ಚೆಲುವನಾರಾಯಣಸ್ವಾಮಿ ದರ್ಶನ ಪಡೆದ ಡಿಂಪಲ್‌ ಕ್ವೀನ್!

ಮೇಲುಕೋಟೆ: ಖ್ಯಾತ ಚಲನಚಿತ್ರ ನಟಿ ರಚಿತಾರಾಮ್ ಮೇಲುಕೋಟೆಗೆ ಶನಿವಾರ ಭೇಟಿ ನೀಡಿ ಮನೆದೇವರಾದ ಶ್ರೀ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಭಕ್ತಿಯಿಂದ ಹಣೆಗೆ ಮೂರುನಾಮ ಧರಿಸಿ ಸ್ವಾಮಿಯ ದರ್ಶನಕ್ಕೆ ಆಗಮಿಸಿದ ನಟಿ ಭಗವದ್ರಾವಾನುಜಾಚಾರ್ಯರೇ ಭಿಕ್ಷೆ ಸ್ವೀಕರಿಸುತ್ತಿದ್ದ ಗುರುಪರಂಪರೆಯ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮಾರ್ಗದರ್ಶನಲ್ಲಿ ದೇವರ ದರ್ಶನ ಮಾಡಿದ್ದಾರೆ.

ಪ್ರತಿ ವರ್ಷ ತಪ್ಪದೆ ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆಯುವ ರಚಿತಾರಾಂ ಈ ವರ್ಷವೂ ಸ್ವಾಮಿಯ ದರ್ಶನ ಪಡೆದು ಸತ್ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ನಾಮಧರಿಸಿದ ಪೋಟೋವನ್ನು ಫೇಸ್ ಬುಕ್ ಪೇಜ್ ಮೂಲಕ ಷೇರ್ ಮಾಡಿದ ನಟಿ, ನಾಮಧರಿಸುವ ಮಹತ್ವವನ್ನು ಅಭಿಮಾನಿಗಳಿಗೆ ಮನವರಿಕೆ ಮಾಡಿದ್ದಾರೆ.

ಇನ್ನು ನಟಿಯ ಭೇಟಿಯ ವೇಳೆ ಖ್ಯಾತನಟಿಯೂ, ಸಾಕಷ್ಟು ಅನುಕೂಲವುಳ್ಳ ಭಕ್ತರೂ ಆದ ತಾವು ಚೆಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ಭಕ್ತರಿಗೂ ಅನುಕೂಲವಾಗುವಂತೆ ಯಾವುದಾದರೂ ಶಾಶ್ವತ ಕೈಂಕರ್ಯ ಮಾಡುವಂತೆ ಶ್ರೀನಿವಾಸನರಸಿಂಹನ್ ಗುರೂಜಿ ರಚಿತಾಗೆ ಸಲಹೆ ನೀಡಿದ್ದಾರೆ.

ಚೆಲುವನಾರಾಯಣಸ್ವಾಮಿಯ ಪ್ರೇರಣೆ ದೊರೆತು ಗುರೂಜಿ ಮಾರ್ಗದರ್ಶನದಂತೆ ನಟಿ ರಚಿತಾ ಕ್ಷೇತ್ರದಲ್ಲಿ ಶಾಶ್ವತ ಕೆಲಸ ಮಾಡಲಿ ಎಂದು ಮೇಲುಕೋಟೆಯ ಅವರ ಅಭಿಮಾನಿಗಳು ಮನವಿ ಮಾಡಿದ್ದಾರೆ.

ಭಾನುವಾರ ದೇಗುಲಕ್ಕೆ ಪ್ರವೇಶವಿಲ್ಲ

ಸರ್ಕಾರ ವೀಕೆಂಡ್ ಕರ್ಪ್ಯೂ ವಾಪಸ್ ಪಡೆದಿದೆಯಾದರೂ ಶನಿವಾರ ಮತ್ತು ಭಾನುವಾರ ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಕಳೆದ ಐದೂ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ಭಕ್ತರ ವಾಹನವನ್ನು ಪ್ರವಾಸಿ ಮಂದಿರದ ಬಳಿಯಲ್ಲೇ ಮೇಲುಕೋಟೆ ಪ್ರವೇಶಿಸದಂತೆ ತಡೆದು ವಾಪಸ್ ಕಳುಹಿಸಲಾಗಿತ್ತಾದರೂ ಈ ವಾರ ಮೇಲುಕೋಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಭಕ್ತರು ದೇವಾಲಯದ ಗರುಡಗಂಭದ ಬಳಿ ಪೂಜೆ ಮಾಡಿ ಗೋಪುರ ದರ್ಶನ ಮಾಡಿ ತೆರಳುತ್ತಿದ್ದರು.

× Chat with us