ರೈತರ ಹೈಟೆಕ್ ಆಪ್ತಮಿತ್ರ ಡ್ರೋಣ್

ಅತ್ಯಾಧುನಿಕ ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ. ಹೈಟೆಕ್ ಸಾಧನ-ಸಲಕರಣೆಗಳೊಂದಿಗೆ ರೈತರಿಗೆ ನೆರವಾಗುತ್ತಿರುವ ಮತ್ತೊಂದು ಉಪಕರಣ ಡ್ರೋಣ್. ಕೃಷಿ ಉದ್ದೇಶಗಳಿಗಾಗಿ ಮಾನವರಹಿತ ಹಾರುವ ಯಂತ್ರಗಳು ಲಭ್ಯ. ಬೆಳೆಗಳಿಗೆ ಔಷಧಿ, ಕೀಟನಾಶಕಗಳನ್ನು ಸಿಂಪಡಿಸಲು, ಕೃಷಿ ಕಾರ್ಯಾಚರಣೆಗಳನ್ನು ಗರಿಷ್ಠಗೊಳಿಸಲು, ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಬೆಳೆಗಳ ಬೆಳವಣಿಗೆ ಮೇಲೆ ನಿಗಾವಹಿಸಲು ಡ್ರೋಣ್‌ಗಳು ಸಹಕಾರಿ. ಸಂವೇದಕಗಳು (ಸೆನ್ಸೊರ್‌ಗಳು) ಮತ್ತು ಡಿಜಿಟಲ್ ಪ್ರತಿಬಿಂಬಗಳ (ಇಮೇಜಿಂಗ್) ತಂತ್ರಜ್ಞಾನವು ರೈತರಿಗೆ ತಮ್ಮ ಹೊಲ-ಗದ್ದೆ-ಜಮೀನುಗಳ ಸ್ಪಷ್ಟ ಚಿತ್ರಣ ನೀಡುತ್ತವೆ. ಕೃಷಿ ಡ್ರೋಣ್‌ಗಳನ್ನು ಬಳಸಿ ಅದರಿಂದ ಮಾಹಿತಿ ಕಲೆ ಹಾಕುವುದರಿಂದ ಕೃಷಿ ಉತ್ಪನ್ನಗಳ ಇಳುವರಿ ಮತ್ತು ಕೃಷಿ ಕಾರ್ಯಕ್ಷಮತೆ ಸುಧಾರಿಸಲು ನೆರವಾಗುತ್ತದೆ.

ಡ್ರೋಣ್‌ನಿಂದ ಒದಗಿಸಲಾಗುವ ವೈಮಾನಿಕ ನೋಟವು ನೀರಾವರಿ ಸಮಸ್ಯೆಗಳು, ಮಣ್ಣಿನ ವ್ಯತ್ಯಾಸ ಹಾಗೂ ಕೀಟ ಮತ್ತು ಶಿಲೀಂಧ್ರ ಸೋಂಕುಗಳಂಥ ಅನೇಕ ಸಂಗತಿಗಳನ್ನು ಬಹಿರಂಗಗೊಳಿಸುತ್ತದೆ. ಡ್ರೋಣ್‌ಗಳು ನೀಡುವ ಪ್ರತಿಬಿಂಬಗಳಿಂದ ಆರೋಗ್ಯಕರ ಮತ್ತು ರೋಗಗ್ರಸ್ತ ಬೆಳೆಗಳ ನಡುವಣ ವ್ಯತ್ಯಾಸವನ್ನು ರೈತರು ಗುರುತಿಸಬಹುದು. ಮಾನವನಿಗೆ ಸ್ಪಷ್ಟವಾಗಿ ಕಾಣದ ದೃಶ್ಯಗಳು ಡ್ರೋಣ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗುತ್ತವೆ. ಹೀಗಾಗಿ ಇಂಥ ಪ್ರತಿಬಿಂಬಗಳು ಬೆಳೆ ಬೆಳವಣಿಗೆ ಮತ್ತು ಉತ್ಪಾದನೆಯನ್ನು ಮೌಲ್ಯಾಂಕನ ಮಾಡಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ. ಆಗ್ರಿಕಲ್ಚರ್ ಡ್ರೋನ್‌ಗಳನ್ನು ಬಳಸಿ ಯಾವುದೇ ಸಮಯದಲ್ಲಿ ಬೆಳೆಗಳ ಸಮೀಕ್ಷೆ ನಡೆಸಬಹುದು. ಇದರಿಂದ ಸಮಸ್ಯೆಗಳನ್ನು ಕ್ಷಿಪ್ರವಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ.

ಕೃಷಿ ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್-ಎಐ)ಯ ಪರಿಣಾಮಕಾರಿ ಬಳಕೆಯಾಗುತ್ತಿದೆ. ತಳಿಶಾಸ್ತ್ರಜ್ಞರು ರೋಗಗ್ರಸ್ತ ಜೇಳದ ಬೆಳೆಗಳಿಗೆ ಜೀವ ನೀಡಲು ಎಐ ಉಪೋಂಗಿಸುತ್ತಿದ್ದಾರೆ. ಬೆಳೆಗಳ ವ್ಯಾಪಕ ಹಾನಿ ಮತ್ತು ನಷ್ಟಕ್ಕೆ ಕಾರಣವಾಗುವ ಕ್ರಿಮಿ-ಕೀಟಗಳು ಮತ್ತು ಹುಳುಗಳನ್ನು ಕೊಲ್ಲಲ್ಲು ರೆಂಟೋಕಿಲ್ ರೂಪದಲ್ಲಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಪ್ರಯೋಗಿಸಿದ್ದಾರೆ. ಇದು ಬೆಳೆಗಳನ್ನು ನಾಶಪಡಿಸುವ ಕೀಟ ಅಥವಾ ಇಲಿಯ ಚಿತ್ರಗಳನ್ನು ತೆಗೆದು ಅದನ್ನು ಪೆಸ್ಟ್ ಐಡಿ ಎಂಬ ಆ್ಯಪ್‌ಗೆ ಕಳುಹಿಸುತ್ತದೆ. ಇದರಿಂದ ಕೀಟಗಳು ಅಥವಾ ಮೂಷಿಕಗಳನು ಸುಲಭವಾಗಿ ಗುರುತಿಸಿ ನಿರ್ಮೂಲನೆ ಮಾಡಿ ಬೆಳೆ ರಕ್ಷಿಸಲು ಸಹಕಾರಿಯಾಗುತ್ತದೆ.

ಪುಟ್ಟ ರೋಬೊಗಳ ಹಿಂಡುಗಳು ಹೊಲ-ಗದ್ದೆ, ತೋಟಗಳಲ್ಲಿ ಅಂಗುಲ ಅಂಗುಲ ಶೋಧಿಸುವ ಸಾಮರ್ಥ್ಯ ಹೊಂದಿರುತ್ತದೆ. ಪ್ರತಿ ಬೀಜ ಬಿತ್ತನೆಗೆ ಮುನ್ನ ಈ ಸಣ್ಣ ಯಂತ್ರ ಮಾನವರು ಆ ಸ್ಥಳಕ್ಕಾಗಿ ಅತ್ಯುತ್ತಮ ವಿಧವನ್ನು ಆ್ಂಕೆು ಮಾಡಲು ನೆರವಾಗುತ್ತವೆ. ಇದು ಪ್ರತಿ ಎಕರೆಯ ಉತ್ಪಾದಕತೆಯನ್ನು ಗರಿಷ್ಠಗೊಳಿಸುತ್ತದೆ. ಅಲ್ಪ ಸ್ಥಳವನ್ನು ಫಲವತ್ತಾದ ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು ಅವಕಾಶ ನೀಡುತ್ತದೆ. ಇದರಿಂದ ಹೆಚ್ಚು ಜನರಿಗೆ ಆಹಾರ ಪೂರೈಸಲು ನೆರವಾಗುತ್ತದೆ ಹಾಗೂ ಆಹಾರದ ಮೇಲೆ ಕಡಿಮೆ ವೆಚ್ಚವಾಗುವುದರಿಂದ ಜನರ ಜೀವನ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿ.

ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ಉಪಕರಣಗಳಂತೆ ಡ್ರೋಣ್‌ಗಳೂ ಕೂಡ ಬಳಕೆಗೆ ಬರುತ್ತಿವೆ. ತಮ್ಮ ಕೃಷಿ ಭೂಮಿಗಳ ಮೇಲೆ ನಿಗಾವಹಿಸಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಕೃಷಿಕರಿಗೆ ಸರ್ಕಾರವೂ ಉತ್ತೇಜನ ನೀಡುತ್ತಿದೆ.

ಭವಿಷ್ಯದ ಬಳಕೆ

ಕೃಷಿ ಕ್ಷೇತ್ರದಲ್ಲಿ ಡ್ರೋಣ್‌ಗಳ ಬೃಹತ್ ಸಾಮರ್ಥ್ಯ ಬೆಳವಣಿಗೆಗೆ ಅವಕಾಶವಿದೆ. ತಂತ್ರಜ್ಞಾನ ನಿರಂತರವಾಗಿ ಸುಧಾರಿಸುತ್ತಿದ್ದು, ಕೃಷಿ ಭೂಮಿ ಮತ್ತು ಬೆಳೆಗಳ ಪ್ರತಿಬಿಂಬಗಳನ್ನು ರವಾನಿಸುವ ಡ್ರೋಣ್‌ಗಳ ಕಾರ್ಯ ಮತ್ತಷ್ಟು ಮೇಲ್ದರ್ಜೆಗೇರಲಿದೆ. ಬೆಳೆಗಳಿಗೆ ಸಂಬಂಧಿಸಿದಂತೆ ಡ್ರೋಣ್‌ನಿಂದ ನಿಖರ ದತ್ತಾಂಶ ಮಾಹಿತಿ (ಡೇಟಾ) ಲಭಿಸುವುದರಿಂದ ಸಮಸ್ಯೆಗಳಿಗೆ ಪರಿಹಾರೋಪಾಯಗಳ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ರೈತರು ಸಮರ್ಥರಾಗುತ್ತಾರೆ.

ರೈತರು ಬಹುತೇಕ ಕೆಲಸಗಳನ್ನು ಡ್ರೋಣ್‌ಗಳು ನಿಖರವಾಗಿ ನಿರ್ವಹಿಸುವುದರಿಂದ ಅನೇಕ ಪ್ರೋಂಜನಗಳಿವೆ. ತಮ್ಮ ಬೆಳೆಗಳ ಸಮೀಕ್ಷೆ ಮಾಡುತ್ತಾ ಕೃಷಿಕರು ಕಾಲ ಕಳೆಯುವ ಬದಲು ಸಮಗ್ರ ಉತ್ಪಾದನೆಯತ್ತೆ ಗಮನಹರಿಸಲು ರೈತರಿಗೆ ಸಮಯ ಲಭಿಸುತ್ತದೆ. ಜಾನುವಾರುಗಳ ಮೇಲೆ ನಿಗಾವಣೆ, ಬೇಲಿ ಸರ್ವೆ ಮತ್ತು ರೋಗಕಾರಕ ಬೆಳೆಗಳ ಮೇಲೆ ಕಣ್ಣಿಡಲು ಸಹಕಾರಿ

ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಣ್ಣ ರೈತರಿಗೆ ಆಧುನಿಕ ಡ್ರೋಣ್‌ಗಳ ಖರೀದಿ ಮತ್ತು ನಿರ್ವಹಣೆ ವೆಚ್ಚ ತುಂಬಾ ದುಬಾರಿ. ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ನವೋದ್ಯಮಗಳು ಕಡಿಮೆ ವೆಚ್ಚದ ಕೃಷಿ ಡ್ರೋಣ್‌ಗಳನ್ನು ತಯಾರಿಸುತ್ತಾ ಕೃಷಿಕರಿಗೆ ನೆರವಾಗಿದೆ. ಅಲ್ಲದೇ ಕೃಷಿ ವಿಶ್ವವಿದ್ಯಾಲಯಗಳ ಸಂಶೋಧಕರೂ ಸಹ ಇವುಗಳನ್ನು ಕೈಗೆಟುಕುವ ದರದಲ್ಲಿ ಅಭಿವೃದ್ಧಿಗೊಳಿಸಿದ್ದಾರೆ. ನೇಗಿಲಯೋಗಿಗಳ ಅನುಕೂಲಕ್ಕಾಗಿ ಕೃಷಿ ಡ್ರೋನ್‌ಗಳು ಬಾಡಿಗೆಗೂ ಲಭ್ಯವಿದೆ. ಇಂಥ ಸಾಧನವನ್ನು ಬಳಸುವುದು ಸುಲಭ ಮತ್ತು ದುರಸ್ಥಿಯೂ ಸರಳ.

× Chat with us