ನಿಗೂಢವಾಗಿ ಸಾವನ್ನಪ್ಪಿದ ಹುಡುಗಿಗೆ ನಿಗೂಢ ಅಂತ್ಯಸಂಸ್ಕಾರ! ಹೀಗೊಂದು ವಿಚಿತ್ರ ಘಟನೆ

ನವದೆಹಲಿ: ನಿಗೂಢವಾಗಿ ಮೃತಪಟ್ಟ 7 ವರ್ಷದ ಬಾಲಕಿಯ ಅಂತ್ಯಸಂಸ್ಕಾರವನ್ನು ಚಿತಾಗಾರದ ಸಿಬ್ಬಂದಯೇ ಗುಟ್ಟಾಗಿ ಮಾಡಿ ಮುಗಿಸಿರುವ ವಿಚಿತ್ರ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಬಾಲಕಿಯ ಅಂತ್ಯಸಂಸ್ಕಾರವನ್ನು ಮಾಡಲು ಆಕೆಯ ಪಾಲಕರು ಒಪ್ಪದಿದ್ದರೂ, ಬಲವಂತವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಪಾಲಕರು ಪೊಲೀಸರಿಗೆ ದೂರು ನೀಡಿ ತಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿ, ಹತ್ಯೆ ಮಾಡಲಾಗಿದೆ. ನಂತರ ನಾವು ಪೋಸ್ಟ್‌ಮಾರ್ಟಂಗೆ ಒತ್ತಾಯ ಮಾಡಿದರೂ ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಘಟನೆಯ ವಿವರ:
7 ವರ್ಷದ ಬಾಲಕಿಯೊಬ್ಬಳು ತನ್ನ ಪಾಲಕರೊಂದಿಗೆ ಓಲ್ಡ್ ನಂಗಲ್ ಬಳಿಯ ಏರಿಯಾವೊಂದರಲ್ಲಿ ವಾಸವಾಗಿದ್ದಳು. ಅಲ್ಲೇ ಸಮೀಪ ಇರುವ ಚಿತಾಗಾರದಲ್ಲಿ ನೀರನ್ನು ತಂಪಾಗಿಡುವ ಕೂಲರ್ ಇತ್ತು. ಈಕೆಗೆ ತಣ್ಣನೆಯ ನೀರು ಕುಡಿಯುವ ಆಸೆಯಾಯಿತು. ಸಂಜೆ ಸುಮಾರು 5.30ರ ಹೊತ್ತಿಗೆ ತನ್ನ ಅಮ್ಮನಿಗೆ ತಿಳಿಸಿ ಚಿತಾಗಾರಕ್ಕೆ ಹೋದಳು. ಎಷ್ಟು ಹೊತ್ತಾದರೂ ಬರಲಿಲ್ಲವಲ್ಲ ಎಂದು ತಾಯಿ ಸುಮಾರು 6 ಗಂಟೆ ಹೊತ್ತಿಗೆ ಹುಡುಕಿಕೊಂಡು ಹೋದಾಗ ಆಕೆ ಅಲ್ಲಿಯೇ ಸಾವನ್ನಪ್ಪಿರುವ ಸತ್ಯ ತಿಳಿದಿದೆ. ಆ ಚಿತಾಗಾರದ ಉಸ್ತುವಾರಿ ಬಾಲಕಿಯ ಶವವನ್ನು ತಾಯಿಗೆ ತೋರಿಸಿ ಆಕೆ ನೀರು ತೆಗೆದುಕೊಳ್ಳಲು ಹೋದಾಗ ಶಾಕ್ ಹೊಡೆದು ಮೃತಪಟ್ಟಿದ್ದಾಳೆ ಎಂದೂ ಹೇಳಿದ್ದಾನೆ. ಬಾಲಕಿಯ ಎಡ ಮಣಿಕಟ್ಟು, ಮೊಣಕೈ ಮೇಲೆಲ್ಲ ಸುಟ್ಟಗಾಯದ ಗುರುತುಗಳೂ ಇವೆ. ಬಾಲಕಿಯ ತುಟಿ ನೀಲಿಗಟ್ಟಿತ್ತು. ಈ ಬಗ್ಗೆ ತಾಯಿ ಪೊಲೀಸರ ಎದುರು ವಿವರಿಸಿದ್ದಾರೆ.

ಅಷ್ಟೇ ಅಲ್ಲ, ತಾಯಿ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡುತ್ತೇನೆಂದು ಹೋದಾಗ ಆ ಚಿತಾಗಾರದ ವಿಧಿ-ವಿಧಾನಗಳನ್ನು ನೆರವೇರಿಸುವ ವ್ಯಕ್ತಿ ಆಕೆಯನ್ನು ತಡೆದಿದ್ದಾನೆ. ಪೊಲೀಸರಿಗೆ ಕರೆ ಮಾಡಿದರೆ ಅವರು ಪೋಸ್ಟ್ ಮಾರ್ಟಮ್ ಮಾಡುತ್ತಾರೆ. ಆಗ ಅಂಗಾಂಗಗಳನ್ನು ಕದಿಯುತ್ತಾರೆ ಎಂದೆಲ್ಲ ಹೇಳಿ, ತನ್ನ ಸಹಚರರೊಂದಿಗೆ ಸೇರಿ ಬಲವಂತವಾಗಿ ಬಾಲಕಿಯ ಶವಸಂಸ್ಕಾರ ಮಾಡಿದ್ದಾನೆ. ಆದರೆ ನಂತರ ಬಾಲಕಿಯ ತಂದೆ-ತಾಯಿ ಪೊಲೀಸರಿಗೆ ಎಲ್ಲವನ್ನೂ ವಿವರಿಸಿದ್ದಾರೆ. ತಮ್ಮ ಮಗಳ ಮೇಲೆ ರೇಪ್? ಮಾಡಿ, ಹತ್ಯೆ ಮಾಡಲಾಗಿದೆ ಎಂದು ಅವರು ಆರೋಪ ಮಾಡಿದ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಚಿತಾಗಾರ ಸುತ್ತಲಿನ ಹಳ್ಳಿಗಳ ಸುಮಾರು ೨೦೦ ಜನರು ಪ್ರತಿಭಟನೆ ನಡೆಸುತ್ತಿದ್ದು, ಬಾಲಕಿಯ ಸಾವಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸುತ್ತಿದ್ದಾರೆ.

 

× Chat with us