ಸಿನಿಮಾ ಸ್ಟೈಲ್​ನಲ್ಲಿ ಮೊಬೈಲ್ ಕಳ್ಳರನ್ನ ಚೇಸ್ ಮಾಡಿ ಹಿಡಿದ ಮೈಸೂರು ಕಾನ್ಸ್​ಟೇಬಲ್

ಮೈಸೂರು: ಕಾನ್ಸ್ಟೇಬಲ್ ಒಬ್ಬರು ಸಿನಿಮೀಯ ಶೈಲಿಯಲ್ಲಿ ಕಳ್ಳರನ್ನ ಹಿಡಿದಿದ್ದಾರೆ. ಕಾನ್ಸ್​ಟೇಬಲ್ ಲಿಂಗರಾಜು ಎಂಬುವವರು ಇಬ್ಬರು ಮೊಬೈಲ್ ಕಳ್ಳರನ್ನು ಚೇಸ್ ಮಾಡಿ ಹಿಡಿದ ಬಳಿಕ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಉದ್ಯಾನವನದಲ್ಲಿ ಕುಳಿತಿದ್ದ ವ್ಯಕ್ತಿಯಿಂದ ಇಬ್ಬರು ಕಳ್ಳರು ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ಈ ವೇಳೆ ವ್ಯಕ್ತಿ ಕೂಗಿದ್ದಾರೆ. ಕೂಗಾಟ ಕೇಳಿದ ಲಿಂಗರಾಜು, ಇಬ್ಬರು ಕಳ್ಳರನ್ನು ಚೇಸ್ ಮಾಡಿ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆರೋಪಿಗಳು ಮೈಸೂರಿನ ಉದ್ಬೂರು ಗ್ರಾಮದವರೆಂದು ತಿಳಿದುಬಂದಿದೆ.

ಈ ಹಿಂದೆ ಮಂಗಳೂರಿನಲ್ಲೂ ಇದೇ ರೀತಿ ಘಟನೆ ನಡೆದಿತ್ತು. ಮಲಗಿದ್ದ ವ್ಯಕ್ತಿಯ ಮೊಬೈಲ್, ಹಣವನ್ನು ಕದ್ದೊಯ್ಯುತ್ತಿದ್ದ ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಸೆರೆ ಹಿಡಿದಿದ್ದರು. ಮೊಬೈಲ್ ಕದ್ದೊಯ್ಯುತ್ತಿದ್ದ ಕಳ್ಳನನ್ನು ಬೆನ್ನಟ್ಟಿದ ಪೊಲೀಸರು ಕಳ್ಳನನ್ನು ನೆಲಕ್ಕೆ ಕೆಡವಿ ಸೆರೆಹಿಡಿದ್ದರು. ನಗರದ ನೆಹರು ಮೈದಾನದ ಬಳಿ ಇಬ್ಬರು ವ್ಯಕ್ತಿಗಳು ಕೂಗುತ್ತಿರುವುದನ್ನು ನೋಡಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದ ಸಿಬ್ಬಂದಿ ಗಮನಿಸಿದ್ದರು. ನಂತರ ವಿಷಯ ತಿಳಿದು ಕಳ್ಳನನ್ನು ಬೆನ್ನಟ್ಟಿದ್ದರು. ಈ ವೇಳೆ ಒಬ್ಬ ಆರೋಪಿ ಸೆರೆಯಾಗಿದ್ದನು. ಆತನ ಸಹಾಯದಿಂದ ಇನ್ನೊಬ್ಬ ಆರೋಪಿಯನ್ನು ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಂಗಳೂರು ಪೊಲೀಸರ ಕರ್ತವ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.