1232 ಕಿ.ಮೀ- ಮರಣ ಶಾಸನದ ಯಾನ

ಶತಮಾನದ ಮಹಾವಲಸೆ ರಸ್ತೆಗಳಲ್ಲಿ ಪ್ರವಾಹದಂತೆ ಧುಮ್ಮಿಕ್ಕಿತು
-ಎನ್.ರವಿಕುಮಾರ್ ಟೆಲೆಕ್ಸ್

ನಾವು ಮನೆ ಬಿಟ್ಟು ಬಿಹಾರಕ್ಕೆ ಹೊರಟಿದ್ದೀವಿ’ ಎಂದ ರಿತೇಶ್
‘ಎಲ್ಲರೂ ಬಿಹಾರಕ್ಕೆ ಹೊರಟಿದ್ದೀರ?, ಎಲ್ಲಾ ಮೂವತ್ತು ಜನ?’ ಕೇಳಿದೆ.
‘ಹೌದು’ ಎಂಬ ಉತ್ತರ ಬಂತು
‘ಹೇಗೆ’ ?
‘ಸೈಕಲ್‌ನಲ್ಲಿ’
ನನ್ನ ತಲೆ ತಿರುಗಿದಂತಾಯ್ತು..!
‘ನಿಮಗೇನು ತಲೆ ಕೆಟ್ಟಿದಿಯಾ? ಸಹರ್ಸಾತನಕ ಸೈಕಲ್‌ನಲ್ಲಿ ಹೋಗ್ತೀರಾ? ಊರು ಎಷ್ಟು ದೂರ ಇದೆ ಅಂತ ಕಲ್ಪನೆ ಇದೆಯಾ?’
‘…ಹೌದು ಸರ್, ಚೆಕ್ ಮಾಡಿದೆ ಮೊಬೈಲ್‌ನಲ್ಲಿ. ಇಲ್ಲಿಂದ 1232 ಕಿ.ಮೀ. ಆಗುತ್ತೆ’ ಎಂದ.

ಅವನ ಮಾತು ಕೇಳಿ ಆಘಾತಕ್ಕೆ ಒಳಗಾದಂತಾಗಿದ್ದೆ. ‘ನೀನು ಹೇಳೋದೆನೋ ಸರಿ, ಆದರೆ ಅರ್ಥಮಾಡಿಕೋ, ಈಗ ಲಾಕ್‌ಡೌನ್ ಇದೆ. ಮೇಲಾಗಿ ವೈರಸ್‌ನ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿವೆ’ ಎಂದು ಹೇಳಿದೆ.

ಅತ್ತ ಕಡೆಯಿಂದ ಉತ್ತರ ಬರಲಿಲ್ಲ. ನಾ ಹೇಳಿದ್ದನ್ನು ಗ್ರಹಿಸಿದ ಎಂದುಕೊಂಡೆ. ತುಸು ಹೊತ್ತಿನ ನಂತರ ಮತ್ತೆ ಆತ ಕೇಳಿದ
‘ಕೊರೊನಾಕ್ಕಿಂತ ಮೊದಲೆ ನಾವು ಊಟವಿಲ್ಲದೆ ಹಸಿವಿನಿಂದ ಸತ್ತರೆ?’

ಅವನ ಒಂದು ಪದ ‘ಹಸಿವು’ ನನ್ನ ಹೃದಯದ ಆಳಕ್ಕೆ ಚೂರಿಯಿಂದ ಚುಚ್ಚಿದಂತಾಗಿತ್ತು.

ಹೊಸದಿಲ್ಲಿಯ ಗಾಜಿಯಾಬಾದ್‌ನಿಂದ ಬಿಹಾರದ ಸಹರ್ಸಾ ಗ್ರಾಮಕ್ಕೆ ಮೂವತ್ತು ವಲಸೆ ಕಾರ್ಮಿಕರು ಅನ್ನ, ನೀರು, ನೆಲೆ ಕಳೆದುಕೊಂಡು ಮೂರ್ನಾಲ್ಕು ಗುಂಪುಗಳಾಗಿ ಹೊರಡುತ್ತಾರೆ. ಆ ಮೂವತ್ತು ಜನರಲ್ಲಿ ಏಳು ಜನರ ಗುಂಪೊಂದು ಸೈಕಲ್‌ನಲ್ಲಿ ಸಹರ್ಸಾಕ್ಕೆ ಹೊರಡುತ್ತದೆ. ಈ ಏಳು ಜನರ ಗುಂಪಿನ ನಾಯಕ ರಿತೇಶ್‌ನೊಂದಿಗೆ ಮೊಬೈಲ್‌ನಲ್ಲಿ ಪತ್ರಕರ್ತ ವಿನೋದ್ ಕಾಪ್ರಿಯ ಆರಂಭಿಕ ಮಾತುಕತೆ ಇದು. ಈ ಮಾತುಕತೆ ಲಾಕ್‌ಡೌನ್‌ನ ದಾಳಿಗೆ ಸಿಕ್ಕಿ ನಲುಗಿದ ಭಾರತದೊಳಗೆ ಇರುವ ಬಡಭಾರತವೊಂದಕ್ಕೆ ಕೊರೊನಾಕ್ಕಿಂತಲೂ ಭೀಕರವಾಗಿ ಕಾಡಿದ್ದು ‘ಹಸಿವು’ ಎಂಬ ಕ್ರೌರ್ಯವನ್ನು ಅನಾವರಣಗೊಳಿಸುತ್ತದೆ.

ಏಳು ಮಂದಿ ವಲಸೆ ಕಾರ್ಮಿಕರ ಏಳು ದಿನಗಳು ಏಳು ರಾತ್ರಿಗಳ ‘1232 ಕಿ.ಮೀ’ ಮನೆ ಸೇರುವ ಹಾದಿಯ ಕೃತಿಯಲ್ಲಿ ಆರಂಭವೂ ಇದೆ…
ಯಾವ ಪೂರ್ವ ಸಿದ್ಧತೆಗಳೂ ಇಲ್ಲದೆ ರಾತ್ರೋರಾತ್ರಿ ಪ್ರಭುತ್ವ ಹೇರಿದ ಲಾಕ್‌ಡೌನ್ ಎಂಬ ಮರಣ ಶಾಸನದಿಂದ ಭಾರತ ನಲುಗಿ ಹೋಗಿದ್ದನ್ನು, ಈಗಲೂ ನಲುಗುತ್ತಿರುವುದನ್ನು ನೆನಪಿಸಿಕೊಂಡರೆ ಭಯ, ಸಿಟ್ಟು ಏಕಕಾಲಕ್ಕೆ ಕುದಿಯುತ್ತವೆ. ಮಾರ್ಚ್ ೨೪, ೨೦೨೦ ರಾತ್ರಿ ಎಂಟು ಗಂಟೆಯ ನಂತರ ಇಡೀ ಭಾರತದ ನಾಗರಿಕರು ಕ್ಷಣಮಾತ್ರದಲ್ಲಿ ಅನಾಥರಾಗಿಬಿಟ್ಟರು. ಶತಮಾನದ ಮಹಾವಲಸೆಯೊಂದು ಭಾರತದ ರಸ್ತೆಗಳಲ್ಲಿ ಪ್ರವಾಹದಂತೆ ಧುಮ್ಮಿಕ್ಕಿತು. ಸರ್ಕಾರದ ಹೃದಯ, ಕಣ್ಣುಗಳು ನಿರ್ದಯಿಗೊಂಡಿದ್ದವು. ಮನುಷ್ಯ ಮನುಷ್ಯನನ್ನೇ ಕಂಡರೆ ಭಯ ಬೀಳುವಂತಹ, ದೂರ ತಳ್ಳುವಂತಹ ಆಧುನಿಕ ಅಸ್ಪ್ತ್ಯೃಶ್ಯತೆಯೊಂಂದು ಧುತ್ತನೆ ಮೈಯೇರಿಕೊಂಡಿತು.

ಇಂತಹ ಲಾಕ್‌ಡೌನ್ ಭಾರತವನ್ನು ಬರೆಯಲು ಸಾವಿರಾರು ಘಟನೆಗಳು ನಮಗೆ ಕಾಣಸಿಗುತ್ತವೆ. ಇದರೊಳಗೊಂದು ಪುಟದಂತೆ ಈ ಮಹಾವಲಸೆಯ ಮರಣ ಯಾತನೆಯನ್ನು ಪತ್ರಕರ್ತ ವಿನೋದ್ ಕಾಪ್ರಿ ದಾಖಲಿಸಿದ್ದಾರೆ. ಅದೇ ಏಳು ಮಂದಿ ವಲಸೆ ಕಾರ್ಮಿಕರು ಗಾಜಿಯಾಬಾದ್‌ನ ಲೇಬರ್ ಕಾಲೋನಿಯಿಂದ ಸೈಕಲ್‌ನಲ್ಲಿ ಬಿಹಾರದ ಸಹರ್ಸಾಗೆ ತಲುಪಿದ ʼ1232 ಕಿ.ಮೀʼ ಕೃತಿ.

ಇದನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಪತ್ರಕರ್ತ(ದಿ ಹಿಂದೂ) ಹಾಸನದ ಜಿ.ಟಿ.ಸತೀಶ್ ಅನುವಾದಿಸುತ್ತಿದ್ದಾರೆ ಎಂದು ತಿಳಿದ ಕ್ಷಣದಿಂದ ಜಾತಕ ಪಕ್ಷಿಯಿಂದ ಕಾಯುತ್ತಿದ್ದ ನನಗೆ 24 ಗಂಟೆಯೊಳಗೆ ʼ1232 ಕಿ.ಮೀʼ ಕೈ ಸೇರಿದ್ದೇ ತಡ ಹಸಿದು ಕುಂತವನಂತೆ ಒಂದೇ ಗುಕ್ಕಿಗೆ ಓದಿ ದೊಡ್ಡದೊಂದು ನಿಟ್ಟುಸಿರುಬಿಟ್ಟೆ. ಓದುತ್ತಾ… ಓದುತ್ತಾ ನಾನೇ ಮಹಾವಲಸೆಯೊಂದರ ಪಾತ್ರವಾಗಿ ಹೋಗಿದ್ದು, ಈ ಪುಸ್ತಕದ ತಾಕತ್ತು ಎನ್ನಬಹುದು.

ಲಾಕ್‌ಡೌನ್ ಅದೊಂದು ತನ್ನ ಸರ್ಕಾರವೇ ತನ್ನ ದೇಶದ ಕೂಲಿ ಕಾರ್ಮಿಕರ, ಬಡವರ ಮೇಲೆ ನಡೆಸಿದ ʼಸರ್ಜಿಕಲ್ ಸ್ಟ್ರ್ತ್ಯೈಕ್ʼ. ಈ ದಾಳಿಯಿಂದ ತತ್ತರಿಸಿದ ವಲಸೆ ಕಾರ್ಮಿಕರು ತಮ್ಮ ತಂದೆ-ತಾಯಿಗಳನ್ನೋ, ಅಕ್ಕ-ತಂಗಿ, ಅಣ್ಣ-ತಮ್ಮಂದಿರನ್ನೋ, ಹೆಂಡತಿ-ಮಕ್ಕಳನ್ನೋ ಸೇರಿಕೊಳ್ಳಲು ರಸ್ತೆ, ಕಾಡು-ಮೇಡು, ಹಳ್ಳ-ಕೊಳ್ಳ, ರೈಲ್ವೆ ಹಳಿಗಳ ಹಾದಿಗುಂಟ ಹಿಡಿದು ಹೊರಟ ವಲಸೆ ಈ ಶತಮಾನದ ಮಹಾವಲಸೆ ಎಂದೇ ದಾಖಲಾಗಿದೆ. ಗಾಜಿಯಾಬಾದ್‌ನಿಂದ ʼ1232 ಕಿ.ಮೀʼ ದೂರದ ಸಹರ್ಸಾ ಗ್ರಾಮಕ್ಕೆ ಸೈಕಲ್‌ನಲ್ಲಿ ಹೊರಡುವ ಏಳು ವಲಸೆ ಕಾರ್ಮಿಕರು ಲಾಕ್‌ಡೌನ್‌ನಿಂದ ಅನ್ನ, ನೀರು, ನೆಳಲು ಇಲ್ಲದೆ ವಲಸೆ ಹೊರಟ ಸುಮಾರು ಹನ್ನೆರೆಡು ಕೋಟಿಗೂ ಹೆಚ್ಚಿನ ವಲಸೆ ಕಾರ್ಮಿಕರ ಪ್ರತಿರೂಪವೇ ಆಗಿದ್ದಾರೆ ಎಂಬುದನ್ನು ಈ ಪುಸ್ತಕವನ್ನು ಓದುವಾಗ ಮನದಟ್ಟಾಗುತ್ತದೆ.

ಲಾಕ್‌ಡೌನ್‌ನಿಂದ ರೈಲ್ವೆ ಹಳಿ ಮೇಲೆ ವಲಸೆ ಹೊರಟ ಕಾರ್ಮಿಕರಲ್ಲಿ ೮೭೦೦ ಕಾರ್ಮಿಕರು ಹಸಿವು, ಅಪಘಾತಗಳಿಂದ ಜೀವ ಬಿಟ್ಟಿರುವುದನ್ನು ಸರ್ಕಾರದ ದಾಖಲೆಯೊಂದು ಹೇಳುತ್ತಿದೆ. ಆದರೆ ಅದಕ್ಕಿಂತಲೂ ಮಿಗಿಲಾದ ಸಾವು, ನೋವುಗಳನ್ನು ನಾಗರಿಕರ ಸರ್ಕಾರ ನಿರ್ದಯವಾಗಿ ಮರೆಮಾಚಿದೆ ಎಂಬುದೂ ಕೂಡ ಸತ್ಯ. ಅದಿರಲಿ, ʼ1232 ಕಿ.ಮೀʼ ಕೃತಿ ಮೊದಲ ಪುಟದಿಂದ ಕೊನೆಯ ಪುಟದವರೆಗೂ ನಿಮ್ಮನ್ನು ಓದಿಸಿಕೊಂಡು ಹೋಗುವಲ್ಲಿ ಸೋಲುವುದಿಲ್ಲ.

ನಿಮ್ಮೊಳಗೊಂದು ಗುಲಗಂಜಿ ಗಾತ್ರದ ಸೂಕ್ಷ್ಮ ಸಂವೇದನೆ ಇದ್ದರೆ ನೀವೇ ಪಾತ್ರಗಳಾಗಿ ಬಿಡುತ್ತೀರ. ಕಣ್ಣುಗಳು ತೇವಗೊಳ್ಳಬಹುದು. ಹಸಿವಿನ ಅರಿವಿದ್ದರೆ ಸಂಕಟಪಡಬಹುದು. ದೂರದಲ್ಲಿರುವ ಹೆಂಡತಿ-ಮಕ್ಕಳನ್ನೋ, ವೃದ್ಧ ತಂದೆ ತಾಯಿಗಳನ್ನೋ ನೆನೆದು ಬಿಕ್ಕಳಿಸಿಬಿಡಬಹುದು. ಮಧ್ಯೆ ಮಧ್ಯೆ ನಮ್ಮನ್ನಾಳುವವರನ್ನು ಬೈದು ಅವರ ವಿರುದ್ಧ ಸ್ವಗತದಲ್ಲೊಂದು ಆಕ್ರೋಶವನ್ನು ಹೊರಗೆಡವಿಕೊಳ್ಳಬಹುದು. ಓದಿನ ಹಾದಿಯುದ್ದಕ್ಕೂ ಮನುಷ್ಯನೊಳಗಿನ ಮಾನವೀಯತೆಗೆ ಶರಣಾಗುವುದು ಮತ್ತು ನಾಗರಿಕ ಸರ್ಕಾರದ ಕ್ರೌರ್ಯಕ್ಕೆ ಕೆಂಡವಾಗುವುದು ನಿಮ್ಮ ಸಂಗಾತಿಗಳೇ ಆಗಿಬಿಡುವುದು ಖಚಿತ.

ʼ1232 ಕಿ.ಮೀʼ ಹಗಲು- ರಾತ್ರಿಗಳ ವಲಸೆಯಲ್ಲಿ ನಡುರಾತ್ರಿಯಲ್ಲಿ ಡಾಬಾದ ಕಸ ಡಬ್ಬದಲ್ಲಿ ಬಿಸಾಡಲಾದ ಸುಟ್ಟು ಕರಕಲಾದ ರೊಟ್ಟಿ, ಎಂಜಲು ದಾಲ್‌ನ್ನು ಬಾಚಿಕೊಳ್ಳಲು ಮುಂದಾದ ಹಸಿದ ವಲಸೆ ಕಾರ್ಮಿಕನ ಕೈ ಹಿಡಿದು ಅನ್ನಕೊಡುವ ಬಂಟು, ಕತ್ತಲ ಕಾಡು ದಾರಿಯಲ್ಲಿ ಸೈಕಲ್‌ಗೆ ಪಂಕ್ಚರ್ ಹಾಕಿ ಕೊಡುವ ಆಶ್ರಫ್ ಅವರಲ್ಲಿ ಯಾವ ರಾಜಕೀಯ, ಯಾವ ಧರ್ಮವೂ ಇಲ್ಲದ ದೇವರುಗಳು ಕಾಣುತ್ತಾರೆ. ಚರ್ಮ ಸುಲಿದು ರಕ್ತ ಹೆಪ್ಪುಗಟ್ಟುವಂತೆ ಬಡಿದ, ಈ ಬಡಮಕ್ಕಳನ್ನು ಬಾಸ್ಟರ್ಡ್ ಎಂದು ನಿಂದಿಸುವ ಪೊಲೀಸರು, ಬೀದಿಯಲ್ಲಿ ಹಸಿವು-ಕಣ್ಣೀರು ಹರಿಯುತ್ತಿದ್ದರೂ ಸುಳಿವಿಲ್ಲದ ಜನಪ್ರತಿನಿಧಿಗಳು, ಎಲ್ಲರ ಮುಖವಾಡ ನಿಮಗೂ ನೆನಪಾಗಬಹುದು.

ಜಿ.ಟಿ ಸತೀಶ್ ನಮ್ಮ ನಡುವಿನ ಸೃಜನಶೀಲ ಮತ್ತು ಸಂವೇದನಾಶೀಲ ಪತ್ರಕರ್ತ. ಅವರು ಅಜಿತ್ ಪಿಳ್ಳ್ತ್ಯೈ ಅವರ “ಇದು ಯಾವ ಸೀಮೆಯ ಚರಿತ್ರೆ” ಮತ್ತು ಇನ್ನೋರ್ವ ಪತ್ರಕರ್ತ ಗೆಳೆಯ ಶಶಿ ಸಂಪಳ್ಳಿ ಜೊತೆಗೂಡಿ ವಿನೋದ್ ಮೆಹ್ತಾ ಅವರ ʼಲಖನೌ ಹುಡಗʼ ಕೃತಿಗಳನ್ನು ಕನ್ನಡಕ್ಕೆ ತಂದಷ್ಟೇ ಶ್ರದ್ಧೆಯಿಂದ ವಿನೋದ್ ಕಾಪ್ರಿ ಅವರ “1232 ಕಿ.ಮೀ” ನ್ನು ಕಣ್ಣಿಗೆ ಕಟ್ಟುವಂತೆ ಅನುವಾದಿಸಿದ್ದಾರೆ.

ಮೊದಲ ಪುಟದಿಂದ ಕೊನೆಯ ಪುಟದವರೆಗೂ ಕುತೂಹಲದೊಂದಿಗೆ ಕಣ್ಣುಗಳನ್ನು ತೇವಗೊಳಿಸುತ್ತದೆ. ಸರ್ಕಾರ, ಹಣವಿದ್ದವರು ಈ ದೇಶದಲ್ಲಿದ್ದರೂ ಹಸಿದವರಿಗೆ, ಬೀದಿಯಲ್ಲಿ ಬಸವಳಿದವರಿಗೆ ಆತುಕೊಂಡಿದ್ದು ಮಾತ್ರ ಬಡವರೇ ಆಗಿದ್ದರು.

ಎರಡೂವರೆ ದಶಕಗಳಿಂದ ಪತ್ರಕರ್ತನಾಗಿರುವ ನಾನೇ ಮೇ ೫, ೨೦೨೦ರಂದು ಕೇವಲ 270 ಕಿ.ಮೀ ಇರುವ ನಂಜನಗೂಡಿನಿಂದ ಮಗನನ್ನು ಶಿವಮೊಗ್ಗಕ್ಕೆ ಕರೆತರಲು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಇಂತಹ ಹೊತ್ತಿನಲ್ಲಿ ʼ1232 ಕಿ.ಮೀʼ ದೂರದ ತಮ್ಮ ಊರು ತಲುಪಲು ಕೂಲಿಕಾರ್ಮಿಕರ ಪ್ರಯಾಣ ಅದೆಂತಹ ದುರ್ಗಮವಾಗಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ.

ʼ1232 ಕಿ.ಮೀʼ ಓದಿ …ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಕ್ಕೆ ಜಿ.ಟಿ ಸತೀಶ್ ಮತ್ತು ಪ್ರಜೋದಯ ಪ್ರಕಾಶನದ ಶರತ್‌ಗೆ ಥ್ಯಾಂಕ್ಸ್.