ಹಿರಿಯ ನಟ ಸತ್ಯಜಿತ್‌ ನಿಧನ

ಬೆಂಗಳೂರು: ಅನಾರೋಗ್ಯದಿಂದಾಗಿ ನಗರದ ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದ ನಟ ಸತ್ಯಜಿತ್‌ (72) ಭಾನುವಾರ ಮುಂಜಾನೆ 2 ಗಂಟೆಗೆ ನಿಧನರಾದರು.

ವಾರದ ಹಿಂದಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದರು. ಅವರಿಗೆ ಪುತ್ರಿ ಹಾಗೂ ಪುತ್ರ ಇದ್ದಾರೆ. ಪುತ್ರಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಪುತ್ರ ಚಿತ್ರರಂಗದಲ್ಲಿ ತೊಡಗಿದ್ದಾರೆ.

ವಯೋಸಹಜ ಆರೋಗ್ಯದ ಸಮಸ್ಯೆಗಳ ಜೊತೆ 2016ರಲ್ಲಿ ಗ್ಯಾಂಗ್ರಿನ್‌ಗೆ ತುತ್ತಾಗಿ ಒಂದು ಕಾಲನ್ನು ಸತ್ಯಜಿತ್‌ ಕಳೆದುಕೊಂಡರು. ಬಳಿಕವೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದರು.

ಸತ್ಯಜಿತ್‌ 1986ರಲ್ಲಿ ಬಿಡುಗಡೆಯಾದ ‘ಅಂಕುಶ್‌’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು. ಮುಂದೆ ಮೈಸೂರು ಜಾಣ (1992) ಅವರಿಗೆ ಚಂದನವನದಲ್ಲಿ ನೆಲೆಯೂರಲು ಬ್ರೇಕ್‌ ಕೊಟ್ಟ ಸಿನಿಮಾ. ‘ಪುಟ್ನಂಜ’, ‘ಶಿವಮೆಚ್ಚಿದ ಕಣ್ಣಪ್ಪ’, ‘ಚೈತ್ರದ ಪ್ರೇಮಾಂಜಲಿ’, ‘ಆಪ್ತಮಿತ್ರ’ ಚಿತ್ರಗಳಲ್ಲಿ ಅಭಿನಯದ ಮೂಲಕ ಜನಪ್ರಿಯತೆ ಗಳಿಸಿದರು. ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ಸತ್ಯಜಿತ್‌ ನಟಿಸಿದ್ದಾರೆ.