ಪ್ರಚಾರದ ಹಂಗಿಲ್ಲದೆ ಅಕ್ಷರ ಸೇವೆ ಸಲ್ಲಿಸುತ್ತಿರುವ ದಂಪತಿ: ಕಾಯಕ ರತ್ನಗಳು

ಆರ್ಥಿಕ ಸುಸ್ಥಿರತೆ ಇಲ್ಲದ ಮಕ್ಕಳ ಶಿಕ್ಷಣಕ್ಕೆ ಸಹಕರಿಸುವ “ ಸೇತು ಬಂಧನ”

ಕಳೆದೆರಡು ದಶಕಗಳಿಂದ ಮೈಸೂರಿನ ಹಣತೆಯೊಂದರಿಂದ ಜ್ಯೋತಿಯೊಂದು ಸತ್ಪಾತ್ರರನ್ನು ಅರಸುತ್ತಾ ನಿರಂತರ ಚಲನೆಯಲ್ಲಿ ಹರಿದಾಡುತ್ತಿದೆ ಎಂಬುದು ಬಹುತೇಕರಿಗೆ ತಿಳಿದಿರಲಾರದು. ಈ ದೀವಟಿಕೆಗಳನ್ನೆತ್ತಿ ಹಿಡಿದಿರುವ ಕೈಗಳು ಪ್ರಚಾರವನ್ನು ಪ್ರಯತ್ನಪೂರ್ವಕವಾಗಿಯೇ ದೂರ ತಳ್ಳುತ್ತಾ ಬಂದಿವೆ. “ಪ್ರಚಾರ ಪಡೆಯುವಷ್ಟು ಹಿರಿದಾದ ಕಾರ್ಯವನ್ನೇನೂ ನಾವು ಇದುವರೆಗೂ ಮಾಡಿರುವುದಿಲ್ಲ” ಎಂದು ಸಂಕೋಚದಿಂದಲೇ ನುಡಿಯುವ ಈ ಹಿರಿಯ ದಂಪತಿಯ ಮಾದರಿ ಬಾಳ್ವೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಇವರ ಅನನ್ಯ ಕೊಡುಗೆ ಅತ್ಯಂತ ಅನುಕರಣೀಯವಾದುದಾಗಿದೆ. ಶಿಕ್ಷಣ ಸಂಸ್ಥೆಗಳು, ಜನಪ್ರತಿನಿಧಿಗಳು, ಹಣವುಳ್ಳ ಉದ್ಯಮಿಗಳೂ ಮಾಡಲಾಗದ ಶೈಕ್ಷಣಿಕ ಕ್ರಾಂತಿಯೊಂದರ ಬೀಜವನ್ನು ಜೀವನ ಸಂಧ್ಯಾ ಸಮಯದಲ್ಲಿರುವ ಜೀವಗಳೆರಡು ಮಮಕಾರದೊಡನೆ ಬಿತ್ತಿ, ಜತನದಿಂದ ಪೋಷಿಸುತ್ತಿವೆ.

ಈ ದಂಪತಿಯ ಬಗ್ಗೆ ಅಲ್ಲಲ್ಲಿ ಪ್ರಸ್ತಾಪಗಳಾಗುತ್ತಿದ್ದರೂ ಅವರ‍್ಯಾರು ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿಯಿರಲಿಲ್ಲ. ಯಾರೋ ನಿವೃತ್ತ ಮೇಷ್ಟ್ರೊಬ್ಬರು ಶಾಲೆಗಳಿಗೆ ತೆರಳಿ ಅಲ್ಲಿಯ ಎಸ್‌ಎಸ್‌ಎಲ್‌ಸಿ ಅಂಚಿನಲ್ಲಿರುವ ವಿದ್ಯಾರ್ಥಿಗಳ ಕಲಿಕೆಗೆ ಪೇರಣೆ ನೀಡುತ್ತಿದ್ದಾರೆ ಎಂದಷ್ಟೇ ತಿಳಿದಿದ್ದೆ. ಆದರೆ ಅವರ ಅಂತರಾಳದ ದೂರಗಾಮಿತ್ವ ಬರಿಗಣ್ಣಿಗೆ ಮಾತ್ರ ಕಾಣಿಸುತ್ತಿರಲಿಲ್ಲ. ಮೈಸೂರಿನ ಅಂಚಿನಲ್ಲಿರುವ ಸರ್ಕಾರಿ ಕನ್ನಡ ಶಾಲಾ ಮಕ್ಕಳಿಗೆ ಕಬ್ಬಿಣದ ಕಡಲೆಯಂತಾಗಿರುವ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನವನ್ನು ಸರಳೀಕರಿಸಿಕೊಟ್ಟು, ಭಯದ ಬದಲು ಆತ್ಮವಿಶ್ವಾಸದೊಡನೆ ಪರೀಕ್ಷೆ ಬರೆಯಿಸುವ ಕಾಯಕದೊಡನೆ ಎಳೆಯರ ಏಳ್ಗೆಯಲ್ಲಿ ಅದ್ಭುತಗಳನ್ನೇ ಸೃಷ್ಟಿಸಿದ್ದಾರೆ.

“ನೋಡಪ್ಪ ನಾನೊಂದು ಪ್ರಿನ್ಸಿಪಲ್ ಇಟ್ಟುಕೊಂಡಿದ್ದೇನೆ. ನನ್ನ ಹೆಸರಾಗಲೀ, ಫೋಟೋ ಆಗಲೀ ಎಲ್ಲೂ ಬರುವುದು ನನಗಿಷ್ಟವಿಲ್ಲ. ಈಗ ನಾನೇ ಒಂದು ಪುಸ್ತಕವನ್ನು ಬರೆದಿದ್ದೇನೆ. ಅದು ಕೂಡ ‘ಸೇತು ಬಂಧನ’ದ ಹೆಸರಿನಲ್ಲಿರುತ್ತೆ. ಈ ಮೌಲ್ಯವನ್ನು ಪುರಸ್ಕರಿಸುವುದಾದರೆ ಮಾತ್ರ ಲೇಖನ ಮಾಡಿ” ಎಂದು ಖಡಕ್ಕಾಗಿಯೇ ಷರತ್ತು ವಿಧಿಸಿದ ಆ ಜೀವಕ್ಕೀಗ ಎಂಬತ್ತರ ಹರಯ!

ಸಾಧಾರಣ ಚಪ್ಪಲಿ, ಶರ್ಟು, ಪೈಜಾಮ ತೊಟ್ಟು, ಸದಾ ಪುಸ್ತಕ, ಪುರಿಗಡಲೆ, ಬಟಾಣಿ ಪೆಪ್ಪರ್‌ಮೆಂಟ್‌ಗಳಿರುವ ಸಂಚಿಯೊಂದನ್ನು ಹೆಗಲಿಂದ ಇಳಿಬಿಟ್ಟು, ಶಾಲೆಯಿಂದ ಶಾಲೆಗೆ ಓಡಾಡುವ ಇವರು ಕಳೆದ ಇಪ್ಪತ್ತು ವರ್ಷಗಳಿಂದ ಮೈಸೂರಿನ ಬೋಗಾದಿ ಬಡಾವಣೆಯಲ್ಲಿ ನೆಲೆಯೂರಿದ್ದಾರೆ. ಇವರ ಸರಳತೆ ಎಷ್ಟಿದೆಯೆಂದರೆ ನಾವಾಗಿಯೇ ಅವರ ಇತಿಹಾಸ ಕೆದಕದಿದ್ದರೆ ದಂಪತಿಗಳಿಬ್ಬರೂ ಮುಂಬೈನ ‘ಬಾಬಾ ಆಟೋಮಿಕ್ ರೀಸರ್ಚ್ ಇನ್‌ಸ್ಟಿಟ್ಯೂಟ್’ನಲ್ಲಿ ವಿಜ್ಞಾನಿಗಳಾಗಿದ್ದವರು ಎಂಬುದು ಗೊತ್ತೇ ಆಗದು! ವಿಜ್ಞಾನವೇ ಇವರ ಜೀವನದ ಬೇರು.
ಇವರು ಸುತ್ತಮುತ್ತಲಿನ ಸಾಮಾನ್ಯ ಶಾಲೆಗಳಲ್ಲಿ ವಿಜ್ಞಾನ ವಿಷಯಗಳ ಬಗ್ಗೆ ಬೋಧನೆ ಮಾಡುತ್ತಾ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಮಾನಸಿಕ ಒತ್ತಡಗಳಿಂದ ಬಿಡಿಸಿ ತರುತ್ತಿದ್ದಾರೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಂಕಷ್ಟಗಳಲ್ಲಿರುವ ವಿದ್ಯಾರ್ಥಿಗಳನ್ನು ಆಯ್ದುಕೊಂಡು ಅವರಿಗೆ ಇಂಗ್ಲಿಷ್ ಭಾಷೆ, ಭೌತಶಾಸ್ತ್ರ ಹಾಗೂ ಗಣಿತದ ಮೇಲೆ ಇರುವ ಭಯವನ್ನು ನಿವಾರಿಸಿ, ಮುನ್ನುಗ್ಗಲು ಬೆನ್ನುತಟ್ಟಿ ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದಾರೆ.

ಇದಲ್ಲದೆ, ವರ್ಷದಲ್ಲಿ ಸುಮಾರು ಹದಿನೈದು ಮಂದಿ ಆಯ್ದ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ದತ್ತು ಪಡೆದು, ಅವರ ಶಾಲಾ ಕಾಲೇಜಿನ ಎಲ್ಲ ಶುಲ್ಕಗಳನ್ನೂ ಪಾವತಿಸಿ ಹಲವರಿಗೆ ಊಟೋಪಚಾರ, ಪುಸ್ತಕಗಳಿಗೆ ವ್ಯವಸ್ಥೆ ಮಾಡುತ್ತಾರೆ. ಅಲ್ಲದೆ, ಕಾಲೇಜಿನಲ್ಲೂ ಆ ವಿದ್ಯಾರ್ಥಿಗಳ ವ್ಯಾಸಂಗದ ಕಾರ್ಯಕ್ಷಮತೆಯತ್ತ ಗಮನಹರಿಸುತ್ತಾರೆ. ಜತೆಗೆ ಆ ಮಕ್ಕಳನ್ನು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಎಂಬ ಮಹಾ ಪ್ರವಾಹಗಳನ್ನು ದಾಟಿಸಲು ತಮ್ಮದೇ ಆದೊಂದು ತೆಪ್ಪದೊಡನೆ ತಾವೇ ಹುಟ್ಟುಹಾಕುತ್ತಿದ್ದಾರೆ. ಇದುವರೆಗೆ ಸುಮಾರು ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅದರಲ್ಲೂ ಹೆಚ್ಚಾಗಿ ಹೆಣ್ಣುಮಕ್ಕಳು ಈ ತೆಪ್ಪದ ಮೂಲಕ ದಡ ಸೇರಿದ್ದಾರೆ ಎಂದರೆ ಸಣ್ಣ ವಿಚಾರವಲ್ಲ.

ತಮ್ಮಿಬ್ಬರ ಪಿಂಚಣಿ ಹಣವನ್ನಷ್ಟೇ ನಂಬಿ ಒಂದಿಬ್ಬರು ಸಮಾನ ಮನಸ್ಕ ವೈದ್ಯರು ಹಾಗೂ ಲೆಕ್ಕಿಗರ ಜೊತೆಗೂಡಿ ‘ಸೇತು ಬಂಧನ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಅದಕ್ಕೆ ಯಾವುದೇ ಪ್ರಚಾರವಾಗಲಿ, ಯಶಸ್ಸಿನ ಕಿರೀಟವಾಗಲೀ ತಲೆಗೇರದಂತೆ ಜಾಗ್ರತೆ ವಹಿಸಿದ್ದಾರೆ! “ಹಣ ಸಂಪಾದನೆಯನ್ನೇ ಗುರಿಯಾಗಿಸಿಕೊಂಡು ನಡೆಯುವ ಟ್ಯುಟೋರಿಯಲ್‌ಗಳಿಗೆ ಜನರು ಮಾರುಹೋಗುತ್ತಾರೆ. ಉಚಿತವಾಗಿ ಸೇವೆ ಸಲ್ಲಿಸುವ ನಮ್ಮಂತಹವರ ಬಳಿ ಬರಲು ನೂರು ಬಾರಿ ಯೋಚಿಸುವುದು ವಿಪರ್ಯಾಸ. ಮೈಸೂರಿನಲ್ಲಿ ವಿದ್ಯಾವಂತರಿದ್ದರೂ ಮುಂಬೈನ ಜನರಿಗಿರುವ ಸಾಮಾಜಿಕ ಬದ್ಧತೆ ಇಲ್ಲಿಲ್ಲ. ಬರ‍್ತೀವಿ, ಮಾಡೋಣ, ನೋಡೋಣ ಅನ್ನೋರೆ ಜಾಸ್ತಿ. ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ಗಳಿಗೆ ಹಣಕಾಸು ಸಹಾಯ ಮಾಡುವ ಮಟ್ಟದಲ್ಲಿ ನಾವಿಲ್ಲ. ಕೊರೊನಾ ಬಂದಾಗಿನಿಂದ ವಯಸ್ಸಾದ ನಾವು ಹೆಚ್ಚು ಓಡಾಡಲಿಕ್ಕೆ ಆಗ್ತಿಲ್ಲ. ನಮ್ಮಲ್ಲಿಗೆ ಬರುವವರನ್ನಷ್ಟೇ ಗಮನಿಸುವಂತಾಗಿದೆ” ಎಂದು ಚಿಂತೆಯಿಂದ ನುಡಿಯುತ್ತಾರೆ.

ಮಾನಸ ಗಂಗೋತ್ರಿ, ದಾರಿದೀಪ, ಹೇಮಾವತಿ, ಕುವೆಂಪು ಶಾಲೆ, ವನಿತಾ ಸದನ, ಅಶೋಕಪುರಂ, ಐಟಿಐ, ಜೆಎಸ್‌ಎಸ್ ಪಾಲಿಟೆಕ್ನಿಕ್ ಇತ್ಯಾದಿ ವಿದ್ಯಾ ಸಂಸ್ಥೆಗಳಲ್ಲಿ ಇವರ ಸೇವಾಕಾರ್ಯ ಚಿರಪರಿಚಿತ. “ಬೇರೆ ವಿಷಯಗಳಂತೆ ವಿಜ್ಞಾನಕ್ಕೆ ವಾಮಮಾರ್ಗಗಳಿಲ್ಲ. ಆದ್ದರಿಂದ ತಳಮಟ್ಟದಿಂದಲೇ ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಭೌತ ವಿಜ್ಞಾನಿಯೊಬ್ಬನಿಗೆ ಭೌತಶಾಸ್ತ್ರ, ಗಣಿತ, ಇಂಗ್ಲಿಷ್ ಹಾಸುಹೊಕ್ಕಾದ ವಿಷಯಗಳಾಗಿರುತ್ತವೆ. ಅದು ನನಗೂ ಅನ್ವಯವಾಗುತ್ತದೆ. ಹಾಗಾಗಿ ಆಸಕ್ತರಿಗೆ ಹಂಚುತ್ತಾ, ಬದಲಾವಣೆ ಕಾಣುತ್ತಿದ್ದೇನೆ. ಭಾಷಾ ತೊಡಕು ಸಂಸ್ಥೆಗಳಲ್ಲಿನ ತಳiಟ್ಟದ ಉದ್ಯೋಗಿಗಳನ್ನೂ ಬಿಟ್ಟಿಲ್ಲವಾಗಿ ಅವರಿಗೂ ವ್ಯಾವಹಾರಿಕ ಇಂಗ್ಲಿಷನ್ನು ಹೇಳಿಕೊಡುತ್ತಿದ್ದೇನೆ. ಕಲಿಕೆಯ ಪ್ರಾರಂಭದಲ್ಲಿ ಸ್ವಲ್ಪ ಕಷ್ಟವೆನಿಸಿದರೂ ಕೊನೆಯಲ್ಲಿ ಒಳ್ಳೆಯ ಫಲಿತಾಂಶ ಸಿಕ್ಕಿದೆ.

ಏನಿಲ್ಲವಾದರೂ ಅನುತ್ತೀರ್ಣವಾಗುವವರ ಸಂಖ್ಯೆ ಕಡಿಮೆಯಾಗಿ ಸಮಾಧಾನ ತಂದಿದೆ. ‘ಕಲಿ-ಕಲಿಸು’ ಎಂಬ ತತ್ವದಡಿ ಪಠ್ಯಪುಸ್ತಕವನ್ನು ನಾನು ಮೊದಲು ಅಧ್ಯಯನ ಮಾಡಿ, ನಂತರದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತೇನೆ. ಮಾಹಿತಿ ತಂತ್ರಜ್ಞಾನ ನನಗೇ ಹೊಸತಾಗಿರುವುದರಿಂದ ಕೆಲವು ವಿದ್ಯಾರ್ಥಿಗಳು ನನ್ನನ್ನೂ ಸೇರಿದಂತೆ ಉಳಿದವರಿಗೆ ಪಾಠ ಮಾಡುತ್ತಾರೆ. ನನಗೆ ವಿಜ್ಞಾನದ ತಳಹದಿ ಇರುವುದರಿಂದ ಮಕ್ಕಳಿಂದಲೇ ಬೇಗ ಕಲಿತು ಉಳಿದವರಿಗೆ ತಿಳಿಸಿಕೊಡುತ್ತಿದ್ದೇನೆ. ಅನೇಕರು ಇವತ್ತು ಒಳ್ಳೆಯ ಉದ್ಯೋಗಗಳಲ್ಲಿದ್ದಾರೆ. ಮದುವೆಯಾಗಿ ತಮ್ಮ ಮಕ್ಕಳೊಡನೆ ಬಂದು ನಮ್ಮ ಯೋಗಕ್ಷೇಮ ವಿಚಾರಿಸಿ ಹೋಗುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ಈ ಪ್ರೀತಿಗಿಂತ ಇನ್ನೇನು ಬೇಕು? ಅವರುಗಳಲ್ಲಿನ ಪ್ರಗತಿ ನಮ್ಮ ಬದುಕಿಗೊಂದು ಅರ್ಥ ನೀಡಿದೆ” ಎಂದು ಹೇಳುವ ನಮ್ಮ ‘ಸೇತು ಬಂಧನ’ದ ನಿರ್ಮಾತೃ ಹಡೆಯದೇ ನೂರಾರು ಮಕ್ಕಳನ್ನು ಪಡೆದವರು. “ಸಣ್ಣದೋ, ದೊಡ್ಡದೊ! ಧರ್ಮದ ಹಾದಿಯಲ್ಲಿ ಪ್ರತಿಯೊಬ್ಬ ಮನುಷ್ಯನೂ ಇತರರ ಒಳಿತಿಗಾಗಿ ಒಂದಿಷ್ಟು ಅಳಿಲುಸೇವೆ ನೀಡುವುದು ಬಹಳ ಮುಖ್ಯ” ಎನ್ನುತ್ತಾ, ತಮ್ಮ ಕಾಯಕದ ಸಂಚಿಯನ್ನೇರಿಸಿ ‘ಸೇತು ಬಂಧನ’ದ ಹಾದಿಯಲ್ಲಿ ಮತ್ತೆ ನಡೆಯತೊಡಗಿದರು.

ಒಡನಾಡಿ ಸ್ಟ್ಯಾನ್ಲಿ

× Chat with us