ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ: ಯುವಕನಿಗೆ 20 ವರ್ಷ ಜೈಲು

ಚಾಮರಾಜನಗರ: ಬಾಲಕಿಯನ್ನು ಮದುವೆಯಾಗುವುದಾಗಿ ಕರೆದೊಯ್ದು ಆಕೆಯ ಜತೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಯುವಕನಿಗೆ ಚಾಮರಾಜನಗರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯವು 20 ವರ್ಷ ಜೈಲುಶಿಕ್ಷೆ ಹಾಗೂ 6.25 ಲಕ್ಷ ರೂ ದಂಡ ವಿಧಿಸಿದೆ. ಆರೋಪಿಯ ಕೃತ್ಯಕ್ಕೆ ಸಹಕರಿಸಿದ ಮಹಿಳೆಗೆ 5 ವರ್ಷ ಶಿಕ್ಷೆ 2 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಚಾಮರಾಜನಗರದ ಮೇಗಲ ಉಪ್ಪಾರ ಬೀದಿಯ ನಿವಾಸಿ ಚಂದ್ರಶೇಖರ (21) ಶಿಕ್ಷೆಗೆ ಒಳಗಾದವ. ಈತ 2018ರ ಜುಲೈ 11ರಂದು 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದಿದ್ದ. ನಂತರ ಬಾಲಕಿಯನ್ನು ಕೋಡಿಮೊಳೆ ಗ್ರಾಮದ ಮಹದೇವಮ್ಮ ಅವರ ಮನೆಯಲ್ಲಿ ಇರಿಸಿಕೊಂಡಿದ್ದ. ಈತನಿಗೆ ಆಶ್ರಯ ನೀಡಿದ ಮಹದೇವಮ್ಮಗೆ ಐದು ವರ್ಷ ಜೈಲು ಶಿಕ್ಷೆ 2 ಲಕ್ಷ ರೂ ದಂಡ ವಿಧಿಸಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನಪುರಿ ಆದೇಶ ನೀಡಿದ್ದಾರೆ.

ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು 7.5 ಲಕ್ಷ ರೂ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಬಾಲಕಿಯ ತಾಯಿ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸರ್ಕಾರದ ಪರವಾಗಿ ವಕೀಲ ಯೋಗೇಶ್‌ ವಾದ ಮಂಡಿಸಿದ್ದರು.

× Chat with us