73ನೇ ಗಣರಾಜ್ಯೋತ್ಸವ: ಪರೇಡ್’ನಲ್ಲಿ ದೇಶದ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ

ಹೊಸದಿಲ್ಲಿ : 73ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ರಾಜಪಥದಲ್ಲಿ ನಡೆದ ಪರೇಡ್​ನಲ್ಲಿ ‘ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಹೆಸರಿನ ಕರ್ನಾಟಕದ ಸ್ತಬ್ಧ ಚಿತ್ರ ಎಲ್ಲರ ಗಮನಸೆಳೆಯಿತು.

ಬೆಂಗಳೂರಿನ ಅದಿತಿ ಉರಾಳ್​ ನೇತೃತ್ವದಲ್ಲಿ ಸ್ತಬ್ಧ ಚಿತ್ರ ಪ್ರದರ್ಶನ ನಡೆದಿದ್ದು, ಅದಿತಿ ಉರಾಳ್​ ಜೊತೆ 12 ಕಲಾವಿದರು ಹೆಜ್ಜೆ ಹಾಕಿದರು.

ಪರೇಡ್ ನಲ್ಲಿ ಕರ್ನಾಟಕದಿಂದ ಜಾಗತಿಕ ಮಾನ್ಯತೆ ಗಳಿಸಿದ ವಸ್ತುಗಳ ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲಾಯಿತು. ಶಶಿಧರ ಅಡಪ ಕೈಚಳಕದಲ್ಲಿ ಈ ಸ್ತಬ್ಧಚಿತ್ರ ಅರಳಿದ್ದು, ‘ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ವಿಷಯದ ಕುರಿತು ಈ ಸ್ತಬ್ಧಚಿತ್ರ ರೂಪಿಸಲಾಗಿದೆ.

ಸ್ತಬ್ಧಚಿತ್ರದ ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕೆತ್ತನೆಯ ಕಲಾಕೃತಿ, ಮಧ್ಯದಲ್ಲಿ ಕಣ್ಮನ ಸೆಳೆಯುವ ಬಿದರಿ ಕಲಾಕೃತಿ, ಕಿನ್ನಾಳ ಕಲಾ ವಸ್ತುಗಳು, ಕಂಚಿನ ಪ್ರತಿಮೆಗಳು, ಚೆನ್ನಪಟ್ಟಣದ ಮೆರುಗೆಣ್ಣೆಯ ಆಟಿಕೆಗಳು, ಮರಗೆತ್ತನೆ ಮತ್ತು ಕುಂಬಾರಿಕೆ ಹಾಗೂ ಹಿಂಬದಿಯಲ್ಲಿ ಪಾರಂಪರಿಕ ಕರಕುಶಲ ವಸ್ತುಗಳ ಜತೆಗೆ ಮಾತೆ ಕಮಲಾದೇವಿ ಇದ್ದಾರೆ. ಇವರು ಪಾರಂಪರಿಕ ಕರಕುಶಲ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ನೀಡಿದವರಾಗಿದ್ದಾರೆ.