ಪ್ರತಿಫಲ ಬಯಸದ ಪರೋಪಕಾರಿ; ಕಾಯಕ ರತ್ನಗಳು

ಪ್ರತಿಫಲ ಬಯಸದ ಪರೋಪಕಾರಿ
ಪ್ರಾಣಿಗಳ ನೋವಿಗೂ ಮಿಡಿಯುವ ಹೃದಯವಂತ ಬಸವರಾಜು
ಜಡಿ ಮಳೆಯ ರಾತ್ರಿ! ನಂಜನಗೂಡಿನ ನಿಲ್ದಾಣದಲ್ಲಿ ಚಾಲನೆಯಲ್ಲಿದ್ದ ರೈಲು ಹಿಡಿಯ ಹೋಗಿ, ಕಾಲು ಜಾರಿ ಬಿದ್ದು, ಕೈ ಕಳೆದುಕೊಂಡು, ರಕ್ತದ ಕೋಡಿಯೊಡನೆ ತೆವಳುತ್ತಾ ಬಿದ್ದಿದ್ದ ವ್ಯಕ್ತಿಯೋರ್ವ ರಕ್ಷಿಸೀ.. ಎಂದು ಅಂಗಲಾಚುತ್ತಿದ್ದರೂ ಸುತ್ತಲಿದ್ದವರ‍್ಯಾರು ಆತನ ರಕ್ಷಣೆಗೆ ಮುಂದಾಗುತ್ತಿರಲಿಲ್ಲ.

ವಿದ್ಯಾಂವತರು ನೋವಿನ ಚಿತ್ರೀಕರಣದಲ್ಲಿ ಮಗ್ನರಾಗಿದ್ದರು. ಆತನಿಂದು ಬದುಕಿರುವುದಾದರೆ ‘ಸ್ನೇಕ್ ಬಸವರಾಜು’ ಎಂಬ ಒಬ್ಬ ಕರುಣಾಮಯಿ ಧೀರನಿಂದಷ್ಟೇ! ನಂಜನಗೂಡಿನ ಸುತ್ತಮುತ್ತಲ ಗ್ರಾಮಗಳಲ್ಲಿ ಈ ಹೆಸರು ಚಿರಪರಿಚಿತ. ಸ್ನೇಕ್ ಎಂಬ ಒಕ್ಕಣೆ ಜೊತೆಗೂಡಿದ್ದರೂ ಜಟಿಲವಾದ ಕೆಲಸವೆನೇ ಇರಲಿ, ಜಟಿಲವಾದ ಕೆಲಸವೆಲ್ಲವೂ ಇವರಿಂದ ಸಾಧ್ಯ ಎಂಬ ಮಾತು ಚಾಲ್ತಿಯಲ್ಲಿದೆ. ಇವರ ಅಸ್ತಿತ್ವಕ್ಕೊಂದು ವೈಶಿಷ್ಟ್ಯವೂ ಇದೆ.

ಬಸವರಾಜು ಪ್ರತಿಷ್ಠಿತ, ಸಿರಿವಂತ, ಪ್ರಭಾವೀ ರಾಜಕೀಯ ವ್ಯಕ್ತಿಯಲ್ಲ. ನಿರರ್ಗಳ ಮಾತುಗಾರರಲ್ಲ. ಪ್ರಬಲ ಜಾತಿ ಜನಾಂಗಕ್ಕೂ ಸೇರಿದವರಲ್ಲ. ಅಷ್ಟೇ ಏಕೆ? ಜೀವನದಲ್ಲಿ ಒಂದಕ್ಷರ ಎದೆಗಿಳಿಸಿಕೊಳ್ಳಲೂ ಅವಕಾಶವಿಲ್ಲದೇ ಬಡತನ ಹಾಗೂ ಕಹಿ ಬಾಲ್ಯದ ಚಾದರವನ್ನೇ ಹೊದ್ದುಕೊಂಡು ಬದುಕಿದವರು. ತನ್ನ ಓರಗೆಯವರು ಜಿಗಿದಾಡುತ್ತಾ ಶಾಲೆಗೆ ಹೋಗುತ್ತಿದ್ದರೆ, ಉಳ್ಳವರ ಮನೆಯಲ್ಲಿ ಜೀತದಾಳಾಗಿ ದುಡಿಯಬೇಕಾಗಿದ್ದ ದುಃಸ್ಥಿತಿ ಈ ಬಾಲಕನದ್ದಾಗಿತ್ತು! ಶೋಷಣೆಯ ಕಥಾ ಹಂದರವಿರುವ ‘ಮೂಗನ ಸೇಡು’ ಎಂಬ ಹಳೆಯ ಚಲನಚಿತ್ರ ಚಿತ್ರೀಕರಣವಾದದ್ದು ಆ ಮನೆಯಲ್ಲೇ ಎಂಬುವುದೊಂದು ಕಾಕತಾಳೀಯಷ್ಟೇ! ಹೆತ್ತವರಲ್ಲದೇ, ತನ್ನವರೊಡನೆ ರಕ್ತ ಹಂಚಿಕೊಂಡಿದ್ದ ಅಕ್ಕ, ತಂಗಿ, ತಮ್ಮ ಈ ಐವರು ಒಬ್ಬೊಬ್ಬರಾಗಿ ಮೃತ್ಯುವಿನ ಪಾಲಾಗಿ ಹೋದರು.

ಉಳಿದವಳು ಅಕ್ಕ ಮಾತ್ರ! ಮೈಸೂರು ಅರಸರ ಕಾಲದಲ್ಲಿ ನೃತ್ಯಗಾರ್ತಿಯರ ಕಾಲ್ಗೆಜ್ಜೆ, ದನ-ಕರುಗಳ ಕೊರಳ ಗೆಜ್ಜೆ-ಗಂಟೆ ಪೋಣಿಸುವ ಕುಲಕಸುಬು ಹೊಂದಿದ್ದ, ಅತ್ಯಂತ ಕಡಿಮೆ ಜನಸಂಖ್ಯೆಯ ‘ಗೆಜ್ಜೆಗಾರ ಶೆಟ್ಟಿ’ ಜನಾಂಗ ಬಸವರಾಜುರವರದ್ದು. ಕುಲಕಸುಬು ನಾಶವಾಗಿ, ಅನಿವಾರ್ಯವಾಗಿ ಮರಗೆಲಸ, ಕುಲುಮೆ, ವೆಲ್ಡಿಂಗ್ ಶಾಪ್ ಇತ್ಯಾದಿಗಳನ್ನು ಈ ಜನಾಂಗ ನಡೆಸುತ್ತಿದೆ. ಬಸವರಾಜು ಕೂಡ ಮರಗೆಲಸ ಮಾಡುತ್ತಾ, ನಡುನಡುವೆ ಕಾರು ಚಾಲಕರಾಗಿಯೂ ದುಡಿದು ತನ್ನ ಸಂಸಾರದ ರಥವೆಳೆಯುತ್ತಿದ್ದಾರೆ. ತನ್ನಂತೆ ತನ್ನ ಮಕ್ಕಳು ಅಕ್ಷರ ವಂಚಿತರಾಗಬಾರದು ಎಂದು ನಿಗಾವಹಿಸಿದ್ದರಿಂದ ಹಿರಿಯ ಮಗ ಬಿ.ಕಾಂ. ಪದವಿಯ ಅಂಚಿನಲ್ಲಿದ್ದಾನೆ.

ಬಸವರಾಜು ‘ಸ್ನೇಕ್ ಬಸವರಾಜು’ ಆಗಿದ್ದೇ ಒಂದು ಅನಿವಾರ್ಯ ಪರಿಸ್ಥಿತಿಯಲ್ಲಿ. ಒಮ್ಮೆ ಇವರ ಮನೆಗೆ ನಾಗರಾಜ ನುಗ್ಗಿದ್ದ. ಆ ಸಂದರ್ಭದಲ್ಲಿ ಉರಗ ರಕ್ಷಕರನ್ನು ಕಾದು ಕಾದು ಬಸವಳಿದು ತಾನೇ ಧೈರ್ಯವಹಿಸಿ ನಾಗರಾಜನ ಸಾಂಗತ್ಯ ಬೆಳೆಸಿದ್ದೇ! ಅಲ್ಲಿಂದೀಚೆಯ ಹತ್ತು ವರ್ಷಗಳಲ್ಲಿ ಹೆಬ್ಬಾವು, ಕೊಳಕುಮಂಡಲ, ನಾಗರಹಾವು, ಕೇರೆಹಾವು, ಕಟ್ಟುಹಾವು, ನರಿಮುಖದ ಹಾವು ಇತ್ಯಾದಿ ಪ್ರಭೇದಗಳ ಸುಮಾರು ಆರು ಸಾವಿರ ಹಾವುಗಳನ್ನು ರಕ್ಷಿಸಿರುವ ಇವರಿಗೆ ಜೀವ ಯಾವುದ್ದರದ್ದೇ ಆಗಿರಲಿ ಕೂಡಲೇ ಮಿಡಿಯುವ ಹೃದಯವಿದೆ.

ಕಾದಾಡಿ ಗಾಯಗೊಂಡಿರುವ ಕೋತಿ, ಪಕ್ಷಿ, ಗೋಸುಂಬೆ, ಹಾವುಗಳನ್ನೂ ಕೂಡ ಪಶುವೈದ್ಯರಲ್ಲಿಗೆ ಹೊತ್ತೊಯ್ದು ಔಷಧೋಪಚಾರ ನೀಡಿ, ಬದುಕುಳಿಸಿದ ನಿದರ್ಶನಗಳಿವೆ. ಹೆದ್ದಾರಿಯ ವೇಗದ ಅಮಲಿಗೆ ಕೈ-ಕಾಲು ಮುರಿಸಿಕೊಂಡಿರುವ ದನ-ಕರುಗಳಿಗೆ, ದೇವರ ಹರಕೆ ಗೂಳಿಗಳಿಗೆ, ಬೇಸಿಗೆಯಲ್ಲಿ ಕಾಲು-ಬಾಯಿ ರೋಗಕ್ಕೊಳಗಾಗಿ ಗುಣಪಡಿಸಲಾಗದಷ್ಟು ವ್ರಣ ಹಿಡಿದು ಗೊರಸುಗಳನ್ನು ಕಳೆದುಕೊಂಡಾಗ ಸ್ನೇಹಿತರ ಸಹಾಯದೊಡನೆ ಸ್ವಚ್ಛಗೊಳಿಸಿ, ಹುಳುಗಳನ್ನು ಹೊರತೆಗೆದು ಶುಶ್ರೂಷೆ ನೀಡಿ ಸಂತೈಸುವ ಇವರನ್ನು ಅವುಗಳ ‘ಆಪದ್ಬಾಂಧವ’ನೆಂದೇ ಕರೆಯಬಹುದು.

ಒಮ್ಮೆ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಪಿಲಾ ಸ್ನಾನಘಟ್ಟದ ಬಳಿ ಶೌಚಾಗೃಹದಿಂದ ಹೊರಟ ಆಳವಾದ ಮೋರಿಗೆ ಆಕಳೊಂದು ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿತ್ತು. ಆ ದುರ್ನಾತದ ಮೋರಿಗಿಳಿದು, ಹರಸಾಹಸದೊಡನೆ ಆಕಳನ್ನು ಮೇಲಕ್ಕೆತ್ತಿ ತಂದಿದ್ದರು ಬಸವರಾಜು. ಹೆತ್ತು-ಹೊತ್ತು ಸಾಕಿ ಸಲಹಿದ ತಂದೆ-ತಾಯಿಯರನ್ನೇ ಕಡೆಗಣಿಸಿ, ಕಡೆಗಾಲದಲ್ಲಿ ಹೊರತಳ್ಳುವ ‘ಸುಶಿಕ್ಷಿತ’ರ ನಡುವೆ ಅಂಗವಿಕಲ ಅಸಹಾಯಕ ಪ್ರಾಣಿಗಳ ಮೇಲೆ ಬಸವರಾಜುವಿನಂತೆ ಕರುಣೆ ತೋರುವವರು ಅಪರೂಪ.

ಎಲ್ಲವೂ ಹದವಾಗಿದ್ದಾಗ ಜನರ ಮೆಚ್ಚುಗೆ ಗಳಿಸಲೆಂದು ಮಾಡುವ ಕಾರ್ಯಗಳೂ ಉತ್ತಮವೇ. ಆದರೆ ತನ್ನನ್ನೂ, ತನ್ನವರನ್ನೂ ಸಾಕುವುದೇ ದುಸ್ತರವಾಗಿ ದುರಂತದ ಸುಳಿಯಲ್ಲೇ ಸುತ್ತುತ್ತಿದ್ದರೂ, ಯಾವ ಫಲಾಪೇಕ್ಷೆಗಳಿಲ್ಲದೆ ಈ ಪ್ರಪಂಚವೇ ನನ್ನದೆಂಬ ಭಾವನೆಯಲ್ಲಿ ತೃಪ್ತಿ ಕಾಣುವುದು ಅತ್ಯುತ್ತಮ ಮಾದರಿ ಜೀವನವಾಗಿದೆ.

ಮನುಷ್ಯರೊಂದಿಗೂ ಸ್ನೇಹಮಯಿ ಬಸವರಾಜುರವರ ಒಡನಾಟ ಅತ್ಯಂತ ವಾತ್ಸಲ್ಯಪೂರ್ಣವಾದದ್ದು. ಇದುವರೆಗೂ ಸುಮಾರು ೨೫ಕ್ಕೂ ಹೆಚ್ಚು ಪಾರ್ಶ್ವವಾಯುಪೀಡಿತರನ್ನು ಮೈಸೂರಿನ ವೈದ್ಯರಲ್ಲಿಗೆ ಕರೆತಂದು ಗುಣಪಡಿಸಿ, ಅವರ ಯೋಗಕ್ಷೇಮದ ಅನುಸರಣೆಯನ್ನು ಮಾಡುತ್ತಿದ್ದಾರೆ. ವರ್ಷಕ್ಕೆ ಕನಿಷ್ಠ ನಾಲ್ಕು ಬಾರಿಯಾದರೂ ರಕ್ತದಾನ ಮಾಡುವುದರೊಡನೆ ಇತರರಿಂದಲೂ ರಕ್ತದಾನ ಮಾಡಿಸುವ ಪವಿತ್ರ ಕಾರ್ಯವನ್ನು ಚಾಚೂತಪ್ಪದೇ ನೆರವೇರಿಸುತ್ತಿದ್ದಾರೆ.

ರಸ್ತೆ ಬದಿಯಲ್ಲಿ ಆಹಾರ, ಬಟ್ಟೆ ಇಲ್ಲದೇ ಪರಿತಪಿಸುವವರಿಗೆ ತಮ್ಮ ಸ್ನೇಹಿತರೊಡಗೂಡಿ ಸಹಾಯಸ್ತ ಚಾಚುತ್ತಾ, ಮಾನವೀಯ ವ್ಯವಸ್ಥೆಯ ಮೇಲಿನ ನಂಬಿಕೆಗಳಿಗೆ ಜೀವ ತುಂಬುತ್ತಿದ್ದಾರೆ. ಶವಸಂಸ್ಕಾರಗಳಲ್ಲಿ ಹೆಣ ಹೂಳುವ ಗುಂಡಿ ತೋಡಿಕೊಟ್ಟು ಬಡ ಜನರಿಗೆ ನೆರವಾಗುತ್ತಾರೆ. ಇದಲ್ಲದೇ ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯ ಕಾರ್ಯಗಳಿಗೆ ಸಹಕರಿಸುತ್ತಾ, ಗಿಡ-ಮರಗಳನ್ನು ನೆಡುತ್ತಾ, ಸಮುದಾಯದೊಳಗೆ ತಮ್ಮ ಪ್ರಾತಿನಿಧ್ಯತೆಯನ್ನು ಕಂಡುಕೊಂಡಿದ್ದಾರೆ.

ಹುಟ್ಟಿನಿಂದ ಯಾರೂ ಶ್ರೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ. ತಮ್ಮ ಆಲೋಚನಾ ಕ್ರಮಗಳು, ಭಾವನೆಗಳು ಹಾಗೂ ಕಾಯಕದಿಂದಾಗಿಯಷ್ಟೇ ಮನುಷ್ಯ ಅಗ್ರಸ್ಥಾನಕ್ಕೇರುತ್ತಾನೆ ಅಥವಾ ಅಲ್ಪನೆನಿಸಿಕೊಳ್ಳುತ್ತಾನೆ. ಉತ್ತಮ ಕಾರ್ಯ ಮಾಡಲು ವ್ಯವಸ್ಥೆಯಾಗಲೀ, ವೇದಿಕೆಯಾಗಲೀ ಅಗತ್ಯವಿಲ್ಲ ಎಂಬುದನ್ನು ನಿದರ್ಶನವಾಗಿರಿಸಿದ ಬಸವರಾಜುರವರ ಯಶೋಗಾಥೆಯನ್ನು ಗುರುತಿಸಿ, ಪುರಸ್ಕರಿಸುವ ದೃಷ್ಟಿ ಫಲಾನುಭವಿ ಸಮಾಜಕ್ಕಿರಬೇಕಾಗಿದೆ.

ಒಡನಾಡಿ ಸ್ಟ್ಯಾನ್ಲಿ

× Chat with us