ಮೈಷುಗರ್‌ ಕಾರ್ಖಾನೆ ವಿಚಾರವಾಗಿ ಅ.18 ರಂದು ರೈತರಿಗೆ ಸಿಹಿ ಸುದ್ದಿ: ಸಿಎಂ ಭರವಸೆ

ಮಂಡ್ಯ: ಮೈಷುಗರ್‌ ಕಾರ್ಖಾನೆ ಆರಂಭಿಸುವ ಸಂಬಂಧ ಚರ್ಚೆಗೆ ಅ.18ರಂದು ರೈತ ಮುಖಂಡರು, ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಅಂದು ರೈತರಿಗೆ ಸಿಹಿ ಸುದ್ದಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಧರಣಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು, ಮೈಷುಗರ್‌ ಕಾರ್ಖಾನೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಮಂಡ್ಯ ಎಂದರೆ ಮೈಷುಗರ್‌, ಮೈಷುಗರ್‌ ಎಂದರೆ ಮಂಡ್ಯ. ಇಂತಹ ಸಕ್ಕರೆ ಕಾರ್ಖಾನೆ ಉಳಿಯಬೇಕು ಎಂಬುದು ನಮ್ಮ ಆಶಯವೂ ಆಗಿದೆ ಎಂದು ತಿಳಿಸಿದರು.

ಮೈಷುಗರ್‌ ಕಾರ್ಖಾನೆಯಲ್ಲಿ ಕಬ್ಬು ನುರಿಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲಾ ಸಮಸ್ಯೆಗಳಿಗೂ ಅ.18ರಂದು ಅಂತ್ಯ ಹಾಡೋಣ, ಈ ಬಗ್ಗೆ ರೈತರಲ್ಲಿ, ಮುಖಂಡರಲ್ಲಿ ಯಾವುದೇ ಗೊಂದಲ ಬೇಡ. ಒಮ್ಮೆ ಕಾರ್ಖಾನೆ ಆರಂಭವಾದರೆ ಅದು ಮತ್ತೊಮ್ಮೆ ನಿಲ್ಲಬಾರದು, ಅಂತಹ ನಿರ್ಣಯ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸುವ ಬಗ್ಗೆ ಸ್ಥಳದಲ್ಲೇ ಘೋಷಣೆ ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಯಾವುದನ್ನೂ ಸ್ಥಳದಲ್ಲೇ ಘೋಷಣೆ ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಒಂದು ಪ್ರಕ್ರಿಯೆ ಇದ್ದು ಅದರಂತೆ ಕ್ರಮ ಕೈಗೊಳ್ಳಲಾಗುವುದು. ಎಲ್ಲರ ಸಲಹೆ, ಸೂಚನೆ ಪಡೆದು ನಂತರ ಸರ್ಕಾರದ ನಿರ್ಣಯ ಪ್ರಕಟಿಸಲಾಗುವುದು ಎಂದು ಹೇಳಿದರು. ನಂತರ ರೈತರಿಂದ ಮನವಿ ಪತ್ರ ಸ್ವೀಕರಿಸಿದರು.

× Chat with us