ಕೊಡಗು: ವ್ಯಾಕ್ಸಿನ್ ಮೊದಲ ಡೋಸ್‌ ಪಡೆದು ಆರಾಮಾಗಿ ಓಡಾಡಿಕೊಂಡಿದ್ದ 953 ಮಂದಿಗೆ ಕೊರೊನಾ!

ಮಡಿಕೇರಿ: ಕೊರೊನಾ ವ್ಯಾಕ್ಸಿನ್ ಪಡೆದು ಆರಾಮಾಗಿ ಓಡಾಡಿಕೊಂಡಿದ್ದ 953 ಮಂದಿಗೆ ಮತ್ತೆ ಕೊರೊನಾ ಸೋಂಕು ತಗುಲಿದೆ.

ಮೊದಲ ಡೋಸ್ ವ್ಯಾಕ್ಸಿನ್ ಪಡೆದು ನಿರಾತಂಕವಾಗಿ ಓಡಾಡಿಕೊಂಡಿದ್ದ ಕೊಡಗಿನ 953 ಜನರಿಗೆ ಮತ್ತೆ ಸೋಂಕು ತಗುಲಿದೆ. ಸೋಂಕಿನ ಲಕ್ಷಣ ಕಂಡುಬಂದವರನ್ನು ಪರೀಕ್ಷಿಸಿದಾಗ ಅವರಿಗೆಲ್ಲಾ ಸೋಂಕು ಇರುವುದು ದೃಢಪಟ್ಟಿದೆ. ಇದೀಗ ಸೋಂಕಿತರಿಗೆ ಆಸ್ಪತ್ರೆ ಮತ್ತು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಇಲ್ಲಿಯವರೆಗೂ ಸೋಂಕು ದೃಢಪಟ್ಟ ಪ್ರಕರಣಗಳು ಕಂಡುಬಂದಿಲ್ಲ ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದಾರೆ.

ಈಗಾಗಲೇ ಕೊರೊನಾ ಮೂರನೇ ಅಲೆ ಹರಡುವ ಆತಂಕದಲ್ಲಿ ಜಿಲ್ಲೆಯ ಗಡಿಭಾಗದಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಕೇರಳದಿಂದ ಬರುವವರಿಗೆ ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದೆ. ಆದರೂ ಈಗಾಗಲೇ ವ್ಯಾಕ್ಸಿನೇಷನ್ ಪಡೆದವರಿಗೆ ಸೋಂಕು ಮತ್ತೆ ಹರಡುತ್ತಿದೆ. ಅಷ್ಟೇ ಅಲ್ಲದೇ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಶೇಕಡಾ 0.5 ಒಳಗೆ ಇತ್ತು. ಆದರೆ ಶನಿವಾರ ಮತ್ತೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸ್ಛೋಟಗೊಂಡಿದ್ದು, ಪಾಸಿಟಿವ್ ದರ ಶೇಕಡಾ 2.84 ಏರಿಕೆಯಾಗಿದೆ.

× Chat with us