂಕ್ಷಾ ಪೋರ್ಟಲ್ ಮೂಲಕ ನೆರವು ನೀಡಬಹುದಾಗಿದೆ ಎಂದು ಹೇಳಿದರು.

ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್, ವಿಶ್ವ ಸಂಸ್ಥೆಯ ಅಂಗಸಂಸ್ಥೆ ಯುಎನ್‌ಡಿಪಿಯ ಪ್ರತಿನಿಧಿ ಶೊಕೊ ನೊಡಾ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಯೋಜನಾ ಸಚಿವ ನಾರಾಯಣಗೌಡ ಉಪಸ್ಥಿತರಿದ್ದರು.

× Chat with us