ಕಾಂಗ್ರೆಸ್ ಪಕ್ಷಕ್ಕೆ ‘ಸಂಜೀವಿನಿ’ ಆದ 40% ಕಮಿಷನ್ ‘ರೋಗ’!

ಆರ್.ಟಿ.ವಿಠ್ಠಲಮೂರ್ತಿ
– ಬೆಂಗಳೂರು ಡೈರಿ

ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಕಾಮಗಾರಿಗಳನ್ನು ಮಾಡಿದರೂ ಹಣ ಬರುತ್ತಿಲ್ಲ. ಕೇಳಿದರೆ ನಲವತ್ತು ಪರ್ಸೆಂಟ್ ಕಮಿಷನ್ ಕೊಡುವಂತೆ ಹೇಳುತ್ತಿದ್ದಾರೆ. ಹೀಗಾಗಿ ನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರೇ ಕಾರಣ ಅಂತ ಸಂತೋಷ್ ಪಾಟೀಲ್ ಬರೆದ ಡೆತ್‌ನೋಟ್ ಕೈ ಪಾಳೆಯಕ್ಕೆ ಅಸ್ತ್ರವಾಗಿ ಸಿಕ್ಕಿತು. ಈ ಅಸ್ತ್ರವನ್ನು ಹಿಡಿದು ಅದು ಹೋರಾಟ ಆರಂಭಿಸಿದ ಕಾಲದಲ್ಲೇ ಅದರ ಬತ್ತಳಿಕೆಗೆ ಇನ್ನೆರಡು ಅಸ್ತ್ರಗಳು ಬಂದು ಬಿದ್ದವು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಒದಗಿಸಿದ ಈ ಅಸ್ತ್ರಗಳ ತೀಕ್ಷ್ಣತೆ ಕಡಿಮೆಯದ್ದೇನೂ ಅಲ್ಲ.
ನಲವತ್ತು ಪರ್ಸೆಂಟ್ ಕಮಿಷನ್‌ನ ಆರೋಪಕ್ಕೆ ಗುರಿಯಾಗಿ ಸಚಿವ ಈಶ್ವರಪ್ಪ ರಾಜೀನಾಮೆ ನೀಡಿದ ಬೆಳವಣಿಗೆ ಪ್ರತಿಪಕ್ಷ ಕಾಂಗ್ರೆಸ್ ಪಾಲಿಗೆ ಶಕ್ತಿಯಾಗಿ ಪರಿಣಮಿಸಿದೆ. ಈಶ್ವರಪ್ಪ ಅವರ ವಿರುದ್ಧ ಕಮಿಷನ್ ಆರೋಪ ಹೊರಿಸಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರಲ್ಲ. ಈ ವಿಷಯವನ್ನು ಹಿಡಿದು ಹೋರಾಟಕ್ಕಿಳಿದ ಕಾಂಗ್ರೆಸ್ ಸಚಿವ ಈಶ್ವರಪ್ಪ ರಾಜೀನಾಮೆ ಕೊಡದೆ ಬೇರೆ ದಾರಿಯೇ ಇಲ್ಲ ಎಂಬ ವಾತಾವರಣವನ್ನು ಸೃಷ್ಟಿಸಿತು. ಅಷ್ಟೇ ಅಲ್ಲ, ರಾಜೀನಾಮೆ ನೀಡಿದರೂ ಸುಮ್ಮನಾಗದೆ ಈಶ್ವರಪ್ಪ ಅವರನ್ನು ಬಂಧಿಸಬೇಕು ಅಂತ ಹೋರಾಟ ಮುಂದುವರಿಸಿತು.

ಅಂದ ಹಾಗೆ ಅದರ ಈ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ ಎಂಬುದು ಸ್ಪಷ್ಟ. ಏಕೆಂದರೆ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೇರಿದ ಕಾಲದಲ್ಲಿ ಇದ್ದಕ್ಕಿದ್ದಂತೆ ಏರಿದ ತನ್ನ ಜನಪ್ರಿಯತೆಯ ಗ್ರಾಫ್ ಅನ್ನು ಏರಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಅದು ವಿಫಲವಾಗಿತ್ತು. ಈ ಗ್ರಾಫ್ ಅನ್ನು ಉಳಿಸಿಕೊಳ್ಳಲು ಅದು ಮೇಕೆದಾಟು ಅಣೆಕಟ್ಟಿನ ವಿಷಯ ಹಿಡಿದುಕೊಂಡು ಹೋರಾಡಿತ್ತಾದರೂ ಅದು ನಿರೀಕ್ಷಿತ ಫಲ ನೀಡಿರಲಿಲ್ಲ.
ಹೀಗಾಗಿ ತನ್ನ ಮುಂದಿನ ಹೋರಾಟದ ಸ್ವರೂಪ ಹೇಗಿರಬೇಕು ಅಂತ ಅದು ಯೋಚಿಸುವಷ್ಟರಲ್ಲೇ ಅದರ ಲೆಕ್ಕಾಚಾರಕ್ಕೆ ವಿರುದ್ಧವಾದ ಬೆಳವಣಿಗೆಗಳು ನಡೆಯತೊಡಗಿದವು.
ಈ ಪೈಕಿ ಮೊದಲನೆಯದು ಹಿಜಾಬ್ ವಿವಾದ. ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬರುವುದಕ್ಕೆ ಕೇಳಿ ಬಂದ ವಿರೋಧ ಸುನಾಮಿಯಂತೆ ಹರಡಿಕೊಂಡಿತು. ಅಷ್ಟೇ ಅಲ್ಲ. ಈ ವಿಷಯದಲ್ಲಿ ಶುರುವಾದ ಪರ- ವಿರೋಧದ ಚರ್ಚೆಗಳ ನಡುವೆ ಕಾಂಗ್ರೆಸ್ ಪಕ್ಷ ಶಕ್ತಿ ಕಳೆದುಕೊಂಡಂತೆ ಭಾಸವಾಯಿತು.

ಇದರ ಬೆನ್ನಲ್ಲೇ ಶುರುವಾದ ಹಲಾಲ್, ವ್ಯಾಪಾರ ಸಂಘರ್ಷದಂತಹ ಬೆಳವಣಿಗೆಗಳು ಕರ್ನಾಟಕ ರಾಜಕೀಯ ಚಿತ್ರವೇ ಬದಲಾಗುತ್ತಿದೆ ಎಂಬ ಭಾವವನ್ನು ಮೂಡಿಸಿತು. ಅಷ್ಟೇ ಅಲ್ಲ, ಇಂತಹ ವಿಷಯಗಳಲ್ಲಿ ಕಾಂಗ್ರೆಸ್ ಏನೇ ಮಾತನಾಡಿದರೂ ಅದು ಹಿಂದೂ ವಿರೋಧಿ ನಿಲುವು ಎಂಬ ಪ್ರಚಾರ ಶುರುವಾಯಿತು. ಇಂತಹ ಬೆಳವಣಿಗೆಗಳಿಂದ ಕಾಂಗ್ರೆಸ್ ಬೆಚ್ಚಿ ಬಿದ್ದಿದ್ದು ನಿಜ.

ಒಂದು ಹಂತದಲ್ಲಿ ಹಿಜಾಬ್ ಪರವಾಗಿ ನಿಲ್ಲಲು ಮುಂದಾದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸ್ವಾಮೀಜಿಗಳೂ ತಲೆಯ ಮೇಲೆ ವಸ್ತ್ರ ಹೊದಿಯುವುದಿಲ್ಲವೇ? ಎಂದು ಪ್ರಶ್ನಿಸಿದಾಗ ಅವರ ನಿಲುವಿಗೆ ಬೆಂಬಲ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಅಳುಕಿದರು ಎಂಬುದನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.

ಗಮನಿಸಬೇಕಾದ ಸಂಗತಿ ಎಂದರೆ ಇಂತಹ ಕೋಮು ವಿಷಯಗಳು ಪಡೆಯುತ್ತಿದ್ದ ತೀವ್ರತೆಯ ನಡುವೆ ಬೆಲೆ ಏರಿಕೆ, ಭ್ರಷ್ಟಾಚಾರದಂತಹ ವಿಷಯಗಳನ್ನು ಮುಂದಿಟ್ಟು ಹೋರಾಡಲೂ ಕಾಂಗ್ರೆಸ್‌ನಿಂದ ಸಾಧ್ಯವಾಗಿರಲಿಲ್ಲ. ಇಂತಹ ಕಾಲದಲ್ಲೇ ಅದಕ್ಕೆ ವರವಾಗಿ ಸಿಕ್ಕಿದ್ದು ಗುತ್ತಿಗೆದಾರ ಸಂತೋಷ್ ಪಾಟೀಲರ ಆತ್ಮಹತ್ಯೆ ಪ್ರಕರಣ.

ಈ ಪೈಕಿ ಒಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರ ವಿಷಯವನ್ನು ಒಳಗೊಂಡಿದ್ದರೆ, ಮತ್ತೊಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಒಳಗೊಂಡಿದ್ದು.
ಈ ಪೈಕಿ ಸುಧಾಕರ್ ಅವರು ನೋಡಿಕೊಳ್ಳುತ್ತಿರುವ ಆರೋಗ್ಯ ಇಲಾಖೆ ಭ್ರಷ್ಟಾಚಾರದ ರಾಜ ಅನ್ನುವುದು ಕೆಂಪಣ್ಣ ಅವರ ಆರೋಪ. ಅದೇ ರೀತಿ ಗೋವಿಂದ ಕಾರಜೋಳ ನೋಡಿಕೊಳ್ಳುತ್ತಿರುವ ಜಲಸಂಪನ್ಮೂಲ ಇಲಾಖೆ ನಲವತ್ತು ಪರ್ಸೆಂಟ್ ಕಮೀಷನ್‌ನಿಂದ ಆವೃತವಾಗಿದೆ ಎಂಬುದು ಅವರ ಡೆಡ್ಲಿ ದೂರು.
ಹೀಗೆ ಅವರು ನೀಡಿದ ಎರಡು ಅಸ್ತ್ರಗಳನ್ನು ಜತನವಾಗಿಟ್ಟುಕೊಂಡು ಈಶ್ವರಪ್ಪ ಅವರ ವಿರುದ್ಧ ಹೋರಾಡಿದ ಕಾಂಗ್ರೆಸ್ ಕೊನೆಗೂ ದೊಡ್ಡ ಯಶಸ್ಸು ಕಂಡಿತು. ಕೆಲವೇ ದಿನಗಳ ಹಿಂದೆ ಕೇಸರಿ ಧ್ವಜದ ವಿವಾದ ಹಿಡಿದುಕೊಂಡು ಹಗಲು- ರಾತ್ರಿ ಎನ್ನದೆ ಈಶ್ವರಪ್ಪ ಅವರ ವಿರುದ್ಧ ಹೋರಾಡಿದ್ದರೂ ಕೈ ಪಾಳೆಯಕ್ಕೆ ಯಶಸ್ಸು ದಕ್ಕಿರಲಿಲ್ಲ. ಆದರೆ ಈ ಬಾರಿ ಈಶ್ವರಪ್ಪ ರಾಜೀನಾಮೆ ಕೊಡುವಂತೆ ನೋಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ಇದು ಬೂಸ್ಟರ್ ಡೋಸ್‌ನಂತೆ ಪರಿಣಮಿಸಿರುವುದು ನಿಜ.
ಹೀಗೆ ಈಶ್ವರಪ್ಪ ಅವರ ಪದಚ್ಯುತಿಯ ಬೆನ್ನಲ್ಲೇ ತನ್ನ ಬತ್ತಳಿಕೆಯಲ್ಲಿರುವ ಇನ್ನೆರಡು ಅಸ್ತ್ರಗಳನ್ನು ಪ್ರಯೋಗಿಸಲು ಸಜ್ಜಾಗುವುದೂ ಸಹಜ.
ಅಂದ ಹಾಗೆ ಅದು ಮುಂದೆ ಕೈಗೆತ್ತಿಕೊಳ್ಳಲಿರುವ ಹೋರಾಟದಲ್ಲಿ ವಿಡಿಯೋ ಮತ್ತು ಆಡಿಯೋ ದಾಖಲೆಗಳಿವೆ ಎಂಬುದು ಸದ್ಯದ ಮಾಹಿತಿ.
ಹಾಗಂತ ಈ ಇಬ್ಬರು ಸಚಿವರ ಮೇಲಷ್ಟೇ ಅಲ್ಲ, ಬೊಮ್ಮಾಯಿ ಸಂಪುಟದ ಹಲವು ಸಚಿವರ ಮೇಲೆ ಮುಗಿಬೀಳುವುದು ಕಾಂಗ್ರೆಸ್ ಗುರಿ.
ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಆಡಳಿತಾರೂಢರ ಭ್ರಷ್ಟಾಚಾರ ಕಂಡರೆ ಸಿಡಿದು ಬೀಳುತ್ತಾರೆ ಎಂಬುದು ಕಾಂಗ್ರೆಸ್‌ನ ಸದ್ಯದ ಲೆಕ್ಕಾಚಾರ.
ಈ ಲೆಕ್ಕಾಚಾರವನ್ನು ಅದು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತದೆ ಎಂಬುದೇ ವರ್ತಮಾನದ ಕುತೂಹಲ.