ಮಹಾರಾಷ್ಟ್ರ: 225 ವಿದ್ಯಾರ್ಥಿಗಳಿಗೆ ಕೊರೊನಾ, ಕಂಟೈನ್ಮೆಂಟ್‌ ಝೋನ್‌ ಆಯ್ತು ಶಾಲೆ

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಉಲ್ಬಣಿಸುತ್ತಿದ್ದು, ವಾಷಿಮ್‌ ಜಿಲ್ಲೆಯ ಹಾಸ್ಟೆಲ್‌ವೊಂದರಲ್ಲೇ 229 ಪ್ರಕರಣಗಳು ಹೊರಬಿದ್ದಿವೆ. ಶಾಲೆಯ 225 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕರಿಗೆ ಕೋವಿಡ್‌-19 ದೃಢಪಟ್ಟಿದ್ದರಿಂದ ಶಾಲೆಯನ್ನು ಕಂಟೇನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿದೆ.

ವಿದರ್ಭ ಪ್ರದೇಶದಿಂದಲೇ 300 ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ. ಕೆಲ ವಾರಗಳಿಂದ ಕೋವಿಡ್‌ ಪ್ರಕರಣ ಹೆಚ್ಚಲು ಅಮರಾವತಿ, ಯವತ್ಮಾಲ್‌ ಜಿಲ್ಲೆಗಳು ಪ್ರಮುಖ ಕಾರಣವಾಗಿವೆ.

ಫೆ.14ರಂದು ವಿದ್ಯಾರ್ಥಿಗಳು ವಾಷಿಮ್‌ ಹಾಸ್ಟೆಲ್‌ಗೆ ಸೇರಿದರು. ಆರಂಭದ ದಿನಗಳಲ್ಲಿ 20 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿತು. ನಂತರ ಶಾಲೆಯ 327 ವಿದ್ಯಾರ್ಥಿಗಳಿಗೂ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲಾಯಿತು.

ಕೆಲ ವಾರಗಳಲ್ಲಿ ಲಾಥೂರ್‌ ಜಿಲ್ಲೆಯ ಹಾಸ್ಟೆಲ್‌ನಲ್ಲಿ 39 ವಿದ್ಯಾರ್ಥಿಗಳು ಸೇರಿದಂತೆ ಐವರು ನೌಕರರಿಗೂ ಕೋವಿಡ್‌ ದೃಢಪಟ್ಟಿದೆ.

ಬುಧವಾರ ಒಂದೇ ದಿನದಲ್ಲಿ ಮಹಾರಾಷ್ಟ್ರದಲ್ಲಿ 8,800 ಹೊಸ ಪ್ರಕರಣಗಳು ದೃಢಪಟ್ಟಿವೆ. ಕಳೆದ ನಾಲ್ಕು ತಿಂಗಳಲ್ಲಿ ಅತ್ಯಧಿಕ ಪ್ರಕರಣಗಳು ದೃಢಪಟ್ಟ ದಿನವಾಗಿದೆ.